Wednesday, December 8, 2010

ಸ್ಕಾಟ್ಲಂಡ್ ಕರ್ನಾಟಕ ಸಂಘದ ಕನ್ನಡ ಡಿಂಡಿಮ


ಸ್ಕಾಟ್ಲಂಡಿನಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಿರುವ 'ಸ್ಕಾಟಿಶ್ ಕರ್ನಾಟಕ ಸಂಘ'ವು ಇದೇ ಶನಿವಾರ, ನವೆಂಬರ್ 27ರಂದು 'ದೀಪಾವಳಿ ಮತ್ತು ರಾಜ್ಯೋತ್ಸವ' ಕಾರ್ಯಕ್ರಮವನ್ನು ಸ್ಕಾಟ್ಲಂಡಿನ ಗ್ಲಾಸ್ಗೋದಲ್ಲಿ ಆಯೋಜಿಸಿದೆ.

2001ರಲ್ಲಿ ಆರಂಭಗೊಂಡ ಸಂಘ, ಸ್ಕಾಟ್ಲಂಡಿನಲ್ಲಿ ಕನ್ನಡದ ಕಂಪನ್ನು ಬೀರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ವರ್ಷದಲ್ಲಿ ಎರಡು ಪ್ರಮುಖ (ಉಗಾದಿ ಮತ್ತು ದೀಪಾವಳಿ) ಕಾರ್ಯಕ್ರಮಗಳನ್ನು ಆಯೋಜಿಸಿ, ಕರ್ನಾಟಕದ ಜನತೆಯನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದೆ. ಸ್ಕಾಟ್ಲಂಡಿನ ಸುತ್ತಮುತ್ತಲಿನ ಕರ್ನಾಟಕದ ಜನರು ಈ ಕಾರ್ಯಕ್ರಮವನ್ನು ಪ್ರೊತ್ಸಾಹಿಸಬೇಕೆಂದು ಸಂಘದ ಕಾರ್ಯಕರ್ತರು ದಟ್ಸ್ ಕನ್ನಡ ಮೂಲಕ ವಿನಂತಿಸಿಕ್ಕೊಳ್ಳುತ್ತಿದ್ದಾರೆ.

ಕಾರ್ಯಕ್ರಮದ ದಿನ ಮತ್ತು ಜಾಗ ನೆನಪಿರಲಿ

ಶನಿವಾರ : 27 ನವೆಂಬರ್, 2010
ಸಮಯ : ಮಧ್ಯಾಹ್ನ 3ರಿಂದ 9
ಜಾಗ : Westerton Hall, 84, Maxwell Avenue, Bearsden, GLASGOW – G61 1NZ.

ಕರ್ನಾಟಕದ ನಾಡು ನುಡಿಯ ಮೇಲಿನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಕಾಟ್ಲಂಡಿನ ಕರ್ನಾಟಕ ಪ್ರೇಮಿಗಳು ತಮ್ಮ ಪ್ರತಿಭೆಯ ಮೂಲಕ ಪರಿಚಯಿಸಲಿದ್ದಾರೆ.

ಮುಖ್ಯ ಕಾರ್ಯಕ್ರಮದ ವಿವರ ಹೀಗಿದೆ

* ಲಕ್ಷ್ಮಿ ಪೂಜೆ
* ಸ್ಕಾಟಿಶ್ ಕರ್ನಾಟಕ ಸಂಘದ ವೆಬ್ ಸೈಟ್ ಪರಿಚಯ
* ಕನ್ನಡ ಭಾವಗೀತೆ ಮತ್ತು ನೃತ್ಯ
* ಕನ್ನಡ ಹಾಸ್ಯ ತುಣುಕುಗಳು
* ಮಕ್ಕಳ ವಿಶೇಷ ಕಾರ್ಯಕ್ರಮಗಳು ಹಾಗು ಚಿಣ್ಣರಿಗಾಗಿ ಆಟಗಳು
* ಕನ್ನಡ ರಸ ಪ್ರಶ್ನೆ ಮತ್ತು ಆಂತ್ಯಾಕ್ಷರ
* ಹಬ್ಬದ ಭೋಜನ

ಕಾರ್ಯಕ್ರಮಕ್ಕೆ 10 ಪೌಂಡು ಹಾಗು 5 ವರುಷ ಮೇಲಿನ ಮಕ್ಕಳಿಗೆ ಮತ್ತು ವಿದ್ಯಾರ್ಥಿ ಮಿತ್ರರಿಗೆ 5 ಪೌಂಡು ನಿಗದಿಪಡಿಸಲಾಗಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಸಂಘದ ಮಿತ್ರರನ್ನು ಸಂಪರ್ಕಿಸಿ.

ಡಾ.ಪ್ರಭಾಕರ ಭಟ್ಟ್ - prabhakarabhatt@hotmail.com
ಡಾ.ಜೈರಾಮ್ ಶಾಸ್ತ್ರಿ - jairamsastry@hotmail.com
ಶಶಿಧರ ರಾಮಚಂದ್ರ - shashidhara.r@gmail.com
ಪ್ರೇಮ್ ಕುಮಾರ್ - virtual_limits@yahoo.co.in
ಗಂಗಾಧರ ಆಲದಕಟ್ಟಿ - gangadhar@hotmail.co.uk
ಮಹೇಶ ಮಧ್ಯಸ್ಥ - mmadhyastha@gmail.com

ನಿಮಗೆ ಪರಿಚಯವಿರುವ ಸ್ನೇಹಿತರಿಗೆ ವಿಷಯ ಮುಟ್ಟಿಸಿ. ಆಭಿಮಾನಿಗಳೆಲ್ಲಾ ಬಂದು, ಸ್ಕಾಟ್ಲಂಡಿನ ಕರ್ನಾಟಕ ಜನರನ್ನು ಬೆಸೆಯುವ ಸಂಕಲ್ಪಕ್ಕೆ ಟೊಂಕ ಕಟ್ಟಿರುವ ಸಂಘದ ಕೈಗಳಿಗೆ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಅಮೆರಿಕಾದ ಕೊಲಂಬಸ್ ನಗರದಲ್ಲಿ ನವೆಂಬರ್ 6ರಂದು ಕೊಲಂಬಸ್ ಕನ್ನಡಿಗರ ಬಳಗ 55ನೇ ಕನ್ನಡ ರಾಜ್ಯೋತ್ಸವನ್ನು ಆಯೋಜಿಸಿತ್ತು. ಫಾಲ್ಸ್ ಸೀಸನ್ನಲ್ಲಿ ಮರಗಳು ತಮ್ಮ ಹಳದಿ ಕೆಂಪು ಬಣ್ಣದ ಎಲೆಗಳಿಂದ ಸಾರುತ್ತವೆ ಇದು ಕನ್ನಡ ರಾಜ್ಯೋತ್ಸವದ ಸಮಯವೆಂದು. ಅಂದು ಆ ರಸಸಂಜೆಯಂದು ಚಳಿಗಾಲದ ಸಮಯ, ಕನ್ನಡ ಹಬ್ಬದ ಸಡಗರ, ಬಂದಿದ್ದರು ಕನ್ನಡಿಗರು ಹಚ್ಚಲು ಕನ್ನಡ ದೀಪವನು, ಸೂಸಲು ಕನ್ನಡ ಕಂಪನ್ನು, ಅವರಲ್ಲೇನೋ ಹಬ್ಬವನ್ನು ಆಚರಿಸುವ ಉತ್ಸಾಹ, ಛಲ ಹಾಗು ಸಂತಸ.

ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಅಂದಹಾಗೆ, ಸಭಾಂಗಣದಲ್ಲಿ ಭಾರತ ಹಾಗು ಕರ್ನಾಟಕ ಬಾವುಟ ಒಂದರ ಕೆಳಗೊಂದು ರಾರಾಜಿಸುತ್ತಿದ್ದವು. ಕನ್ನಡ ನಾಡು ನುಡಿಗೆ, ಕೊಡುಗೆ ನೀಡಿದ ಕವಿಗಳ, ನಟರ, ಗಾಯಕರ ಭಾವ ಚಿತ್ರಗಳು ಹೃದಯಕ್ಕೆ ಕಂಬನಿ ಮಿಡಿದಂತಿದ್ದವು.

ಕಾರ್ಯಕ್ರಮ ಅಂದಮೇಲೆ ತಿಂಡಿ ತಿನಿಸು ಇರದೆ ಇರುತ್ಯೇ? ಸ್ಟಾರ್ಟರಾಗಿ ಗರಿ ಗರಿಯಾದ ಸಮೋಸ ಹಾಗು ಪಕೋಡ ಎಲ್ಲರ ಬಾಯಿನೀರೂರಿಸಿದ್ದವು. ಸ್ವಲ್ಪ ಎನರ್ಜಿ ಬಂದಮೇಲೆ ಕಾರ್ಯಕ್ರಮ ಶುರು ಆಯಿತು ನೋಡಿ.

ಹುಯಿಲಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಗೀತೆಯನ್ನು ಗುನುಗುತ್ತ ಉದಯವಾಯಿತು ನಮ್ಮ ಕನ್ನಡ ರಾಜ್ಯೋತ್ಸವ. ವಿಘ್ನನಿವಾರಕ ವಿಘ್ನೇಶ್ವರನ ಸುಶ್ರಾವ್ಯ ಪ್ರಾರ್ಥನೆಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಪುಟಾಣಿ ಮಕ್ಕಳಿಂದ ಫಾಶನ್ ಶೋನಲ್ಲಿ ಬಸವಣ್ಣ, ಸರ್ವಜ್ಞ, ಕೃಷ್ಣ, ಭುವನೇಶ್ವರಿ, ಸೂಪರ್ ಮ್ಯಾನ್, ಹುಲಿ ಪಾತ್ರಗಳು ಜೀವ ಪಡೆದಿದ್ದವು. ಮಕ್ಕಳ ಮುಗ್ಧತೆ, ನಾಚಿಕೆ, ವೇಷ ಭೂಷಣಗಳು, ಆಟೋಟಗಳು, ತೊದಲು ನುಡಿಗಳು ನಮಗೆ ಮುದನೀಡುತಿದ್ದವು.

"ಜಯ ಭಾರತ ಜನನಿಯ ತನುಜಾತೆ..." ಸಾಮೂಹಿಕ ನಾಡ ಗೀತೆಗೆ ನೆರೆದ ಎಲ್ಲಾ ಕನ್ನಡಿಗರು ಗೌರವ ಸೂಚ್ಯಕವಾಗಿ ಎದ್ದು ನಿಂತು ದನಿಗೂಡಿಸಿದ್ದು ಅಭಿನಂದನೀಯ. ಪುಟಾಣಿ ತನ್ವಿಯ ಹನಿ ಹನಿ ಇಬ್ಬನಿ ಹಾಡಿಗೆ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಇಬ್ಬನಿಯೇ ಕರಗಿಂತಾಯಿತು, ಚಿಲಿಪಿಲಿ ಹಕ್ಕಿ ಹಾಡಿದಂತಾಯಿತು. ಕೃಷ್ಣವೇಣಿಯಾದ ಪುಣ್ಯಗೌರಿಯ ಬೆಣ್ಣೆ ಕದ್ದ ಕಳ್ಳ ಕೃಷ್ಣನ ಲೀಲೆಗಳ ನೃತ್ಯ ನಯನ ಮನೋಹರವಾಗಿತ್ತು.

ಕನ್ನಡ ನಾಡು, ಕವಿಗಳ ಬೀಡು ಬಣ್ಣಿಸುವ ಕಾವ್ಯಲಹರಿಯಿದ್ದರೆ ರಾಜ್ಯೋತ್ಸವಕ್ಕೊಂದು ಕಳೆ. ಸ್ನೇಹಿತ ಹೇಗಿರಬೇಕೆನ್ನುವ ಶ್ರೀಹರಿಯ ಕಾವ್ಯ ಚಿಕ್ಕದಾಗಿ ಚೊಕ್ಕದಾಗಿತ್ತು. ಕಾರ್ಗಿಲ್ ಗಣೇಶ ಕಾವ್ಯದ ಕಲ್ಪನೆ, ಯುದ್ದದ ಚಿತ್ರಣ, ವಾಸ್ತವ ಪ್ರಪಂಚದ ನೈಜತೆ ಅಮೋಘವಾಗಿತ್ತು. ಕನ್ನಡತಿ ಲಕ್ಷ್ಮೀರವರ "ಈ ಕನ್ನಡ ನಾಡನು ಮರಿಬೇಡ ಓ ಅಭಿಮಾನಿ ಈ ಕನ್ನಡ ಹೆಣ್ಣನು ಜರಿಬೇಡ ಓ ಅಭಿಮಾನಿ" ನೃತ್ಯ ಕನ್ನಡಿಗರ ಮನದಲ್ಲಿ ಕೆಚ್ಚೆದೆಯನ್ನು ಹೆಚ್ಚಿಸಿತು. ಲಂಗ ತೊಟ್ಟ ಲಲನಾಮಣಿಯರು ಕಾರ್ಮೋಡ ನೋಡಿ ಜಿಗಿದ ನವಿಲಿನ ಹಾಗೆ ವೈಯಾರದಿಂದ ತಮ್ಮ ಸೊಂಟವನ್ನು ಬಳಕುಸುತ್ತಾ ಪ್ರೇಕ್ಷಕರನ್ನು ರಂಜಿಸಿದರು.

ಆದರ್ಶ್ ತಂಡದ "ಜುಮ್ ಜುಮ್ ಸ್ಪ್ರೇ" ನಾಟಕ ಪ್ರೇಕ್ಷಕರನ್ನು ನಕ್ಕುನಲಿಸಿತು. ನಾಟಕದ ಪರಿಕಲ್ಪನೆ, ಸಂಭಾಷಣೆ, ಅಭಿನಯ, ಸಿನಿಮಾ ಹಾಡುಗಳ ಜೋಡಣೆ ಅಮೋಘವಾಗಿತ್ತು. ತ್ರೀ ರೋಸಸ್ ಟೀ, ಡಾ|| ರಾಜಕುಮಾರ್ ಅಪಹರಣ, ದ್ರೌಪು ಸನ್ನಿವೇಶಗಳು ಮರೆಯಲಾಗದು. ಸಂತೋಷ್ ದಂಪತಿಗಳ "ಗಂಡ ಹೆಂಡತಿ" ಚಿತ್ರದ "ಮಾತು ಮುರಿದೆ ಮಾತಾಡದೆ..." ಹಾಡಿನ ನೃತ್ಯ ಹಾಗು ಅದರ ಸಂಯೋಜನೆ ನಯನ ಮನೋಹರವಾಗಿತ್ತು. ಮನ್ಮಥ, ರತಿ ಧರೆಗಿಳಿದು ಗಂಡ ಹೆಂಡಿರ ಹಾಗೆ ನೃತ್ಯ ಮಾಡಿದಂತಿತ್ತು.

ಪ್ರಭು ತಂಡದವರ ಟ್ರಾನ್ಸ್ ಫಾರ್ಮರು(ಪರಿವರ್ತನೆ) ನಾಟಕ ಹೇಗೆ ಒಬ್ಬ ಉತ್ತರ ಕರ್ನಾಟಕದ ಹಳ್ಳಿ ಹೈದ ಹಳ್ಳಿಯಿಂದ ಬೆಂಗಳೂರಿನಂತಹ ಮಹಾನಗರಕ್ಕೆ ಬಂದಾಗ, ಹಾಗು ಮತ್ತೆ ಅವನು ಹಳ್ಳಿಗೆ ಹೋದಾಗ ಅವನಲ್ಲಿ ಹಾಗು ಸಮಾಜದಲ್ಲಾಗುವ ಪರಿವರ್ತನೆಗಳ ಹಾಸ್ಯ ರೂಪಕ ತುಂಬಾ ಚೆನ್ನಾಗಿತ್ತು. ಉತ್ತರ ಕರ್ನಾಟಕದ ಸೊಗಡಿನ ಸಂಭಾಷಣೆ ಅಮೋಘವಾಗಿತ್ತು. ಉಮೇಶ್ ತಂಡದವರ ಶರಣರ, ಜಂಗಮರ ಪದಗಳು, ಅದಕ್ಕೆ ತಕ್ಕಂತೆ ತಾಳಗಳು, ಕೊರಸ್ ಎಲ್ಲರನ್ನೂ ಮೋಡಿ ಮಾಡಿದವು.

ಕಳೆದ ವರ್ಷ ಅಗಲಿದ ನಾಯಕ ನಟ ಸಾಹಸಸಿಂಹ ಡಾ|| ವಿಷ್ಣುವರ್ಧನ್ ಆವರ ಸವಿ ನೆನಪಿಗಾಗಿ ಸಂತೋಷ್ ರವರು ವಿಷ್ಣುರವರ ಹಾಡಿಗೆ ಅವರಂತೆ ನರ್ತಿಸಿ ರಂಜಿಸಿದರು. ಆಣ್ಣಾವ್ರ ಪದ ಹೆಳ್ದೇ ಕನ್ನಡ ರಾಜ್ಯೋತ್ಸವ ಅಪೂರ್ಣ. ಬಬ್ರುವಾಹನ ಚಿತ್ರದ ಬಬ್ರುವಾಹನ-ಅರ್ಜುನನ ಸಂವಾದ ಅರವಿಂದ್ ಅವರ ಏಕಪಾತ್ರಾಭಿನಯದ ಮೂಲಕ ಜೀವ ತಳೆದಿತ್ತು. ಉಮೇಶ್ ರವರ ಮಿಮಿಕ್ರಿ ಊಟಕ್ಕೆ ಉಪ್ಪಿನಕಾಯಿಯಂತಿತ್ತು.

ಇಷ್ಟೆಲ್ಲ ಆದಮೇಲೆ ಊಟಕ್ಕೆ ಬುಲಾವ್ ಬುಲಾವ್ ಅನ್ನುವಷ್ಟರಲ್ಲೇ ಮಾಯವಾಯಿತು ಪಲಾವ್. ಪೂರಿ, ಸಾಗು, ಅನ್ನ ಸಾರು, ಜಿಲೇಬಿ-ಬಾದುಶಾಗಳು ಬಂದವರ ಹಸಿವನ್ನು ತಣಿಸಿದ್ದವು. ಅಮೇರಿಕಾದ ಬೇರೆ ನಗರದಿಂದ ಬಂದವಕು ಕಾರ್ಯಕ್ರಮದ ಬಗ್ಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೆ ಭೇಟಿಯಾಗೋಣ.

ಗುರ್‌ಗಾಂವ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಗುರ್‌ಗಾಂವ್ ಕನ್ನಡ ಸಂಘ ಮತ್ತು ಕರ್ನಾಟಕ ಸರ್ಕಾರ ವಾರ್ತಾಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 21-11-2010 ರ ಭಾನುವಾರದಂದು, ಇಲ್ಲಿನ ಸೆಕ್ಟರ್-4 ರ ಬಾಲಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ.ಆರ್.ಛಾಯಾರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪದ್ಮಪಾಣಿ ನಿರ್ಮಾಪಕರು, ರಾಜೇಂದ್ರಕುಮಾರ್ ಕಟಾರಿಯಾ ಜಿಲ್ಲಾಧಿಕಾರಿಗಳು ಗುರ್‌ಗಾಂವ್, ವಸಂತಶೆಟ್ಟಿ ಬೆಳ್ಳಾರೆ ಉಪಾಧ್ಯಕ್ಷರು ದೆಹಲಿ ಕನ್ನಡ ಸಂಘ, ಮತ್ತು ಗಿರೀಶ್ ಉಪನಿರ್ದೇಶಕರು ವಾರ್ತಾಇಲಾಖೆ ನವದೆಹಲಿ, ಇವರು ಸಹಾ ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ್ದರು.

ಆನಂದ ಶರ್ಮಾರವರ "ಸರಿಗಮಪ ಕ್ರಿಯೇಷನ್ಸ್" ನ ಸರಿಗಮಪ ಲಿಟ್ಲ್ ಚಾಂಪಿಯನ್ಸ್ ಚಿ.ಅಶ್ವಿನ್ ಶರ್ಮಾ, ಕು. ಅರುಂಧತಿ ಮತ್ತು ಕು. ಹಂಸಿನಿ ಹಾಗೂ ಇವರ ಸಂಪೂರ್ಣ ವಾಧ್ಯವೃಂದ ಆಗಮಿಸಿದ್ದರು. ನಾಡಗೀತೆಯೋದಿಗೆ ಪ್ರಾರಂಭವಾದ ರಾಜ್ಯೋತ್ಸವ ಕಾರ್ಯಕ್ರಮ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ಕಂಡು ಶ್ರೀಮತಿ ಬಿ.ಆರ್.ಛಾಯಾ ತಮ್ಮ ಭಾಷಣದಲ್ಲಿ, ಹೊರರಾಜ್ಯದಲ್ಲಿ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನಿಂದ ಮಾತು ಹೊರ ಹೊಮ್ಮುತ್ತಿಲ್ಲ ಎಂದು ತಿಳಿಸಿದರು.

ಪದ್ಮಪಾಣಿರವರು ಹರ್ಷಚಿತ್ತರಾಗಿ "ಕಲಾವಿದರನ್ನು ಗೌರವಿಸುವ, ಆದರಿಸುವ ಜನ ನಿಜಕ್ಕೂ ಕನ್ನಡ ತಾಯಿಯ ಚಿನ್ನದ ಮಕ್ಕಳು ಎಂದು ಹೇಳಿದರು. ರಾಜೇಂದ್ರಕುಮಾರ್ ಕಟಾರಿಯಾರವರು ತಮ್ಮ ವೃತ್ತಿಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದರು. ಆಗ ನಡೆದ ಘಟನೆಗಳನ್ನು ಮೆಲುಕು ಹಾಕಿದರು.

ಅಧ್ಯಕ್ಷೀಯ ಭಾಷಣದಲ್ಲಿ ಸಾಯಿಪ್ರಸಾದ್‌ರವರು ಸರ್ವರಿಗೂ ಅಭಿನಂದನೆ ವ್ಯಕ್ತಪಡಿಸಿದರು. ಆನಂತರ ನಮ್ಮನ್ನಗಲಿದ ಶ್ರೀಮತಿ ಜಯಶ್ರೀ, ಶ್ರೀನಿವಾಸ್ ಮತ್ತು ಲಕ್ಷ್ಮಿ ದಂಪತಿಗಳಿಗೆ ಶ್ರದ್ಧಾಂಜಲಿ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕು.ನವನೀಶಾ, ಕು.ಅಬೀಙ್ಞ ಮತ್ತು ಕು.ಹಂಸಿನಿ ನೃತ್ಯ ರೂಪಕ ಪ್ರದರ್ಶಿಸಿದರು. ಶ್ರೀಮತಿ ಬಿ.ಆರ್.ಛಾಯಾರವರ ಗಾಯನದಿಂದ ಕನ್ನಡಿಗರು ಪುಳಕಿತರಾದರು, ಪುಟಾಣಿ ಮಕ್ಕಳಾದ ಚಿ.ಅಶ್ವಿನ್, ಕು.ಅರುಂಧತಿ ಮತ್ತು ಕು.ಹಂಸಿನಿ ಭಾವಗೀತೆ, ಜನಪದಗೀತೆ, ದೇಶಭಕ್ತಿಗೀತೆ ಮತ್ತು ಚಲನಚಿತ್ರಗೀತೆಗಳನ್ನು ತನ್ಮಯವಾಗಿ ಹಾಡಿದರು.

ವಸಂತಶೆಟ್ಟಿ ಬೆಳ್ಳಾರೆಯವರು ದಿವಂಗತ ಜಯಶ್ರೀ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಶ್ರೀ ಗಿರೀಶರವರು ಮಾತಾಡಿ ಭವಿಷ್ಯದಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಮಧ್ಯದಲ್ಲಿ ಪದ್ಮಪಾಣಿರವರು ಮಾತುಗಳ ಮುಖಾಂತರ ಪ್ರೇಕ್ಷಕರನ್ನು ನಗೆಯ ಹಬ್ಬದೂಟ ಉಣ ಬಡಿಸುತ್ತಿದ್ದರು. ಒಂದು ಅದ್ಭುತ ಮತ್ತು ಅಚ್ಚುಕಟ್ಟಾದ ರಾಜ್ಯೋತ್ಸವ ಆಚರಣೆ ಎಂದು ಆಗಮಿಸಿದ ಗಣ್ಯರೆಲ್ಲರು ಬಣ್ಣಿಸಿದರು. ಕರ್ನಾಟಕ ಶೈಲಿಯ ಭೋಜನದ ವ್ಯವಸ್ತೆ ಮಾಡಲಾಗಿತ್ತು. ಈ ಬಾರಿ ನಡೆದ ಕರ್ನಾಟಕ ರಾಜ್ಯೋತ್ಸವ ನಿಜಕ್ಕೂ ಅರ್ಥಗರ್ಭಿತವಾಗಿತ್ತು.