Saturday, January 2, 2010

ಕನಸುಗಳ ಸಾಕಾರಕ್ಕಾಗಿ ಹೊಸವರ್ಷದ ಸಂಕಲ್ಪ


ದಿನಾಲೂ ಬೆಳಿಗ್ಗೆ ವಾಯುವಿಹಾರ ಮಾಡಿರಿ, ದೇಹಕ್ಕೆ ಅವಶ್ಯಕ ಆಕ್ಸಿಜನ್ ದೊರೆಯುವುದು
ಒಂದಾದರೂ ಒಳ್ಳೆಯ ವಿಚಾರ ಪ್ರತಿದಿನ ಓದಿರಿ, ಚಿಂತಿಸಿರಿ, ಮನಕೆ ನೆಮ್ಮದಿ ಲಭಿಸುವುದು
ದೈನಂದಿನ ವ್ಯವಹಾರ ಆಯ-ವ್ಯಯ, ತಪ್ಪು-ಒಪ್ಪು, ದಿನಚರಿಯಲ್ಲಿ ಒಂದು ಪುಟ ಬರೆದಿಡಿ
ಜೀವ-ರಥದ ಲಗಾಮು ನಿಮ್ಮ ಕೈಗೆ ಸಿಗುವದು. ಕನಿಷ್ಠ ಒಬ್ಬರಿಗಾದರೂ ಸಹಾಯ ಮಾಡಿರಿ,
ಮನ ಪ್ರಫುಲ್ಲಿತವಾಗುವದು. ಒಳ್ಳೆಯ ಉಕ್ತಿ ಬರೆದು ಗೋಡೆಗೆ ತಾಗಿಸಿರಿ, ಅದರಿಂದ
ಸುವಿಚಾರ ನಿಮ್ಮ ಧಮನಿಯಲಿ ಹರಿಯುವುದು, ರಕ್ತದೊತ್ತಡ ಕಡಿಮೆಯಾಗುವುದು.

ನಾನು ಹಿಂದೆ ಯೋಗಪ್ರಚಾರ ಮಾಡುತ್ತ ಊರೂರು ಅಲೆದಾಡುತ್ತಿದ್ದೆ. ಮಲ್ಲಾಡಿಹಳ್ಳಿಯ ಯೋಗಾಚಾರ್ಯ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪ್ರಭಾವಿತನಾಗಿದ್ದೆ. ಅವರು ತಾಯಂದಿರಿಗೆ ಹೇಳುತ್ತಿದ್ದರು. ನಿಮ್ಮ ಮಗು ಒಂದು ದಿನ ಸೂರ್ಯನಮಸ್ಕಾರ ಹಾಕುವುದನ್ನು ತಪ್ಪಿದರೆ, ಆ ದಿನ ಅವನಿಗೆ ಊಟ ಕೊಡಬೇಡಿ ಎಂದು. ನಾನು ಒಂದು ದಿನ ಊಟಕ್ಕೆ ಕೂಡಲು ಸಿದ್ಧನಾಗಿದ್ದೆ. ಆಗ ನೆನಪಾಯಿತು ನಾನು ಆ ದಿನ ಸೂರ್ಯ ನಾನು ನಮಸ್ಕಾರ ಹಾಕಿರಲಿಲ್ಲ ಎಂದು. ಬೇರೆ ಕೋಣೆಗೆ ಹೋಗಿ ಸೂರ್ಯ ನಮಸ್ಕಾರ ಹಾಕಿ ಬಂದೆ. ನನ್ನ ಮಡದಿಗೆ ನಗು ತಡೆಯಲಾಗಲಿಲ್ಲ. ನಾನು ಆಗ, ನಾವು ಇನ್ನೊಬ್ಬರಿಗೆ ಉಪದೇಶ ಮಾಡುತ್ತೇವೆ, ಆದರೆ ಅಚರಿಸುವುದಿಲ್ಲ. ಇದು ಸರಿಯಲ್ಲ ಎಂದಿದ್ದೆ. ನಮ್ಮ ಮಾತು ನಮ್ಮನ್ನು ತಿದ್ದಬೇಕು ಆಗ ಮಾತಿಗೆ ಮಂತ್ರದ ಶಕ್ತಿ ಬರುತ್ತದೆ ಎಂದು ಒಬ್ಬ ಮಹಾತ್ಮರು ಹೇಳಿದ್ದಾರೆ. ಪ್ರತಿ ದಿನ ಪಾರಾಯಣ ಮಾಡಬೇಕು. ಒಳ್ಳೆಯ ವಿಚಾರ ಓದಬೇಕು. ಈ ಕಾಲದಲ್ಲಿ ಟಿ.ವಿ. ಬಂದು ನಮ್ಮ ಜೀವನದ ಸ್ಥಿತಿಗತಿಯನ್ನೇ ಬದಲಿಸಿಬಿಟ್ಟಿದೆ. ದಿನಚರಿ ಬರೆಯುವ ಅಭ್ಯಾಸ ಮಕ್ಕಳಿಗೆ ಹೇಳಿಕೊಡಬೇಕು. ಅದರಿಂದ ಬಹಳ ಲಾಭವಿದೆ. ದಿನಚರಿ ಬರೆಯುವುದರಿಂದ ನಮ್ಮ ಕಾರ್ಯಕ್ರಮದ ಬಗ್ಗೆ ನಮಗೆ ಒಂದು ಬಗೆಯ ಹಿಡಿತ ದೊರೆಯುತ್ತದೆ. ಇತರರಿಗೆ ಸಹಾಯ ಮಾಡುವುದು ನಮ್ಮ ಜೀವನದ ಶೈಲಿಯಾಗಬೇಕು. ಅದರಿಂದ ಬಹಳ ಲಾಭಗಳಿವೆ. ಮನೆಯ ಗೋಡೆಯ ಮೇಲೆ ಒಳ್ಳೆಯ ಉಕ್ತಿಗಳನ್ನು ಬರೆದು ಹಚ್ಚುವ ವಾಡಿಕೆ ಹಿಂದಿನಕಾಲದಲ್ಲಿತ್ತು. ಈಗ ನಾನು ಅದನ್ನು ಕ್ವಚಿತ್ತಾಗಿ ಕಂಡಿದ್ದೇನೆ. ಸುವಿಚಾರ ಯಾವಾಗಲೂ ನಮ್ಮ ಧಮನಿಗಳಲ್ಲಿ ಹರಿಯುವುದು ಅವಶ್ಯಕವಾಗಿದೆ.

ಸಂಸ್ಕೃತ ಮಹಾಕವಿ ಭಾರವಿಯ ಬಗ್ಗೆ ಒಂದು ಕತೆ ಪ್ರಚಲಿತವಿದೆ. ಅವನು ಬಾಲಕನಾಗಿದ್ದಾಗ ಸುಂದರ ಕಾವ್ಯ ಶ್ಲೋಕಗಳನ್ನು ರಚಿಸುತ್ತಿದ್ದನಂತೆ. ಊರ ಜನರೆಲ್ಲ ಮೆಚ್ಚಿದರೂ ತಂದೆ ಮಾತ್ರ ಮೆಚ್ಚುತ್ತಿರಲಿಲ್ಲ. ಒಮ್ಮೆ ಮೆಚ್ಚದ ತಂದೆಯ ಮೇಲೆ ಕಲ್ಲೆಸೆಯಲು ಮನೆಯ ಮಾಳಿಗೆ ಏರಿದ್ದ. ಬೆಳಖಿಂಡಿಯಿಂದ ನೋಡಿದ. ತಾಯಿಗೆ ತಂದೆ ಹೇಳುತ್ತಿದ್ದ. `ನನ್ನ ಮಗ ಮಹಾಕವಿಯಾಗಬೇಕು, ಆಸ್ಥಾನಕವಿಯಾಗಬೇಕು. ಅದಕ್ಕೇ ನಾನು ಅವನ ಕಾವ್ಯ ಮೆಚ್ಚಿದರೂ ಅವನೆದುರು ನನ್ನ ಮೆಚ್ಚುಗೆ ತೋರುವುದಿಲ್ಲ. ಅವನ ಪ್ರಗತಿ ನಿಲ್ಲಬಾರದೆಂಬುದು ನನ್ನ ಆಸೆ' ಎಂದು. ಮಗನಿಗೆ ತನ್ನ ತಪ್ಪಿನ ಅರಿವಾಗಿ ತಂದೆಯ ಕಾಲು ಹಿಡಿಯುತ್ತಾನೆ. ತಂದೆಯನ್ನು ತಪ್ಪಾಗಿ ಭಾವಿಸಿ ಅವನನ್ನು ಶಿಕ್ಷಿಸಲು ಹೊರಟ ಮಗನಿಗೆ ಶಿಕ್ಷೆಯಾವುದು ಹೇಳಿರಿ? ಎಂದು ಕೇಳುತ್ತಾನೆ. ತಂದೆ ಹೇಳುತ್ತಾನೆ, ಅಂಥವನಿಗೆ ಹೆಂಡತಿಯ ಮನೆಗೆ ಇರಲು ಕಳಿಸಬೇಕು ಎಂದು. ಕೆಲಸವಿಲ್ಲದವ ಹೆಂಡತಿಯ ಮನೆಯಲ್ಲಿ ಕೆಲದಿನ ಇದ್ದು ಅವಮಾನ ಸಹಿಸಿ ಮನೆ ಬಿಟ್ಟು ಹೊರಬಿದ್ದಾಗ, ಒಂದು ಸರೋವರದ ದಂಡೆಯಲ್ಲಿ ಕಮಲ ಪತ್ರದ ಮೇಲೆ ಒಂದು ಶ್ಲೋಕ ಬರೆಯುತ್ತಾನೆ. ಅದನ್ನು ಅಲ್ಲಿಯ ರಾಜ ನೋಡಿ ಮೆಚ್ಚಿ ಒಯ್ಯುತ್ತಾನೆ. ನಂತರ ಅರಮನೆಗೆ ಬಂದು ಸಿಗಲು ಹೇಳುತ್ತಾನೆ.

ರಾಜನು ಆ ಶ್ಲೋಕವನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಸಿ ತನ್ನ ಮಲಗುವ ಕೋಣೆಯಲ್ಲಿರಿಸಿರುತ್ತಾನೆ. ಕವಿಗೆ ರಾಜನನ್ನು ನೋಡುವ ಅವಕಾಶವೇ ದೊರೆಯುವುದಿಲ್ಲ. ಮುಂದೆ ಒಮ್ಮೆ ರಾಜ ಬೇಟೆಗಾಗಿ ಹೋದವ ಯಾವುದೋ ಕಾರಣದಿಂದಾಗಿ ಹಠಾತ್ತನೆ ಪ್ರಯಾಣ ನಿಲ್ಲಿಸಿ ಅರಮನೆಗೆ ಮರಳುತ್ತಾನೆ. ತನ್ನ ಶೈಯ್ಯಾಗೃಹದಲ್ಲಿ ರಾಣಿ ಒಬ್ಬ ಯುಕನೊಂದಿಗೆ ಮಲಗಿದ್ದು ನೋಡುತ್ತಾನೆ. ಕೂಡಲೆ ಖಡ್ಗವನ್ನು ತೆಗೆದು ಅವರಿಬ್ಬರನ್ನು ಕೊಲ್ಲಲು ಸಿದ್ಧನಾಗುತ್ತಾನೆ. ಆಗ ಕವಿಯ ಶ್ಲೋಕ ಕಾಣುತ್ತದೆ. ಅದನ್ನು ಓದುತ್ತಾನೆ. :

ಸಹಸಾವಿದಧೀತನಕ್ರಿಯಾಂ ಅವಿವೇಕಃಪರಮಾಪದಾಂಪದಂ | ವೃಣುತೇ ಹಿ ವಿಮೃಶ್ಯಕಾರಿಣಂ ಗುಣಲಿಬ್ಧಾಃ ಸ್ವಯಮೇವ ಸಂಪದಾಃ (ಒಮ್ಮೆಲೇ ಯಾವುದೇ ಕಲಸವನ್ನು ಮಾಡಬಾರದು. ಅವಿವೇಕವು ಪರಮ ಆಪತ್ತುಗಳನ್ನು ತವರ್ಮನೆಯಾಗಿದೆ. ವಿಚಾರವಿಮರ್ಶೆ ಮಾಡಿ ಕೆಲಸಮಾಡಬೇಕು. ಸಂಪತ್ತು (ಯಶ) ಗುಣಗಳನ್ನು ಹುಡುಕಿಕೊಂಡು ಬರುತ್ತದೆ.) ಅವರನ್ನು ಎಚ್ಚರಿಸಿ ವಿಚಾರಿಸುತ್ತಾನೆ. ನಿಜ ಸಂಗತಿ ತಿಳಿದು ದಂಗಾಗುತ್ತಾನೆ. ಹಿಂದೆ ರಾಜನ ಪುತ್ರನನ್ನು ದುಷ್ಕರ್ಮಿಗಳು ಅಪಹರಿಸಿರುತ್ತಾರೆ. ಹಲವಾರು ವರ್ಷಗಳ ಮೇಲೆ ರಾಜನ ಅನುಪಸ್ಥಿತಿಯಲ್ಲಿ ಆ ಹುಡುಗ ಸಿಕ್ಕಿರುತ್ತಾನೆ. ಅವನೀಗ ದೊಡ್ಡವನಾಗಿರುತ್ತಾನೆ. ತಾಯಿಯಾದ ರಾಣಿ ಅವನನ್ನು ಸತ್ಕರಿಸಿ ಎರೆದು ಮಲಗಿಸಿರುತ್ತಾಳೆ. ರಾಜನಿಗೆ ತಾನು ಮಾಡಬಹುದಾಗಿದ್ದ ತಪ್ಪಿನ ಅರಿವಾಗುತ್ತದೆ. ಆ ಶ್ಲೋಕ ಬರೆದ ಕವಿಯನ್ನು ಹುಡುಕಿಸಿ ರಾಜ ಮರ್ಯದೆಕೊಟ್ಟು ಆಸ್ಥಾನ ಕವಿ ಪಟ್ಟ ನೀಡುತ್ತಾನೆ ಎಂಬ ಕತೆ ಇದೆ. ಒಳ್ಳೆಯ ವಿಚಾರ ನಮ್ಮ ನೆನಪಿನಲ್ಲಿದ್ದರೂ ಅವು ನಮ್ಮನ್ನು ಕಾಪಾಡುತ್ತವೆ. ಹೊಸ ವರ್ಷದ ಶುಭಾಶಯಗಳು.

Friday, January 1, 2010

ಸಾಧನೆಗೆ ದೃಢ ಸಂಕಲ್ಪ, ಆತ್ಮಾವಲೋಕನ


ಹೊಸವರ್ಷಕ್ಕೆ ಸ್ವಾಗತ ಬಯಸುವಾಗ ಕಳೆದ ವರ್ಷದಲ್ಲಿಯ ಆಗುಹೋಗುಗಳ ಬಗ್ಗೆ ಒಂದು ಸಿಂಹಾವಲೋಕನ ಮಾಡುವ ಪದ್ಧತಿ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಪ್ರತಿಯೊಬ್ಬರೂ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಫಲವಾಗಲಿ ಎಂದು ಹಾರೈಸಿ ಒಂದು ಬಗೆಯ ಸಂಕಲ್ಪ ಮಾಡುತ್ತಾರೆ. ಇಂಗ್ಲೀಷಿನಲ್ಲಿ `ನ್ಯು ಇಯರ್ ರೆಸೊಲ್ಯುಶನ್' ಎನ್ನುತ್ತಾರೆ. ಹೊಸ ವರ್ಷಕ್ಕಾಗಿ ಏನು ಮಾಡಬೇಕು, ಏನು ಬಿಡಬೇಕು ಎಂಬ ನಿರ್ಧಾರ ಕೈಕೊಳ್ಳುತ್ತಾರೆ. ಹಾಗೆ ಪ್ರತಿಯೊಬ್ಬರೂ ಒಂದು ಬಗೆಯ ಅತ್ಮಾವಲೋಕನ ಮಾಡುವುದು ಉಚಿತ.

ಕಳೆದ ವರ್ಷ ಆಲಸ್ಯದಲ್ಲೇ ಕಳೆದುಹೋಯಿತು ಎಂದು ನನ್ನ ಮನಃಸಾಕ್ಷಿ ನುಡಿಯುತ್ತದೆ. ನನ್ನ ಮಿತ್ರರು ಹಿತೈಷಿಗಳ ನೆನಪಾಗುತ್ತದೆ. ಅವರಲ್ಲಿದ್ದ ಜಿಗುಟುತನ ನನ್ನಲ್ಲಿ ಇಲ್ಲವಲ್ಲ ಎಂದು ಬೇಸರ ಬರುತ್ತದೆ. ಮಿತ್ರ ಎಚ್.ಬಿ.ಎಲ್.ರಾಯರು ನೆನಪಾಗುತ್ತಾರೆ. ಅವರಷ್ಟು ಪಾದರಸದಂತೆ ಕ್ರಿಯಾಶೀಲರಾದ ವ್ಯಕ್ತಿಯನ್ನು ನಾನು ಕಂಡಿಲ್ಲ. ಮುಂಬೈಯಲ್ಲಿ ನಿರ್ಮಿತವಾದ ಭವ್ಯ ಕನ್ನಡ ಭವನಕ್ಕಾಗಿ ಅವರು ಪಟ್ಟ ಕಷ್ಟ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಅವರ ಉತ್ಸಾಹ ಅದಮ್ಯ. ಬೈಪಾಸ್ ಸರ್ಜರಿ ಆದ ಈ ವ್ಯಕ್ತಿ, ಎಪ್ಪತ್ತಾರು ಮೀರಿದ ಮೇಲೂ ಇಪ್ಪತ್ತಾರರ ಉತ್ಸಾಹ ತೋರಿ ಯುವಕರನ್ನು ನಾಚಿಸುವಂತಹ ಕೆಲಸಮಾಡುತ್ತಾರೆ. ಬಹುಶಃ ಗಿನ್ನಿಸ್ ರೆಕಾರ್ಡ್ ಸಾಧಿಸಬಹುದಾದ ವ್ಯಕ್ತಿ ಇವರು. ಅವರ ನೆನಪಾದಾಗ ನನ್ನ ಆಲಸ್ಯದ ಬಗ್ಗೆ ನನಗೇ ನಾಚಿಕೆಯಾಗುತ್ತದೆ. ಇನ್ನೊಬ್ಬ ಮಿತ್ರ ಡಾ| ಕೆ.ಎಸ್.ಶರ್ಮಾ ಅವರ ಸಾಹಸ ಪವಾಡ ಸದೃಶ. ವಕೀಲಿವೃತ್ತಿಯಲ್ಲಿ, ಕಾರ್ಮಿಕರ ಪರವಾಗಿ ನಡೆಸಿದ ಹೋರಾಟ ಮತ್ತು ಸಾಧನೆಯನ್ನು ಬದಿಗಿರಿಸಿ ಅವರು ಸಾಹಿತ್ಯಕ್ಕಾಗಿ ದುಡಿದದ್ದನ್ನು ಗಮನಿಸಿದರೂ ಆಶ್ಚರ್ಯವಾಗುತ್ತದೆ. ಸಮಗ್ರ ಬೇಂದ್ರೆ ಸಂಪುಟಗಳನ್ನು ತರುವಲ್ಲಿ ಅವರು ಮಾಡಿದ ಹರಸಾಹಸ ಕನ್ನಡದಲ್ಲಿ ಅಪೂರ್ವ. ನನಗೆ ಹೊಸವರ್ಷದ ಪ್ರಥಮ ದಿನ ನೆನಪಾದ ಇನ್ನೊಬ್ಬ ಅಸಾಧಾರಣ ವ್ಯಕ್ತಿ ರವಿ ಬೆಳಗೆರೆ. ದಿನಕ್ಕೆ 80 ಪುಟ ಬರೆಯುತ್ತಾರೆ ಈ ಆಸಾಮಿ. ಮೂರು ದಿನಗಳಲ್ಲಿ ಒಂದು ಪುಸ್ತಕ ಬರೆದುಬಿಡುವ ಛಲ ಹಾಗೂ ಬಲ ಇವರಲ್ಲಿದೆ. ಅವರಲ್ಲಿದ್ದ ದೈತ್ಯಶಕ್ತಿಯ ಬಗ್ಗೆ ನನಗೆ ಬಹಳ ಸಲ ಅಚ್ಚರಿಯಾಗುತ್ತದೆ. ಅಧ್ಯಾತ್ಮದಲ್ಲೂ ನನಗೆ ಬಹಳ ಆಸಕ್ತಿ ಇದೆ. ಆ ಕ್ಷೇತ್ರದಲ್ಲಿ ನನಗೆ ಆತ್ಮೀಯರಾದ ಡಾ| ಪ್ರಭಂಜನಾಚಾರ್ಯ ಹಾಗೂ ವಿದ್ಯಾವಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಬರವಣಿಗೆ ಹಾಗೂ ಭಾಷಣಗಳು ನನ್ನನ್ನು ಮೂಕವಿಸ್ಮಿತನನ್ನಾಗಿಸುತ್ತವೆ. ಈ ಶಕ್ತಿ ಅವರಿಗೆಲ್ಲಿಂದ ಬಂತು ಎಂದು ನಾನು ಬಹಳ ಸಲ ಅಚ್ಚರಿ ಪಟ್ಟಿದ್ದೇನೆ.

ಹೊಸವರ್ಷದ ಶುಭಾರಂಭದಲ್ಲಿ ನನ್ನ ಗುರುಗಳೆಲ್ಲ ನೆನಪಾಗುತ್ತಾರೆ. ಬೇಂದ್ರೆ, ಗೋಕಾಕ, ಮಧುರಚೆನ್ನರ ನೆನಪಾಗುತ್ತದೆ. ಕನ್ನಡ ಸಾಹಿತ್ಯದ ಈ ಮೂವರು ದಿಗ್ಗಜರು ನನಗೆ ಆತ್ಮೀಯರು ಎಂಬ ಹೆಮ್ಮೆ ನನಗಿದೆ. ಅವರ ಸಾಧನೆಯ ಪರ್ವತದ ಮುಂದೆ ನಮ್ಮ ಸಾಧನೆ ಒಂದು ಚಿಕ್ಕ ಮಳಲದಿನ್ನೆಯಂತಹದು. ಇನ್ನು ಜೀವನದಲ್ಲಿ ನನ್ನ ಸಂಪರ್ಕಕ್ಕೆ ಬಂದ ಮಹಾತ್ಮರ ನೆನಪಾಗುತ್ತದೆ. ಭಗವಾನ ನಿತ್ಯಾನಂದರನ್ನು ನಾನು 1960ರ ಸಾಲಿನಲ್ಲಿ ಪ್ರತಿವಾರ ಸಂದರ್ಶಿಸುತ್ತಿದ್ದೆ. ನಿತ್ಯಾನಂದ ದರ್ಶನ ಎಂಬ ಪತ್ರಿಕೆಯನ್ನು ಸಂಪಾದಕನಾಗಿ ಒಂದು ವರ್ಷ ನಡೆಸಿದೆ. ಈ ಸಿದ್ಧರ ಶಿಷ್ಯರಾದ ಸ್ವಾಮಿ ಶಿವಾನಂದರ ಸಂಪರ್ಕ ಬಂತು, ಆಶ್ಚರ್ಯವೆನಿಸಿತು. ಅವರು ನಿತ್ಯಾನಂದರನ್ನು ಪ್ರತ್ಯಕ್ಷ ಕಾಣದಿದ್ದರೂ ಸ್ವಪ್ನದಲ್ಲಿ ಕಂಡು ಮಾರ್ಗದರ್ಶನ ಪಡೆದಿದ್ದಾರೆ, ಅಗಾಧ ಸಾಧನೆ ಮಾಡಿದ್ದಾರೆ. ನಾವು ಅವರನ್ನು ಹತ್ತಿರದಿಂದ ಕಂಡು ಕೂಡ ಏನೂ ಸಾಧಿಸಲಿಲ್ಲ. ಗುರುದೇವ ರಾನಡೆಯವರ ನೆನಪಾಗುತ್ತದೆ. ಅವರ ಕೃಪಾಕಟಾಕ್ಷ ಪಡೆದವನು ನಾನು. ಮಹಾತ್ಮರ ಮಾನಸ ಸರೋವರಗಳಲ್ಲಿ ಮಿಂದೆ, ಆದರೆ ಪೂರ್ತಿ ಲಾಭ ಪಡೆಯುವ ಯೋಗ್ಯತೆ ನನ್ನಲ್ಲಿರಲಿಲ್ಲ. ಯೋಗ ವಿಷಯದಲ್ಲಿ ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್, ಹಟಯೋಗಿ ನಿಕಂ ಗುರೂಜಿ, ನಿಸರ್ಗೋಪಚಾರ ತಜ್ಞ ಡಾ| ಪದ್ಮನಾಭ ಬೋಳಾರ, ಇತ್ತೀಚೆಗೆ ನನ್ನ ಮೇಲೆ ಪ್ರಭಾವ ಬೀರುತ್ತಿರುವ ಬಾಬಾ ರಾಮದೇವ ಇವರಿಂದ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ವಲ್ಪ ಕಲಿತಿದ್ದೇನೆ, ಆದರೆ ಕಲಿಯುವುದು ಇನ್ನೂ ಬಹಳ ಇದೆ ಎಂಬ ಎಚ್ಚರ ನನಗಿದೆ.

ಹೊಸ ವರುಷ ಬಂದಾಗ ಅನೇಕ ಅಪೂರ್ಣ ಕೆಲಸಗಳು ನೆನಪಾಗುತ್ತವೆ. ಈ ವರ್ಷ ಅವನ್ನೆಲ್ಲ ಪೂರೈಸಬೇಕೆಂಬ ಸಂಕಲ್ಪ ಮಾಡಬೇಕೆನಿಸುತ್ತದೆ. ಇದಕ್ಕಾಗಿ ಅವಿರತ ಪ್ರಯತ್ನ ಕಾರ್ಯಮಗ್ನತೆ ಅವಶ್ಯ. ನಾನೇ ಹಿಂದೆ ಬರೆದ ಒಂದು ವಚನ ನನಗೆ ನೆನಪಾಗುತ್ತದೆ: