Saturday, January 30, 2010

"ಹೇಳದೇ ಉಳಿದ ಮಾತುಗಳು..."


ಐದಾರು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪುಟ್ಟಣ್ಣ ಕಣಗಾಲ್ ಸ್ಮರಣೆಗೆ ಗೀತನಮನ ಕಾರ್ಯಕ್ರಮವೊಂದು ನಡೆಯಿತು. ಅದರ ಹಿಂದಿದ್ದವರು ರಮ್ಯ ಕಲ್ಚರಲ್ ಅಕಾಡೆಮಿಯ ಬಾಲಿ. ಅವತ್ತು, ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಮಧುರ ಗೀತೆಗಳನ್ನು ನಾಡಿನ ಹೆಸರಾಂತ ಗಾಯಕ-ಗಾಯಕಿಯರು ಹಾಡಿದರು. ಪ್ರೇಕ್ಷಕರ ಸಾಲಿನಲ್ಲಿ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್, ನಟ ಶಿವರಾಂ, ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಆರ್.ಎನ್. ಜಯಗೋಪಾಲ್ ಮುಂತಾದವರಿದ್ದರು. ಶುಭಮಂಗಳ ಚಿತ್ರದ `ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು...' ಗೀತೆಯನ್ನು ಗಾಯಕ ಎಲ್.ಎನ್. ಶಾಸ್ತ್ರಿ ಹಾಡಲು ನಿಂತಾಗ, ತುಂಬ ಭಾವುಕರಾದ ನಟ ಶಿವರಾಂ, ವೇದಿಕೆಯೇರಿ, ಶಾಸ್ತ್ರಿ ಅವರೊಂದಿಗೆ ತಾವೂ ಒಂದು ಚರಣ ಹಾಡಿ ಪುಟ್ಟಣ್ಣನ ನೆನಪಾಗಿ ಕಣ್ತುಂಬಿಕೊಂಡರು.

ಹೀಗೆ, ಹಾಡುಗಳ ನೆಪದಲ್ಲಿ ಪುಟ್ಟಣ್ಣ ಕಣಗಾಲ್ ಅವರನ್ನೂ , ಪುಟ್ಟಣ್ಣನ ನೆಪದಲ್ಲಿ ಹಾಡುಗಳನ್ನೂ ಕೇಳುತ್ತಿದ್ದ ಸಂದರ್ಭದಲ್ಲೇ ಕಾರ್ಯಕ್ರಮ ಮುಕ್ತಾಯದ ವೇಳೆ ಹತ್ತಿರವಾಗತೊಡಗಿತು. ಅದೇ ವೇಳೆಗೆ, ಮೂರು ಹಾಡುಗಳ ನಂತರ ಕಾರ್ಯಕ್ರಮ ಮುಗಿಯಲಿದೆ ಎಂದು ಸಂಘಟಕರೂ ಘೋಷಿಸಿಬಿಟ್ಟರು. ಪರಿಣಾಮ, ಮುಂದಿನ ಹದಿನೈದಿಪ್ಪತ್ತು ನಿಮಿಷಗಳ ನಂತರ ಮನೆಗೆ ಹೋಗಲು ಎಲ್ಲರೂ ಮಾನಸಿಕವಾಗಿ ತಯಾರಾಗುತ್ತಿದ್ದರು. ಆಗಲೇ ಪ್ರವೇಶ ದ್ವಾರದಲ್ಲಿ ಏನೋ ಸದ್ದಾಯಿತು. ಅಲ್ಲಿದ್ದ ಜನರೆಲ್ಲ ಒಟ್ಟಾಗಿ `ಓ... ಬಂದ್ರು ಬಂದ್ರು...' ಎಂದರು. ಈಗ ಬಂದವರು ಯಾರಿರಬಹುದು ಎಂದು ನೋಡಿದರೆ ನಟ ವಿಷ್ಣುವರ್ಧನ್! ತಮ್ಮ ಐದಾರು ಮಂದಿ ಆಪ್ತರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು ವಿಷ್ಣು. ಹಾಗೆ ಬಂದವರು, ಸಮಾರಂಭದಲ್ಲಿದ್ದ ಎಲ್ಲರ ಕುಶಲ ವಿಚಾರಿಸಿದರು. ನಂತರ ವೇದಿಕೆ ಏರಿ, ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳಾಡಿದರು. ಹಿಂದೆಯೇ ತುಂಬ ಸಂಭ್ರಮದಿಂದ `ಬಾರೇ ಬಾರೇ ಚಂದದ ಚೆಲುವಿನ ತಾರೆ...' ಗೀತೆಗೆ ದನಿಯಾದರು. ಆ ಹಾಡು ಕೇಳಿದ ನಂತರ ಕಾರ್ಯಕ್ರಮಕ್ಕೆ ಬಂದಿದ್ದವರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ.

ಬೆಂಗಳೂರಿನ ಅವಲಹಳ್ಳಿ ಬಸ್ ನಿಲ್ದಾಣದ ಎದುರಿಗೆ ಮ್ಯಾಜಿಕ್ ಸ್ಪೇಸ್ ಎಂಬ ಮ್ಯಾಜಿಕ್ ಉತ್ಪನ್ನಗಳ ಮಾರಾಟದ ಮಳಿಗೆಯೊಂದಿದೆ. ಯಾರದೋ ಸಂಕಟಕ್ಕೆ ಕಣ್ಣೀರಾಗುವ, ಕಷ್ಟಕ್ಕೆ ಹೆಗಲಾಗುವ ಜತೆಗಿರುವ ಎಲ್ಲರಿಗೂ ಸದಾ ಒಳಿತನ್ನೇ ಬಯಸುವ ಗಿರಿಧರ್ ಕಾಮತ್, ಈ ಮಳಿಗೆಯ ಒಡೆಯ. ಪ್ರವೀಣ್ ಗೋಡ್ಖಿಂಡಿಯವರ ಪಾಲಿಗೆ ಡಿಯರೆಸ್ಟ್ ಅಂಡ್ ನಿಯರೆಸ್ಟ್ ಫ್ರೆಂಡ್ ಆಗಿರುವ ಇವರು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ವೆಂಗ್ ಸರ್ಕಾರ್ ಎಂದು ಕರೆಸಿಕೊಂಡವರು! ಈ ಗಿರಿಧರ್ ಕಾಮತ್ ಅವರದು ಯಾವತ್ತೂ ಒನ್‌ಲೈನ್ ಡೈಲಾಗ್. `ಮುಂದಿನ ಜನ್ಮ ಅನ್ನೋದು ಬಹುಶಃ ಇಲ್ಲವೇ ಇಲ್ಲ. ಹಾಗಾಗಿ, ಇರುವಷ್ಟು ದಿನ ಬಿಂದಾಸ್ ಆಗೇ ಬದುಕೋಣ. ನಮ್ಮಿಂದ ಇದು ಅಸಾಧ್ಯ ಎಂದು ಯಾವ ಸಂದರ್ಭದಲ್ಲೂ ಯೋಚಿಸುವುದು ಬೇಡ. ನಮ್ಮಿಂದ ಎಲ್ಲವೂ ಸಾಧ್ಯ ಎಂದುಕೊಂಡೇ ಮುನ್ನುಗ್ಗೋಣ. ಯಾವುದೇ ಕೆಲಸ ಮಾಡಿದರೂ ಡಿಫರೆಂಟ್ ಆಗಿ ಮಾಡೋಣ...'

ಈ think different ಎಂಬ ಮಾತಿನ ಹಿಂದೆ ಮುಂದೆಯೇ ಸುತ್ತುತ್ತಿದ್ದ ಸಂದರ್ಭದಲ್ಲಿಯೇ `ಹಾಡು ಹುಟ್ಟಿದ ಸಮಯ' ಪುಸ್ತಕ ಬಿಡುಗಡೆಯ ಕೆಲಸ ಶುರುವಾಯಿತು. ಪುಸ್ತಕ ಬಿಡುಗಡೆಯನ್ನು ಹಳೆಯ ಸಿದ್ಧ ಸೂತ್ರದಂತೆ ಮಾಡುವ ಬದಲು ಸ್ವಲ್ಪ ಭಿನ್ನವಾಗಿ, ಒಂದಷ್ಟು ಹೊಸತನದೊಂದಿಗೆ ಮಾಡೋಣ ಎಂದುಕೊಂಡಿದ್ದಾಯಿತು. ಮುಖ್ಯ ಅತಿಥಿಗಳಾಗಿ ಒಂದು ಕಾಲದ ಜನಪ್ರಿಯ ಜೋಡಿ ಅಂಬರೀಷ್ -ಲಕ್ಷ್ಮಿಯನ್ನು ಒಪ್ಪಿಸಲು ಯೋಚಿಸಿದ್ದೂ ಆಯಿತು. ಆದರೆ, ಈ ಕಡೆ ಅಂಬರೀಷ್, ಆ ಕಡೆ ಲಕ್ಷ್ಮಿ ಇಬ್ಬರೂ ಸಿಗಲಿಲ್ಲವಾದ ಕಾರಣದಿಂದ ಐಡಿಯಾ ಫ್ಲಾಪ್ ಆಯಿತು. `ಮುಂದ?' ಎಂದುಕೊಂಡು ಪೆಚ್ಚಾಗಿ ಕೂತಾಗಲೇ think different ಎಂಬ ಮಾತಿಗೆ ಖಡಕ್ಕಾಗಿ ಹೊಂದುವಂಥ ಹೊಸ ಯೋಜನೆಯೊಂದು ಕಣ್ಮುಂದೆ ಬಂತು.

ಏನೆಂದರೆ ಪುಸ್ತಕ ಬಿಡುಗಡೆಗೆ, ವಿಷ್ಣುವರ್ಧನ್-ಭಾರತಿ ಹಾಗೂ ರಮೇಶ್‌ರನ್ನು ಕರೆಸುವುದು. ಹೇಗಿದ್ದರೂ ಆ ಪುಸ್ತಕದಲ್ಲಿ 60 ವರ್ಷದ ಇತಿಹಾಸಕ್ಕೆ ಸಾಕ್ಷಿಯಾಗಬಲ್ಲ ಹಾಡುಗಳಿದ್ದವು. ಹಳೆಯ ಹಾಡುಗಳ ಪ್ರತಿನಿಧಿಗಳಾಗಿ ವಿಷ್ಣು-ಭಾರತಿ, ಹೊಸ ಹಾಡುಗಳನ್ನು ಪ್ರತಿನಿಧಿಸಲು ರಮೇಶ್ ಬಂದರೆ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ಬರುತ್ತೆ ಎನ್ನಿಸಿತು. ಈ ಸಂಗತಿಯನ್ನು ಗೆಳೆಯರಾದ ಉಪಾಸನಾ ಮೋಹನ್ ಹಾಗೂ ಫಲ್ಗುಣ ಅವರಲ್ಲಿ ಹೇಳಿಕೊಂಡಾಗ ಅವರು ಇನ್ನೊಂದು ರೆಕ್ಕೆಪುಕ್ಕ ಸೇರಿಸಿದರು : `ಹಾಗೇ ಮಾಡಿ. ಜತೆಗೆ, ಎಲ್ಲ ಗೀತೆರಚನೆಕಾರರನ್ನು, ಅವರ ಕುಟುಂಬದವರನ್ನು ಕರೆಸಿ. ಜತೆಗೆ ಸಿ. ಅಶ್ವತ್ಥ್ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರನ್ನೂ ಕರೆಸಿ `ತಪ್ಪು ಮಾಡದವ್ರು ಯಾರವ್ರೆ?' ಗೀತೆಯನ್ನು ಅಶ್ವತ್ಥ್ ಅವರಿಂದಲೂ `ಕಾಡು ಕುದುರೆ ಓಡಿಬಂದಿತ್ತಾ...' ಗೀತೆಯನ್ನು ಸುಬ್ಬಣ್ಣ ಅವರಿಂದಲೂ ಹಾಡಿಸಿ. ಉಳಿದ ಹಾಡುಗಳಿಗೆ ಯುವ ಗಾಯಕ-ಗಾಯಕಿಯರು ದನಿಯಾಗಲಿ. ಆಗ ಹಳೇ ಬೇರು ಹೊಸ ಚಿಗುರು ಎರಡನ್ನೂ ಒಂದೇ ವೇದಿಕೆಯಲ್ಲಿ ತಂದಂತಾಗುತ್ತದೆ. think different ಎನ್ನುವ ನಿಮ್ಮ ಮಾತು ನಿಜವಾಗುತ್ತದೆ...'

ಮುಂದೆ ಈ ಯೋಜನೆಯನ್ನೇ ಸ್ವಲ್ಪ update ಮಾಡಿದ್ದಾಯಿತು. ಅದು ಹೀಗೆ : ರಾಜ್ಯೋತ್ಸವ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸುವುದು. ನಂತರದಲ್ಲಿ ಮೂರು ಹಾಡುಗಳು. ಐದನೇ ಗೀತೆಯಾಗಿ ವಿಷ್ಣುವರ್ಧನ್ ಅವರಿಂದ ಅದೇ `ಬಾರೇ ಬಾರೇ ಚೆಂದದ ಚೆಲುವಿನ ತಾರೆ...' ಹಾಡು ಹೇಳಿಸುವುದು. ಹಾಡಿನ ಎರಡನೇ ಚರಣ ಆರಂಭವಾದ ತಕ್ಷಣ ಭಾರತಿಯವರನ್ನು ವೇದಿಕೆಗೆ ಕರೆದೊಯ್ಯುವುದು. ಹಾಡು ಮುಗಿಯುತ್ತಿದ್ದಂತೆಯೇ ನಟ ರಮೇಶ್ ಅವರಿಂದ ಮ್ಯಾಜಿಕ್ ಮಾಡಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿಸುವುದು. ಮೊದಲ ಪ್ರತಿಯನ್ನು ವಿಷ್ಣು ಅವರಿಂದ ಭಾರತಿ ಅವರಿಗೆ ಕೊಡಿಸುವುದು, ವಿಷ್ಣು-ಭಾರತಿ ದಂಪತಿಯನ್ನು ಸನ್ಮಾನಿಸುವುದು... ಪುಸ್ತಕ ಬಿಡುಗಡೆಯ ನಂತರ ಅಶ್ವತ್ಥ್ ಅವರಿಂದ `ತಪ್ಪೇ ಮಾಡದವ್ರು ಯಾರವ್ರೆ...' ಗೀತೆ ಹಾಡಿಸುವುದು. ಹತ್ತು ನಿಮಿಷದ ನಂತರ ಶಿವಮೊಗ್ಗ ಸುಬ್ಬಣ್ಣ ಅವರಿಂದಲೂ...

ಈ ಎಲ್ಲ ಸಂಗತಿಯನ್ನು ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಅವರಲ್ಲಿ ಹೇಳಿಕೊಂಡಾಗ ಅವರೆಂದರು. ಇದು ನಿಜಕ್ಕೂ think different ಅನ್ನೋ ಯೋಚನೆ-ಯೋಜನೆ. ಒಂದು ವೇದಿಕೆಯಲ್ಲಿ ಅಷ್ಟೊಂದು ಜನರನ್ನು ನೋಡುವುದೇ ಒಂದು ಖುಷಿ. ನಿಮ್ಮ ಈ ಸಾಹಸದಲ್ಲಿ ನಾನೂ ಒಂದಿಷ್ಟು ಕೆಲಸ ಮಾಡ್ತೇನೆ. ವಿಷ್ಣು ಸರ್ ಹಾಗೂ ಭಾರತಿ ಮೇಡಂ ಅವರನ್ನು ಒಪ್ಪಿಸಲು ನಿಮ್ಮೊಂದಿಗೆ ನಾನೂ ಬರ್‍ತೇನೆ. ನಿಮ್ಮ ಪರವಾಗಿ ನಾನೇ ಮಾತಾಡ್ತೇನೆ. ಅಶ್ವತ್ಥ್ ಹಾಡಿಗೆ ವಿಷ್ಣು ಸರ್ ತಾಳ ಹಾಕುತ್ತಾ ಕೂರುವುದನ್ನು; ಸುಬ್ಬಣ್ಣ ಅವರ ಗಾಯನಕ್ಕೆ ಎಲ್ಲರೂ ಮೈಮರೆಯುವ ಸಂದರ್ಭವನ್ನು; ವಿಷ್ಣು-ಭಾರತಿ ಪರಸ್ಪರ ಅಭಿನಂದಿಸುವುದನ್ನು ಕಂಡು ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು; ರಮೇಶ್ ಅವರ ಚಿನಕುರುಳಿ ಮಾತಿಗೆ ರವೀಂದ್ರ ಕಲಾಕ್ಷೇತ್ರವೇ ಮರುಳಾಗುವುದನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ. ಮುಂದಿನ ಮಂಗಳವಾರ ವಿಷ್ಣುವರ್ಧನ್ ಅವರ ಮನೆಗೆ ಹೋಗೋಣ... ನೀವು ಬಾಕಿ ಕೆಲಸ ಮಾಡಿ ಮುಗಿಸಿ...

ದುರಂತವೆಂದರೆ ಅಂಥದೊಂದು ಮಧುರ ಸಂದರ್ಭ ಬರಲೇ ಇಲ್ಲ. ಈ ಮಾತುಕತೆ ಮುಗಿದ ಎರಡೇ ದಿನಕ್ಕೆ, ವಿಷ್ಣುವರ್ಧನ್ ಅವರಿಗೆ ಆರೋಗ್ಯ ಚೆನ್ನಾಗಿಲ್ಲವಂತೆ. ಚಿಕಿತ್ಸೆಗೊಂದು ಅವರು ಮೈಸೂರಿಗೆ ಹೋಗಿದ್ದಾರಂತೆ. ಇನ್ನೂ ಒಂದು ತಿಂಗಳು ಚಿಕಿತ್ಸೆಯಂತೆ ಎಂಬ ಸುದ್ದಿ ಬಂತು. ಈ ಅನಿರೀಕ್ಷಿತ ಸುದ್ದಿಯನ್ನು ನಂಬಲಾಗಿದೆ ನಂಬಿದ್ದಾಗಲೇ, ಲಹರಿ ವೇಲು ಹೀಗೊಂದು ಎಸ್ಸೆಮ್ಮೆಸ್ ಕಳಿಸಿದ್ದರು. `ಸಾಹೇಬ್ರೆ, ಸಿ. ಅಶ್ವತ್ಥ್ ಅವರಿಗೆ ಹುಷಾರಿಲ್ವಂತೆ. ಕಿಡ್ನಿ ಫೇಲ್. ಯಶವಂತಪುರದ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಒಮ್ಮೆ ಹೋಗಿ ಬರೋಣವಾ...?'

ನಂತರದ ದಿನಗಳಲ್ಲಿ ಎಲ್ಲವೂ `ಅವಸರದಲ್ಲಿ' ಎಂಬಂತೆ ನಡೆದುಹೋಯಿತು. ಮೊದಲಿಗೆ, ಚಿಕ್ಕದೊಂದು ಕಾರಣವನ್ನೂ ಹೇಳದೆ ಅಶ್ವತ್ಥ್ ಹೋಗಿಬಿಟ್ಟರು. ಈ ಸಂಕಟದಿಂದ ಚೇತರಿಸಿಕೊಳ್ಳುವ ಮೊದಲೇ ವಿಷ್ಣು ಅವರೂ... ಈಗ ಅವರಿಲ್ಲ ನಿಜ. ಆದರೆ, ಅವರ ಬಗ್ಗೆ ನಾವು ಕಂಡ ಕನಸುಗಳಿವೆ. ಆಡಿಕೊಂಡ ಮಾತುಗಳಿವೆ. ಬಣ್ಣದ ಲೋಕದ ಮಹನೀಯರಿಬ್ಬರು ಹಾಡದೇ ಹೋಗಿಬಿಟ್ಟ ಹಾಡುಗಳು ಹಾಗೇ ಉಳಿದುಹೋಗಿವೆ. ಇದನ್ನೆಲ್ಲ ಮತ್ತೆ ಮತ್ತೆ ನೆನಪು ಮಾಡಿಕೊಂಡಾಗ `ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ/ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ' ಎಂಬ ಇನ್ನೊಂದು ಚಿತ್ರಗೀತೆ ನೆನಪಾಗುತ್ತಿದೆ...

"ಹೃದಯವಂತ ಹೃದಯತಜ್ಞ ಪದ್ಮಭೂಷಣ ಬಿಎಂ ಹೆಗ್ಡೆ"

"ಪದ್ಮಭೂಷಣ ಪ್ರೊ. ಬಿ.ಎಂ. ಹೆಗ್ಡೆ ; ನಾನು ಕಂಡಂತೆ" ಲೇಖನದಲ್ಲಿ ಶ್ರೀಮಾನ್ ಎಚ್. ಆನಂದರಾಮ ಶಾಸ್ತ್ರೀಯವರು ಹೇಳಿದ್ದು ಅಕ್ಷರಶಃ ಸತ್ಯ. ನನ್ನ ಗುರುಗಳಾದ ಪ್ರೊ. ಬಿ.ಎಂ. ಹೆಗ್ಡೆಯವರು ಅತ್ಯಂತ ಸಾಮಾಜಿಕ ಕಳಕಳಿಯುಳ್ಳ, ವಿನಯಶೀಲ, ಸರಳ ಜೀವಿ, ಉತ್ತಮ ವಾಗ್ಮಿ, ಅನೇಕ ಭಾಷೆಗಳ ಪಾಂಡಿತ್ಯವಿರುವ, ಹೃದಯವಂತ ಹೃದಯ ತಜ್ಞರು. ಅವರಿಗೆ ಪದ್ಮಭೂಷಣ ಬಂದಿರುವುದು ನಮಗೆಲ್ಲರಿಗೂ ಅತೀವ ಸಂತಸ ತಂದಿದೆ.

ಪ್ರೊ. ಬಿ.ಎಂ. ಹೆಗ್ಡೆಯವರು ಇತರ ವೈದ್ಯರಿಗಿಂತ ಭಿನ್ನರು. ಜನರ ಆರೋಗ್ಯದ ಬಗ್ಗೆ ನಿಜವಾದ ಕಾಳಜಿಯುಳವರು. ಹೆಗಡೆಯವರ ಲೇಖನವನ್ನು ಓದಿ ಪ್ರೇರಣೆಗೊಂಡು, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿರುವ ಹೆಗಡೆಯವರ ಮನೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದರು. ಅವರನ್ನು ಗುಜರಾತಿಗೆ ಕರೆಸಿ, ಅವರೊಡನೆ ಚರ್ಚಿಸಿ, ಹೆಗಡೆಯವರನ್ನು ತಮ್ಮ ಆರೋಗ್ಯ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿದ್ದರು. ಅದೇ ರೀತಿ ಅವರು ಬಿಹಾರದ ಆರೋಗ್ಯ ಇಲಾಖೆಗೂ ಸಲಹಾಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರೊ. ಬಿ.ಎಂ. ಹೆಗಡೆಯವರು ಬಿಡುವಿಲ್ಲದೆ ದುಡಿಯುವ ಕ್ರಿಯಾಶೀಲರು. ಮಕ್ಕಳಿಂದ ಹಿಡಿದು ದೊಡ್ದವವರೆಗೆ ಯಾರೇ ಅವರಿಗೆ ಪತ್ರ ಬರೆದರೂ ಕೂಡಲೇ ಪ್ರತಿಸ್ಪಂದಿಸುತ್ತಾರೆ. ನಾನು ಆರನೇ ತರಗತಿಯಲ್ಲಿ ಇದ್ದಾಗ ಅವರಿಗೆ ಒಂದು ಪತ್ರ ಬರೆದಿದ್ದೆ. ಅದಕ್ಕೆ ಕೂಡಲೇ ಉತ್ತರ ಬರೆದಿದ್ದರು. ಇವಾಗಲೂ ಕೂಡ ಯಾವುದೇ ಪತ್ರಕ್ಕೂ ತಕ್ಷಣವೇ ಉತ್ತರ ಕೊಡುತ್ತಾರೆ. ತಮ್ಮ ಅಸಮಾನ್ಯ ಕಾರ್ಯ ಚಟುವಟಿಕೆಗಳ ನಡುವೆ ಎಲ್ಲವನ್ನೂ ಸುಗಮವಾಗಿ ನಿಭಾಯಿಸುವ ರೀತಿಯನ್ನು ನೋಡಿ ನಾವು ಬೆರಗುಗೊಂಡಿದ್ದೇವೆ.

ಭಾರತದಲ್ಲಿ ಹಾಗು ಹೊರದೇಶಗಳಲ್ಲಿ (ಅಮೇರಿಕ, ಇಂಗ್ಲೆಂಡ್) ಅನೇಕ ವಿಶ್ವ ವಿದ್ಯಾನಿಲಯಗಳಿಗೆ ಗೌರವ ಪ್ರಾಧ್ಯಾಪಕರಾಗಿ ಹಾಗು ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ (ಅಮೆರಿಕಕ್ಕೆ) ಬಂದಾಗಲೂ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳನ್ನು ಹೊಂದಿರುತ್ತಾರೆ. ಅನೇಕ ಸಭೆ, ಸಮಾರಂಭಗಳಿಗೆ ಅವರನ್ನು ಅಧ್ಯಕ್ಷರನ್ನಾಗಿ ಆಮಂತ್ರಿಸುತ್ತಾರೆ. ಹಾಗಾಗಿ ಇಲ್ಲಿಯೂ ಕೂಡ ಅನೇಕ ಸಲ ಅವರ ಉಪನ್ಯಾಸವನ್ನು ಕೇಳುವ ಭಾಗ್ಯ ನಮ್ಮದಾಗಿದೆ. ಅವರ ಮಗಳಲ್ಲಿಗೆ ಬಂದಾಗ ಮೂವತೈದು ಮೈಲು ದೂರದಲಿರುವ ನಮ್ಮ ಮನೆಗೂ ಅರ್ಧ ಗಂಟೆಗಾದರೂ ಬಂದು ಹೋಗುತ್ತಾರೆ. ಯಾರೇ ಅವರನ್ನು ಮನೆಗೆ ಆಹ್ವಾನಿಸಿದರೂ, ತಮ್ಮ ಬಿಡುವಿಲ್ಲದ ಕಾರ್ಯಗಳ ಮದ್ಯದಲ್ಲೂ ಸ್ವಲ್ಪ ಹೊತ್ತಿಗಾದರೂ ಭೇಟಿಕೊಡುವ ಹೃದಯವಂತರು.

ಹೆಗ್ದೆಯವರಂತೆ ಅವರ ಮಗಳು-ಅಳಿಯನೂ ಕೂಡ (ಡಾ. ಮೈನ, ರವಿ ಶೆಟ್ಟಿ) ವಿನಯಶೀಲರು. ''ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಗಾದೆ ಮಾತು ಅವರ ಕುಟುಂಬಕ್ಕೆ ಹೇಳಿ ಮಾಡಿಸಿದಂತೆ ಇದೆ. ಹೆಗ್ಡೆ ಮತ್ತು ಅವರ ಕುಟುಂಬ ನಮ್ಮ ಮನೆಗೆ ಬಂದಾಗ ತೆಗೆದ ಒಂದು ಛಾಯ ಚಿತ್ರವನ್ನು ನಿಮ್ಮೊಂದಿಗೆ ಸಂತೋಷದಿಂದ ಹಂಚಿಕೊಳ್ಳುತಿದ್ದೇನೆ. ನನ್ನ ಗುರುಗಳಿಗೆ ಪದ್ಮಭೂಷಣ ಬಂದಿರುವುದು ನಾನು ಅಭಿಮಾನದಿಂದ ಬೀಗುತ್ತಿದ್ದೇನೆ.


"ಕಾವ್ಯ ಸಮಾಜಮುಖಿಯಾಗಲಿ: ದೊಡ್ಡರಂಗೇಗೌಡ"


ಹಂಪಿ, ಜ.29:'ಅಂತರಂಗದ ಭಾವಲಹರಿ ಕವಿತೆ- ಬದುಕಿನ ಅನುಭವಗಳಿಂದ ಮಡುಗಟ್ಟಿ ಹೊರಹೊಮ್ಮಬೇಕು, ಕಾವ್ಯ ಮಾಜಮುಖಿಯಾಗಿರಬೇಕು ಎನ್ನುವ ಆಶಯವನ್ನು ಸಾಹಿತಿ ಡಾ. ದೊಡ್ಡರಂಗೇಗೌಡರು ವ್ಯಕ್ತಪಡಿಸಿದರು.

ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಪ್ರಯುಕ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಂಪಿಯ ಕಲ್ಲು ಕಲ್ಲುಗಳೂ ವೀಣೆಯ ನಾದವನ್ನು ಹೊರಹೊಮ್ಮಿಸುತ್ತವೆ. ದಕ್ಷ ಆಡಳಿತದೊಂದಿಗೆ ನವರಸ ಕಾವ್ಯಗಳ ವಿಹಾರದಲ್ಲಿ ಜನಮನವನ್ನು ತಣಿಸಿದ ರಾಯರ ರಾಯ ಶ್ರೀಕೃಷ್ಣದೇವರಾಯ. ಅಂತಹ ನೆಲದಲ್ಲಿ ಇಂದು ಕವಿತಾ ವಾಚನ-ಗಾಯನ ಬಹಳಷ್ಟು ಅರ್ಥಪೂರ್ಣವೆಂದು ಕವಿ ದೊಡ್ಡರಂಗೇಗೌಡರು ನುಡಿದರು.

ಬೌದ್ಧಿಕವಾಗಿದ್ದು ಭಾವವಿಲ್ಲದಿದ್ದರೆ ಕವಿತೆ ನೀರಸವಾಗುತ್ತದೆ. ಅಂತ ಕವಿತೆ ಜನಮನದಲ್ಲಿ ಬೇರೂರುವುದಿಲ್ಲ. ಜೀವನ ಭಾವನೆಗಳ ಸಂಗಮವೇ ಕವಿತೆಯಾಗಬೇಕು. ಅನುಭವದ ಪುನರ್ಮನನವೇ ಕವಿತೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ನುಡಿದಂತೆ ನಡೆಯುವ ಗುಣವನ್ನು ಕವಿ ರೂಪಿಸಿಕೊಳ್ಳಬೇಕು. ಬದುಕು- ಬರಹ ಕವಿಗೆ ಅಭೇದ್ಯವಾಗಬೇಕು. ಸಮಾಜಮುಖಿ ಕಾವ್ಯರಚನೆಗೆ ಈ ವೇದಿಕೆ ಸತ್ಪ್ರೇರಣೆಯಾಗಲಿ ಎನ್ನುವ ಆಶಯವನ್ನು ಕವಿಗಳು ವ್ಯಕ್ತಪಡಿಸಿದರು.

'ಅದ್ವಿತೀಯ ಶ್ರೀಕೃಷ್ಣದೇವರಾಯ ಎನ್ನುವ ಕವನವನ್ನು ದೊಡ್ಡರಂಗೇಗೌಡರು ವಾಚಿಸಿದರು. ಕವಿಗಳು ವಾಚಿಸಿದ ಕವನವನ್ನು ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯಲ್ಲಿ ವೇದಿಕೆಯಲ್ಲೇ ಹಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರು ಮಾತನಾಡಿ `ವೇದಿಕೆ ಬೃಹಸ್ಪತಿ- ಸಭೆ ಸಾಕ್ಷಾತ್ ಸರಸ್ವತಿ ಕವಿತಾ ವಾಚನ ಕೇಳಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೇಳುಗರು ಸೇರಿರುವುದು ತಮಗೆ ಸಂತಸ ತಂದಿದೆ ಎಂದರು.

ನಾನು ಹಾಡುವುದು ನನಗೆಂದು ,
ಎದೆಭಾರ ಇಳಿಯಲೆಂದು,
ಎಲ್ಲ ಮರೆತು ಕೇಳುತಿಹ ನಿಮಗೆಂದು
ಎನ್ನುವ ಕವನ ವಾಚಿಸಿದರು.

ಬಸವರಾಜ ವಕ್ಕುಂದ, ರವಿಕೊಟಾರಗಸ್ತಿ, ಡಾ.ಎಲ್ ಎನ್ ಮುಕುಂದರಾಜ್, ಡಾ. ವಿಕ್ರಮ್ ವಿಸಾಜಿ, ಎನ್ ಕೆ ಹನುಮಂತಯ್ಯ, ಡಾ. ಸತ್ಯಾನಂದ ಪಾತ್ರೋಟ, ಡಾ. ಲತಾಗುತ್ತಿ, ಸಂಗಮೇಶ್, ದೊಡ್ಡಾಲೂರು ಲಿಂಗಪ್ಪ, ಸಿದ್ದರಾಮ ಕಲ್ಮಠ, ಸಿದ್ದು ದೇವರಮನಿ, ಪರಮೇಶ್ವರಯ್ಯ ಸೊಪ್ಪಿಮಠ, ಶಿವಲಿಂಗಪ್ಪ ಬಳ್ಳಾರಿ, ವಿಘ್ನೇಶ್ವರ ಹಾಗೂ ಗೀತಾಭಟ್ ತಮ್ಮ ಕವನಗಳನ್ನು ವಾಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನುಬಳಿಗಾರ್, ಜಂಟಿನಿರ್ದೇಶಕರಾದ ಶಂಕರಪ್ಪ ಉಪಸ್ಥಿತರಿದ್ದರು.

"ವಿಜಯನಗರ ಪುನರ್ ನಿರ್ಮಾಣಕ್ಕೆ ಅಡ್ವಾಣಿ ಶಿಲಾನ್ಯಾಸ"


ಹಂಪೆ (ಕಮಲಾಪುರ), ಜ. 29- "ವರ್ತಮಾನವನ್ನು ಸಮೃದ್ಧಗೊಳಿಸಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಭವಿಷ್ಯತ್ ಕಾಲದ ಘಟನೆಗಳು ಪ್ರೇರಣೆ ನೀಡುತ್ತವೆ ಎಂದು ಮಾಜಿ ಉಪ ಪ್ರಧಾನಿ ಸಂಸದ ಎಲ್. ಕೆ. ಆಡ್ವಾಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯನಗರ ಪುನಶ್ಚೆನ ಪ್ರತಿಷ್ಠಾನದ ಆಶ್ರಯದಲ್ಲಿ `ಪ್ರಕಲ್ಪಗಳ ಭೂಮಿಪೂಜೆ ಹಾಗೂ ಕಟ್ಟಡಗಳ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಿ ಮಾತನಾಡಿದ ಅವರು, ಶ್ರೀಕೃಷ್ಣದೇವರಾಯನ ಆಡಳಿತ ಅನುಕರಣೀಯ ಎಂದ ಹೇಳಿದರು.

`ಕರ್ನಾಟಕಕ್ಕೂ ಮತ್ತು ನನಗೂ ಅವಿನಾಭಾವ ಸಂಬಂಧ ಇದೆ. ಹಂಪೆಗೆ ಎರಡನೇಬಾರಿ ಭೇಟಿ ನೀಡುತ್ತಿದ್ದೆನೆ. ಕಳೆದ ಬಾರಿ ನಾನು ಹಂಪೆಗೆ ಭೇಟಿ ನೀಡಿದಾಗ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆಯ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದರು ನಾನು ವಚನ ಪಾಲಿಸಿ, ಆಗಮಿಸಿದ್ದೆ ಎಂದು ಹೇಳಿದರು.ವಿಜಯನಗರ ಸಾಮ್ರಾಜ್ಯದ ಮಾಹಿತಿಯನ್ನು ಬಿಂಬಿಸುವ `ಥೀಮ್ ಪಾರ್ಕ್ ' ನಿರ್ಮಾಣ ಆಗುತ್ತಿರುವುದು ಹಾಗೂ ಈ ಸಾಮ್ರಾಜ್ಯದ ವೈಭವ ನೆನಪಿಸುವ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು.

ತಾವು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವರಾಗಿದ್ದಾಗ ಶ್ರೀಕೃಷ್ಣದೇವರಾಯರ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವನ್ನು ರೂಪಿಸಿದ್ದನ್ನು ಸ್ಮರಿಸಿದ ಅವರು, ಈ ಪ್ರದರ್ಶನ ಹೈದರಾಬಾದ್ನಲ್ಲಿ ಪ್ರಯೊ ಆಗಿದ್ದನ್ನು ಪ್ರಸ್ತಾಪಿಸಿ ವಿಜಯನಗರದ ರಾಜಧಾನಿ ಕರ್ನಾಟಕದ ಹಂಪೆಯಲ್ಲೂ ಕೂಡ ಪ್ರದರ್ಶನಗೊಳ್ಳಬೇಕು ಎಂದು ಸಲಹೆ ನೀಡಿದ್ದಾಗಿ ಹೇಳಿದರು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಭವ್ಯತೆಯ ಪುನರ್ದರ್ಶನಕ್ಕಾಗಿ ಈ ಸಾಮ್ರಾಜ್ಯದ ಚಟುವಟಿಕೆಗಳನ್ನು ಜನರಿಗೆ ತಿಳಿಸಲು ಕರ್ನಾಟಕ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ವಿಜಯನಗರ ಪುನಶ್ಚೆನ ಪ್ರತಿಷ್ಠಾನ (ಟ್ರಟ್ಸ್ ಸ್ಥಾಪಿಸಿದ್ದು ವೈಯಕ್ತಿಕವಾಗಿ ಸಾರ್ಥಕತೆ - ತೃಪ್ತಿ ಮೂಡಿಸಿದೆ ಎಂದರು. ಈ ಪ್ರತಿಷ್ಠಾನದ ಚಟುವಟಿಕೆಗಳಿಗೆ ಕೂಡಲೇ ಐದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಪ್ರತಿಷ್ಠಾನ ತನ್ನ ಕ್ರಿಯಾ ಯೊನೆಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಮುಂದಿನ ಆಯವ್ಯಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಕಾರ್ಯದರ್ಶಿ ವಿ. ನಾಗರಾಜ್ ಅವರು ಮಾತನಾಡಿ, ಅಕ್ಷರ ಧಾಮದ ಮಾದರಿಯಲ್ಲಿ ವಿಜಯನಗರ ವೈಭವದ ಪ್ರತಿಕೃತಿಗಳಲ್ಲದೆ ಸಂಶೋಧನೆ ಉದ್ಯಾನವನ ಮಲ್ಟಿ ಮೀಡಿಯಾ ಪ್ರದರ್ಶನ ಪುಸ್ತಕ ಹಾಗೂ ವಸ್ತು ಸಂಗ್ರಹಾಲಯವನ್ನು ಇಲ್ಲಿ ನಿರ್ಮಿಸಲಾಗುವುದು ಇದಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ನೆರವು ಪಡೆಯಲಾಗಿದೆ ಎಂದರು

ಶ್ರಿ ರವಿಶಂಕರ್ ಗುರೂಜಿ ಅವರು ಸಾನಿಧ್ಯವಹಿಸಿದ್ದರು ಸಂಸದ ಅನಂತ ಕುಮಾರ್, ಸಚಿವರಾದ ಜಿ. ಕರುಣಾಕರ ರೆಡ್ಡಿ ಜಿ. ಜನಾರ್ದನ ರಡ್ಡಿ ಬಿ. ಶ್ರೀರಾಮುಲು ವಿಶ್ವೇಶ್ವರಹೆಗಡೆ ಕಾಗೇರಿ, ಸಂಸದೆ ಜೆ. ಶಾಂತ ಶಾಸಕರಾದ ಆನಂದ್ ಸಿಂಗ್ ಸುರೇಶ್ ಬಾಬು, ಮೃತ್ಯುಂಜಯ ಜಿನಗಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎನ್. ರುದ್ರಗೌಡ ಈ ಸಮಾರಂಭದಲ್ಲಿ ಇದ್ದರು. ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಸ್ವಾಗತಿಸಿದರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ವಂದಿಸಿದರು