ಆಂಗ್ಲ ಮಾಧ್ಯಮದಲ್ಲಿ ಓದುವ ಬಹುತೇಕ ಮಂದಿ ಮಕ್ಕಳು ತಾವು ಕನ್ನಡದಲ್ಲಿ ಸ್ವಲ್ಪ
ಹಿಂದು ಎಂದು ನಾಚಿಕೆಯಿಂದ, ಸಂಕೋಚದಿಂದ, ಬೇಸರದಿಂದ ಮತ್ತು ಕೆಲವೊಮ್ಮೆ ಉಡಾಫೆಯಿಂದ
ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾರೆ. ನಿಮಗೆ ನೆನಪಿರಲಿ, ನಾನು ಹೇಳುತ್ತಿರುವುದು
ಹೊರರಾಜ್ಯದಿಂದ ಬಂದು ಕನ್ನಡ ಕಲಿಯುವವರ ಕುರಿತಾಗಿ ಅಲ್ಲ! ಬದಲಿಗೆ ನಮ್ಮ ನಾಡಿನಲ್ಲಿಯೆ
ಹುಟ್ಟಿ, ನಮ್ಮ ನಿಮ್ಮ ಮನೆಗಳ ಸುತ್ತ ಬೆಳೆದಿರುವ ಕನ್ನಡನಾಡಿನ ಭಾವಿ ಪ್ರಜೆಗಳ
ಕುರಿತಾಗಿ.
ಅಸಲಿಗೆ ಅವರು ಹಿಂದುಳಿಯಲು ಕಾರಣಗಳೇನು? : ಇಂದಿನ ಕಾಲದಲ್ಲಿ ತಮ್ಮ ಮಕ್ಕಳನ್ನು
ಆಂಗ್ಲ ಶಾಲೆಗೆ ಕಳಿಸುವುದು ಫ್ಯಾಷನ್ ಆಗಿಬಿಟ್ಟಿದೆ. ಎರಡು ವರ್ಷ ಇನ್ನೂ
ತುಂಬಿರುವುದಿಲ್ಲ ಆಗಲೇ ಪ್ಲೇ ಹೋಂ ಸೇರಿಸಿಬಿಟ್ಟಿರುತ್ತಾರೆ. ಸುಮ್ಮನೆ ಆಟವಾಡಿಸಿ
ಮನೆಗೆ ಕಳಿಸುವ ಬದಲು, ಪುಟ್ಟಪುಟ್ಟ ಮೃದುವಾದ ಬೆರಳುಗಳಿಂದ ಎಬಿಸಿಡಿ ಬರೆಯುವ ತರಬೇತಿ
ಆರಂಭವಾಗುವುದೇ ಅಲ್ಲಿಂದ. ಇಷ್ಟು ಮಾತ್ರವಲ್ಲದೆ, ಇನ್ನೂ ಅಪ್ಪ ಅಮ್ಮ ಅನ್ನಲು ಬರದ
ಮಕ್ಕಳ ಜೊತೆ ಆಂಗ್ಲ ಭಾಷೆಯಲ್ಲಿಯೇ ಮಾತನಾಡಿರೆಂದು ಪಾಲಕರಿಗೆ ಶಿಕ್ಷಕರು ಒತ್ತಡ
ಹೇರುತ್ತಾರೆ
ಕನ್ನಡದ ಕಲಿಕೆಗೆ ಮೂಲದಲ್ಲಿಯೇ ಬಲವಾದ ಹೊಡೆತ ಬಿದ್ದಿರುತ್ತದೆ. ಅಪ್ಪ ಅಮ್ಮ
ಅನ್ನುತ್ತಿದ್ದ ಮಕ್ಕಳು ನಿಧಾನವಾಗಿ ಮಮ್ಮಿ ಡ್ಯಾಡಿ ಅನ್ನಲು ಪ್ರಾರಂಭಿಸುತ್ತವೆ, ಬಾ
ಹೋಗು ಅನ್ನುವ ಬದಲು ಕಂ ಗೋ ಅನ್ನಲು ಪ್ರಾರಂಭಿಸುತ್ತವೆ. "ಅಯ್ಯೋ, ನನ್ನ ಮಗ ಎಷ್ಟು
ಮುದ್ದು ಮುದ್ದಾಗಿ ಇಂಗ್ಲಿಷಲ್ಲಿ ಮಾತಾಡ್ತಾನೆ ನೋಡ್ರೀ" ಅಂತ ಊರ ತುಂಬ ಡಂಗುರ
ಸಾರಿಕೊಂಡು ಬಂದಿರುತ್ತಾಳೆ 'ಮಮ್ಮಿ'. ಆಮೇಲೆ ಮಗು ದೊಡ್ಡದಾಗುತ್ತಿದ್ದಂತೆ ಕನ್ನಡ
ನಾಡಿನಲ್ಲೇ ಹುಟ್ಟಿದ್ದೋ ಅಥವಾ ಹೊರರಾಜ್ಯದಿಂದ ಬಂದಿದ್ದೋ ಎಂಬ ಸಂದೇಹ ಕಾಣುವಷ್ಟು
ಆಂಗ್ಲ ಭಾಷೆಯಲ್ಲಿ ವ್ಯವಹರಿಸಲು ಪ್ರಾರಂಭಿಸಿರುತ್ತದೆ.
ಮಕ್ಕಳಿಗೆ ನರ್ಸರಿಯಿಂದಲೆ ಕನ್ನಡದ ಮೂಲ ಅಂಶಗಳ ಕುರಿತಾಗಿ ಅಸಡ್ಡೆಯಿಂದ ಬೋಧನೆ
ಆರಂಭವಾಗಿರುತ್ತದೆ. ಇದಕ್ಕೆ ಪೂರಕವಾಗಿ ಮಕ್ಕಳ ಎಲ್ಲಾ ಮನೆಗೆಲಸ ನೋಡುವ ಪೋಷಕರು ಕನ್ನಡದ
ಕುರಿತು ತಾಳುವ ಧೋರಣೆ ಸಹ ಮಕ್ಕಳ ಕನ್ನಡ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ.
ಮುಂದುವರಿದಂತೆ, "ನಮ್ಮ ಮಕ್ಕಳಿಗೆ ಕನ್ನಡ ಮಾತಾಡಲು ಬರುತ್ತೆ, ಮನೇಲೆಲ್ಲ ಕನ್ನಡ ತಾನೆ
ಮಾತಾಡೋದು. ಆದರೆ, ಓದುವುದು ಬರೆಯುವುದು ಸ್ವಲ್ಪ ಕಷ್ಟ. ಇಂಗ್ಲಿಷ್ ಮೀಡಿಯಂನಲ್ಲಿ
ಓದಿದ್ದಲ್ವಾ?" ಎಂದು ಸಮಜಾಯಿಷಿ ಹೇಳುವುದು ಸರ್ವೇಸಾಮಾನ್ಯವಾಗಿದೆ.
ಒಂದು ಎರಡು ಬಾಳೆಲೆ ಹರಡು, ಕಾಮನಬಿಲ್ಲು ಕಮಾನು ಕಟ್ಟಿದೆ, ನಾಯಿಮರಿ ನಾಯಿಮರಿ
ತಿಂಡಿಬೇಕೆ, ನಮ್ಮ ಮನೆಯಲೊಂದು ಪುಟ್ಟ ಮಗುವು ಇರುವುದು... ಮುಂತಾದ ಹಾಡುಗಳು ಇಂದಿನ
ಎಷ್ಟು ಮಕ್ಕಳಿಗೆ ಗೊತ್ತಿರುತ್ತವೆ? ಮಕ್ಕಳಿಗೆ ಗೊತ್ತಿರುವುದಿರಲಿ, ಅವರನ್ನು ಹೆತ್ತ
ಪಾಲಕರಿಗೂ ಗೊತ್ತಿರುವುದಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅಲ್ಲವಾ?
ಪಾಲಕರಿಗೆ ತಿಳಿದಿರಲಿ : ಮಕ್ಕಳು ಮೊದಲಿನಿಂದಲು ಭಯಪಡುವುದು ಒತ್ತಕ್ಷರಗಳಿಗೆ.
ಅಸಲಿಗೆ ಸರಿಯಾಗಿ ಕನ್ನಡ ಮಾತನಾಡಲು ಬಂದರೆ ಅದು ಸಮಸ್ಯೆಯೆ ಅಲ್ಲ. 20 ರುಪಾಯಿ
ಬೆಲೆಬಾಳುವ ಒಂದು ಕನ್ನಡ ನಿಘಂಟು ನಮ್ಮ ಮಕ್ಕಳ ಕೈಗೆ ದೊರೆತು, ಅವರು ಅದನ್ನು ತೆರೆದು
ಓದಲು ಪ್ರಾರಂಭಿಸಿದರೆ ಸಾಕು ಒತ್ತಕ್ಷರ ಸಮಸ್ಯೆ ಇರಲಿ, ಕಾಗುಣಿತದ ಸಮಸ್ಯೆಯು
ಹುಟ್ಟುವುದಿಲ್ಲ. ತುಂಬಾ ಮಕ್ಕಳು ಹೊರಗಡೆ ಓಡಾಡುವಾಗ ಕಾಣಿಸುವ ಕನ್ನಡ ಬರಹಗಳನ್ನು, ನಾಮ
ಫಲಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಕನ್ನಡ ಸುಲಭವಾಗುತ್ತದೆ.
ಕನ್ನಡ ಕಲಿಸುವುದು ಹೇಗೆ? : ಎಲ್ಲಾ ಮಕ್ಕಳು ಅರಿಯಬೇಕಾದ ಸತ್ಯವೆಂದರೆ
ಕನ್ನಡವನ್ನು, ಕನ್ನಡ ಬಾರದವರು ಸಹ ಕನಿಷ್ಟ 21 ದಿನಗಳ ಒಳಗಾಗಿ ಓದಿ ಬರೆಯಲು
ಕಲಿಯಬಹುದೆಂಬುದು. ಅದಕ್ಕೆ 'ಆಸಕ್ತಿ' ಎಂಬ ಅಂಶವನ್ನು ಮಾತ್ರ ಖರ್ಚು ಮಾಡಿದರೆ ಸಾಕು.
ಕನ್ನಡ ಭಾಷೆಯ ಶ್ರೀಮಂತಿಕೆ ಅವರ ಪಾಲಾಗುತ್ತದೆ. ಇನ್ನು ಮಕ್ಕಳು ಕನ್ನಡದಲ್ಲಿ ಓದಲು
ಪೂರ್ತಿ ವಾಕ್ಯವನ್ನು ಆಯ್ಕೆ ಮಾಡಿಕೊಳ್ಳದೆ, ಪದ ಪದವನ್ನು ಬಿಡಿ ಬಿಡಿಯಾಗಿ ಓದಲು
ಪ್ರಾರಂಭಿಸಿದರೆ ಸುಲಭವಾಗಿ ಓದಲೂಬಹುದು. ಕನ್ನಡ ಕಲಿಸುವಾಗ ಪಾಲಕರಿಗೇ ಕನ್ನಡದ ಬಗ್ಗೆ
ಅಸಡ್ಡೆ ಇರಬಾರದು. ಅದನ್ನು ಒಂದು ಕರ್ತವ್ಯ ಎಂಬಂತೆ ಕಲಿಸಬೇಕು.
ವಿದ್ಯಾರ್ಥಿಗಳು ಮನೆಯಲ್ಲಿ ಬಿಡುವಾಗಿದ್ದಾಗ ಕನ್ನಡ ಸುದ್ದಿ ವಾಹಿನಿಗಳನ್ನು,
ರೇಡಿಯೋವನ್ನು ಮತ್ತು ಚಲನಚಿತ್ರಗಳನ್ನು ನೋಡುವುದರಿಂದ ಹಾಗು ದಿನಪತ್ರಿಕೆ,
ನಿಯತಕಾಲಿಕೆಗಳನ್ನು ಓದುವುದರಿಂದಲು ಕನ್ನಡವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
ಪೋಷಕರು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಒಂದು ಮಗ್ಗಿ ಪುಸ್ತಕ ಅಥವಾ ಕಾಗುಣಿತ
ಪುಸ್ತಕವನ್ನು ಕೊಡಿಸಿದರೆ ಸಾಕು. ಆ ಪುಸ್ತಕಗಳು ಕಾಗುಣಿತಕ್ಕೆ ಅತ್ಯಂತ ಮಹತ್ವದ ಆಧಾರ
ಪುಸ್ತಕಗಳಾಗಿ ಉಪಯೋಗಕ್ಕೆ ಬರುತ್ತವೆ. ಪೋಷಕರು ತಮ್ಮ ಮಗು ಪ್ರೌಢಶಾಲೆಗೆ ಬಂದು
ಕನ್ನಡದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ತಾವೇ ಸ್ವತಃ ಕನ್ನಡವನ್ನು ಬೋಧಿಸುವುದು
ಒಳ್ಳೆಯದು.
ಆಗ ಆ ಮಗುವಿಗೆ ತಾನು ಕನ್ನಡವನ್ನು ಹಿಂದೆ ಕಲಿತಿದ್ದೀನಿ ಎಂಬ ಭಾವನೆ ಮೊದಲು
ತೊಲಗಿಸಿ. ಕನ್ನಡವನ್ನು ಮೊದಲಿನಿಂದ ಹೇಳಿಕೊಡಲು ಶುರುಮಾಡಿ ವರ್ಣಮಾಲೆ ಬರೆಸಿ.
ವರ್ಣಮಾಲೆ ಬಂದ ನಂತರ ಕಾಗುಣಿತ ಬಳಸದೆ ವರ್ಣಮಾಲೆಯಿಂದಲೆ ರಚಿಸಬಹುದಾದ ಕೆಲವು ಪದಗಳನ್ನು
ಪರಿಚಯಿಸಿ. ಉದಾ;- ಅರಸ, ಆಲದಮರ, ಇಂಚರ, ಈಶ, ಉಡ, ಊಟ ಇತ್ಯಾದಿ. ನಂತರ ಒತ್ತಕ್ಷರ
ಹಾಗು ಒತ್ತಕ್ಷರದ ಪದಗಳು. ಇವು ಸಹ ಸರಳವಾಗಿರಲಿ. ಅದಾದ ನಂತರ ಕಾಗುಣಿತ ಹೇಳಿ ಕೊಡಿ.
ಇದಕ್ಕೆ ಪ್ರತಿ ದಿನ ನೀವು ಅರ್ಧದಿಂದ ಒಂದು ಗಂಟೆ ಮೀಸಲಿಟ್ಟರೆ ಸಾಕು. ನಿಮ್ಮ ಮಗು ತನ್ನ
ಸಾಮರ್ಥ್ಯಕ್ಕೆ ಅನುಗುಣವಾಗಿ ಇದನ್ನು 21 ರಿಂದ 30 ದಿನದಲ್ಲಿ ಕಲಿಯಬಹುದು.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊ ಪ್ರಕಾರ ಮುಂದಿನ 50 ವರ್ಷಗಳಲ್ಲಿ
ವಿಶ್ವದ ಹಲವು ಭಾಷೆಗಳು ಮಾತನಾಡುವವರಿಲ್ಲದೆ ಸತ್ತು ಹೋಗುತ್ತವೆಯಂತೆ. ಆ ಪಟ್ಟಿಯಲ್ಲಿ
ಕನ್ನಡವೂ ಸೇರಿದೆ. ಮೇಲಿನ ಸಲಹೆಗಳನ್ನು ಜಾರಿಗೆ ತನ್ನಿ ಕನ್ನಡವನ್ನು ಉಳಿಸಿ. ನಾಚಿಕೆ,
ಅಸಡ್ಡೆ ಬಿಟ್ಟು ನಿಮ್ಮ ಮಕ್ಕಳಿಗೆ ಕನ್ನಡ ಪದಗಳ ಬಗ್ಗೆ, ಕನ್ನಡದ ಹಾಡುಗಳ ಬಗ್ಗೆ,
ಕನ್ನಡ ಪದ್ಯಗಳ ಬಗ್ಗೆ ಹೇಳಿಕೊಡಿ. ಕೆಂಪು, ನೀಲಿ, ಹಳದಿ, ಬಿಳಿ, ಕಪ್ಪು ಬಣ್ಣಗಳನ್ನು,
ಆನೆ, ಹುಲಿ, ಒಂಟೆ, ಕತ್ತೆ, ಕುದುರೆ, ಬೆಕ್ಕು ಮುಂತಾದ ಪ್ರಾಣಿಗಳ ಹೆಸರುಗಳನ್ನು
ಕನ್ನಡದಲ್ಲಿಯೇ ಹೇಳಿಕೊಡಿ. ಕನ್ನಡ ಯಾಕೆ ಉದ್ಧಾರ ಆಗಲ್ಲ?