Monday, January 18, 2010

ಪಂಚಭೂತಗಳಲ್ಲಿ ನಟ ಕೆಎಸ್ ಅಶ್ವತ್ಥ್ ಲೀನ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಕೆಎಸ್ ಅಶ್ವತ್ಥ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನೆರವೇರಿತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ರುದ್ರಭೂಮಿಯಲ್ಲಿ ಅಶ್ವತ್ಥ್ ಅವರ ಪಾರ್ಥೀವ ಶರೀರಕ್ಕೆ ಅವರ ಮಗ ಶಂಕರ್ ಅಶ್ವತ್ಥ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಅವರ ಭೌತಿಕ ಕಾಯ ಪಂಚಭೂತಗಳಲ್ಲಿ ಲೀನವಾಯಿತು.

ಮೇರುನಟ ಅಶ್ವಥ್ ಚಿತ್ರಸಂಪುಟ

ರಾಜ್ಯ ಸರಕಾರದ ಪ್ರತಿನಿಧಿಯಾಗಿ ಅಶ್ವತ್ಥ್ ಅವರ ಅಂತ್ಯಕ್ರಿಯೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ಪಾಲ್ಗೊಂಡಿದ್ದರು. ಸ್ಥಳೀಯ ಶಾಸಕ ರಾಮದಾಸ್, ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್ ಸಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಭಾನು ಪ್ರಕಾಶ್ ಶರ್ಮ ಅವರು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಗಣ್ಯರ ಅಂತಿಮ ನಮನ
ಸಂಸದ ಎಚ್ ವಿಶ್ವನಾಥ್, ಮೇಯರ್ ಪುರುಷೋತ್ತಮ್, ಮಾಜಿ ಸಚಿವ ಎಚ್ ಎಸ್ ಮಹದೇವ ಪ್ರಸಾದ್, ಎಂ ಶಿವಣ್ಣ ಮತ್ತು ಎಂ ಮಹದೇವ್, ಕೆಎಚ್ ಬಿ ಅಧ್ಯಕ್ಷ ಜಿ ಟಿ ದೇವೇಗೌಡ, ನಟರಾದ ಕೆಎಸ್ ರತ್ನಾಕರ್, ಶ್ರೀನಾಥ್, ಚೇತನ್ ರಾಮರಾಮ್, ರಾಜೇಶ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಮೇಶ್, ರಮೇಶ್ ಭಟ್, ಲೋಕನಾಥ್, ಶಿವರಾಮ್, ಶ್ರೀನಿವಾಸಮೂರ್ತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಎಸ್ ನಾರಾಯಣ್, ಮಾಜಿ ಶಾಸಕ ಎಂ ಕೆ ಸೋಮಶೇಖರ್, ಕನ್ನಡಹೋರಾಟಗಾರ ತಾಯೂರು ವಿಠಲ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಅಶ್ವತ್ಥ್ ಅವರ ಅಂತಿಮ ದರ್ಶನ ಪಡೆದರು.