Friday, January 22, 2010

"ಸಮ್ಮೇಳನದ ಭಾರ ಹೊತ್ತ ಐದರ ಪೋರ"

ಪೂರ್ವ ಕರಾವಳಿಯ ನ್ಯೂ ಜೆರ್ಸಿ ಕನ್ನಡ ಕುಟುಂಬಗಳ ಒಂದು ಚಿತ್ರವಿದು. ಎಡಿಸನ್ ಸುತ್ತಮುತ್ತ ಪ್ರದೇಶದಲ್ಲಿ ನೆಲೆಸಿರುವ ಸುಮಾರು ಇನ್ನೂರೈವತ್ತು ಕುಟುಂಬಗಳ ಪೈಕಿ ಶೇ.70ರಷ್ಟು ಕನ್ನಡಿಗರಿಗೆ ಕನ್ನಡವೆನಿಸಿಕೊಳ್ಳುವ ಎಲ್ಲದರ ಬಗ್ಗೆ ತಣಿಯದ ಬಯಕೆ. ಒಂದು ಸುಶ್ರಾವ್ಯ ಕನ್ನಡ ಹಾಡು ಆಲಿಸಬೇಕೆಂದರೆ ವಾರಾಂತ್ಯದವರೆಗೂ ಕಾಯಬೇಕಲ್ಲ ಎಂಬ ಕೊರಗು. ಕಾಯುವುದಕ್ಕೆ ತಾಳ್ಮೆ ಇಲ್ಲ. ಅಷ್ಟೇ ಅಲ್ಲ, ಕಾರ್ಯಕ್ರಮ ಎಲ್ಲಿದೆ ಎಂದು ಹುಡುಕಿಕೊಂಡು ಎಕ್ಸಿಟ್ಟುಗಳಲ್ಲಿ ಹೊರಳಾಡಿಕೊಂಡು ಕನ್ನಡದ ವಾಸನೆ ಹಿಡಿದು ಕಾರು ಓಡಿಸುತ್ತಿರಬೇಕು.

ಈ ಬಾರಿ ಟ್ರೈ ಸ್ಟೇಟ್ಸ್ ತ್ರಿವೇಣಿ ಕನ್ನಡ ಸಂಘದಲ್ಲಿ ನಾಟಕ ಇದೆ, ಅದರ ಮುಂದಿನ ವಾರ ಹೊಯ್ಸಳ ಸಂಘದಲ್ಲಿ ಭಾರತದ ಬಂದಿರುವ ಗಾಯಕಿಯ ಭರ್ಜರಿ ಹಾಡುಗಾರಿಕೆ ಇದೆಯಂತೆ, ಅಲ್ಲಿಗೆ ಹೋಗಬೇಕು. ಡಿಸೆಂಬರ್ ನಲ್ಲಿ ನ್ಯೂಯಾರ್ಕಿನಲ್ಲಿ ಕನ್ನಡ ಮಕ್ಕಳ ನಾಟಕಕ್ಕೆ ಹೋಗಲೇಬೇಕು.. ಹೀಗೆ, ಕನ್ನಡತನವನ್ನು ಹುಡುಕಿಕೊಂಡು ನಿತ್ಯ ಸುತ್ತಾಡುತ್ತಿರಬೇಕು. ಇದು ಹತ್ತಾರು ವರಷಗಳಿಂದ ನಡೆದುಬಂದ ಪರಿಪಾಠ. ಆದರೆ, ಎಷ್ಟು ದಿನ ಅಂತ ಅಲ್ಲಿ ಇಲ್ಲಿ ಹೋಗಿಬಂದು ಮಾಡುವುದಕ್ಕೆ ಸಾಧ್ಯ. ನಾವೇ ಒಂದು ಕನ್ನಡ ಸಂಘ ಕಟ್ಟಿದರೆ ಆಯ್ತು, ಅದೇನು ಮಹಾ, ಎಂದುಕೊಂಡರು ಅವರು.

ಒಂದು ದಿನ ಮನೆಗೆ ಹುಡುಗ ಹಾಲು ತರದಿದ್ದರೆ, ಅದಕ್ಕೇನಂತೆ ನಾವೇ ಒಂದು ಡೈರಿ ಶುರುಮಾಡೋಣ ಎನ್ನುವಂತಹವರು ಅಲ್ಲಿದ್ದರು. ಅವರಿಗೆಲ್ಲ ಪ್ರಸನ್ನಕುಮಾರ್ ಎಂಬ ಮಧ್ಯವಯಸ್ಕನೇ ನಾಯಕ. ಸರಿ, ಆಗಷ್ಟೇ ಫ್ಲಾರಿಡಾ ಅಕ್ಕ ಸಮ್ಮೇಳನ (2004) ಮುಗಿದು ಎಲ್ಲರೂ ನ್ಯೂ ಜೆರ್ಸಿಗೆ ವಾಪಸ್ಸಾಗಿದ್ದರು. ಕನ್ನಡದ ಪರಿಮಳ ಇನ್ನೂ ಹಸಿಹಸಿಯಾಗಿ ನವುರಾಗಿತ್ತು. ಒಂದು ಸಂಜೆ ಎಲ್ಲರೂ ಕುಳಿತು ಸಭೆ ಮಾಡಿ ಕನ್ನಡ ಸಂಘ ಕಟ್ಟಿಬಿಡುವ ನಿರ್ಧಾರಕ್ಕೆ ಬಂದರು. ಅಲ್ಲಿ ಒಂದು ಬೃಂದಾವನವೇ ನಿರ್ಮಾಣವಾಯಿತು. ನ್ಯೂ ಜೆರ್ಸಿ ಕನ್ನಡಿಗರ ನಂದಗೋಕುಲದಂತಿರುವ ಬೃಂದಾವನಕ್ಕೆ ಮೊನ್ನೆ ಡಿಸೆಂಬರ್ 5ಕ್ಕೆ ಐದು ವರ್ಷ ತುಂಬಿ ಆರಕ್ಕೆ ಬಿತ್ತು.

ಕರ್ನಾಟಕದ ಶಾಲೆಗಳ ಲೆಕ್ಕದಲ್ಲಿ ಬೃಂದಾವನ ನರ್ಸರಿಗೆ ಹೋಗುವ ಬಾಲಕ. ಐದು ವರ್ಷ ಎಂಟು ತಿಂಗಳು ತುಂಬದೆ ಒಂದನೆ ತರಗತಿಗೆ ಸೇರುವಂತಿಲ್ಲ. ಆದರೆ ಇದೊಂದು ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಬಾಲಕನನ್ನು ಪದವಿ ಪರೀಕ್ಷೆಗೆ ಒಡ್ಡಲಾಗಿದೆ. ಅಮೆರಿಕಾದ ಅತ್ಯಂತ ಕಿರಿಯ ಕನ್ನಡ ಸಂಘ ಬೃಂದಾವನ ಬೃಹತ್ ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಭಾರ ಹೊತ್ತು ನಿಲ್ಲುತ್ತಿದೆ. ಈ ಸಮ್ಮೇಳನಕ್ಕೆ ಐದರ ಪೋರನಾಗಿದ್ದಾಗಲೇ ಪವರ್ಫುಲ್ ನಟನೆಯಿಂದ ಸ್ಟಾರ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಬೃಂದಾವನ ಸಂಘ ಮಾಜಿ ಅಧ್ಯಕ್ಷ ಮತ್ತು ಅಕ್ಕ ಸಮ್ಮೇಳನದ ಸಂಯೋಜಕ ತ್ರಿವಳಿಗಳಲ್ಲಿ ಒಬ್ಬರಾಗಿರುವ ಪ್ರಸನ್ನ ಕುಮಾರ್ ಅವರನ್ನು ನಾನು ಮೊನ್ನೆ ಬೆಂಗಳೂರಿನಲ್ಲಿ ಭೇಟಿ ಆಗಿದ್ದೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶಕ್ಕಾಗಿ, ನೋಡುತ್ತಿರಿ ದಟ್ಸ್ ಕನ್ನಡ ಎನ್ಆರ್ಐ.

"ಅಮೆರಿಕ ಕನ್ನಡ ಸಂಘಗಳ ಚಾರಿತ್ರಿಕ ದಾಖಲೆ"

ವಿಶಾಲ ಉತ್ತರ ಅಮೆರಿಕದಾದ್ಯಂತ ಮೂವತ್ತರೆಡು ಕನ್ನಡ ಸಂಘಗಳಿವೆ. ಅಂದಾಜು ಒಂದೊಂದು ರಾಜ್ಯಕ್ಕೆ ಒಂದು ಕನ್ನಡ ಸಂಘ ಎನ್ನುವುದು ಲೆಕ್ಕ. ಅರುವತ್ತರ ದಶಕದಲ್ಲಿ ಅಮೆರಿಕಾಗೆ ವಲಸೆಹೋದ ಕನ್ನಡ ಕುಟುಂಬಗಳಿಗೆ ಮೊದಲಬಾರಿಗೆ ಕನ್ನಡ ಸಂಘದ ಚೌಕಟ್ಟು (1972) ಕೊಟ್ಟದ್ದು ಮಿಚಿಗನ್ ರಾಜ್ಯದ ಪುಟ್ಟ ಊರು ಆನ್ ಆನ್ಬರ್. ಆ ಸಂಘದ ಹೆಸರು ಪಂಪ ಕನ್ನಡ ಸಂಘ. ಸಂಘವನ್ನು ಕಟ್ಟಿ ಬೆಳೆಸಿದವರು ಪ್ರಾಥಃ ಸ್ಮರಣೀಯರಾದ ಶ್ರೀಪಾದ ರಾಜು, ಕೃಷ್ಣಪ್ಪ ಮತ್ತು ಗೆಳೆಯರು. 37 ಸಂವತ್ಸರಗಳನ್ನು ಕಂಡಿರುವ ಪಂಪ ಸಂಘದ ಅಧ್ಯಕ್ಷೆಯಾಗಿ ಈ ಸಾಲಿನಲ್ಲಿ ಕೆಲಸ ಮಾಡುತ್ತಿರುವವರು ಮೈಸೂರು ಅನಂತಸ್ವಾಮಿ ಅವರ ಮಗಳು ಸುನೀತಾ ಅನಂತಸ್ವಾಮಿ. ಇವತ್ತಿನ ಲೇಖನಕ್ಕೆ ಈ ಐದು ವಾಕ್ಯಗಳ ಮುನ್ನುಡಿ ಆದಿಪುರಾಣದ ಮುಖಪುಟ ಮತ್ತು ಹಿಂಬದಿಯಪುಟ ಮಾತ್ರ ಎಂದು ಭಾವಿಸಬೇಕು.

ಪಂಪ ಆರಂಭವಾದ ಅನತಿಕಾಲದಲ್ಲೇ ಜನ್ಮತಾಳಿದ್ದು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಅಸೋಸಿಯೇಷನ್. ಇತರ ರಾಜ್ಯಗಳಲ್ಲಿ ಕಾಲಕಾಲಕ್ಕೆ ಕನ್ನಡಿಗರ ಜನಸಾಂದ್ರತೆ ಹೆಚ್ಚಾದಂತೆ ಸಂಘಗಳು ಜನ್ಮತಾಳುತ್ತಾ ಬಂದವು. ಕನ್ನಡ ಕುಟುಂಬಗಳಿಗೆ ಒಂದು ವೇದಿಕೆ ಕಲ್ಪಿಸಿಕೊಡುವಲ್ಲಿ ಸಾಫಲ್ಯ ಕಂಡುಕೊಳ್ಳುವುದೇ ಪ್ರತಿಯೊಂದೂ ಸಂಘಗಳ ಮೂಲ ಉದ್ದೇಶ. ಈ ಎಲ್ಲ ಸಂಘಗಳ ಹುಟ್ಟು ಬೆಳವಣಿಗೆ ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ವಿವರಗಳು ಬೇಕು. ಎಲ್ಲಿವೆ? ಯಾರು ಕಟ್ಟಿಕೊಡುತ್ತಾರೆ? ಶ್ರಮ ಮತ್ತು ವಾತ್ಸಲ್ಯದಿಂದ ತಾವು ಕಟ್ಟಿದ ಕನ್ನಡ ಸಂಘಗಳ ಇತಿಹಾಸ ಕಳೆದು ಹೋಗುತ್ತದಾ? ಎಂಬ ಪ್ರಶ್ನೆಯನ್ನು ಅನೇಕ ಹಿರಿಯ ಅಮೆರಿಕನ್ನಡಿಗರು ನಮ್ಮ ಡಾಟ್ ಕಾಂ ಮುಂದೆ ಇಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಬಿಡಿ ಲೇಖನಗಳು ಹರಿಹರೇಶ್ವರ ಅವರು ಸಂಪಾದಿಸುತ್ತಿದ್ದ ಅಮೆರಿಕನ್ನಡ ಪತ್ರಿಕೆಯಲ್ಲಿ ಹಾಗೂ ಹ್ಯೂಸ್ಟನ್ ಸಮ್ಮೇಳನದ ಸ್ಮರಣ ಗ್ರಂಥ 'ದರ್ಶನ' ದಲ್ಲಿ ಎಂಎಸ್ ನಟರಾಜ್ ಅವರ ಕನ್ನಡ ಸಂಘ ನಡೆದುಬಂದ ದಾರಿಯ ಕಥಾನಕಗಳು ಬೆಳಕು ಕಂಡಿವೆ. ಅವೆಲ್ಲ ಇವತ್ತು ಚದುರಿದ ಚಿತ್ರಗಳಂತೆ ಕಾಣಿಸುತ್ತವೆ.

ಅಮೆರಿಕನ್ನಡಿಗ ಎಂದ ಕೂಡಲೇ ಅಕ್ಕ ಹೆಸರು ನೆನಪಾಗುವ ಈ ಕಾಲಘಟ್ಟದಲ್ಲಿ ಅಮೆರಿಕಾ ಕನ್ನಡ ಸಂಘಗಳ ಸಮಗ್ರ ಚರಿತ್ರೆ ಸಂಪುಟವನ್ನು ಅಕ್ಕ ವತಿಯಿಂದಲೇ ನಿರೀಕ್ಷಿಸುವುದು ತಪ್ಪಾಗುವುದಿಲ್ಲ. ಎರಡು ವರ್ಷಕ್ಕೊಮ್ಮೆ ಅಕ್ಕ ಸಮ್ಮೇಳನ ನಡೆಯತ್ತೆ, ನಿಜ. ಸಮ್ಮೇಳನದ ನೆನಪಿಗೆ ಸ್ಮರಣ ಸಂಚಿಕೆಗಳೂ ಸಿದ್ಧವಾಗುತ್ತವೆ, ನಿಜ. ಈ ವರೆಗೆ ನಾವು ಕಂಡ ಸ್ಮರಣ ಸಂಚಿಕೆಗಳು ಬಿಡಿಬಿಡಿ ಲೇಖನಗಳ ಮಾಲೆಯಾಗಿ ಬೈಂಡಿಗ್ ಆಗಿವೆಯೇ ವಿನಾ, ಅವುಗಳಿಗೆ ಒಂದು ಚರಿತ್ರೆಯ ಸತ್ವ ಬಂದಿಲ್ಲ, ನಿಜ. ಸ್ಮರಣ ಸಂಚಿಕೆಗಳ ಉದ್ದಿಶ್ಯ ಚರಿತ್ರೆ ಬರೆಯುವುದಲ್ಲವಾದರೂ ಸಂಘ ಪರಿವಾರದೊಂದಿಗೆ ಸಾಗಿಬಂದ ಕನ್ನಡ ಕುಟುಂಬಗಳ ಪಯಣವನ್ನು ದಾಖಲೆ ಮಾಡುವವರು ಯಾರು? ಅದನ್ನು ಪ್ರಕಟಿಸುವವರು ಯಾರು?

ಐದಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನ ನಡೆಸುವ ಅಕ್ಕ ಬಳಗ ಇಂಥದೊಂದು ಕೃತಿಯನ್ನು ಪ್ರಾಜೆಕ್ಟ್ ಮಾದರಿಯಲ್ಲಿ ಕೈಗೆತ್ತಿಕೊಳ್ಳದಿರುವುದು ಒಂದು ಲೋಪ. ಒಂದು ಸಂಘದ ಚರಿತ್ರೆಗೆ 6 ಪುಟದಂತೆ ಲೆಕ್ಕಹಾಕಿ 32 ಸಂಘಗಳ ಸಾಂಸ್ಥಿಕ ಚರಿತ್ರೆಯನ್ನು ದಾಖಲಿಸುವ ಯೋಜನೆಯನ್ನು ಅಕ್ಕ ಈಗಲಾದರೂ ಹಾಕಿಕೊಳ್ಳಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. 200 ಪುಟಗಳ ಅಂಥ ಕೃತಿಯನ್ನು ಬರೆಯುವುದಕ್ಕೆ ಅನುಭವ, ಭಾಷೆ, ಸಮತೋಲನ ಇರುವ ಒಬ್ಬ ಅಮೆರಿಕ ವಾಸಿ ಬರಹಗಾರನನ್ನು ನೇಮಿಸಬೇಕು. ಒಂದು ಪುಸ್ತಕಕ್ಕೆ 10 ಡಾಲರು ಮುಖಬೆಲೆ ಇಡಿ. ಹತ್ತು ಸಾವಿರ ಪ್ರತಿ ಮುದ್ರಿಸಿ ಮಾರಾಟಕ್ಕಿಡಿ. ಡೋನಟ್ಟುಗಳ ಥರ ಮಾರಾಟವಾಗಿ ಅಕ್ಕ ಬೊಕ್ಕಸಕ್ಕೆ ಕನಿಷ್ಠ 50,000 ಡಾಲರು ಆದಾಯ ಬರದಿದ್ದರೆ ಆಗ ನಮ್ಮನ್ನು ಕೇಳಿ.

ಈ ಹಣ ಇಟ್ಟುಕೊಂಡು ಏನು ಮಾಡಬೇಕು? ಬರಲಿರುವ ನ್ಯೂ ಜೆರ್ಸಿ ಅಕ್ಕ ಸಮ್ಮೇಳನ ಅಥವಾ ಅದರ ಮುಂದೆ 2012ರಲ್ಲಿ ಬರುವ ಸಮ್ಮೇಳನದ ಮೊದಲ ದಿನ, ಮೂರು ದಿನಗಳ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಪರಿಪಾಠವಿದೆಯಷ್ಟೆ. ಆ ಹೊತ್ತು ಅಲ್ಲಿ ವಾಡಿಕೆಯಂತೆ ಹಚ್ಚೇವು ಕನ್ನಡದ ದೀಪ ಗೀತೆಯ ಸಮೂಹಗಾನ ಇದ್ದೇ ಇರುತ್ತದೆ. ಪುಸ್ತಕ ಮಾರಿಬಂದ ಹಣದಿಂದ ವೇದಿಕೆಯ ಮೇಲೆ ಹೊಳೆಯುವ ನೀಲಾಜನಗಳಿಗೆ ತುಪ್ಪ ತುಂಬಿಸಿದರೆ ಹೇಗಿರತ್ತೆ? ರಾಜಕಾರಣಿಗಳು ನೀಡುವ ದೇಣಿಗೆಯಿಂದ ಹ್ಯಾಲೋಜಿನ್ ದೀಪಗಳು ಝಗಝಗಿಸುತ್ತವೆ. ಆದರೆ, ಕನ್ನಡದ ಮಮತೆಯನ್ನೂ, ಕನ್ನಡಿಗರನ್ನೂ ಭಾವನಾತ್ಮಕವಾಗಿ ಶಾಶ್ವತವಾಗಿ ಬೆಸೆಯುವ ಇಂಥ ಹಾಲು ಜೇನು ಪ್ರಯತ್ನಗಳನ್ನು ಇನ್ನಾದರೂ ಮಾಡದಿದ್ದರೆ ಬಂದಾದರೂ ಏನು ಪ್ರಯೋಜನ.