೧.
ಅಘಟಿತ-ಘಟಿತನ ಒಲವಿನ ಶಿಶು
ಕಟ್ಟಿದೆನು ಜಗಕ್ಕೆ ಬಿರುದನು
ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ
ಇಕ್ಕಿದೆನು ಕಾಲಲ್ಲಿ ತೊಡರನು
ಗುರುಕೃಪೆಯೆಂಬ ತಿಗುರನಿಕ್ಕಿ
ಮಹಾಶರಣೆಂಬ ತಿಲಕವನಿಕ್ಕಿ
ಶಿವಶರಣೆಂಬ ಅಲಗ ಕೊಂಡು
ನಿನ್ನ ಕೊಲುವೆ ಗೆಲುವೆ!
ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!!
ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ-
ಕೆಡದ ಶಿವಶರಣೆಂಬ ಅಲಗನೆ ಕೊಂಡು
ನಿನ್ನ ಕೊಲುವೆ ಗೆಲುವೆ ನಾನು!
ಬ್ರಹ್ಮಪಾಶವೆಂಬ ಕಳನನೆ ಸವರಿ
ವಿಷ್ಣುಮಾಯೆಯೆಂಬ ಎಡಗೋಲ ನೂಕಿ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.
೨.
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜಿದಂತೆ
ಭಾವದ ಮರೆಯ ಬ್ರಹ್ಮನಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!
೩.
ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!
೪.
ತನ್ನ ವಿನೋದಕ್ಕೆ ತಾನೇ ಸೃಜಿಸಿದ ಜಗತ್ತ!
ತನ್ನ ವಿನೋದಕ್ಕೆ ತಾನೇ ಸುತ್ತಿದನದಕ್ಕೆ ಸಕಲ ಪ್ರಪಂಚ!!
ತನ್ನ ವಿನೋದಕ್ಕೆ ತಾನೇ ತಿರಿಗಿಸಿದನನಂತ ಭವದುಃಖಂಗಳಲ್ಲಿ
ಇಂತೆನ್ನ ಚೆನ್ನಮಲ್ಲಿಕಾರ್ಜುನದೇವನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದ ಮತ್ತೆ
ತಾನೇ ಪರಿವನಾ ಮಾಯಾಪಾಶವನು!
೫.
ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ?
ಶಿವಂಗೆ ತಪ್ಪಿದ ಕಾಮನುರಿದುದನರಿಯಾ?
ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ?
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದೆಡೆ
ಭವಘೋರನರಕವೆಂದರಿಯಾ ಮರುಳೇ.
೬.
ಕಾಮ ಬಲ್ಲಿದನೆಂದರೆ
ಉರುಹಿ ಭಸ್ಮವ ಮಾಡಿದ!
ಕಾಲ ಬಲ್ಲಿದನೆಂದರೆ ಕೆಡಹಿ ತುಳಿದ!
ಬ್ರಹ್ಮ ಬಲ್ಲಿದನೆಂದರೆ
ಶಿರವ ಚಿವುಟಿಯಾಡಿದ!
ಎಲೆ ಅವ್ವ, ನೀನು ಕೇಳಾ ತಾಯೆ,
ವಿಷ್ಣು ಬಲ್ಲಿದನೆಂದರೆ
ಮುರಿದು ಕಂಕಾಳವ ಪಿಡಿದ!
ತ್ರಿಪುರದ ಕೋಟೆ ಬಲ್ಲಿತ್ತೆಂದರೆ
ನೊಸಲ ಕಣ್ಣಿಂದುರುಹಿದನವ್ವ!
ಇದು ಕಾರಣ
ಚೆನ್ನಮಲ್ಲಿಕಾರ್ಜುನ ಗಂಡನೆನಗೆ!
ಜನನಮರಣಕ್ಕೊಳಗಾಗದವನ
ಬಲುಹನೇನ ಬಣ್ಣಿಪೆನವ್ವ!?
೭.
ಅಯ್ಯ, ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ
ಅಯ್ಯ, ದಶದಿಕ್ಕುಇತ್ತಿತ್ತ, ದಶಭುಜಗಳತ್ತತ್ತ
ಚೆನ್ನಮಲ್ಲಿಕಾರ್ಜುನಯ್ಯ,
ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ!
೮.
ದೇವ, ಎನ್ನ ಹೃದಯಕಮಲದೊಳಗೆ ಪ್ರಜ್ವಳಿಪ್ಪ ಬೆಳಗೆ
ದೇವ, ಎನ್ನ ಮನದ ಮೊನೆಯೊಳೊಪ್ಪುತಿರ್ಪ ಬೆಳಗಿನೊಳಗೆ
ಗುರುವೆ ಬಾರ, ಪರವೆ ಬಾರ, ವರವೆ ಬಾರ, ದೇವದೇವ
ಹರನೆ ಬಾರ, ಸುಕೃತಸಾರ ಸರ್ಪಹಾರ ಬಾರ ದೇವ
ವೀರಭದ್ರ, ರುದ್ರ, ದುರಿತದೂರ, ವಿಶ್ವರೂಪ ಬಾರ
ಮಾರಮಥನ, ಪುಣ್ಯಕಥನ, ಸಹಜಮಿಥುನರೂಪ ಬಾರ
ತರಗಿರಿಯ ಪಿರಿಯ ಸಿರಿಯ ಸತ್ಯಶರಣ ಭರಣ ಬಾರ
ಬಾರ ಫಲವೆ, ಫಲದ ರಸವೆ, ರಸದ ಸವಿಯ ಸುಖವೆ ಬಾರ
ಬಾರ ಗುರುವೆ, ಬಾರ ಪರವೆ, ಬಾರ ವರವೆ ಮಲ್ಲಿನಾಥ
ಬಾರ ಧನವೆ, ಬಾರ ಸುಕೃತಸಾರ ಬಾರ ಮಲ್ಲಿನಾಥ
ಬರ ಸಿದ್ಧ, ಭವವಿರುದ್ಧ ಸುಪ್ರಸಿದ್ಧ ಮಲ್ಲಿನಾಥ
ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ ಬಾರ
೯.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.
೧೦.
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯ?
ನೀನು ಬಹಿರಂಗವ್ಯವಹಾರದೂರಸ್ಥನು!
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯ?
ನೀನು ವಾಙ್ಮನಕ್ಕತೀತನು
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯ?
ನೀನು ನಾದಾತೀತನು
ಭಾವಜ್ಞಾನದಿಂದೊಲಿಸುವೆನೆ ಅಯ್ಯ?
ನೀನು ಮತಿಗತೀತನು
ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೇ ಅಯ್ಯ?
ನೀನು ಸರ್ವಾಂಗಪರಿಪೂರ್ಣನು
ಅಯ್ಯ ನಿನ್ನ ಒಲಿಸಲೆನ್ನಳವಲ್ಲ
ನೀ ಒಲಿವುದೆ ಸುಖವಯ್ಯ ಚೆನ್ನಮಲ್ಲಿಕಾರ್ಜುನಯ್ಯ!
೧೧.
ನೀರಕ್ಷೀರದಂತೆ ನೀನಿಪ್ಪೆಯಾಗಿ
ಆವುದು ಮುಂದು, ಆವುದು ಹಿಂದು ಎಂದರಿಯೆನು
ಆವುದು ಕರ್ತೃ, ಆವುದು ಭೃತ್ಯನೆಂದರಿಯೆನು
ಆವುದು ಘನ, ಆವುದು ಕಿರಿದೆಂದರಿಯೆನು
ಚೆನ್ನಮಲ್ಲಿಕಾರ್ಜುನಯ್ಯ, ನಿನ್ನನೊಲಿದು ಕೊಂಡಾಡಿದರೆ
ಇರುಹೆ ರುದ್ರನಾಗದೆ ಹೇಳಯ್ಯ
೧೨.
ಎನ್ನ ಕಾಯ ಮಣ್ಣು, ಜೀವ ಬಯಲು
ಆವುದ ಹಿಡಿವೆನಯ್ಯ ದೇವ?
ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯ?
ಎನ್ನ ಮಾಯವನು ಮಾಣಿಸಯ್ಯ ಚೆನ್ನಮಲ್ಲಿಕಾರ್ಜುನಯ್ಯ
೧೩.
ಆವಾಗಳೂ ನನ್ನ ಮನ ಉದರಕ್ಕೆ ಹರಿವುದು
ಕಾಣಲಾರೆನಯ್ಯ ನಿಮ್ಮುವನು
ಭೇದಿಸಲಾರೆನಯ್ಯ ನಿಮ್ಮ ಮಾಯೆಯನು
ಮಾಯದ ಸಂಸಾರದಲ್ಲಿ ಸಿಲುಕಿದೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಹೊದ್ದುವಂತೆ ಮಾಡಾ ನಿಮ್ಮ ಧರ್ಮ
೧೪.
ಕಲ್ಲ ಹೊಕ್ಕರೆ ಕಲ್ಲ ಬಿರಿಸಿದೆ
ಗಿರಿಯ ಹೊಕ್ಕರೆ ಗಿರಿಯ ಬಿರಿಸಿದೆ
ಭಾಪು ಸಂಸಾರವೇ, ಬೆನ್ನಿಂದ ಬೆನ್ನ ಹತ್ತಿ ಬಂದೆ
ಚೆನ್ನಮಲ್ಲಿಕಾರ್ಜುನಯ್ಯ, ಇನ್ನೇವೆನಿನ್ನೇವೆ!?
೧೫.
ಸಂಸಾರವೆಂಬ ಹಗೆಯಯ್ಯ, ತಂದೆ,
ಎನ್ನ ವಂಶವಂಶ ತಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯ
ಎನ್ನುವನರಸಿಯರಸಿ ಹಿಡಿದು ಕೊಲ್ಲುತ್ತಿದೆಯಯ್ಯ
ನಿಮ್ಮ ಮರೆವೊಕ್ಕೆ ಕಾಯಯ್ಯ
ಎನ್ನ ಬಿನ್ನಪವನವಧಾರು, ಚೆನ್ನಮಲ್ಲಿಕಾರ್ಜುನಯ್ಯ
೧೬.
ಬೆಂದ ಸಂಸಾರ ಬೆಂಬಿಡದೆ ಕಾಡುತ್ತಿರುವುದಯ್ಯ
ಏವೆನಯ್ಯ ಏವೆನಯ್ಯ?
ಅಂದಂದಿನ ದಂದುಗಕ್ಕೆ ಏವೆನಯ್ಯ ಏವೆನಯ್ಯ?
ಬೆಂದೊಡಲ ಹೊರೆವುದಕ್ಕೆ ನಾನಾರೆ
ಚೆನ್ನಮಲ್ಲಿಕಾರ್ಜುನ, ಕೊಲ್ಲು ಕಾಯಿ ನಿಮ್ಮ ಧರ್ಮ!
೧೭.
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ
೧೮.
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ-
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ ಭವಗಳನುಂಡೆನುಂಡೆ ಸುಖಾಸುಖಂಗಳ
ಹಿಂದಣ ಜನ್ಮಂಗಳು ತಾನೇನಾದರಾಗಲಿ
ಇಂದು ನೀ ಕರುಣಿಸು ಚೆನ್ನಮಲ್ಲಿಕಾರ್ಜುನ
೧೯.
ಪುಣ್ಯಪಾಪಂಗಳನರಿಯದ ಮೊದಲು
ಭವ ಭವಂಗಳಲಿ ಬಂದೆನಯ್ಯ
ನಂಬಿ ಬಂದು ಶರಣುಹೊಕ್ಕೆನಯ್ಯ
ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯ
ನಿಮ್ಮ ಧರ್ಮ, ನಿಮ್ಮ ಧರ್ಮ!!
ನಿಮ್ಮನೊಂದನೇ ಬೇಡುವೆನು
ಎನ್ನ ಬಂಧನವ ಬಿಡುವಂತೆ ಮಾಡಯ್ಯ ಶ್ರೀ ಚೆನ್ನಮಲ್ಲಿಕಾರ್ಜುನ
೨೦.
ಕೋಲ ತುದಿಯ ಕೋಡಗದಂತೆ
ನೇಣ ತುದಿಯ ಬೊಂಬೆಯಂತೆ
ಆಡಿದೆನಯ್ಯ ನೀನಾಡಿಸಿದಂತೆ
ನಾ ನುಡಿದೆನಯ್ಯ ನೀ ನುಡಿಸಿದಂತೆ
ನಾನಿದ್ದೇನಯ್ಯ ನೀನಿರಿಸಿದಂತೆ
ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ
೨೧.
ಅಲ್ಲೆಂದೊಡೆ ಉಂಟೆಂಬುದೀ ಮಾಯೇ,
ಒಲ್ಲೆನೆಂದೆಡೆ ಬಿಡದೀ ಮಾಯೇ, ಎನಗಿದು ವಿಧಿಯೇ?
ಚೆನ್ನಮಲ್ಲಿಕಾರ್ಜುನಯ್ಯ, ಒಪ್ಪಿ ಮರೆವೊಕ್ಕೊಡೆ ಮತ್ತುಂಟೆ
ಕಾಯಯ್ಯ ಶಿವಧೋ!
೨೨.
ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು
ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು, ಆನೊಂದರಿಯೆನಯ್ಯ
ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ,
ಪ್ರಾಣ ನಿನಗರ್ಪಿತವಾಯಿತ್ತು,
ನೀನಲ್ಲದೆ ಪೆರತೊಂದ ನೆನೆದರೆ ಆಣೆ
ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ
೨೩.
ಹಿಂದಣ ಹಳ್ಳ, ಮುಂದಣ ತೊರೆ,
ಸಲ್ಲುವ ಪರಿಯೆಂತು ಹೇಳಾ! ಹಿಂದಣ ಕೆರೆ, ಮುಂದಣ ಬಲೆ
ಹದುಳವಿನ್ನೆಲ್ಲಿಯದು ಹೇಳಾ
ನೀನಿಕ್ಕಿದ ಮಾಯೆ ಕೊಲುತಿಪ್ಪುದು
ಕಾಯಯ್ಯ ಕಾಯಯ್ಯ ಚೆನ್ನಮಲ್ಲಿಕಾರ್ಜುನ
೨೪.
ಭವಭವದಲಿ ತೊಳಲಿ ಬಳಲಿತ್ತೆನ್ನ ಮನ
ಆನೇವೆನಯ್ಯ,
ಹಸಿದುಂಡೊಡೆ, ಉಂಡು ಹಸಿವಾಯಿತ್ತು
ಇಂದು ನೀನೊಲಿದೆಯಾಗಿ
ಎನಗೆ ಅಮೃತದ ಆಪ್ಯಾಯನವಾಯಿತ್ತು
ಇದು ಕಾರಣ ನೀನಿಕ್ಕಿದ ಮಾಯೆಯನಿನ್ನು ಮೆಟ್ಟಿದೆನಾದೊಡೆ
ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ
೨೫.
ಹರಿಯ ನುಂಗಿತ್ತು ಮಾಯೆ! ಅಜನ ನುಂಗಿತ್ತು ಮಾಯೆ!
ಇಂದ್ರನ ನುಂಗಿತ್ತು ಮಾಯೆ! ಚಂದ್ರನ ನುಂಗಿತ್ತು ಮಾಯೆ!
ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ!
ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ!
ಈರೇಳು ಭುವನವನಾರಡಿಗೊಂಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನಯ್ಯ,
ಎನ್ನ ಮಾಯೆಯ ಮಾಣಿಸಾ ಕರುಣಿ
೨೬.
ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ!
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು
೨೭.
ಬಿಟ್ಟೆನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ, ನಿಮ್ಮಾಣೆ
೨೮.
ಬಿಟ್ಟಿರ್ಪನೆಂದೊಡಂ ಬಿಡದು ನಿನ್ನಯ ಮಾಯೆ!
ಒಟ್ಟಯಿಸಿ ಬಂದೊಡೊಡವಂದಪ್ಪುದೀ ಮಾಯೆ!
ಬಿಡದು ನಿನ್ನಯ ಮಾಯೆ ಒಟ್ಟಯಿಸಿ ನಿಂದೊಡಂ
ಒಡವಂದರೊಡಬಪ್ಪುದೀ ಮಾಯೆ ಸಂಗಡಂ
ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ!
ರಾಗದಿಂ ಸವಣಂಗೆ ಕಂತಿಯಾಯ್ತೀ ಮಾಯೆ!
ಭಗವಂಗೆ ಮಾಸಕಬ್ಬೆಯ ಚೋಹವಾಯ್ತಯ್ಯ
ಬಗೆವರಾರವರಿಗವರಂದವಾಯಿತ್ತಯ್ಯ!
ಗಿರಿಯನೇರಿದೊಡಿರದೆ ಗಿರಿಯನೇರಿತು ಮಾಯೆ!
ಪರಿದಡವಿಯಂ ಪೊಕ್ಕೊಡೊಡನೆ ಪೊಕ್ಕುದು ಮಾಯೆ!
ಬೆನ್ನ ಕೈಯಂ ಬಿಡದು ಭಾಪು ಸಂಸಾರವೆ
ಎನ್ನಂ ನಂಬಿಸಿತು ಮಝಪೂತು ಸಂಸಾರವೆ
ಕರುಣಕರ ನಿನ್ನ ಮಾಯೆಗಂಜುವೆನಯ್ಯ
ಪರಮೇಶ್ವರ ಮಲ್ಲಿನಾಥ ಕರುಣಿಪುದಯ್ಯ
ಇನ್ನೇವೆನಿನ್ನೇವೆನಯ್ಯೋ ಮಹಾದೇವ
ಪನ್ನಗಾಭರಣ ಕರುಣಿಸುವುದೆಲೆ ಮಹದೇವ
೨೯.
ಎನ್ನ ಮಾಯದ ಮದವ ಮುರಿಯಯ್ಯ
ಎನ್ನ ಕಾಯದ ಕಳವಳವ ಕೆಡಿಸಯ್ಯ
ಎನ್ನ ಜೀವದ ಜಂಜಡವ ಬಿಡಿಸಯ್ಯ
ಎನ್ನ ದೇವ ಮಲ್ಲಿಕಾರ್ಜುನಯ್ಯ,
ಎನ್ನ ಸುತ್ತಿದ ಮಾಯಾಪ್ರಪಂಚವ ಬಿಡಿಸಾ ನಿಮ್ಮ ಧರ್ಮ!
೩೦.
ವರಚಕ್ರಿ ಬೆಸಗೆಯ್ವೊಡೆ ಅಲಗಿನ ಹಂಗೇಕೆ?
ಪರುಷ ಕೈಯಲುಳ್ಳೊಡೆ ಸಿರಿಯ ಹಂಗೇಕೆ?
ಮಾಣಿಕ್ಯದ ಬೆಳಗುಳ್ಳೊಡೆ ಜ್ಯೋತಿಯ ಹಂಗೇಕೆ?
ಕಾಮಧೇನು ಕರೆವೆಡೆ ಕರುವಿನ ಹಂಗೇಕೆ?
ಎನ್ನ ದೇವ ಶ್ರೀಶೈಲ ಚೆನ್ನಮಲ್ಲಿಕರ್ಜುನನುಳ್ಳೊಡೆ
ಮರಳಿ ಸಂಸಾರದ ಹಂಗೇಕೆ?
೩೧.
ಊರ ಸೀರೆಗೆ ಅಗಸ ತಡಬಡಗೊಂಬಂತೆ
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು ನೆನೆನೆನೆದು
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೩೨.
ದೇವ ಎನಗೆ ಭವಿಯ ಸಂಗವೆಂದು ಮಾಣ್ಪುದೆನ್ನ ತಂದೆ
ದೇವ ಬೆರಕೆಯಿಲ್ಲದಚ್ಚಬಕುತಿ ಸುಖವದೆಂದು ತಂದೆ
ಪೂಜೆಯೊಳಗೆ ಮೆಚ್ಚ ಬೆಚ್ಚ ಮನವನೆಂತು ತೆಗೆವೆನಯ್ಯ
ಪೂಜೆಯೊಳಗೆ ನೆಟ್ಟ ದಿಟ್ಟಿಗಳನದೆಂತು ಕೀಳ್ವೆನಯ್ಯ
[ಚೆನ್ನಮಲ್ಲಿಕಾರ್ಜುನ]
೩೩.
ದೇವ ಶಿವಲಾಂಛನವನೇರಿಸಿಕೊಂಡು
ಮನೆಗೆ ಬಂದವರಂ ಕಡೆಗಣಿಸೆ
ಎಂತು ನೋಡುತಿರ್ಪೆನ್?
ಆವರ್ಗೆ ಸತ್ಕಾರವಂ
ಮಾಡಲಿಲ್ಲದಿರ್ದೊಡೆ
ಎನ್ನನೀ ಧರೆಯ ಮೇಲಿರಿಸುವ ಕಾರಣವೇನಭವ?
ನಿನ್ನವಳೆಂದೆನ್ನ ಮುದ್ದುತನವ ಸಲಿಸುವೊಡಿರಿಸುವುದು
ಇಲ್ಲಾ ಕೈಲಸಕ್ಕೆ ಕೊಂಡೊಯ್ವುದು [ಚೆನ್ನಮಲ್ಲಿಕಾರ್ಜುನ]
೩೪.
ಅಶನದಾಶಯಂ, ತೃಷೆಯ ತೃಷ್ಣೆಯಂ,
ಬೆಸನದ ಬೇಗೆಯಂ, ವಿಷಯದ ವಿಹ್ವಳತೆಯಂ,
ತಾಪತ್ರಯದ ಕಲ್ಪನೆಗಳಂ ಗೆಲಿದೆ
ಇನ್ನೇನಿನ್ನೇನೆನ್ನಿಚ್ಛೆಯಾದುದು
ಚೆನ್ನಮಲ್ಲಿಕಾರ್ಜುನ ನಿನಗಂಜೆನಂಜೆ
೩೫.
ಶಿವನೇ, ಉಳಿವ ಕರೆವ ನೇಹವುಂಟೆ?
ಸಂಸಾರಕ್ಕಂ ನಿಮ್ಮಲ್ಲಿ ಗೆಡೆಯಾಡುವ ಭಕ್ತಿಯುಂಟೇ?
ಏನಯ್ಯ ಶಿವನೇ,
ಏನೆಂದು ಪೇಳ್ವೆ ಲಜ್ಜೆಯ ಮಾತ, [ಚೆನ್ನಮಲ್ಲಿಕಾರ್ಜುನ]
೩೬.
ಒಳಗೆ ಶೋಧಿಸಿ, ಹೊರಗೆ ಶುದ್ಧವಿಸಿ,
ಒಳ-ಹೊರಗೆಂಬ ಉಭಯಶಂಕೆಯ ಕಳೆದು,
ಸ್ಫಟಿಕದ ಶಲಾಕೆಯಂತೆ ತಳವೆಳಗುಮಾಡಿ,
ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ,
ಶಿಷ್ಯನ ಸರ್ವಪ್ರಪಂಚ ನಿವೃತ್ತಿಯಂ ಮಾಡಿ, ನಿಜೋಪದೇಶವನಿತ್ತು
ಆ ಶಿಷ್ಯನ ನಿಜದಾದಿಯನೈದಿಸುವನೀಗ ದೀಕ್ಷಾಗುರು!
ಆ ಸಹಜಗುರುವೀಗ ಜಗದಾರಾಧ್ಯನು
ಅವನ ಪಾದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನ
೩೭.
ಗುರುವೆಂಬ ತೆತ್ತಿಗನೆನಗೆ
ಲಿಂಗವೆಂಬಲಗನು ಮನುನಿಷ್ಠೆಯೆಂಬ ಕೈಯಲ್ಲಿ ಕೊಡಲು
ಕಾದುವೆನು, ಗೆಲುವೆನು ಕಾಮನೆಂಬುವನ!
ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು
ಅಲಗು ಎನ್ನೊಳಗೆ ನಟ್ಟು ಆನಳಿದ ಕಾರಣ
ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ
೩೮.
ಗುರುವಿನ ಕರುಣದಿಂದ ಲಿಂಗ-ಜಂಗಮನ ಕಂಡೆ
ಗುರುವಿನ ಕರುಣದಿಂದ ಪಾದೋದಕ-ಪ್ರಸಾದವ ಕಂಡೆ
ಗುರುವಿನ ಕರುಣದಿಂದ ಸಜ್ಜನಸದ್ಭಕ್ತರ ಗೋಷ್ಠಿಯ ಕಂಡೆ
ಚೆನ್ನಮಲ್ಲಿಕಾರ್ಜುನಯ್ಯ,
ನಾ ಹುಟ್ಟಲೊಡನೆ ವಿಭೂತಿಯ ಪಟ್ಟವ ಕಟ್ಟಿ
ಸದ್ಗುರುಸ್ವಾಮಿ ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು
೩೯.
ಗುರುವಿನ ಕರುಣದಿಂದ ಲಿಂಗ-ಜಂಗಮನ ಕಂಡ್
ಗುರುವಿನ ಕರುಣದಿಂದ ಪಾದೋದಕ-ಪ್ರಸಾದವ ಕಂಡೆ
ಗುರುವಿನ ಕರುಣದಿಂದ ಸಜ್ಜನಸದ್ಭಕ್ತರ ಗೋಷ್ಠಿಯ ಕಂಡೆ
ಚೆನ್ನಮಲ್ಲಿಕಾರ್ಜುನಯ್ಯ, ನಾ ಹುಟ್ಟಲೊಡನೆ
ವಿಭೂತಿಯ ಪಟ್ಟವ ಕಟ್ಟಿ ಸದ್ಗುರುಸ್ವಾಮಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು
೪೦.
ಅರಸಿ ಮರೆವೊಕ್ಕೊಡೆ ಕಾವ ಗುರುವೇ,
ಜಯ ಜಯ ಗುರುವೇ
ಆರೂ ಅರಿಯದ ಬಯಲೊಳಗೆ ಬಯಲಾಗಿ
ನಿಂದ ನಿಲವ ಹಿಡಿದೆನ್ನ ಕರದಲ್ಲಿ ತೋರಿದ ಗುರುವೇ
ಚೆನ್ನಮಲ್ಲಿಕಾರ್ಜುನ ಗುರುವೇ, ಜಯ ಜಯ ಗುರುವೇ.
೪೧.
ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು
ಎನ್ನ ಮಸ್ತಕದ ಮೇಲೆ ಇರಿಸಿದಾಗಳೇ
ಎನ್ನ ಭವಂ ನಾಸ್ತಿಯಾಯಿತ್ತು! ಎನ್ನ ತನ್ನಂತೆ ಮಾಡಿದ!
ಎನಗೆ-ತನಗೆ ತೆರಹಿಲ್ಲದಂತೆ ಮಾಡಿ ತೋರಿದನು ನೋಡಾ!
ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಮನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಜ್ಞಾನಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಸರ್ವಾಂಗದೊಳಹೊರಗೆ ತೆರಹಿಲ್ಲದಳವಡಿಸಿದ
ನಮ್ಮ ಗುರುಲಿಂಗದೇವ ಚೆನ್ನಮಲ್ಲಿಕಾರ್ಜುನ
೪೨.
ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು
ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು
ಜಯ ಜಯ ಗುರು ನಮೋ
ಪರಮ ಗುರುವೆ ನಮೋ ನಮೋ
ಚೆನ್ನಮಲ್ಲಿಕಾರ್ಜುನನ ತಂದೆನಗೆ ತೋರಿ ಕೊಟ್ಟ
ಗುರುವೆ ನಮೋ ನಮೋ
೪೩.
ನರ-ಜನ್ಮವ ತೊಡೆದು
ಹರ-ಜನ್ಮವ ಮಾಡಿದ ಗುರುವೆ
ಭವಬಂಧನವ ಬಿಡಿಸಿ
ಪರಮಸುಖವ ತೋರಿದ ಗುರುವೆ
ಭವಿ ಎಂಬುದ ತೊಡೆದು
ಭಕ್ತೆ ಎಂದೆನಿಸಿದ ಗುರುವೆ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ
ಕೊಟ್ಟ ಗುರುವೆ ನಮೋ ನಮೋ
೪೪.
ಸಂಸಾರಸಾಗರದೊಳಗೆ ಬಿದ್ದೆ ನೋಡಾ ನಾನು
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು
ಅಂಗ ವಿಕಾರದ ಸಂಗವ ನಿಲಿಸಿ
ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು
ಹಿಂದಣ ಜನ್ಮವ ತೊಡೆದು
ಮುಂದಣ ಪಥವ ತೋರಿದನೆನ್ನ ತಂದೆ
ಚೆನ್ನಮಲ್ಲಿಕಾರ್ಜುನನ ನಿಜವನರುಹಿದನೆನ್ನ ಗುರು
೪೫.
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ
ಬರಲುಗೊಂಡ ಸಸಿಗೆ ಮಳೆಸುರಿದಂತಾಯ್ತು ನೋಡಾ!
ಇಂದೆನಗೆ ಇಹದ ಸುಖ, ಪರದ ಗತಿ ನಡೆದು ಬಂದಂತಾಯಿತ್ತು
ನೋಡಾ ಚೆನ್ನಮಲ್ಲಿಕಾರ್ಜುನಯ್ಯ ಗುರುಪಾದವ ಕಂಡು
ಧನ್ಯಳಾದೆನು ನೋಡಾ
೪೬.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ!
ಎನಗುಳ್ಳುದೊಂದು ಮನ,
ಆ ಮನ ನಿಮ್ಮಲ್ಲಿ ಒಡೆವೆರೆದ ಬಳಿಕ
ಎನಗೆ ಭಯವುಂಟೆ ಚೆನ್ನಮಲ್ಲಿಕಾರ್ಜುನಯ್ಯ!?
೪೭.
ಅಂಗವ ಲಿಂಗಮುಖಕ್ಕೆ ಅರ್ಪಿಸಿ
ಅಂಗ ಅನಂಗವಾಯಿತ್ತು
ಮನವ ಅರಿವಿಂಗರ್ಪಿಸಿ ಮನ ಲಯವಾಯಿತ್ತು
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು
ಅಂಗ-ಮನ-ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು
ಎನ್ನ ಅಕಾಯದ ಸುಖವ ಲಿಂಗ ಭೋಗಿಸುವನಾಗಿ
ಶರಣಸತಿ-ಲಿಂಗಪತಿಯಾದೆನು!
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗಂಡನ ಒಳಹೊಕ್ಕು ಬೆರೆಸಿದೆನು!
೪೮.
ಹರನೇ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಿಸಿದ್ದೆ ನೋಡಾ!
ಹದೆಯ ಮೇಲಣ ಮಾತ ಬೆಸಗೊಳಲಟ್ಟಿದರೆ
ಶಶಿಧರನ ಹತ್ತಿರಕ್ಕೆ ಕಳುಹಿದರೆಮ್ಮವರು
ಭಸ್ಮವನೇ ಪೂಸಿ ಕಂಕಣವನೆ ಕಟ್ಟಿದರು
ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು!
೪೯.
ಜಲದ ಮಂಟಪದ ಮೇಲೆ
ಉರಿಯ ಚಪ್ಪರವನಿಕ್ಕಿ,
ಆಲಿಕಲ್ಲ ಹಸೆಯ ಹಾಸಿ, ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ
ತಲೆಯಿಲ್ಲದ ಗಂಡ ಬಂದು ಮುಟ್ಟಿದನು ನೋಡಾ!
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚೆನ್ನಮಲ್ಲಿಕಾರ್ಜುನಯ್ಯನಿಗೆ!
೫೦.
ಎನ್ನ ನಾನರಿಯದಂದು ಮುನ್ನ ನೀನೆಲ್ಲಿರ್ದೆ? ಹೇಳಯ್ಯ!
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆಯಯ್ಯ
ಎನ್ನೊಳಗಿರ್ದು ಮೈದೋರದ ಭೇದವ
ನಿಮ್ಮಲ್ಲಿ ಕಂಡೆನು ಕಾಣಾ ಚೆನ್ನಮಲ್ಲಿಕಾರ್ಜುನ
೫೧.
ಅಂಗ ಲಿಂಗವ ವೇಧಿಸಿ
ಅಂಗ ಲಿಂಗದೊಳಗಾಯಿತ್ತು
ಮನ ಲಿಂಗವ ವೇಧಿಸಿ
ಮನ ಲಿಂಗದೊಳಗಾಯಿತ್ತು
ಭಾವ ಲಿಂಗವ ವೇಧಿಸಿ
ಭಾವ ಲಿಂಗದೊಳಗಾಯಿತ್ತು
ಚೆನ್ನಮಲ್ಲಿಕಾರ್ಜುನ, ನಿಮ್ಮ ಒಲುಮೆಯ ಸಂಗದಲ್ಲಿರ್ದು
ಸ್ವಯಂಲಿಂಗಿಯಾದೆನು
೫೨.
ನಿನ್ನರಿಕೆಯ ನರಕವೇ ಮೋಕ್ಷ ನೋಡಯ್ಯ
ನಿನ್ನರಿಯದ ಮುಕ್ತಿಯೇ ನರಕ ಕಂಡಯ್ಯ
ನೀನೊಲ್ಲದ ಸುಖವೇ ದುಃಖ ಕಂಡಯ್ಯ
ನೀನೊಲಿದ ದುಃಖವೇ ಪರಮಸುಖ ಕಂಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನೀ ಕಟ್ಟಿ ಕೆಡಹಿದ ಬಂಧನವೇ ನಿರ್ಬಂಧನವೆಂದಿಪ್ಪೆನು
೫೩.
ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ?
ಸೂರ್ಯಕಾಂತದಗ್ನಿಯನಾರು ಭೇದಿಸಬಲ್ಲರು?
ಅಪಾರಮಹಿಮ ಚೆನ್ನಮಲ್ಲಿಕಾರ್ಜುನನೆನ್ನೊಳಡಗಿಪ್ಪ ಪರಿಯ
ಬೇರಿಲ್ಲದೆ ಕಂಡು ಕಣ್ತೆರೆದೆನು
೫೪.
ಘನವ ಕಂಡೆ, ಅನುವ ಕಂಡೆ
ಆಯತ-ಸ್ವಾಯತ-ಸನ್ನಿಹಿತ ಸುಖವ ಕಂಡೆ
ಅರಿವನರಿದು ಮರಹ ಮರೆದೆ
ಕುರುಹಿನ ಮೋಹದ ಮರವೆಯನೀಡಾಡಿದೆ
ಚೆನ್ನಮಲ್ಲಿಕಾರ್ಜುನ, ನಿಮ್ಮನರಿದು ಸೀಮೆಗೆಟ್ಟೆನು
೫೫.
ಕ್ರೀಗಳು ಮುಟ್ಟಲರಿಯವು ನಿಮ್ಮನೆಂತು ಪೂಜಿಸುವೆ?
ನಾದ-ಬಿಂದುಗಳು ಮುಟ್ಟಲರಿಯವು ನಿಮ್ಮನೆಂತು ಹಾಡುವೆ?
ಕಾಯ ಮುಟ್ಟುವೊಡೆ ಕಾಣಬಾರದ ಘನವು
ನಿಮ್ಮನೆಂತು ಕರಸ್ಥಲದಲಿ ಧರಿಸುವೆ?
ಚೆನ್ನಮಲ್ಲಿಕಾರ್ಜುನಯ್ಯ, ನಾನೇನೆಂದರಿಯದೆ
ನಿಮ್ಮ ನೋಡಿ ನೋಡಿ ಸೈವೆರೆಗಾಗುತಿರ್ದೆನು
೫೬.
ಸಜ್ಜನವಾಗಿ ಮಜ್ಜನಕ್ಕೆರೆವೆ
ಶಾಂತಳಾಗಿ ಪೂಜೆಯ ಮಾಡುವೆ
ಸಮರತಿಯಿಂದ ನಿಮ್ಮ ಕೂಡುವೆ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನಲಗದ ಪೂಜೆ ಅನುವಾಯಿತ್ತೆನಗೆ
೫೭.
ಎಲ್ಲ ಎಲ್ಲವನರಿದು ಫಲವೇನಯ್ಯ?
ತನ್ನ ತಾನರಿಯಬೇಕಲ್ಲದೆ?
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನ, ನೀ ಅರಿವಾಗಿ ಮುಂದೋರಿದ ಕಾರಣ
ನಿಮ್ಮಿಂದ ನಿಮ್ಮನರಿದೆನಯ್ಯ ಪ್ರಭುವೆ
೫೮.
ಚಂದನವ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದೆಡೆ ಬೆಂದು ಕಳಂಕ ಹಿಡಿದಿತ್ತೆ?
ಸಂದು ಸಂದನು ಕಡಿದು ಕಬ್ಬನು ತಂದು ಗಾಣದಲಿಕ್ಕಿ ಅರೆದೊಡೆ
ಬೆಂದು ಪಾಕಗೂಳ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತ್ತೆ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು
ನಿಮಗೆ ಹಾನಿ
ಎನ್ನ ತಂದೆ ಮಲ್ಲಿಕಾರ್ಜುನದೇವಯ್ಯ,
ಕೊಂದೊಡೆ ಶರಣೆಂಬುದ ಮಾಣೆ
೫೯.
ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಆವು ನೀಡಿದವು ತಮ್ಮ ಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು
ಆವು ನೀಡಿ ಭಕ್ತರಾದರು
ಇನ್ನು ಬೇಡಿದೆನಾದರೆ, ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮಾಣೆ
೬೦.
ಗಿರಿಯೊಳು ವನದೊಳು ಗಿಡಗಿಡದತ್ತ
ದೇವ ಎನ್ನ ದೇವ ಬಾರಯ್ಯ ತೋರಯ್ಯ ನಿಮ್ಮ ಕರುಣವನೆಂದು
ನಾನು ಅರಸುತ್ತ ಅಳಲುತ್ತ ಕಾಣದೇ ಸುಯಿದು ಬಂದು
ಕಂಡೆ ಶರಣರ ಸಂಗದಿಂದ
ಅರಸಿ ಹಿಡಿದೇನೆಂದು ನೀನಡಗುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ
೬೧.
ಪೃಥ್ವಿಯ ಗೆಲಿದ ಏಲೇಶ್ವರನ ನಾನು ಕಂಡೆ
ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ನಾನು ಕಂಡೆ
ಸತ್ವ-ರಜ-ತಮ-ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ
ಅಂತರಂಗ-ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ನಾನು ಕಂಡೆ
ಇವರೆಲ್ಲರ ಮಧ್ಯಸ್ಥಾನ ಪ್ರಾಣಲಿಂಗವೆಂದು
ಸುಜ್ಞಾನದಲ್ಲಿ ತೋರಿದ ಆ ಬಸವಣ್ಣನ ಪ್ರಸಾದದಿಂದ
ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯ
೬೨.
ಅಪಾರ ಗಂಭೀರದ ಅಂಬುಧಿಯಲ್ಲಿ
ತಾರಾಪಥವ ನೋಡಿ ನಡೆಯೆ
ಭೈತ್ರದಿಂದ ದ್ವೀಪಾಂತರಕ್ಕೆ ಸಕಲಪದಾರ್ಥನವೆಯ್ದಿಸುವುದು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಸಮೀಪ
ತುರ್ಯಸಂಭಾಷಣೆಯನರಿದಡೆ ಮುನ್ನಿನಲ್ಲಿಗೆಯ್ದಿಸುವುದು
೬೩.
ಕ್ರೀಯೊಳ್ಳುಡೊಂತೊಂದಾಸೆ
ಸದ್ಭಕ್ತರ ನುಡಿಗಡಣ ಉಳ್ಳೊಡಂತೊಂದಾಸೆ
ಶ್ರೀಗಿರಿಯನೇರಿ ನಿಮ್ಮ ಬೆರೆಸಿದರೆ ಎನ್ನಾಸೆಗೆ ಕಡೆಯೇ ಅಯ್ಯ?
ಆವಾಸೆಯೂ ಇಲ್ಲದೆ ನಿಮ್ಮ ನಂಬಿ ಬಂದು ಕೆಟ್ಟೆನಯ್ಯ
೬೪.
ಆರೂ ಇಲ್ಲದವಳೆಂದು
ಅಳಿಗೊಳಲು ಬೇಡ ಕಂಡಯ್ಯ
ಏನ ಮಾಡಿದೆಡೆಯೂ ನಾನಂಜುವಳಲ್ಲ!
ತರಗೆಲೆಯ ಮೆಲಿದು ನಾನಿಹೆನು
ಸುರಗಿಯ ಮೇಲೆರಗಿ ನಾನಿಹೆನು
ಚೆನ್ನಮಲ್ಲಿಕಾರ್ಜುನಯ್ಯ
ಕರ ಕಡೆ ನೋಡಿದಡೆ
ಒಡಲನೂ ಪ್ರಾಣವನೂ ನಿಮಗೊಪ್ಪಿಸಿ ಶುದ್ಧಳಿಹೆನು
೬೫.
ಕಿಡಿಕಿಡಿ ಕೆದರಿದಡೆ
ಎನಗೆ ಹಸಿವು ತೃಷೆ ಅಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ
ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು
ಚೆನ್ನಮಲ್ಲಿಕಾರ್ಜುನಯ್ಯ, ಶಿರ ಹರಿದು ಬಿದ್ದಡೆ ಪ್ರಾಣ
ನಿಮಗರ್ಪಿತವೆಂಬೆನು
೬೬.
ನಚ್ಚುಗೆ ಮನ ನಿಮ್ಮಲ್ಲಿ ಮೆಚ್ಚುಗೆ ಮನ ನಿಮ್ಮಲ್ಲಿ
ಸಲುಗೆ ಮನ ನಿಮ್ಮಲ್ಲಿ ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ ಬಳಲುಗೆ ಮನ ನಿಮ್ಮಲ್ಲಿ
ಕರಗುಗೆ ಮನ ನಿಮ್ಮಲ್ಲಿ ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪಂಚೇದ್ರಿಯಗಳು ಕಬ್ಬುನ ಉಂಡ ನೀರಿನಂತೆ
ನಿಮ್ಮಲ್ಲಿ ಬೆರೆಸುಗೆ ಚೆನ್ನಮಲ್ಲಿಕಾರ್ಜುನಯ್ಯ
೬೭.
ಒಡಲಿಲ್ಲದ, ನುಡಿಯಿಲ್ಲದ, ಕಡೆಯಿಲ್ಲದ
ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯ
ಭಾಷೆ ಪೈಸರವಿಲ್ಲ ಓಸರಿಸೆನನ್ಯಕ್ಕೆ
ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ
ಆರಳಿದು ಮೂರಾಗಿ, ಮೂರಳಿದು ಎರಡಾಗಿ,
ಎರಡಳಿದು ಒಂದಾಗಿ ನಿಂದೆನಯ್ಯ
ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ
ಪ್ರಭುವಿನಿಂದ ಕೃತಕೃತ್ಯಳಾದೆನು ನಾನು
ಮರೆಯಲಾಗದು ನಾನು ನಿಮ್ಮ ಶಿಶುವೆಂದು
ಚೆನ್ನಮಲ್ಲಿಕಾರ್ಜುನನ ಬೆರೆಸೆಂದು
ಎನ್ನ ಹರಸುತ್ತಿಹುದು
೬೮.
ಹೊಳೆವ ಕೆಂಜೆಡೆಗಳ ಮಣಿಮುಕುಟದ
ಒಪ್ಪುವ ಸುಲಿಪಲ್ಗಳ ನಗೆಮೊಗದ
ಕಂಗಳ ಕಾಂತಿಯಿಂ ಈರೇಳು ಭುವನಮಂ ಬೆಳಗುವ
ದಿವ್ಯ ಸ್ವರೂಪನಂ ಕಂಡೆ ನಾನು
ಕಂಡೆನ್ನ ಕಂಗಳ ಬರ ಹಿಂಗಿತ್ತೆಂದೆನಗೆ
ಗಂಡ ಗಂಡರನ್ನೆಲ್ಲ ಹೆಂಡಹೆಂಡಿರಾಗಿ ಆಳುವ
ಗುರುವನ ಕಂಡೆ ನಾನು !
ಜಗದಾದಿ ಶಕ್ತಿಯೊಳು ಬೆರೆಸಿ ಒಡನಾಡುವ
ಪರಮ ಗುರು ಚೆನ್ನಮಲ್ಲಿಕಾರ್ಜುನನ ನಿಲುವ ಕಂಡು ಬದುಕಿದೆನು
೬೯.
ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವ
ಏರಿಲ್ಲದ ಘಾಯದಲಿ ನೊಂದೆನವ್ವ
ಸುಖವಿಲ್ಲದ ಧಾವತಿಗೊಂಡೆನವ್ವ
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲಿ ಬಂದೆನವ್ವ
೭೦.
ಬೆರಸುವಡೆ ಬೇಗ ತೋರ! ಹೊರಹಾಕದಿರಯ್ಯ!
ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು, ಎನ್ನ ಹೊರಹಾಕದಿರಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ನಂಬಿ
ಬೆಂಬಳಿ ಬಂದೆನು ಇಂಬುಗೊಳ್ಳಯ್ಯ ಬೇಗದಲಿ
೭೧.
ಬಲ್ಲಿದ ಹಗೆಹ ತೆಗೆವನ್ನಬರ
ಬಡವರ ಹರಣ ಹಾರಿ ಹೋದ ತೆರನಂತಾಯಿತ್ತು
ನೀ ಕಾಡಿ ಕಾಡಿ ನೋಡವನ್ನಬರ
ಎನಗಿದು ವಿಧಿಯೇ ಹೇಳಾ ತಂದೆ !
ತೂರುವಾರುವನ್ನಬರ ಒಮ್ಮೆ ಗಾಳಿಗೆ
ಹಾರಿ ಹೋದ ತೆರನಂತಾಯಿತ್ತು
ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯ
ಚೆನ್ನಮಲ್ಲಿಕಾರ್ಜುನ ?
೭೨.
ಒಮ್ಮೆ ಕಾಮನ ಕಾಲಹಿಡಿವೆ,
ಮತ್ತೂಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ
ಸುಡಲೀ ವಿರಹವ ! ನಾನಾರಿಗೆ ಧೃತಿಗೆಡುವೆ
ಚೆನ್ನಮಲ್ಲಿಕಾರ್ಜುನದೇವನೆನ್ನನೊಲ್ಲದ ಕಾರಣ
ಎಲ್ಲರಿಗೆ ಹಂಗಿತಿಯಾದೆನವ್ವ !
೭೩.
ಚಿಲಿಮಿಲಿ ಎಂದೋದುವ ಗಿಳಿಗಳಿರಾ!
ನೀವು ಕಾಣಿರೆ? ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಎರಗಿ ಬಂದಾಡುವ ತುಂಬಿಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಕೊಳನ ತಡಿಯಾಡುವ ಹಂಸಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂಬುದ ಬಲ್ಲೆಡೆ
ನೀವು ಹೇಳಿರೇ !
೭೪.
ಅಳಿಸಂಕುಳವೆ, ಮಾಮರವೇ, ಬೆಳದಿಂಗಳೇ,
ಕೋಗಿಲೆಯೇ, ನಿಮ್ಮನ್ನೆಲ್ಲರನೂ ಒಂದು ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡಡೆ
ಕರೆದು ತೋರಿರೆ
೭೫.
ವನವೆಲ್ಲ ನೀವೆ
ವನದೊಳಗಣ ದೇವತರುವೆಲ್ಲ ನೀವೆ
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ
ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ
ಎನಗೇಕೆ ಮುಖದೋರೆ?
೭೬.
ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ,
ಪವಳದ ಚಪ್ಪರವಿಕ್ಕಿ, ಮುತ್ತು ಮಾಣಿಕದ ಮೇಲುಕಟ್ಟು ಕಟ್ಟಿ,
ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು
ಕಂಕಣ ಕೈಧಾರೆ, ಸ್ಥಿರಸೇಸೆಯನಿಕ್ಕಿ
ಚೆನ್ನಮಲ್ಲಿಕಾರ್ಜುನನೆಂಬ ಗಂಡಗೆನ್ನ ಮದುವೆಯ ಮಾಡಿದರು
೭೭.
ಗಗನದ ಗುಂಪ ಚಂದ್ರನು ಬಲ್ಲುದಲ್ಲದೇ
ಮೇಲಿದ್ದಾಡುವ ಹದ್ದು ಬಲ್ಲುದೇ ಅಯ್ಯ !
ನದಿಯ ಗುಂಪ ತಾವರೆ ಬಲ್ಲುದಲ್ಲದೇ
ತಡಿಯಲ್ಲಿದ್ದ ಹೊನ್ನಾವರಿಕೆ ಬಲ್ಲುದೇ ಅಯ್ಯ !
ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೇ
ಕಡೆಯಲ್ಲಿದ್ದಾಡುವ ನೊರಜು ಬಲ್ಲುದೇ ಅಯ್ಯ !
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರ ನಿಲುವ ನೀವೇ ಬಲ್ಲಿರಲ್ಲದೇ
ಈ ಕೋಣನ ಮೈಯ ಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯ
೭೮.
ಮಂಗಳವೇ ಮಜ್ಜನವೆನಗೆ
ವಿಭೂತಿಯೇ ಒಳಗುಂದದರಿಸಿನವೆನಗೆ
ದಿಗಂಬರವೇ ದಿವ್ಯಾಂಬರವೆನಗೆ
ಶಿವನಾದರೇಣುವೇ ಅನುಲೇಪನವೆನಗೆ
ರುದ್ರಾಕ್ಷಿಯೇ ಮೈದೊಡುಗೆಯೆನಗೆ
ಶರಣರ ಪಾದಂಗಳೇ ತೊಂಡಿಲ ಬಾಸಿಗವೆನಗೆ
ಚೆನ್ನಮಲ್ಲಿಕಾರ್ಜುನಯ್ಯನೇ ಗಂಡನೆನಗೆ
ಆನು ಚೆನ್ನಮಲ್ಲಿಕಾರ್ಜುನಂಗೆ ಮದುವಳಿಗೆ
ಎನಗೆ ಬೇರೆ ಶೃಂಗಾರವೇಕೆ ಹೇಳಿರವ್ವ
೭೯.
ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು
ಇರುಳು ನಾಲ್ಕು ಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿದೆನು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಒಲುಮೆನಟ್ಟು
ಹಸಿವು-ತೃಷೆ-ನಿದ್ರೆಯ ಮರೆವೆನು
೮೦.
ಆಲಿಸೆನ್ನ ಬಿನ್ನಪವ
ಲಾಲಿಸೆನ್ನ ಬಿನ್ನಪವ
ಪಾಲಿಸೆನ್ನ ಬಿನ್ನಪವ
ಏಕೆನ್ನ ಮೊರೆಯ ಕೇಳೆ
ನೋಡೆಯನೆನ್ನ ದುಃಖವ
ಚೆನ್ನಮಲ್ಲಿಕಾರ್ಜುನಯ್ಯ
೮೧.
ಅಯ್ಯ ದೂರದಲಿರ್ದೆಹೆಯೆಂದು
ಬಾಯಾರಿ ಬಳಲುತ್ತಿದ್ದೆನಯ್ಯ ನಾನು
ಅಯ್ಯ ಸಾರೆ ಬಂದು ನೀನೆನ್ನ ಕರಸ್ಥಲದಲಿ ಮೂರ್ತಿಗೊಂಡರೆ
ಇನ್ನಾರತಿಯೆಲ್ಲ ನಿನ್ನಲ್ಲಿ ಲಿಂಗಯ್ಯ
ಆಲಿ ನಿಮ್ಮಲ್ಲಿ ನೆಟ್ಟವು ನೋಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿ ನೋಡಿ
ಕಂಗಳೇ ಪ್ರಾಣವಾಗಿದ್ದೆನಯ್ಯ
೮೨.
ನಾನು ನಿನಗೊಲಿದೆ, ನೀನು ಎನಗೊಲಿದೆ
ನೀನೆನ್ನನಗಲದಿಪ್ಪೆ, ನಾನಿನ್ನಗಲದಿಪ್ಪೆನಯ್ಯಾ
ನಿನಗೆ ಎನಗೆ ಬೇರೊಂದು ಠಾವುಂಟೆ
ನೀನು ಕರುಣಿಯೆಂಬುದು ಬಲ್ಲೆನು
ನೀನಿರಿಸಿದ ಗತಿಯೊಳಗಿಪ್ಪವಳಾನು
ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನ
೮೩.
ಅಯ್ಯ ನೀ ಕೇಳಿದರೆ ಕೇಳು, ಕೇಳದಿದ್ದರೆ ಮಾಣು
ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀನೊಲಿದರೆ ಒಲಿ, ಒಲಿಯದಿದ್ದರೆ ಮಾಣು
ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀ ಮೆಚ್ಚಿದರೆ ಮೆಚ್ಚು, ಮೆಚ್ಚದಿದ್ದರೆ ಮಾಣು
ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀ ನೋಡಿದರೆ ನೋಡು, ನೋಡದಿದ್ದರೆ ಮಾಣು
ನಾ ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ ನಾ ನಿಮ್ಮ ಪೂಜಿಸಿ
ಹರುಷದಲೋಲಾಡುವೆನಯ್ಯ
೮೪.
ಕಾಣುತ್ತ ಕಾಣುತ್ತ
ಕಂಗಳ ಮುಚ್ಚಿದೆ ನೋಡವ್ವ
ಕೇಳುತ್ತ ಕೇಳುತ್ತ
ಮೈಮರೆದೊರಗಿದೆ ನೋಡವ್ವ
ಹಾಸಿದ ಹಾಸಿಗೆ ಹಂಗಿಲ್ಲದೇ ಹೋಯಿತ್ತು ಕೇಳವ್ವ
ಚೆನ್ನಮಲ್ಲಿಕಾರ್ಜುನ ದೇವರ ದೇವನಂ
ಕೂಡುವ ಕೂಟವ ನಾನೇನಂದರಿಯದೇ
ಮರೆದೆ ಕಾಣವ್ವ
೮೫.
ಬಾರದ ಭವಂಗಳಲ್ಲಿ ಬಂದೆನಯ್ಯ
ಕಡೆಯಿಲ್ಲ ತಾಪಂಗಳಲ್ಲಿ ನೊಂದು
ನಿಮ್ಮ ಕರುಣೆಗೆ ಬಳಿಸಂದೆನಯ್ಯ
ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ
ತನುವನುವಾಗಿ ಮನ ಮಾರುಹೋಗಿ
ಮತ್ತಿಲ್ಲದ ತವಕದ ಸ್ನೇಹಕ್ಕೆ
ತೆರಹಿನ್ನೆಂತು ಹೇಳಾ ತಂದೆ?
೮೬.
ಹೊಳೆವ ಕೆಂಜೆಡೆಗಳ ಮೇಲೆ ಎಳೆವೆಳುದಿಂಗಳು
ಫಣಿಮಣಿ ಕರ್ಣಕುಂಡಲದವ ನೋಡವ್ವ !
ರುಂಡ ಮಾಲೆಯ ಕೊರಳವನ ಕಂಡೊಡೆ ಒಮ್ಮೆ ಬರಹೇಳವ್ವ
ಗೋವಿಂದನ ನಯನ ಉಂಗುಟದ ಮೇಲಿಪ್ಪುದು
ಚೆನ್ನಮಲ್ಲಿಕಾರ್ಜುನ ದೇವಂಗಿದು ಕುರುಹವ್ವ
೮೭.
ಅಕ್ಕ ಕೇಳವ್ವ ಅಕ್ಕಯ್ಯ ನಾನೊಂದ ಕನಸ ಕಂಡೆ
ಅಕ್ಕಿ ಅಡಿಕೆ ಓಲೆ ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ
ಮಿಕ್ಕಿ ಮೀರಿ ಹೋವನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ತೆರೆದೆನು
೮೮.
ಎನ್ನ ಮನವ ಮಾರುಗೊಂಡನವ್ವ
ಎನ್ನ ತನುವ ಸೂರೆಗೊಂಡೆನವ್ವ
ಎನ್ನ ಸುಖವನೊಪ್ಪುಗೊಂಡನವ್ವ
ಎನ್ನಿರುವನಿಂಬುಗೊಂಡನವ್ವ
ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು
೮೯.
ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ
ಇರುಳಿನ ಕೂಟಕ್ಕೆ ಇಂಬರಿದು ಹತ್ತಿದೆ
ಕನಸಿನಲ್ಲಿ ಮನಸಂಗವಾಗಿ
ಮನಸಿನಲ್ಲಿ ಮೈಮೆರೆದು ಸಂಗವಾಗಿರ್ದೆ
ಚೆನ್ನಮಲ್ಲಿಕಾರ್ಜುನನನೊಪ್ಪಚ್ಚಿ ಕೂಡಿ ಕಣ್ತೆರೆದೆನವ್ವ
೯೦.
ಅಕ್ಕ ಕೇಳಕ್ಕ,
ಆನೊಂದು ಕನಸ ಕಂಡೆ!
ಚಿಕ್ಕಚಿಕ್ಕ ಜಡೆಯ ಸುಲಿಪಲ್ಲ ಗೊರವನು
ಬಂದೆನ್ನ ನೆರೆದ ನೋಡವ್ವ
ಆತನನಪ್ಪಿಕೊಂಡು ತಳವೆಳಗಾದೆನೆಲಗೇ!
ಚೆನ್ನಮಲ್ಲಿಕಾರ್ಜುನನ ಕೂಡಿ
ಕಣ್ತೆರೆದು ತೆಳವೆಳಗಾದೆನೆಲಗೇ!
೯೧.
ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?
ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?
ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ
ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ
೯೨.
ರತ್ನದ ಸಂಕೋಲೆಯಾದರೆ ತೊಡರಲ್ಲವೆ?
ಮುತ್ತಿನ ಬಲೆಯಾದರೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆಯ ಹೊಯ್ದರೆ ಸಾಯದಿಪ್ಪರೆ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದರೆ
ಜನನಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನ?
೯೩.
ಎರದ ಮುಳ್ಳಿನಂತೆ ಪರಗಂಡರೆನಗವ್ವ
ಸೋಂಕಲಮ್ಮೆ ಸುಳಿಯಲಮ್ಮೆ ನಂಬಿ ನೆಚ್ಚಿ ಮಾತಾಡಲಮ್ಮೆನವ್ವ
ಚೆನ್ನಮಲ್ಲಿಕಾರ್ಜುನನಲ್ಲದುಳಿದ ಗಂಡರ ಉರದಲ್ಲಿ ಮುಳ್ಳುಂಟೆಂದು
ನಾನಪ್ಪಲಮ್ಮೆನವ್ವ
೯೪.
ಗುರುವಿನಿಂದ ಲಿಂಗವ ಕಂಡೆ, ಜಂಗಮವ ಕಂಡೆ
ಗುರುವಿನಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ
ಗುರುವಿನಿಂದ ನನ್ನ ನಾ ಕಂಡೆ, ಚೆನ್ನಮಲ್ಲಿಕಾರ್ಜುನ
೯೫.
ತರಳಿಯ ಹುಳು ತನ್ನ ಸ್ನೇಹಕ್ಕೆ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸಾವಂತೆ-
ಎನಗೂ ಮನೆಯೇ? ಎನಗೂ ಧನವೇ?
ಎನ್ನ ಮನೆಮಠ ಕನಸ ಕಂಡುಕಣ್ತೆರೆದಂತಾಯಿತ್ತು
ಎನ್ನ ಮನದ ಸಂಸಾರವ ಮಾಣಿಸಾ ಚೆನ್ನಮಲ್ಲಿಕಾರ್ಜುನ
೯೬.
ತನುವನುವಾಯಿತ್ತು, ಮನವನುವಾಯಿತ್ತು
ಪ್ರಾಣವನುವಾಯಿತ್ತು ಮುನಿದು ಬಾರದ ಪರಿಯಿನ್ನೆಂತು ಹೇಳಾ!
ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ
ನಿಂದ ಎನ್ನ ದೇವ ಚೆನ್ನಮಲ್ಲಿಕಾರ್ಜುನನ
ಕಾಣದೊಡೆ ಆನೆಂತು ಬದುಕುವೆನವ್ವ?
೯೭.
ಹಿಡಿವೆನೆಂದೊಡೆ ಹಿಡಿಗೆ ಬಾರನವ್ವ,
ತಡೆವೆನೆಂದೊಡೆ ಮೀರಿ ಹೋದನವ್ವ,
ಒಪ್ಪಚ್ಚಿ ಅಗಲಿದೊಡೆ ಕಳವಳಗೊಂಡೆ,
ಚೆನ್ನಮಲ್ಲಿಕಾರ್ಜುನನ ಕಾಣದೆ
ಆನಾರೆಂದರಿಯೆ ಕೇಳಾ ತಾಯೆ
೯೮.
ಮನ ಬೀಸರವಾದೊಡೆ ಪ್ರಾಣ ಪಲ್ಲಟವಹುದವ್ವ,
ತನುಕರಣಂಗಳು ಮೀಸಲಾಗಿ
ಮನ ಸಮರಸವಾಯಿತ್ತು ನೋಡಾ!
ಅನ್ಯವನರಿಯೆ, ಭಿನ್ನವನರಿಯೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ
ಬಳಿಯವಳಾನು ಕೇಳಾ ತಾಯೇ
೯೯.
ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವ
ಮೋಹಿಸಿ ಮುದ್ದಿಸಿ ಮರುಳಾದೆನವ್ವ
ತೆರೆಯದೆ ತೊರೆಯದೆ ನಲಿದು ನಂಬಿದೆ ನಾನು,
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆನ್ನನೊಲ್ಲದೊಡೆ ಆನೇವೇನವ್ವ
೧೦೦.
ಕಳಿವರಿದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವ
ತಿಳುಹೌ ಬುದ್ಧಿಯ, ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ
೧೦೧.
ಕಂಗಳೊಳಗೆ ತೊಳಗಿ ಬೆಳಗುವ
ದಿವ್ಯರೂಪನ ಕಂಡು ಮೈಮರೆದೆನವ್ವ
ಮಣಿಮುಕುಟದ ಫಣಿ-ಕಂಕಣದ
ನಗೆಮೊಗದ ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವ
ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ
ಆನು ಮದುವಣಿಗಿ ಕೇಳಾ ತಾಯೆ
೧೦೨.
ಮನಮನ ತಾರ್ಕಣೆಯ ಕಂಡು ಅನುಭವಿಸಲು
ನೆನಹೇ ಘನವಹುದಲ್ಲದೆ
ಅದು ಹವಣದಲ್ಲಿ ನಿಲ್ಲುವುದೇ?
ಎಲೆ ಅವ್ವ, ನೀನು ಮರುಳವ್ವೆ!
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಗೊಲಿದು
ಸಲೆ ಮಾರುವೋದೇನು
ನಿನ್ನ ತಾಯಿತನವನೊಲ್ಲೆ ಹೋಗೇ!
೧೦೩.
ಲಿಂಗವನೂ ಪುರಾತನರನೂ
ಅನ್ಯರ ಮನೆಯೊಳಯಿಂಕೆ ಹೋಗಿ ಹೊಗಳುವರು
ತಮ್ಮದೊಂದು ಉದರ ಕಾರಣ
ಲಿಂಗವೂ ಪುರಾತನರೂ ಅಲ್ಲಿಗೆ ಬರಬಲ್ಲರೆ?
ಅನ್ಯವನೆ ಮರೆದು, ನಿಮ್ಮ ನೆನೆವರ ಎನಗೊಮ್ಮೆ ತೋರಾ
ಚೆನ್ನಮಲ್ಲಿಕಾರ್ಜುನಯ್ಯ!
೧೦೪.
ಗುಣ-ದೋಷ ಸಂಪಾದನೆಯ ಮಾಡುವನ್ನಕ್ಕ
ಕಾಮದ ಒಡಲು ಕ್ರೋಧದ ಗೊತ್ತು
ಲೋಭದ ಇಕ್ಕೆ ಮೋಹದ ಮಣ್ದಿರ
ಮದದಾವರಣ ಮತ್ಸರದ ಹೊದಿಕೆ
ಆ ಭಾವವರತಲ್ಲದೆ
ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣ
೧೦೫.
ಕಡೆಗೆ ಮಾಡದ ಭಕ್ತಿ ಧೃಡವಿಲ್ಲದಾಳುತನ
ಮೃಡನೊಲಿಯ ಹೇಳಿದರೆ ಎಂತೊಲಿವನಯ್ಯ?
ಮಾಡಲಾಗದಳಿಮನವ ಮಾಡಿದರೆ ಮನದೊಡೆಯ ಬಲ್ಲನೈಸೆ
ವಿರಳವಿಲ್ಲದ ಮಣಿಯ ಪವಣಿಸಿಹೆನೆಂದೆಡೆ
ದುರುಳ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯ
೧೦೬.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
೧೦೭.
ವೇದಶಾಸ್ತ್ರಾಗಮ ಪುರಾಣಗಳೆಂಬುವ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿ ಭೋ!
ಅವ ಕುಟ್ಟಲೇಕೆ?
ಅತ್ತಲಿತ್ತ ಹರಿವ ಮನದ ಶಿವನರಿಯಬಲ್ಲಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ
೧೦೮.
ಅಮೇಧ್ಯದ ಮಡಕೆ ಮೂತ್ರದ ಕುಡಿಕೆ
ಎಲುವಿನ ತಡಿಕೆ ಕೀವಿನ ಹಡಿಕೆ
ಸುಡಲೀ ದೇಹವ
ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿ ಮರುಳೇ!
೧೦೯.
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಗಳ ಕೊಂದು ನಲಿದಾಡುವ
ತನ್ನ ಮನೆಯಲೊಂದು ಶಿಶು ಸತ್ತರೆ
ಅದಕೆ ಮರುಗುವಂತೆ ಅವಕೇಕೆ ಮರುಗನು?
ಸ್ವಾತ್ಮಾನಮಿತರಾಂಶ್ಚೈವ
ದೃಷ್ಟ್ವಾ ಧೃಷ್ಟ್ವಾ ನ ಭಿದ್ಯತೇ
ಸರ್ವಂ ಚಿಜ್ಜ್ಯೋತಿರೇವೇತಿ
ಯಃ ಪಶ್ಯತಿ ಸ ಪಶ್ಯತಿ
ಎಂದುದಾಗಿ-ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವ-ಹಿಂಸೆಯ ಮಾಡುವ ಮಾದಿಗರನೇನೆಂಬೆನಯ್ಯ
೧೧೦.
ಶೀಲ! ಶೀಲ! ಎಂತೆಬಿರಯ್ಯ?
ಶೀಲದ ನೆಲೆಯ ಒಲ್ಲಡೆ ಹೇಳಿರೋ
ಅರಿಯದಿರ್ದೊಡೆ ಕೇಳಿರೋ
ಕಾಮ [ಒಂದನೇ] ಭವಿ, ಕ್ರೋಧ ಎರಡನೇ ಭವಿ
ಲೋಭ ಮೂರನೇ ಭವಿ, ಮೋಹ ನಾಲ್ಕನೇ ಭವಿ
ಮದ ಐದನೇ ಭವಿ, ಮತ್ಸರ ಆರನೇ ಭವಿ
ಆಮಿಷ ಏಳನೇ ಭವಿ
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬರು
ತಮ್ಮಂತರಂಗದಲ್ಲಿದ್ದ ಲಿಂಗಾಂಗದ ಸುದ್ದಿಯನ್ನರಿಯದೆ
ಅಚ್ಚಪ್ರಸಾದಿ-ನಿಚ್ಚಪ್ರಸಾದಿ-ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ ಉದಕವ ತಂದು
ಲಿಂಗಮಜ್ಜನಕ್ಕೆರೆವ ಹಗಲುಗಳ್ಳರಿಗೆ ಮೆಚ್ಚುವನೆ
ಚೆನ್ನಮಲ್ಲಿಕಾರ್ಜುನ?
೧೧೧.
ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭಕ್ತಂಗೆ ಭವಿಸಂಗವತಿ ಘೋರ ನರಕ
ಶರಣಸತಿ-ಲಿಂಗಪತಿಯಾದ ಬಳಿಕ
ಶರಣಂಗೆ ಸತಿಸಂಗವತಿಘೋರ ನರಕ
ಚೆನ್ನಮಲ್ಲಿಕಾರ್ಜುನ,
ಲಿಂಗೈಕ್ಯಂಗೆ ಪ್ರಾಣಗುಣವಳಿಯದವರ ಸಂಗವೇ ಭಂಗ
೧೧೨.
ಹೂವು ಕಂದಿದಲ್ಲಿ ಪರಿಮಳವನರಸುವರೇ?
[ಎನ್ನ ತಂದೆ] ಕಂದನಲ್ಲಿ ಕುಂದನರಸುವರೇ?
ಎಲೆ ದೇವ, ಸ್ನೇಹವಿದ್ದ ಠಾವಿನೊಳು
ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೇನಯ್ಯ?
ನೀ ಎನ್ನ ತಂದೆ, ಹೂವು ಕಂದಿದಲ್ಲಿ [ಪರಿಮಳವನರಸುವರೇ?]
ಕಂದನಲ್ಲಿ [ಕುಂದನರಸುವರೇ?]
ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೇ?
ಗುರುವೇ ಹೂವು ಕಂದಿದಲ್ಲಿ [ಪರಿಮಳವನರಸುವರೇ?]
[ಕಂದನಲ್ಲಿ ಕುಂದನರಸುವರೇ?]
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಹೊಳೆಯಳಿದ ಬಳಿಕ ಅಂಬಿಗಂಗೇನುಂಟು?
ಹೂವು ಕಂದಿದಲ್ಲಿ [ಪರಿಮಳವನರಸುವರೇ?]
[ಕಂದನಲ್ಲಿ ಕುಂದನರಸುವರೇ?]
೧೧೩.
ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕುಡೆಂತಹುದಯ್ಯ?
ಬೆಟ್ಟದ ತುದಿಯ ಮೆಟ್ಟಿಲೆಂದು ಹಳ್ಳಕೊಳ್ಳಂಗಳಲ್ಲಿ
ಇಳಿದೊಡೆಂತಹುದಯ್ಯ?
ನೀನಿಕ್ಕಿದ ಸಯಿದಾನವನೊಲ್ಲದೆ
ಬೇರೆ ಬಯಸಿದೊಡೆಂತಹುದಯ್ಯ?
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು
ಕಿರುಕುಳಕ್ಕೆ ಸಂದೊಡೆಂತಹುದಯ್ಯ?
೧೧೪.
ಒಳಗಣ ಗಂಡನವ್ವಾ, ಹೊರಗಣ ಮಿಂಡನವ್ವಾ!
ಎರಡನೂ ನಡೆಸಲು [ಬಾರದವ್ವ]!
ಚೆನ್ನಮಲ್ಲಿಕಾರ್ಜುನಯ್ಯ,
ಬಿಲ್ಲು [ಬೆಳವಲಕಾಯನೊಂದಾಗಿ] ಹಿಡಿಯಲು ಬಾರದಯ್ಯ!!
೧೧೫.
ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ!
ಚಿನ್ನಕ್ಕರಿಸಿನವ ಕೊಳ್ಳಿರವ್ವ!
ನಮ್ಮ ನಲ್ಲನ ಮೈಯ್ಯ ಹತ್ತುವ ಅರಿಸಿನವ ಕೊಳ್ಳಿರವ್ವ
ಒಳಗುಂದದರಿಸಿನವ ಮಿಂದು
ಚೆನ್ನಮಲ್ಲಿಕಾರ್ಜುನನಪ್ಪಿರವ್ವ!
೧೧೬.
ಕಾಯ ಕರ್ರನೆ ಕುಂದಿದರೇನಯ್ಯ?
ಕಾಯ ಮಿರ್ರನೆ ಮಿಂಚಿದರೇನಯ್ಯ?
ಅಂತರಂಗ ಶುದ್ಧವಾದ ಬಳಿಕ
ಚೆನ್ನಮಲ್ಲಿಕಾರ್ಜುನನನೊಲಿದ ಕಾಯ
ಎಂತಾದಡೆಮಗೇನಯ್ಯ?
೧೧೭.
ಹಣ ಮೆದ್ದ ಬಳಿಕ, ಆ ಮರನ ಆರು ತರಿದರೇನು?
ಹೆಣ ಬಿಟ್ಟ ಬಳಿಕ, ಆಕೆಯನಾರು ಕೂಡಿಕೊಂಡರೇನು?
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು?
ಚೆನ್ನಮಲ್ಲಿಕಾರ್ಜುನನ ಅರಿದ ಬಳಿಕ
ಆ ಕಾಯವ ನಾಯಿ ತಿಂದರೇನು ನೀರ ಕುಡಿದರೇನು?
೧೧೮.
ಹಗಲು ನಾಲ್ಕು ಜಾವ ಆಶನಕ್ಕೆ ಕುದಿವರು
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು
ಅಸಗ ನೀರೊಳಗಿರ್ದುಬಾಯಾರಿ ಸತ್ತಂತೆ
ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನ
೧೧೯.
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗಲೆನ್ನದಿರೊ ಚೆನ್ನಮಲ್ಲಿಕಾರ್ಜುನ
೧೨೦.
ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯ?
ಕ್ಷಮೆ-ದಯೆ-ಶಾಂತಿ-ಸೈರಣೆಯಿರಲು ಸಮಾಧಿಯ ಹಂಗೇಕಯ್ಯ?
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ,
ಚೆನ್ನಮಲ್ಲಿಕಾರ್ಜುನ?
೧೨೧.
ಹಸಿವೇ ನೀನು ನಿಲ್ಲು, ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು
ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು
ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು
ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು
ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ
ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ
೧೨೨.
ಹೆದರದಿರು ಮನವೇ, ಬೆದರದಿರು ಮನವೇ
ನಿಜವನರಿತು ನಿಶ್ಚಿಂತವಾಗಿರು
ಫಲವಾದ ಮರನ ಇಡುವುದೊಂದು ಕೋಟಿ
ಎಲವದ ಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬೈವರೊಂದು ಕೋಟಿ,
ಭಕ್ತಿಯಿಲ್ಲದವ ಬೈವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ ಗತಿಸೋಪಾನ, ಚೆನ್ನಮಲ್ಲಿಕಾರ್ಜುನ
೧೨೩.
ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದರೆ
ಕನ್ನ ಸವೆಯಲಿಲ್ಲ, ಕಳವು ದೊರೆಯಲಿಲ್ಲ!
ಬೊಬ್ಬುಲಿಯನೇರಿದ ಮರ್ಕಟನಂತೆ
ಹಣ್ಣ ಮೆಲಲಿಲ್ಲ, ಕುಳ್ಳಿರೆ ಠಾವಿಲ್ಲ!
ನಾನು ಸರ್ವಸಂಗಪರಿತ್ಯಾಗ ಮಾಡಿದವಳಲ್ಲ
ನಿಮ್ಮ ಕೂಡಿ ಕುಲವಳಿದವಳಲ್ಲ ಚೆನ್ನಮಲ್ಲಿಕಾರ್ಜುನ
೧೨೪.
ಕೈಸಿರಿಯ ದಂಡವ ಕೊಳಬಹುದಲ್ಲದೆ
ಮೈಸಿರಿಯ ದಂಡವ ಕೊಳಲುಂಟೆ?
ಉಟ್ಟಂತ ಉಡಿಗೆತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ
ಮುಚ್ಚಿ ಮುಸುಕಿರ್ದ ನಿರ್ವಾಣವ ಸೆಳೆದುಲೊಳಬಹುದೇ?
ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡಿಗೆತೊಡಿಗೆಯ ಹಂಗೇಕೊ ಮರುಳೇ?
೧೨೫.
ಮರವಿದ್ದು ಫಲವೇನು? ನೆಳಲಿಲ್ಲದನ್ನಕ!
ಧನವಿದ್ದು ಫಲವೇನು ದಯವಿಲ್ಲದನ್ನಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ?
ಚೆನ್ನಮಲ್ಲಿಕಾರ್ಜುನ
೧೨೬.
ಕಟ್ಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ?
ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ?
ತೊಟ್ಟು ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ?
ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದರೆ
ನಿಷ್ಠೆಯುಳ್ಳ ಶರಣರು ಮರಳಿ ಮರ್ತ್ಯಕ್ಕೆ ಬಪ್ಪರೆ?
ಚೆನ್ನಮಲ್ಲಿಕಾರ್ಜುನ
೧೨೭.
ಪಂಚೇಂದ್ರಿಯಂಗಳೊಳಗೆ
ಒಂದಕ್ಕೆ ಪ್ರಿಯನಾದರೆ ಸಾಲದೆ?
ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದರೆ ಸಾಲದೆ?
ರತ್ನದ ಸಂಕೋಲೆಯಾದಡೇನು ಬಂಧನ ಬಿಡುವುದೆ?
ಚೆನ್ನಮಲ್ಲಿಕಾರ್ಜುನ
೧೨೮.
ಮರೆಯ ನೂಲು ಸರಿಯೆ
ನಾಚುವುದು ನೋಡಾ ಗಂಡು ಹೆಣ್ಣೆಂಬ ಜಾತಿ
ಪ್ರಾಣದೊಡೆಯ ನೀ ಜಗದಲ್ಲಿ
ತೆರಹಿಲ್ಲದೊಪ್ಪುಡೆ ನಾಚಲೆಡೆಯುಂಟೆ ಹೇಳಾ!
ಚೆನ್ನಮಲ್ಲಿಕಾರ್ಜುನಯ್ಯ ಜಗವೆಲ್ಲ ಕಣ್ಣಾಗಿ ನೋಡುತ್ತಿರೆ
ಮುಚ್ಚಿ ಮರೆಯಿಸುವೆನೆಂತು ಹೇಳಾ ಅಯ್ಯ
೧೨೯.
ತನುವಿಡಿದು ದಾಸೋಹವ ಮಾಡಿ, ಗುರುಪ್ರಸಾದಿಯಾದ ಬಸವಣ್ಣ
ಮನವಿಡಿದು ದಾಸೋಹವ ಮಾಡಿ ಲಿಂಗಪ್ರಸಾದಿಯಾದ ಬಸವಣ್ಣ
ಧನವಿಡಿದು ದಾಸೋಹವ ಮಾಡಿ, ಜಂಗಮಪ್ರಸಾದಿಯಾದ ಬಸವಣ್ಣ
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯ
೧೩೦.
ಆತುರದ ಧ್ಯಾನದಿಂದ ಧಾವತಿಗೊಂಡೆ
ಜ್ಯೋತಿರ್ಲಿಂಗವ ಕಾಣಿಸಬಾರದು, ಮಾತಿನ ಮಾತಿಗೆ ಸಿಲುಕುವನಲ್ಲ
ಧಾತುಗೆಡಿಸಿ ಮನವ ನೋಡಿ ಕಾಡುವನು
ಆತುಮನಂತರ-ಪರವನರಿದಡೆ ಆತನೆ ಶಿವಯೋಗಿ
ಆತನ ಪಾದಕೆ ಶರಣು ಎಂಬೆನಯ್ಯ ಚೆನ್ನಮಲ್ಲಿಕಾರ್ಜುನ
೧೩೧.
ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ
ಷಡುವರ್ಣಂಗಳೆಲ್ಲ ಹಗಲಿನ [ಪೂಜೆ]
ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ,
ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ
ಇರುಳಿನ ಪೂಜೆ;
ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
೧೩೨.
ಸಂಸಾರವ ನಿರ್ವಾಣವ ಮಾಡಿ,
ಮನವ ವಜ್ರತುರಗವ ಮಾಡಿ,
ಜೀವನ ರಾವುತನ ಮಾಡಿ,
ಮೇಲಕ್ಕುಪ್ಪುವಡಿಸಲೀಯದೆ,
ಮುಂದಕ್ಕೆ ಮುಗ್ಗರಿಸಲೀಯದೆ, ಈ ವಾರುವನ ದಳದ ಮೇಲೆ
ಅಟ್ಟಿ ಮುಟ್ಟಿ ಹಾರಿ ಬರಸೆಳೆದು ನಿಲಿಸಲರಿಯದೆ
ಪವನಬಣ್ಣದ ಕೇಸರಿಯ ತೊತ್ತಳದುಳಿವುತ್ತಿಪ್ಪುದಿದಾರಯ್ಯ?
ಅಂಗಡಿಯ ರಾಜಬೀದಿಯೋಳಗೆ ರತ್ನಶೆಟ್ಟಿಯ ಮಾಣಿಕ್ಯ ಬಿದ್ದರೆ
ಥಳಥಳನೆ ಹೊಳೆವ ಪ್ರಜ್ವಳಿತವ ಕಾಣದೆ
ಹಳಹಳನೆ ಹಳಚುತ್ತಿಪ್ಪುದಿದಾರಯ್ಯ?
ಹೃದಯಸ್ಥಾನದ ಧೂಪಗುಂಡಿಗೆಯಲ್ಲಿ
ಆಧಾರಸ್ಥಾನದಿಂಗಳ ಮತ್ತೊಂದು ಬಂದು,
ಪರಿಣಾಮವೆಂಬ ಧೂಪವನಿಕ್ಕಿ
ವಾಯುವಿನ ಸಂಬಂಧವರಿಯದೆ ವಾಯುವ ಮೇಲಕ್ಕೆತ್ತಲು
ಗಗನಕ್ಕೆ ತಾಗುವುದು,
ತಾಗಲಿಕೆ ಅಲ್ಲಿರ್ದ ಅಮೃತದ ಕೊಡನೊಡೆದು
ಕೆಳಗಣ ಹೃದಯಸ್ಥಾನದ ಮೇಲೆ ಬೀಳೆ,
ಮರೆಸಿದ ಮಾಣಿಕ್ಯವ ಕಾಣಬಹುದು,
ಇದನಾರು ಬಲ್ಲರೆಂದರೆ
ಹಮ್ಮಳಿದು ಇಹಪರವನರಿದು
ಪಂಚೇಂದ್ರಿಯದ ಇಂಗಿತವನರಿದ ಶರಣ ಬಸವಣ್ಣನಲ್ಲದೆ
ಈ ಪ್ರಾಣಘಾತವ ಮಾಡುವರೆತ್ತ ಬಲ್ಲರಯ್ಯ, ಚೆನ್ನಮಲ್ಲಿಕಾರ್ಜುನ
೧೩೩.
ಲಿಂಗಕ್ಕೆ ಶರಣೆಂದು ಪೂಜಿಸಬಹುದಲ್ಲದೆ
ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ
ಆಡಬಹುದು ಪಾಡಬಹುದಲ್ಲದೆ ನುಡಿದಂತೆ ನಡೆಯಲು ಬಾರದೆಲೆ ತಂದೆ
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ
೧೩೪.
ಹಂದಿಯು ಮದಕರಿಯು ಒಂದೆ ದಾರಿಯಲ್ಲಿ
ಸಂಧಿಸಿದರೆ ಹಂದಿಗಂಜಿ ಮದಕರಿ ಕೆಲಸಕ್ಕೆ ಸಾರಿದರೆ,
ಹೀಹಂದಿಯದು ಕೇಸರಿಯಪ್ಪುದೇ
ಚೆನ್ನಮಲ್ಲಿಕಾರ್ಜುನ?
೧೩೫.
ಕಳನೇರಿ ಇಳಿವುದು ವೀರಂಗೆ ಮತವಲ್ಲ
ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ
ಮನದೊಡೆಯ ಮನವನಿಂಬುಗೊಂಬನಯ್ಯ
ಏರಲಾಗದು ಶ್ರೀಪರ್ವತವ, ಏರಿ ಇಳಿದೊಡೆ ವ್ರತಕ್ಕೆ ಭಂಗ
ಕಳನೇರಿ ಕೈಮರೆದಡೆ ಮಾರಂಕ
ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು
೧೩೬.
ಬಯಲು ಲಿಂಗವೆಂಬೆನೆ ? ನಡೆದಲ್ಲಿಯೇ ಹೋಯಿತು
ಬೆಟ್ಟ ಲಿಂಗವೆಂಬೆನೆ ? ಮೆಟ್ಟಿನಡೆದಲ್ಲಿಯೇ ಹೋಯಿತು
ತರುಮರಾದಿಗಳು ಲಿಂಗವೆಂಬೆನೆ ? ತರಿದಲ್ಲಿಯೇ ಹೋಯಿತು
ಲಿಂಗಜಂಗಮದ ಪಾದವೇ ಗತಿಯೆಂದು ನಂಬಿದ
ಸಂಗನ ಬಸವಣ್ಣನ ಮಾತ ಕೇಳದೆ
ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
೧೩೭.
ಅರಿವು ಸಾಧ್ಯವಾಯಿತ್ತೆಂದು
ಗುರು-ಲಿಂಗ-ಜಂಗಮವ ಬಿಡಬಹುದೇ?
ಸಂದುಸಂಶಯವಳಿದಖಂಡಜ್ಞಾನವಾಯಿತ್ತೆಂದು
ಪರಧನ-ಪರಸ್ತ್ರೀಗಳುಪಬಹುದೇ?
ಯತ್ರ ಜೀವಸ್ತತ್ರ ಶಿವಃ ಎಂಬ ಅಭಿನ್ನಜ್ಞಾನವಾಯಿತ್ತೆಂದು
ಶುನಕು-ಸೂಕರ-ಕುಕ್ಕುಟ-ಮಾರ್ಜಾಲಂಗಳ ಕೂಡಿ ಭುಂಜಿಸಬಹುದೇ?
ಭಾವದಲ್ಲಿ ತನ್ನ ನಿಜ ನೆಲೆಯರಿಯನರಿವುತ್ತಿಹುದು
ಸುಜ್ಞಾನ-ಸತ್ಕ್ರಿಯಾ-ಸುನೀತಿ-ಸುಮಾರ್ಗದಲ್ಲಿ ವರ್ತಿಸುವುದು
ಹೀಂಗಲ್ಲದೆ ಜ್ಞಾನವಾಯಿತ್ತೆಂದು
ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆದೊಡೆ
ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು?
೧೩೮.
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ
ಆಪ್ಯಾಯನ ಬಿಡದು
ಕಾಯವರ್ಪಿತವೆಂಬ ಹುಸಿಯ ನೋಡಾ
ನಾನು ಭಕ್ತನೆಂಬ ನಾಚಿಕೆಯ ನೋಡಾ
ನಾನು ಯುಕ್ತನೆಂಬ ಹೇಸಿಕೆಯ ನೋಡಾ
ಓಗರವಿನ್ನಾಗದು ಪ್ರಸಾದ ಮುನ್ನಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ, ಉಭಯವಡಗದನ್ನಕ
೧೩೯.
ಅಕ್ಕಿಯಿಲ್ಲದ ತುಷಕ್ಕೆ ಅಗ್ಘವಣಿಯನೆರೆದರೆ
ಅದೆಂದಿಗೆ ಬೆಳೆದು ಫಲವಪ್ಪುದಯ್ಯ?
ಅರಿವಿಲ್ಲದವರಿಗೆ ಆಚಾರವಿದ್ದರೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯ?
ಹಾರದ ಪರಿಮಳವು ಸ್ಥಿರವಾಗಬಲ್ಲುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನರಿಯದವರಿಗೆ
ಆಚಾರವಿಲ್ಲ ಕಾಣಿರಯ್ಯ
೧೪೦.
ಸಟೆ-ದಿಟವೆಂಬುವೆರಡುವಿಡಿದು
ನಡೆವುದೀ ಲೋಕವೆಲ್ಲವು
ಸಟೆ-ದಿಟವೆಂಬುವೆರಡುವಿಡಿದು
ನಡೆವನೇ ಲೋಕದೊಡನೆ ಶರಣನು?
ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದಡೆ
ಆತನು ತ್ರಿವಿಧಕ್ಕೆ ದ್ರೋಹಿ, ಅಘೋರನರಕಿ,
ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ
ಹುಸಿಯೆಂಬುದೇ ಹೊಲೆ
ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯ?
ಹುಸಿಯನಾಡಿ ಲಿಂಗವ ಪೂಜಿಸಿದಡೆ
ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚೆನ್ನಮಲ್ಲಿಕಾರ್ಜುನ
೧೪೧.
ಐದು ಪರಿಯ ಬಣ್ಣವ ತಂದುಕೊಟ್ಟರೆ
ನಾಲ್ಕು ಮೊಲೆಯ ಹಸುವಾಯಿತ್ತು
ಹಸುವಿನ ಬಸರಲ್ಲಿ ಕರು ಹುಟ್ಟಿತ್ತು
ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡರೆ
ಕರ ರುಚಿಯಾಗಿತ್ತು
ಮಧುರ ತಲೆಗೇರಿ, ಅರ್ಥ ನೀಗಾಡಿ
ಆ ಕರುವಿನ ಬೆಂಬಳಿವಿಡಿದು ಭವ ಹರಿಯಿತ್ತು
ಚೆನ್ನಮಲ್ಲಿಕಾರ್ಜುನ
೧೪೨.
ರವಿಯ ಕಾಳಗವ ಗೆಲಿದು
ಒಂಬತ್ತು ಬಾಗಿಲ ಮುರಿದು
ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ
ಅಲ್ಲ-ಅಹುದು, ಉಂಟು-ಇಲ್ಲ, ಬೇಕು-ಬೇಡ ಎಂಬ
ಆರರತಾತನೇ ಗುರು
ಗುರು ತಾನೇ ಬೇರಿಲ್ಲ
ದ್ವಯಕಮಲದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣ ಸಂಗನ ಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
೧೪೩.
ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,
ಬಾರದ ಭವಂಗಳಲಿ ಬರಿಸಿ,
ಉಣ್ಣದ ಊಟವನುಣಿಸಿ ವಿಧಿಯೊಳಗಾಗಿಸುವ ಕೇಳಿರಣ್ಣ!
ತನ್ನವರೆಂದರೆ ಮನ್ನಿಸುವನೇ ಶಿವನು?
ಹತ್ತಿರಿದ್ದ ಭೃಂಗಿಯ ಚರ್ಮವ ಕಿತ್ತೀಡಾಡಿಸಿದನು
ಮತ್ತೆ ಕೆಲವರ ಬಲ್ಲನೇ?
ಇದನರಿದು ಬಿಡದಿರು ಚೆನ್ನಮಲ್ಲಿಕಾರ್ಜುನನಿಂತಹ ಸಿತಗನವ್ವ!
೧೪೪.
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ?!
ಒಬ್ಬ ಭಾವದರೂಪ, ಒಬ್ಬ ಪ್ರಾಣದರೂಪ,
ಒಬ್ಬನೈಮುಖನಾಗಿ ವಿಶ್ವಕ್ಕೆ ಕಾಯರೂಪಾದ
ಇಬ್ಬರು ಉತ್ಪತ್ತಿಸ್ಥಿತಿಗೆ ಕಾರಣರಾದರು
ಐಮುಗನರಮನೆ ಸುಖವಿಲ್ಲೆಂದರಿದವನಾಗಿ
ಇನ್ನು ಕೈಲಾಸವನು ಹೊಗೆ ಹೊಗೆ!
ಮರ್ತ್ಯಕ್ಕೆ ಅಡಿಯಿಡೆನು
ಚೆನ್ನಮಲ್ಲಿಕಾರ್ಜುನದೇವ ನೀನೆ ಸಾಕ್ಷಿ!
೧೪೫.
ಸುಖದ ಸುಖಿಗಳ ಸಂಭಾಷಣೆಯಿಂದ
ದುಃಖಕ್ಕೆ ವಿಶ್ರಾಮವಾಯಿತ್ತು
ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ
ನೆನಹಕ್ಕೆ ವಿಶ್ರಾಮವಾಯಿತ್ತು
ಬೆಚ್ಚು ಬೆರೆಸಲೊಡನೆ ಮೆಚ್ಚು ಒಳಕೊಂಡಿತಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗದಿಂದ
೧೪೬.
ಅಂಗೈಯೊಳಗಣ ಲಿಂಗವ ಪೂಜಿಸುತ್ತ
ಮಂಗಳಾರತಿಗಳನು ತೊಳಗಿ ಬೆಳಗುತಲಿರ್ದೆ ನೋಡಯ್ಯ
ಕಂಗಳ ನೋಟ ಕರುವಿಟ್ಟ ಭಾವ,
ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನಲಗದ ಪೂಜೆ ಅನುವಾಯಿತ್ತೆನಗೆ
೧೪೭.
ಪುರುಷರ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಲೋಕವೆಂಬ ಮಾಯೆಗೆ
ಶರಣಚಾರಿತ್ರ ಮರುಳಾಗಿ ತೋರುವುದು ನೋಡಾ!
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ
೧೪೮.
ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
ಬೆಳೆದನು ಅಸಂಖ್ಯಾತರ ಕರುಣದಲ್ಲಿ
ಸುಜ್ಞಾನವೆಂಬ ತುಪ್ಪ,
ಪರಮಾರ್ಥವೆಂಬ ಸಕ್ಕರೆಯನಿಕ್ಕಿದಿರಿ ನೋಡಾ!
ಇಂತಪ್ಪ ತ್ರಿವಿಧಾಮೃತವ ದಣಿಯಲೆರಡು ಸಲಹಿದಿರಿ
ಎನ್ನ ವಿವಾಹವ ಮಾಡಿದಿರಿ
ಸಯವಪ್ಪ ಗಂಡಂಗೆ ಕೊಟ್ಟಿರಿ
ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರು ನೆರೆದು ಬಂದಿರಿ
ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ
ಚೆನ್ನಮಲ್ಲಿಕಾರ್ಜುನನ ಕೈವಿಡಿದು,
ನಿಮ್ಮ ಮಂಡೆಗೆ ಹೂವ ತಹೆವಲ್ಲದೆ ಹುಲ್ಲ ತಾರೆನು!
ಅವಥರಿಸಿ ನಿಮ್ಮಡಿಗಳೆಲ್ಲರು
ಮರಳಿ ಬಿಜಯಂಗೈವುದು ಶರಣು ಶರಣಾರ್ಥಿ
೧೪೯.
ಅಯ್ಯ, ನಿಮ್ಮ ಮಹಂತರ ಕೂಡಿದ
ಸುಖವನುಪಮೆಗೆ ತರಬಾರದಯ್ಯ
ಅಯ್ಯ, ನಿಮ್ಮ ಮಹಂತರ ಕೂಡಿಯಗಲುವ ಧಾವತಿಯಿಂದ
ಸಾವುದೇ ಕರ ಲೇಸು ಕಂಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ನಿಜವನರುಹಿದ ಮಹಿಮರನಗಲಿ ನಿಲಲಾರೆನಯ್ಯ
೧೫೦.
ಅಯ್ಯ, ನಿಮ್ಮ ಸದ್ಭಕ್ತರ ಕಂಡೆನಾಗಿ
ಎನ್ನ ಕಂಗಳ ಪಟಲ ಹರಿಯಿತ್ತು
ಅಯ್ಯ ನಿಮ್ಮ ಸಜ್ಜನ ಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತು
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣ ಸಂಗನಬಸವಣ್ಣನ ಕಂಡು
ಮಿಗೆ ಮಿಗೆ ನಮೋ ನಮೋ ಎನುತಿರ್ದೆನು
೧೫೧.
ಎನ್ನಂಗದಲಿ ಆಚಾರವ ತೋರಿದನಯ್ಯ ಬಸವಣ್ಣನು
[ಆ] ಆಚಾರವೇ ಲಿಂಗವೆಂದರುಹಿದನಯ್ಯ ಬಸವಣ್ಣನು
ಎನ್ನ ಪ್ರಾಣದಲ್ಲಿ ಅರುಹ ತೋರಿದನಯ್ಯ ಬಸವಣ್ಣನು
ಆ ಅರುಹೇ ಜಂಗಮವೆಂದರುಹಿದನಯ್ಯ ಬಸವಣ್ನನು
[ಚೆನ್ನಮಲ್ಲಿಕಾರ್ಜುನ] [ಎನ್ನ] ಹೆತ್ತ ತಂದೆ ಸಂಗಬಸವಣ್ನನು
ಎನಗೀ ಕ್ರಮವನರುಹಿದನಯ್ಯ
೧೫೨.
ಗಂಗೆಯೊಡನಾಡಿದ ಗಟ್ಟ-ಬೆಟ್ಟಂಗಳು
ಕೆಟ್ಟ ಕೇಡ ನೋಡಯ್ಯ
ಅಗ್ನಿಯೊಡನಾಡಿದ ಕಾಷ್ಟಂಗಳು ಕೆಟ್ಟ ಕೇಡ ನೋಡಯ್ಯ
ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಯ್ಯ
ಇಂತೀ ಪರಶಿವಮೂರ್ತಿ ಹರನೇ
ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿಭವಂಗಳು
ಕೆಟ್ಟ ಕೇಡ ನೋಡಾ ಚೆನ್ನಮಲ್ಲಿಕಾರ್ಜುನ
೧೫೩.
ಮರ್ತ್ಯಲೋಕದ ಭಕ್ತರ ಮನವ ಬೆಳಗಲೆಂದು
ಇಳಿತಂದನಯ್ಯ ಶಿವನು
ಕತ್ತಲೆಯ ಪಾತಾಳವ ರವಿ ಹೊಕ್ಕಂತಾಯಿತಯ್ಯ
ಚಿತ್ತದ ಪ್ರವೃತ್ತಿಯ ಹಿಂಗಿಸಿ
ಮುಕ್ತಿಪಥವ ತೋರಿದನಲ್ಲಾ ಅಸಂಖ್ಯಾತರುಗಳಿಗೆ
ತನುವೆಲ್ಲ ಸ್ವಯಂಲಿಂಗ, ಮನವೆಲ್ಲ ಚರಲಿಂಗ
ಭಾವವೆಲ್ಲ ಮಹಾಘನದ ಬೆಳಗು
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣಸಮ್ಯಜ್ಞಾನಿ ಚೆನ್ನಬಸವಣ್ಣನ
ಶ್ರೀಪಾದಕ್ಕೆ ಶರಣೆಂದು
ಎನ್ನ ಭಾವಂ ನಾಸ್ತಿಯಾಯಿತ್ತಯ್ಯ ಪ್ರಭುವೇ
೧೫೪.
ಕಲ್ಯಾಣವೆಂಬುದಿನ್ನಾರಿಗೂ ಹೊಗಬಾರದು
ಆಶೆ-ಆಮಿಷವನಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು
ಒಳಗು-ಹೊರಗೂ ಶುದ್ಧವಾದಂಗಲ್ಲದೆ ಕಲ್ಯಾಣವ ಹೊಗಬಾರದು
ನಾನೆಂಬುದು ಹರಿದವಂಗಲ್ಲದೆ ಕಲ್ಯಾಣವ ಹೊಗಬಾರದು
ಒಳಗು ತಿಳಿದು ಚೆನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆಯಳಿದೆನಾಗಿ ಕಲ್ಯಾಣವ ಕಂಡು
ನಮೋ ನಮೋ ಎನುತಿರ್ದೆನು
೧೫೫.
ಅಯ್ಯಾ ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಮನ ಶುದ್ಧವಾಯಿತ್ತು!
ಅಯ್ಯಾ ನಿಮ್ಮ ಅನುಭಾವಿಗಳು ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನ, ನಿಮಗಾನು ತೊಡಿಗೆಯಾದೆನು
೧೫೬.
ಅರಸಿ ತೊಳಲಿದರಿಲ್ಲ ಹರಸಿ ಬಳಲಿದರಿಲ್ಲ
ಬಯಸಿ ಹೊಕ್ಕರಿಲ್ಲ ತಪಸ್ಸು ಮಾಡಿದರಿಲ್ಲ
ಅದು ತನ್ನ ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು
ಶಿವನೊಲಿದಲ್ಲದೇ ಕೈಗೂಡದು
ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ
ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು
೧೫೭.
ಹಾವಿನ ಬಾಯ ಹಲ್ಲ ಕಳೆದು
ಹಾವನಾಡಿಸಬಲ್ಲೆಡೆ
ಹಾವಿನ ಸಂಗವೆ ಲೇಸು ಕಂಡಯ್ಯ!
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೇ ಲೇಸು ಕಂಡಯ್ಯ!
ತಾಯಿ ರಕ್ಕಸಿಯಾದಂತೆ ಕಾಯವಿಕಾರವು
ಚೆನ್ನಮಲ್ಲಿಕಾರ್ಜುನಯ್ಯ,
ನೀನೊಲಿದವರು ಕಾಯಗೊಂಡಿದ್ದರೆನಬೇಡ
೧೫೮.
ಅಂಗವಿಕಾರಸಂಗವ ಮರೆದು
ಲಿಂಗವನೊಡಗೂಡುತಿಪ್ಪರ ತೋರಾ ಎನಗೆ!
ಕಾಯವಿಕಾರ ಕತ್ತಲೆಯಳಿದು
ಭಕ್ತಿಯೇ ಪ್ರಾಣವಾಗಿಪ್ಪರ ತೋರಾ ಎನಗೆ!
ತ್ರಿಕರಣಶುದ್ಧವಾಗಿ ನಿಮ್ಮ ನೆರೆನಂಬಿದ ಸದ್ಭಕ್ತರ ತೋರಾ ಎನಗೆ
ಚೆನ್ನಮಲ್ಲಿಕಾರ್ಜುನ
೧೫೯.
ತುಂಬಿದುದು ತುಳುಕದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಒಳಿದುದು ಓಸರಿಸದು ನೋಡಾ
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ, ನೀನೊಲಿದ ಶರಣಂಗೆ
ನಿಸ್ಸೀಮ ಸುಖ ನೋಡಯ್ಯ!
೧೬೦.
ನೋಡಿ ನುಡಿಸಿ ಮಾತಾಡಿಸಿದಡೊಂದು ಸುಖ
ಏನ ಮಾಡದಯ್ಯ ನಿಮ್ಮ ಶರಣರ ಅನುಭಾವ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರ ಸದ್ಗೋಷ್ಠಿ ಏನ ಮಾಡಯ್ಯ?
೧೬೧.
ಆಯತ-ಸ್ವಾಯತ-ಅನುಭಾವವ ನಾನೆತ್ತ ಬಲ್ಲೆನಯ್ಯಾ
ಗುರು-ಲಿಂಗ-ಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳನಿತ್ತ
ನಿನ್ನ ಭಕ್ತರ ಭೃತ್ಯರಿಗಾಳಾಗಿಪ್ಪೆನಯ್ಯಾ
ನಿಮ್ಮ ಶರಣರ ಸಂಗವನಲ್ಲದೆ ಬೇರೊಂದ ಬಯಸೆನಯ್ಯ
ಚೆನ್ನಮಲ್ಲಿಕಾರ್ಜುನ
೧೬೨.
ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ
[ಕೂರುಮ ದಿಗುದಂತಿ] ದಿಗುವಳಯವ ನುಂಗಿ
ನಿಜ ಶೂನ್ಯ ತಾನಾದ ಬಳಿಕ
ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬರಬಹುದೇ?
ಕಂಗಳ ನೋಟದಲ್ಲಿ
ಮನ ಸೊಗಸಿನಲ್ಲಿ
ಅನಂಗನ ಧಾಳಿಯನಗಲಿದೆವಣ್ಣ
ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೊಳಗಹುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನಲ್ಲದ
ಪರಪುರುಷರು ನಮಗಾಗದಣ್ಣ!
೧೬೩.
ನಮಗೆ ನಮ್ಮ ಲಿಂಗದ ಚಿಂತೆ
ನಮಗೆ ನಮ್ಮ ಭಕ್ತರ ಚಿಂತೆ, ಮನಗೆ ನಮ್ಮ ಆದ್ಯರ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣ?
೧೬೪.
ನಿಮ್ಮ ನಿಲುವಿಂಗೆ ನೀವು ನಾಚಬೇಡವೆ?
ಅನ್ಯರ ಕೈಲಿ ಅಲ್ಲ ಎನಿಸಿಕೊಂಬ ನಡೆ-ನುಡಿಯೇಕೆ?
ಅಲ್ಲ ಎನಿಸಿಕೊಂಬುದರಿಂದ, ಆ ಕ್ಷಣವೇ ಸಾವುದು ಲೇಸು ಕಾಣಾ
ಚೆನ್ನಮಲ್ಲಿಕಾರ್ಜುನ
೧೬೫.
ಶಿವಭಕ್ತರ ರೋಮ ನೊಂದರೆ
ಒಡನೆ ಶಿವನು ನೋವ ನೋಡಾ
ಶಿವಭಕ್ತರು ಪರಿಣಾಮಿಸಿದರೆ, ಒಡನೆ ಶಿವ ಪರಿಣಆಮಿಸುವ ನೋಡಾ !
ಭಕ್ತದೇಹಿಕ ದೇವ ಎಂಬ ಶ್ರುತಿ ಹೊಗಳುವ ಕಾರಣ
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು
ತಾಯಿ ನೊಂದರೆ ಒಡಲ ಶಿಶು ನೋವ ತೆರನಂತೆ
ಚೆನ್ನಮಲ್ಲಿಕಾರ್ಜುನ-ತನ್ನ ಭಕ್ತರು ನೊಂದರೆ
ಒಡನೆ ತಾ ನೋವನು
೧೬೬.
ನೋಡುವ ಕಂಗಳಿಗೆ ರೂಪಿಂಬಾಗಿರಲು
ನೀವು ಮನ ನಾಚದೆ ಬಂದಿರಣ್ಣ!
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣ!
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣ!
ಮೂತ್ರವು ಬಿಂದು ಒಸರುವ ನಾಳವೆಂದು
ಕಂಗಾಣದೆ ಮುಂದುಗೆಟ್ಟು ಬಂದಿರಣ್ಣ!
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ
ಹೋಗಲಾಡಿಸಿಕೊಂಡು
ಇದಾವ ಕಾರಣವೆಂದರಿಯದೆ, ನೀವು ನರಹೇತುವೆಂದರಿದೂ
ಮನ ಹೇಸದೆ ಬಂದಿರಣ್ಣ!
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು
ಛೀ ಹೋಗಾ ಮರುಳೇ!
೧೬೭.
ಲೇಸು ಹಾಸು, ನೋಟವಾಭರಣ,
ಆಲಿಂಗನ ವಸ್ತ್ರ, ಚುಂಬನವಾರೋಗಣೆ,
ಲಲ್ಲೆವಾತು ತಾಂಬೂಲ, ಲವಲವಿಕೆಯೇ ಅನುಲೇಪನವೆನಗೆ
ಚೆನ್ನಮಲ್ಲಿಕಾರ್ಜುನನ ಕೂಟ ಪರಮಸುಖವವ್ವ!
೧೬೮.
ಆಡುವುದು, ಪಾಡುವುದು; ಕೇಳುವುದು, ಹೇಳುವುದು
ನಗೆ-ನುಡಿ ಸರಸ ಸಮ್ಮೇಳನವಾಗಿಪ್ಪುದು ಶರಣರೊಡನೆ
ಚೆನ್ನಮಲ್ಲಿಕಾರ್ಜುನ ಕೊಟ್ಟ ಆಯುಷ್ಯ ಉಳ್ಳನ್ನಕ್ಕರ
ಲಿಂಗಸುಖಿಗಳ ಸಂಗದಲ್ಲಿ ದಿನಂಗಳ ಕಳೆವುದು!
೧೬೯.
ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ!
ಜಂಗಮವೆನ್ನ ನಿಧಿನಿಧಾನ!
ಜಂಗಮವೆನ್ನ ಹರುಷದ ಮೇರೆ!
ಚೆನ್ನಮಲ್ಲಿಕಾರ್ಜುನ,
ಜಂಗಮದ ತಿಂಥಿಣಿಯಲ್ಲಿ ಓಲಾಡುವೆ
೧೭೦.
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ
ಕರ್ಪುರಗಿರಿಯ ಉರಿಯು ಕೊಂಡಂತೆ
೧೭೧.
ಮರ ಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತ್ತು
ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ
ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು
ಇಂತಪ್ಪ ಮಹಾನುಭಾವರ ಅನುಭಾವವ ತೋರಿ
ಎನ್ನನುಳುಹಿಕೊಳ್ಳಾ, ಚೆನ್ನ ಮಲ್ಲಿಕಾರ್ಜುನ
೧೭೨.
ಸಂಗದಿಂದಲ್ಲದೇ ಅಗ್ನಿ ಹುಟ್ಟದು
ಸಂಗದಿಂದಲ್ಲದೇ ಬೀಜ ಮೊಳೆದೋರದು
ಸಂಗದಿಂದಲ್ಲದೇ ದೇಹವಾಗದು
ಸಂಗದಿಂದಲ್ಲದೇ ಸರ್ವಸುಖದೋರದು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಅನುಭವದ ಸಂಗದಿಂದಾನು
ಪರಮಸುಖಿಯಯ್ಯಾ
೧೭೩.
ಶಿವಭಕ್ತನ ಮನೆಯಂಗಳ
ವಾರಣಾಸಿ ಎಂಬುದು ಹುಸಿಯೆ?
ಶಿವಭಕ್ತನ ಮನೆಯಂಗಳದಲ್ಲಿ
ಅಷ್ಟಷಷ್ಟಿ ತೀರ್ಥಂಗಳು ನೆಲಸಿಪ್ಪವಾಗಿ
ಸುತ್ತಿಬರಲು ಶ್ರೀಶೈಲ, ಕಲಬಲದಲ್ಲಿ ಕೇದಾರ,
ಅಲ್ಲಿಂದ ಹೊರಗೆ ಶ್ರೀ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ,
ನಿಮ್ಮ ಭಕ್ತನ ಮನೆಯಂಗಳ ವಾರಣಾಸಿಯಿಂದಧಿಕ ನೋಡಾ!
೧೭೪.
ಕಾಮನ ಗೆಲಿದೆನು, ಬಸವ, ನಿಮ್ಮ ದಯೆಯಿಂದ
ಸೋಮಧರನ ಹಿಡಿಪ್ಪೆತನು, ಬಸವ, ನಿಮ್ಮ ಕೃಪೆಯಿಂದ
ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು?
ಭಾವಿಸಲು ಗಂಡು-ರೂಪು, ಬಸವ, ನಿಮ್ಮ ದಯದಿಂದದ
ಅತಿಕಾಮಿ ಚೆನ್ನಮಲ್ಲಿಕಾರ್ಜುನಯ್ಯಂಗೆ ತೊಡರನಿಕ್ಕಿ
ಎರಡರಿಯೆದೆ ಕೂಡಿದೆನು, ಬಸವ, ನಿಮ್ಮ ಕೃಪೆಯಿಂದ
೧೭೫.
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ
ಮನದ ಭಂಗವ ಅರಿವಿನ ಮುಖದಿಂದ ಗೆಲಿದೆ
ಜೀವದ ಭಂಗವ ಶಿವಾನುಭವದಿಂದ ಗೆಲಿದೆ
ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯ
ಚೆನ್ನಮಲ್ಲಿಕಾರ್ಜುನ ಕಾಮನ ಕೊಂದು
ಮನಸಿಜನಾಗುಳುಹಿದರೆ
ಮನಸಿಜನ ತಲೆಯ ಬರಹವ ತೊಡೆದೆನು
೧೭೬.
ಎಲ್ಲರ ಗಂಡರ ಶೃಂಗಾರದ ಪರಿಯಲ್ಲ
ಎನ್ನ ನಲ್ಲನ ಶೃಂಗಾರದ ಪರಿ ಬೇರೆ
ಕರದಲ್ಲಿ ಕಂಕಣ, ಉರದ ಮೇಲಂದುಗೆ, ಕಿವಿಯಲ್ಲಿ ಹಾವುಗೆ
ಉಭಯ-ಸಿರಿವಂತನ ಮೊಣಕಾಲಲ್ಲಿ ಝಳವಟ್ಟಿಗೆ
ಉಂಗುಷ್ಠದಲ್ಲಿ ಮೂಕುತಿ ಅದು ಜಾಣರಿಗೆ ಜಗುಳಿಕೆ
ಚೆನ್ನಮಲ್ಲಿಕಾರ್ಜುನಯ್ಯನ ಶೃಂಗಾರದ ಪರಿ ಬೇರೆ!
೧೭೭.
ದೃಷ್ಟಿವರಿದುದು, ಮನ ನೆಲೆಗೊಂಡುದಿದೇನೋ!
ಆವನೆಂದರಿಯೆ ಭಾವ ನೆಟ್ಟುದವ್ವ!
ಕಳಿಯರಿದು ಅಂಗ ಗಸಣಿಯಾದುದು
ಇನ್ನಾರೆಂದಡೆ ಬಿಡೆ ಚೆನ್ನಮಲ್ಲಿಕಾರ್ಜುನಲಿಂಗವ
೧೭೮.
ತಲೆಯಲ್ಲಿ ನಿರಿ, ಟೊಂಕದಲ್ಲಿ ಮುಡಿ,
ಮೊಣಕಾಲಲ್ಲಿ ಕಿವಿಯೋಲೆ ಕಂಡೆ!
ಹರವಸದ ಉಡೂಗೆ, ಚಿಣ್ಣಂಗೆ ಹರವಸನ ಉಡುಗೆ!
ಏಕಾಂತದಲ್ಲಿ ಕೂಡಿ, ಮುಖವ ಕಂಡು
ಕಾಣದ ಚೆನ್ನಮಲ್ಲಿಕಾರ್ಜುನನ ನೆರೆವ ಪರಿ ಕರ ಹೊಸತು
೧೭೯.
ಭಾವಿಸಿ ನೋಡಿದೆಡೆ ಅಂಗವಾಯಿತ್ತು!
ಅಂಗಗುಣವಳಿದ ಬಳಿಕ ನಿನಗಂಗವಾದೆ
ಭಿನ್ನರುಚಿಯ ಬಿಟ್ಟು ಲಿಂಗರುಚಿಯಾದ ಬಳಿಕ
ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ!
೧೮೦.
ಕಾಯದೊಳಗೆ ಅಕಾಯವಾಯಿತ್ತು
ಜೀವದೊಳಗೆ ನಿರ್ಜೀವವಾಯಿತ್ತು
ಭಾವದೊಳಗೆ ನಿರ್ಭಾವವಾಯಿತ್ತು
ಎನ್ನ ಮನದೊಳಗೆ ಘನ ನೆನಹಾಯಿತ್ತು
ಎನ್ನ ತಲೆ-ಮೊಲೆಯ ನೋಡಿ ಸಲಹಿದಿರಾಗಿ
ಚೆನ್ನಮಲ್ಲಿಕಾರ್ಜುನಯ್ಯನ ಧರ್ಮದವಳಾನು
೧೮೧.
ಗಟ್ಟಿದುಪ್ಪಕ್ಕೆ ತಿಳಿದುಪ್ಪಕ್ಕೆ ಭೇದವುಂಟೇ ಅಯ್ಯ?
ದೀಪಕ್ಕೆ ದೀಪ್ತಿಗೆ ಭೇದವುಂಟೇ ಅಯ್ಯ?
ಆತ್ಮಕ್ಕೆ ಅಂಗಕ್ಕೆ ಭೇದವುಂಟೇ ಅಯ್ಯ
ಎನ್ನಂಗವನು ಶ್ರೀಗುರು ಮಂತ್ರವ ಮಾಡಿ ತೋರಿದನಾಗಿ
ಸಾವಯವಕ್ಕೆ ನಿರವಯವಕ್ಕೆ ಭಿನ್ನವಿಲ್ಲವಯ್ಯ!
ಚೆನ್ನಮಲ್ಲಿಕಾರ್ಜುನದೇವರ ಬೆರೆಸಿ ಮತಿಗೆಟ್ಟವಳ
ಏನ ನುಡಿಸುವಿರಯ್ಯ?
೧೮೨.
ಕೆಂಡವ ಶವದಂತೆ
ಸೂತ್ರ ತಪ್ಪಿದ ಬೊಂಬೆಯಂತೆ
ಜಲವರತ ತಟಾಕದಂತೆ
ಬೆಂದ ನುಲಿಯಂತೆ-
ಮತ್ತೆ ಹಿಂದಣಂಗ ಉಂಟೇ ಅಣ್ಣ
ಚೆನ್ನಮಲ್ಲಿಕಾರ್ಜುನನಂಗವೇ ಆಶ್ರಯವಾದವಳಿಗೆ?!
೧೮೩.
ಫಲ ಒಳಗೆ ಪಕ್ವವಾಗಿಯಲ್ಲದೆ
ಹೊರಗಣ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು
ಆ ಭಾವದಿಂದ ಮುಚ್ಚಿದೆ
ಇದಕೆ ನೋವೇಕೆ?
ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನದೇವನ ಒಳಗಾದವಳ
೧೮೪.
ನಾಣ ಮರೆಯ ನೂಲು ಸಡಿಲೆ ನಾಚುವರು ನೋಡಾ
ಗಂಡು-ಹೆಣ್ಣೆಂಬ ಜಾತಿ
ಪ್ರಾಣದೊಡೆಯ ಜಗದೊಳಗೆ ಮುಳುಗುತ್ತ ತೆರಹಿಲ್ಲದಿರಲು
ದೇವರ ಮುಂದೆ ನಾಚಲುಂಟೆ?
ಚೆನ್ನಮಲ್ಲಿಕಾರ್ಜುನಂಗೆ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು
ಮುಚ್ಚಿ ಮೆರೆಸಬಹುದೆ ಹೇಳಯ್ಯ
೧೮೫.
ಎಲ್ಲಿ ಹೋದರೂ ಕಲಿಗೆ ಭಯವಿಲ್ಲ
ಹಂದೆಗೆ ಸುಖವಿಲ್ಲ ಕೇಳಿರಣ್ಣ!
ಈವಂಗವಗುಣವಿಲ್ಲ, ಕರುಣ ಉಳ್ಳವಂಗೆ ಪಾಪವಿಲ್ಲ
ಇನ್ನು ಪರಧನ-ಪರಸ್ತ್ರೀಯ ತೊರೆದಾತಂಗೆ
ಮುಂದೆ ಭವವಿಲ್ಲ, ಚೆನ್ನಮಲ್ಲಿಕಾರ್ಜುನ
೧೮೬.
ಸಿರಿಯಾಳಂಗೆ ಶಿವದಾಸಿಮಯ್ಯಂಗೆ ಬಸವಂಗೆ
ಆದ ರೇಖೆಯ ಬಿಟ್ಟು ಜೂಜನಾಡರೆ ನಮ್ಮವರಂದು?
ಒಬ್ಬಂಗೆ ಮಗನ ರಪಣ
ಒಬ್ಬಂಗೆ ಸೀರೆಯ ರಪಣ
ಒಬ್ಬಂಗೆ ತನು-ಮನ-ಧನ ರಪಣ
ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು
ಎನ್ನ ದೇವ ಚೆನ್ನಮಲ್ಲಿಕಾರ್ಜುನ
೧೮೭.
ಪ್ರಾಣಲಿಂಗವೆಂದರಿದ ಬಳಿಕ
ಪ್ರಾಣದಾಸೆ ಹಿಂಗಿತ್ತು
ಲಿಂಗಪ್ರಾಣವೆಂದರಿದ ಬಳಿಕ
ಅಂಗದಾಸೆ ಹಿಂಗಿತ್ತು
ಲಿಂಗಸೋಂಕಿನ ಸಂಗಿಗೆ-ಕಂಗಲೇ ಕರುವಾಗಿರ್ದವಯ್ಯ
ಚೆನ್ನಮಲ್ಲಿಕಾರ್ಜುನನ ಹಿಂಗದೆ ಅನಿಮಿಷವಾಗಿಹ ಶರಣಂಗೆ
೧೮೮.
ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ
ಕಾಯಕ ನಿವೃತ್ತಿಯಾಗಬೇಕು
ಅಂಗದಲಳವಟ್ಟ ಲಿಂಗ ಲಿಂಗೈಕ್ಯಂಗೆ
ಅಂಗಸಂಗ ಮತ್ತೆಲ್ಲಿಯದು?
ಮಹಾಘನವನರಿದ ಮಹಂತರಿಗೆ
ಮಾಯವೆಲ್ಲಿಯದೋ ಚೆನ್ನಮಲ್ಲಿಕಾರ್ಜುನ?
೧೮೯.
ಕಟ್ಟಿದ ಕೆರೆಗೆ ಕೋಡಿ ಮಾಣದು
ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯ
ಅರುಹಿರಿಯರೆಲ್ಲಾ ವೃಥಾ ಕೆಟ್ಟುಹೋದರಿನ್ನೆಂತಯ್ಯ
ಚೆನ್ನಮಲ್ಲಿಕಾರ್ಜುನದೇವನ
ಗೊತ್ತ ಮುಟ್ಟಿದವರೆಲ್ಲರೂ ನಿಶ್ಚಿಂತರಾದರು
೧೯೦.
ಊರ ನಡುವೆ ಒಂದು ಬೇಂಟೆ ಬಿದ್ದಿತ್ತು
ಆರು ಕಂಡವರು ಕೊಡಿರಯ್ಯಾ
ಊರಿಗೆ ದೂರುವೆನಗುಸೆಯನಿಕ್ಕುವೆ
ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು
ಅರಸಿಕೊಡಯ್ಯ ಚೆನ್ನಮಲ್ಲಿಕಾರ್ಜುನ
೧೯೧.
ಆವ ವಿದ್ಯೆಯ ಕಲಿತಡೇನು
ಶವ ವಿದ್ಯೆ ಮಾಣದನ್ನಕ?
ಅಶನವ ತೊಡೆದಡೇನು? ವ್ಯಸನವ ಮರೆದೆಡೇನು?
ಉಸಿರಗಿಡಿದರೇನು? ಬಸಿರ ಕಟ್ಟಿದರೇನು?
ಚೆನ್ನಮಲ್ಲಿಕಾರ್ಜುನದೇವಯ್ಯ ನೆಲದಳವಾರನಾದಡೆ
ಕಳ್ಳನೆಲ್ಲಿ ಅಡಗುವ?
೧೯೨.
ಹಡೆವುದರಿದು ನರಜನ್ಮವ
ಹಡೆವುದರಿದು ಗುರುಕಾರುಣ್ಯವ
ಹಡೆವುದರಿದು ಲಿಂಗಜಂಗಮಸೇವೆಯ
ಚೆನ್ನಮಲ್ಲಿಕಾರ್ಜುನಯ್ಯನ ಶರಣ ಸಂಗದಲ್ಲಿ
ನಲಿದಾಡು ಕಂಡೆಯಾ ಎಲೆ ಮನವೇ
೧೯೩.
ಮಾಟಕೂಟ ಬಸವಣ್ಣಂಗಾಯಿತ್ತು
ನೋಟಕೂಟ ಪ್ರಭುದೇವರಿಗಾಯಿತ್ತು
ಭಾವಕೂಟ ಅಜಗಣ್ಣಂಗಾಯಿತ್ತು
ಸ್ನೇಹಕೂಟ ಬಾಚಿರಾಜಂಗಾಯಿತ್ತು
ಇವರೆಲ್ಲರ ಕೂಟ ಬಸವಣ್ಣಂಗಾಯಿತ್ತು
ಎನಗೆ ನಿಮ್ಮಲ್ಲಿ ಅವಿರಳದ ಕೂಟ ಚೆನ್ನಮಲ್ಲಿಕಾರ್ಜುನಯ್ಯ
೧೯೪.
ಮಾಟಕೂಟದಲ್ಲಿ ಬಸವಣ್ಣನಿಲ್ಲ
ನೋಟಕೂಟದಲ್ಲಿ ಪ್ರಭುದೇವರಿಲ್ಲ
ಭಾವಕೂಟದಲ್ಲಿ ಅಜಗಣ್ಣನಿಲ್ಲ
ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ
ಇವರೆಲ್ಲರ ಕೂಟದಲ್ಲಿ ಬಸವಣ್ಣನಿಲ್ಲ
ಎನಗಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ?
೧೯೫.
ಕದಳಿಯೆಂಬುದು ತನು! ಕದಳಿಯೆಂಬುದು ಮನ!
ಕದಳಿಯೆಂಬುದು ವಿಷಯಂಗಳು
ಕದಳಿಯೆಂಬುದು ಭವಘೋರಾರಣ್ಯ
ಕದಳಿಯೆಂಬುದ ಗೆದ್ದು ತವ ಬದುಕೆ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು
ಭವಗೆಟ್ಟು ಬಂದ ಮಗಳೆಂದು
ಕರುಣದಿಂ ತೆಗೆದು ಬಿಗಿಯಪ್ಪಿದರೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು
೧೯೬.
ಕರ್ಮವೆಂಬ ಕದಳಿಯೆನಗೆ, ಕಾಯವೆಂಬ ಕದಳಿ ನಿನಗೆ
ಮಾಟವೆಂಬ ಕದಳಿ ಚೆನ್ನಬಸವಣ್ಣಂಗೆ
ಬಂದ ಬಂದ ಭಾವ ಸೆಲೆ ಸಂದಿತ್ತು
ಎನ್ನಂಗದವಸಾನವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ
೧೯೭.
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಧರಾಮಯ್ಯನ ಸಮಾಧಿಸ್ಥಲ-
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯ
೧೯೮.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ತೊತ್ತಿನ ಮರುದೊತ್ತಿನ
ಮಗಳಾದ ಕಾರಣ
ಜ್ಞಾನ ಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣ ಪ್ರಸಾದವ ಸಿದ್ಧಿಸಿ ಕೊಟ್ಟನು
ಮಡಿವಾಲಯ್ಯನ ಮನೆಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ
ತಮ್ಮ ಕರುಣದ ಕಂದನೆಂದು ತಲೆದಡವಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು
೧೯೯.
ಹಸಿವಾದರೆ ಊರೊಳಗೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ-ಭಾವಿ-ಹಳ್ಳಂಗಳುಂಟು
ಶಯನಕ್ಕೆ ಹಾಳುದೇಗುಲವುಂಟು
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು
೨೦೦.
ಮನೆಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ
ಬೇಡಿದರೆ ಇಕ್ಕದಂತೆ ಮಾಡಯ್ಯ
ಇಕ್ಕಿದರೆ ನೆಲಕ್ಕೆ ಬೀಳುವಂತೆ ಮಾಡಯ್ಯ
ನೆಲಕ್ಕೆ ಬಿದ್ದರೆ ನಾನೆತ್ತಿಕೊಂಬುದಕೆ ಮುನ್ನವೇ
ಶುನಿ ಎತ್ತಿಕೊಂಬಂತೆ ಮಾಡು
ಚೆನ್ನಮಲ್ಲಿಕಾರ್ಜುನಯ್ಯ!
೨೦೧.
ಭಕ್ತೆ ಏನಪ್ಪೆನಯ್ಯ ಕರ್ತೃ-ಭೃತ್ಯತ್ವವ ನಾನರಿಯೆ
ಮಾಹೇಶ್ವರಿ ಏನಪ್ಪೆನಯ್ಯ? ವ್ರತ-ನೇಮ-ಛಲವ ನಾನರಿಯೆ
ಪ್ರಸಾದಿ ಏನಪ್ಪೆನಯ್ಯ?
ಅರ್ಪಿತಾನರ್ಪಿತವೆಂಬ ಭೇದವ ನಾನರಿಯೆ
ಪ್ರಾಣಲಿಂಗಿ ಏನಪ್ಪೆನಯ್ಯ?
ಅನುಭಾವದ ಗಮನವ ನಾನರಿಯೆ
ಶರಣೆ ಏನೆಪ್ಪೆನಯ್ಯ?
ಶರಣಸತಿ-ಲಿಂಗಪತಿಯೆಂಬ ಭಾವವ ನಾನರಿಯೆ
ಐಕ್ಯೆ ಏನೆಪ್ಪೆನಯ್ಯ?
ಬೆರಸಿದ ಭೇದವ ನಾನರಿಯೆ
ಚೆನ್ನಮಲ್ಲಿಕಾರ್ಜುನಯ್ಯ,
ಷಟ್ಸ್ಥಲದಲ್ಲಿ ನಿಸ್ಥಲವಾಗಿಪ್ಪೆನು
೨೦೨.
ಬಸವಣ್ಣ, ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಇಂತೀ ಮೂವರೂ ಒಂದೊಂದ ಕೊಟ್ಟ ಕಾರಣ
ಎನಗೆ ಮೂರು ಭಾವವಾಯಿತ್ತು
ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ನೆನಹಾದಲ್ಲಿ
ನಿಮ್ಮ ಕರುಣದ ಕಂದನು ಕಾಣಾ ಚೆನ್ನಬಸವಣ್ಣ
೨೦೩.
ಸಂಗನ ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ನಾಸ್ತಿಯಾಯಿತ್ತು
ಪ್ರಭುವೇ ! ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನಗೆ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗಾವ ಜಂಜಡವಿಲ್ಲವಯ್ಯ ಪ್ರಭುವೇ
೨೦೪.
ಬಸವಣ್ಣನೇ ಗುರು, ಪ್ರಭುದೇವರೇ ಲಿಂಗ
ಸಿದ್ಧರಾಮಯ್ಯನೇ ಜಂಗಮ
ಮಡಿವಾಳಯ್ಯನೇ ತಂದೆ, ಚೆನ್ನಬಸವಣ್ಣನೇ ಎನ್ನ ಪರಮಾರಾಧ್ಯರು
ಇನ್ನು ಶುದ್ಧವಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ
೨೦೫.
ಬಸವಣ್ಣ ನಿಮ್ಮಂಗದಾಚಾರವ ಕಂಡು ಎನಗೆ
ಲಿಂಗಸ್ವಾಯತವಾಯಿತಯ್ಯ
ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ
ಜಂಗಮಸಂಬಂಧವಾಯಿತ್ತಯ್ಯ
ಬಸವಣ್ಣ ನಿಮ್ಮ ಸದ್ಭಕ್ತಿಯ ತಿಳಿದೆನಗೆ
ನಿಜವು ಸಾಧ್ಯವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಹೆಸರಿಟ್ಟ ಗುರು ನೀವಾದ ಕಾರಣ
ನಿಮ್ಮ ಶ್ರೀಪಾದಕ್ಕೆ
ನಮೋ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣ
೨೦೬.
ದೇವಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ಮೇರುಗಿರಿ-ಮಂದರಗಿರಿ ಮೊದಲಾದವೆಲ್ಲಕ್ಕು ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯ, ನಿಮಗೂ ಎನಗೂ ಎಮ್ಮ ಶರಣರಿಗೂ
ಬಸವಣ್ಣನೇ ದೇವರು
೨೦೭.
ಆದಿ-ಅನಾದಿಗಳಿಂದತ್ತಲಯ್ಯ ಬಸವಣ್ಣ
ಮೂಲದೇವರ ಮೂಲಸ್ಥಾನವಯ್ಯ ಬಸವಣ್ಣ
ನಾದ-ಬಿಂದು-ಕಳಾತೀತ ಆದಿನಿರಂಜನನಯ್ಯ ಬಸವಣ್ಣ
ಅನಾದಿಸ್ವರೂಪವೇ ಬಸವಣ್ಣನಾದ ಕಾರಣ
ಆ ಬಸವನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ
೨೦೮.
ಶಿವಶಿವಾ ಆದಿಅನಾದಿಯೆಂಬೆರಡೂ ಇಲ್ಲದೆ
ನಿರವಯವಾಗಿಪ್ಪ ಶಿವನೇ, ನಿಮ್ಮ ನಿಜವನಾರು ಬಲ್ಲರಯ್ಯ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕಗಮ್ಯನು, ಆಗಮಕ್ಕಗೋಚರನು, ತರ್ಕಕ್ಕತರ್ಕ್ಯನು
ವಾಙ್ಮನಕ್ಕತೀತವೆನಿಪ ಪರಶಿವಲಿಂಗನು
ಕೆಲಬರು ಸಕಲನೆಂಬರು, ಕೆಲಬರು ನಿಷ್ಕಲನೆಂಬರು
ಕೆಲವರು ಸೂಕ್ಷ್ಮನೆಂಬರು, ಕೆಲವರು ಸ್ಥೂಲನೆಂಬರು
ಈ ಬಗೆಯ ಭಾವದಿಂ ಹರಿ-ಬ್ರಹ್ಮ-ಇಂದ್ರ-ಚಂದ್ರ
ರವಿ-ಕಾಲ-ಕಾಮ-ದಕ್ಷ-ದೇವ-ದಾನವ-ಮಾನವರೊಳಗಾದವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾಗಿ ಹೋದರು
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು
ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಬಂದು
ವೀರಶೈವಮಾರ್ಗವರಿಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನು ಅದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು
ಪಂಚಾಕ್ಷರಿಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧದಲ್ಲಿ ಆಯತನು,
ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವಸ್ಮರಣೆಯ ಹೊದ್ದ
ಭವಿಸಂಗವ ಮಾಡ, ಭವಪಾಶವ ಕೊಳ್ಳ,
ಪರಸತಿಯ ಬೆರೆಸ, ಪರಧನವನೊಲ್ಲ,
ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ,
ತಾಮಸಭಕ್ತಸಂಗವ ಮಾಡ,
ಅರ್ಥ-ಪ್ರಾಣಾಭಿಮಾನ ಮುಂತಾಗಿ ಗುರುಲಿಂಗಜಂಗಮಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ,
ಅನ್ಯರನಾಶೆಗೈಯ್ಯ ಪಾತ್ರಾಪಾತ್ರವನರಿದೀವ
ಚತುರ್ವಿಧ ಪದವಿಯ ಹಾರ, ಅರಿಷಡ್ವರ್ಗಕ್ಕಳುಕ
ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ
ಸಂಕಲ್ಪ ವಿಕಲ್ಪವ ಮಾದುವನಲ್ಲ, ಕಾಲೋಚಿತವ ಬಲ್ಲ,
ಕ್ರಮಯುಕ್ತವಾಗಿ ಷಟ್ಝಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ-
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣನು
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನ
೨೦೯.
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆ ಅರಿವೆ ಲಿಂಗಜಂಗಮವೆಂದು ತೋರಿದ
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ
೨೧೦.
ಅಂಗ ಕ್ರಿಯಾಲಿಂಗವ ವೇದಿಸಿ
ಅಂಗ ಲಿಂಗದೊಳಗಾಯಿತು
ಮನ ಅರಿವ ಬೆರೆಸಿ, ಜಂಗಮಸೇವೆಯ ಮಾಡಿ
ಮನ ಜಂಗಮಲಿಂಗದೊಳಗಾಯಿತು
ಭಾವ ಗುರುಲಿಂಗದೊಳಗೆ ಬೆರೆಸಿ, ಮಹಾಪ್ರಸಾದವ ಭೋಗಿಸಿ
ಭಾವ ಗುರುಲಿಂಗದೊಳಗಾಯಿತು
ಚೆನ್ನಮಲ್ಲಿಕಾರ್ಜುನ ನಿಮ್ಮ ಒಲುಮೆಯಿಂದ
ಸಂದಳಿದು ಸ್ವಯಲಿಂಗವಾದೆನಯ್ಯ ಪ್ರಭುವೆ
೨೧೧.
ಅಂಗಸಂಗಿಯಾಗಿ ಸಂಬಂಧಿಯಲ್ಲ
ಲಿಂಗದೊಳಗಾಪ್ಯಾಯಿನಿಯಾಗಿ ಇತರ ಸು-
ಖಂಗಳ ಬಿಟ್ಟು ಕಳೆದು ಸಮನ ಸಾರಾಯನಾದ ಶರಣನು ||ಪಲ್ಲವ||
ಗುರುಕರುಣಸಂಗದಿಂದ ಶಿಷ್ಯನಿಂತು ಕರದಲ್ಲಿ ಹುಟ್ಟಿದನು
ಕರಣಸಹಿತ ಅವಗ್ರಾಹಿಯಾಗಿ ಘಾಳಿ ಸುಳುಹಡಗಿದ ಶರಣನು ||೧||
ಆಸೆಯೆಂಬ ಹದನುಳುಹಾಗಿ ಹಿಡಿದ ಛಲ ಬಿಡದೆಂಬ ಬೇರೂರಿ
ಸಂಕಲ್ಪವಿಕಲ್ಪಗಳೆರಡೂ ಇಲ್ಲದೆ ನಿಃಕಳಂಕನಾದನು ಶರಣನು ||೨||
ಮಾಡುವವರ ಕಂಡು ಮಾಡುವವನಲ್ಲ
ಮಾಡದವರ ಕಂಡು ಮಾಡದವನಲ್ಲ
ತಾ ಮಾಡುವ ಮಾಟಕೆ ತವಕಿಗನಾಗಿಪ್ಪ
ಹಿಂದುಮುಂದರಿಯದ ಶರಣನು ||೩||
ಎಲ್ಲವು ತಾನೆಂಬ ಕರುಣಾಕರನಲ್ಲ
ನಿಃಕರುಣಿಯಾಗಿ ಜಡದೇಹಿಯಲ್ಲ
ಭೋಗಿಪ ಭೋಗಂಗಳಾಮಿಷ
ತಾಮಸ ವಿಷಯವಿರಹಿತನು ಶರಣನು ||೪||
ಘನವನಿಂಬುಗೊಂಡ ಮನದ ಬೆಂಬಳಿವಿಡಿದುಳೆದಲ್ಲಿ
ನಿಜವಾಗಿ ನಿಂದನು ತಾನೆಂಬುದಿಲ್ಲ
ನಿರಂತರ ಸದ್ಗುರು ಚೆನ್ನಮಲ್ಲಿಕಾರ್ಜುನ
ನಿಮ್ಮ ಶರಣ ಬಸವಣ್ಣನು ||೫||
೨೧೨.
ಅಂಗದಲ್ಲಿ ಲಿಂಗಸಂಗ
ಲಿಂಗದಲ್ಲಿ ಅಂಗಸಂಗ ಮಾಡಿದನೆಂದರೆ
ಎನ್ನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನನ ಸ್ನೇಹದಲ್ಲಿ
ನಿನ್ನ ಕರುಣದ ಶಿಶು ನಾನು ಕಾಣ
ಸಂಗನಬಸವಣ್ಣ
೨೧೩.
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
ಇಂಗಿತವೇನೆಂದು ಬೆಸಗೊಂಬಿರಯ್ಯ?
ಅವರ ನಡೆಯೇ ಆಗಮ, ಅವರ ನುಡಿಯೇ ವೇದ
ಅವರ ಲೋಕದ ಮಾನವರೆನ್ನಬಹುದೇ?
ಆದೆಂತೆಂದೊಡೆ
"ಬೀಜಾದ್ಭವತಿ ವೃಕ್ಷಂ ತು
ಬೀಜೇ ತು ಲೀಯತೇ ಪುನಃ
ರುದ್ರಲೋಕಂ ಪರಿತ್ಯಕ್ತ್ವಾ
ಶಿವಲೋಕೇ ಭವಿಷ್ಯತಿ"
ಎಂಬುದಾಗಿ ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು
ಆ ವೃಕ್ಷವು ಮರಳಿ ಆ ಬೀಜದೊಳಡಗಿತ್ತು
ಆ ಪ್ರಾಕಾರದಿಂ
ಆ ಲಿಂಗದೊಳಗಿದ್ದ ಪುರಾತನರು
ಆ ಲಿಂಗದೊಳಗೆ ಬೆರೆಸಿದರು ನೋಡಿರಯ್ಯ
ಇಂತಪ್ಪ ಪುರಾತನರಿಗೆ ನಾನು ಶರಣೆಂದು
ಹುಟ್ಟುಗೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
೨೧೪.
ಲಿಂಗಕ್ಕೆ ರೂಪ ಸಲಿಸುವೆ
ಜಂಗಮಕ್ಕೆ ರುಚಿಯ ಸಲಿಸುವೆ
ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ
ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ
ನಿಮ್ಮ ಪ್ರಸಾದದಿಂದ ಧನ್ಯಳಾದೆನು ಚೆನ್ನಮಲ್ಲಿಕಾರ್ಜುನಯ್ಯ
೨೧೫.
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೇ
ಜಂಗಮಕ್ಕೆ ಮಜ್ಜನ ಮಾಡಿಸುವೆ
ನಾನು ಸೀರೆಯನುಡುವುದಕ್ಕೆ ಮುನ್ನವೇ
ಜಂಗಮಕ್ಕೆ ದೇವಾಂಗವನುಡಿಸುವೆ
ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಸುಗಂಧದ್ರವ್ಯಗಳ ಲೇಪಿಸುವೆ
ನಾನು ಅಕ್ಷತೆಯನಿಡುವುದಕ್ಕೆ ಮುನ್ನವೇ
ಜಂಗಮಕ್ಕೆ ಅಕ್ಷತೆಯನಿಡುವೆ
ನಾನು ಧೂಪವಾಸನೆಯ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಧೂಪವಾಸನೆಯ ಕೊಡುವೆ
ನಾನು ಧೂಪಾರತಿಯ ನೋಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆರತಿಯ ನೋಡಿಸುವೆ
ನಾನು ಸಕಲ ಪದಾರ್ಥವ ಸ್ವೀಕರಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಮಿಷ್ಟಾನ್ನವ ನೀಡುವೆ
ನಾನು ಪಾನಂಗಳ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಅಮೃತಪಾನಂಗಳ ಕೊಡುವೆ
ನಾನು ಕೈಯ ತೊಳೆವುದಕ್ಕೆ ಮುನ್ನವೇ
ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ
ನಾನು ವೀಳೆಯಂ ಮಡಿವುದಕ್ಕೆ ಮುನ್ನವೇ
ಜಂಗಮಕ್ಕೆ ತಾಂಬೂಲವ ಕೊಡುವೆ
ನಾನು ಗದ್ದಿಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಉನ್ನತಾಸನವನಿಕ್ಕುವೆ
ನಾನು ಸುನಾದಗಳ ಕೇಳುವ ಮುನ್ನವೇ
ಜಂಗಮಕ್ಕೆ ಸಂಗೀತವಾದ್ಯಂಗಳ ಕೇಳಿಸುವೆ
ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆಭರಣಂಗಳ ತೊಡಿಸುವೆ
ನಾನು ವಾಹನಂಗಳನೇರುವುದಕ್ಕೆ ಮುನ್ನವೇ
ಜಂಗಮಕ್ಕೆ ವಾಹನವನೇರಿಸುವೆ
ನಾನು ಮನೆಯೊಳಗಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಗೃಹವ ಕೊಡುವೆ
ಇಂತೀ ಹದಿನಾರು ತೆರನ ಭಕ್ತಿಯ ಚರಲಿಂಗಕ್ಕೆ ಕೊಟ್ಟು
ಆ ಚಿರಲಿಂಗಮೂರ್ತಿ ಭೋಗಿಸಿದ ಬಳಿಕ
ನಾನು ಪ್ರಸಾದವ ಮುಂತಾಗಿ ಭೋಗಿಸುವೆನಲ್ಲದೆ
ಜಂಗಮನಿಲ್ಲದೆ ಇನಿತರೊಳಗೊಂದು
ಭೋಗವನಾದರೂ ನಾನು ಭೋಗಿಸಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಇಂತೀ ಕ್ರಮವಲ್ಲಿ ನಡೆದಾತಂಗೆ
ಗುರುವುಂಟು, ಲಿಂಗವುಂಟು, ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು,
ಆಚಾರವುಂಟು, ಭಕ್ತಿಯುಂಟು
ಈ ಕ್ರಮದಲ್ಲಿ ನಡೆಯದಾತಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ,
ಆಚಾರವಿಲ್ಲ, ಸದ್ಭಕ್ತಿಯಿಲ್ಲ
ಅವನ ಬಾಳುವೆ ಹಂದಿಯ ಬಾಳುವೆ
ಅವನ ಬಾಳುವೆ ಕತ್ತೆಯ ಬಾಳುವೆ
ಅವನು ಸುರೆ-ಮಾಂಸ ಭುಂಜಕನು
ಅವನು ಸರ್ವಚಂಡಾಲನಯ್ಯ ಚೆನ್ನಮಲ್ಲಿಕಾರ್ಜುನ
೨೧೬.
ಅಯ್ಯ ಸದಾಚಾರ-ಸದ್ಭಕ್ತಿ-ಸತ್ಕ್ರಿಯೆ-ಸಮ್ಯಜ್ಞಾನ
ಸದ್ವರ್ತನೆ-ಸಗುಣ-ನಿರ್‍ಗುಣ-ನಿಜಗುಣ-ಸಚ್ಚರಿತ-ಸದ್ಭಾವ
ಅಕ್ರೋಧ-ಸತ್ಯವಚನ-ಕ್ಷಮೆ-ದಯೆ-ಭವಿಭಕ್ತಭೇದ
ಸತ್ಪಾತ್ರದ್ರವ್ಯಾರ್ಪಣ-ಗೌರವಬುದ್ಧಿ-ಲಿಂಗಲೀಯ
ಜಂಗಮಾನುಭಾವ-ದಶವಿಧ ಪಾದೋದಕ-ಏಕಾದಶಪ್ರಸಾದ
ಷೋಡಶ ಭಕ್ತಿನಿರ್ವಾಹ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ
ತ್ರಿವಿಧ ಷಡ್ವಿಧ ನವವಿಧ ಜಪ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಿತ
ಚಿದ್ವಿಭೂತಿ ಸ್ನಾನ ಧೂಳನ ಧಾರಣ
ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿ ಧಾರವ
ತಾ ಮಾಡುವ ಸತ್ಯಕಾಯಕ
ತಾ ಬೇಡುವ ಸದ್ಭಕ್ತಿ ಭಿಕ್ಷ
ತಾ ಕೊಟ್ಟು ಕೊಂಬ ಭೇದ
ತಾನಾಚರಿಸುವ ಸತ್ಯ ನಡೆನುಡಿ
ತಾ ನಿಂದ ನಿರ್ವಾಣಪದ-
ಇಂತೀ ಮುವ್ವತ್ತೆರಡು ಕಲೆಗಳ ಸದ್ಗುರುಮುಖದಿಂದರಿದ
ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ
ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರೂ ನೋಡಾ!
ಇಂತು ಪ್ರಮಥಗಣಂಗಳಾಚರಿಸಿದ ಸತ್ಯಸನ್ಮಾರ್ಗವನರಿಯದ
ಮೂಢ ಅಧಮರನೆಂತು
ಶಿವಶಕ್ತಿ-ಶಿವಭಕ್ತಿ-ಶಿವಜಂಗಮವೆಂಬೆನಯ್ಯ
ಚೆನ್ನಮಲ್ಲಿಕಾರ್ಜುನ
೨೧೭.
ಸಪ್ತಕೋಟಿಮಹಾಮಂತ್ರಂಗಳಿಗೆ
ಉಪಮಂತ್ರಂಗಳುಂಟು
ಆ ಉಪಮಂತ್ರಂಗಳಿಂಗೆ ಲೆಕ್ಕವಿಲ್ಲ
ಆ ಜಾಳು ಮಂತ್ರಂಗಳಿಗೆ ಭ್ರಮಿಸಿ
ಚಿತ್ತವ್ಯಾಕುಲವಾಗಿ ಕೆಟ್ಟುಹೋಗದಿರು ಮನವೇ
ಶಿವಶಿವಾ ಎಂದೆಡೆ ಸಾಲದ್?
ಒಂದು ಕೋಟಿ ಮಹಾಪಾತಕ ಪರಿಹಾರವಕ್ಕು
ಆದೆಂತೆಂದಡೆ ಶಿವಧರ್ಮೇ
ಶಿವೇತಿ ಮಂಗಲಂ ನಾಮ
ಯಸ್ಯ ವಾಚಿ ಪ್ರವರ್ತತೇ
ಭಸ್ಮೀಭವಂತಿ ತಸ್ಯಾಶು
ಮಹಾಪಾತಕಕೋಟಯಃ
ಎಂದುದಾಗಿ, ಸದ್ಗುರು ಚೆನ್ನಮಲ್ಲಿಕಾರ್ಜುನ ತೋರಿದ
ಸಹಜಮಂತ್ರವೆನಗಿದೇ ಪರಮತತ್ವವಯ್ಯ
೨೧೮.
ಒಪ್ಪುವ ಶ್ರೀವಿಭೂತಿಯ ನೊಸಲಲ್ಲಿ ಧರಿಸಿ
ದೃಷ್ಟಿವಾರೆ ನಿಮ್ಮ ನೋಡಲೊಡನೆ
ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ
ದುರಿತವ ಪರಿಹರಿಸಬಲ್ಲಡೆ
ಓಂ ನಮಶ್ಶಿವಾಯ ಶರಣೆಂಬುದೇ ಮಂತ್ರ
ಓಂ ನಮಶ್ಶಿವಾಯೇತಿ ಮಂತ್ರಂ
ಯಃ ಕರೋತಿ ತ್ರಿಪುಂಡ್ರಕಂ
ಸಪ್ತ ಜನ್ಮಕೃತಂ ಪಾಪಂ
ತತ್ ಕ್ಷಣಾದೇವ ವಿನಶ್ಯತಿ
ಎಂದುದಾಗಿ ಸಿಂಹದ ಮರಿಯ ಸೀಳುನಾಯಿ ತಿಂಬಡೆ
ಭಂಗವಿನ್ನಾರದು ಚೆನ್ನಮಲ್ಲಿಕಾರ್ಜುನ?
೨೧೯.
ಹಿತವಿದೇ, ಸಕಲಲೋಕದ ಜನಕ್ಕೆ ಮತವಿದೇ
ಶೃತಿ-ಪುರಾಣಾಗಮದ ಗತಿಯಿದೇ
ಭಕುತಿಯ ಬೆಳಗಿನ ಉನ್ನತಿಯಿದೇ
ಇಂತಪ್ಪ ಶ್ರೀವಿಭೂತಿಯ ಧರಿಸಿರೆ
ಭವವ ಪರಿವುದು, ದುರಿತಸಂಕುಳವನೊರೆಸುವುದು
ನಿರುತವಿದು ನಂಬು ಮನುಜ! ಜವನ ಭೀತಿಯೀ ವಿಭೂತಿ
ಮರಣಭಯದಿಂದ ಅಗಸ್ತ್ಯ-ಕಶ್ಯಪ-ಜಮದಗ್ನಿಗಳು
ಧರಿಸಿದರಂದು ನೋಡಾ
ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ
೨೨೦.
ಹಾಲು ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?
ಲಿಂಗದ ಪಾದತೀರ್ಥಪ್ರಸಾದವ ಕೊಂಡು
ಅನ್ನಬೋಧೆ-ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದರೆ
ತಡೆಯದೇ ಹುಟ್ಟಿಸುವ ಶ್ವಾನಗರ್ಭದಲ್ಲಿ
ಆದೆಂತೆಂದಡೆ-ಶಿವಧರ್ಮಪುರಾಣೇ
ಇಷ್ಟಲಿಂಗಮವಿಶ್ವಸ್ಯ
ತೀರ್ಥಲಿಂಗಂ ನಮಸ್ಕೃತಃ
ಶ್ವಾನಯೋನಿಶತಂ ಗತ್ವಾ
ಚಂಡಾಲಗೃಹಮಾಚರೇತ್
ಎಂದುದಾಗಿ-ಇದನರಿದು
ಗುರು ಕೊಟ್ಟ ಲಿಂಗದಲ್ಲಿಯೇ
ಎಲ್ಲಾ ತೀರ್ಥಂಗಳು, ಎಲ್ಲಾ ಕ್ಷೇತ್ರಂಗಳು
ಇಹವೆಂದು ಭಾವಿಸಿ ಮುಕ್ತರಪ್ಪುವುದಯ್ಯ
ಇಂತಲ್ಲದೆ-ಗುರು ಕೊಟ್ಟ ಲಿಂಗವ ಕಿರಿದು ಮಾಡಿ
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನ
೨೨೧.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತತ್ ಶಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದಡೆ
ಮುಕ್ತಿಸಾಮ್ರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಲಶದ ಅಭಿಷೇಕವ ಮಾಡಿಸಲು
ಶಿವನ ಕಾರುಣ್ಯಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಂಗಳ ಮಧ್ಯದಲ್ಲಿ
ಮಹಾಲಿಂಗವನು ಕರಸ್ಥಲಾಮಲಕವಾಗಿ
ಶಿಷ್ಯನ ಕರಸ್ಥಲಕ್ಕೆ ಇಟ್ಟು, ಅಂಗದಲ್ಲಿ ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂದು ಮುಂದ ತೋರಿ ಹಿಂದ ಬಿಡಿಸಿದ
ಶ್ರೀಗುರುವಿನ ಸಾನಿದ್ಧ್ಯದಿಂದಾನು
ಬದುಕಿದೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ
೨೨೨.
ನಮ್ಮ ಮನೆಯಲಿಂದು ಹಬ್ಬ
ನಮಗೆ ಸಂದಣಿ ಬಹಳ
ಒಮ್ಮೆ ನುಡಿಸ ಹೊತ್ತಿಲ್ಲ
ಹೋಗಿ ವಿಷಯಗಳಿರಾ
ತನುವೆಂಬ ಮನೆಯೊಳಗೆ ನೆಲಸಿಪ್ಪ ಪರಮಾತ್ಮ
ಮನೆಯ ದೇವರ ಹಬ್ಬ! ಆ ಹಬ್ಬಕಿಂದು
ನೆನೆಯದೆ ಮಿಂದು ನಡೆಯದೆ ಹೋಗಿ ಬಲಗೊಂಡು
ನೆನಹಿನಮೃತಾನ್ನದುಪಹಾರವಿಡಬೇಕು
ನೆರಹುಗುಡದೆ ಏಕಾಂತದೊಳಗಿರಬೇಕು
ನೆರಹಬೇಕಮಲಗುಣ ಪರವಸ್ತುಗಳನು
ಪರಿಹರಿಸಿ ಕಳೆಯಬೇಕಯ್ಯ ವಿಷಯಗಳನು
ಎರಡಿಲ್ಲದೊಂದು ಮನದಲ್ಲಿ ಭಜಿಸಬೇಕು
ನೋಡದೆ ಕಂಡು, ನುಡಿಸದೆ ಹೊಗಳಿ ಭಕ್ತಿಯಿಂ
ಬೇಡದೆ ಪರಮಪದವಿಯ ಪಡೆಯಬೇಕು
ನಾಡಾಡಿ ದೈವದಂತಲ್ಲವಿದು ಅಸಮಾಕ್ಷ
ರೂಢಿಯೊಳು ಚೆನ್ನಮಲ್ಲನ ಭಜಿಸಬೇಕು
೨೨೩.
ಕಂಗಳ ನೋಟವು, ಕಾಯದ ಕರದಲಿ
ಲಿಂಗದ ಕೂಟವು ಶಿವಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆನಾರತಿಯ ||ಪಲ್ಲವ||
ಜಗವಂದ್ಯಗೆ ಬೇಟವ ಮಾಡಿದೆ, ನಾ
ಹಗೆಯಾದೆನು ಸಂಸಾರಕೆಲ್ಲ
ನಗುತೈದರೆ ಲಜ್ಜೆ ನಾಚಿಕೆಯೆಲ್ಲವ ತೊರೆದವಳೆಂದೆನ್ನ
ಗಗನಗಿರಿಯ ಮೇಲಿರ್ದಹನೆಂದೆಡೆ
ಲಗುನಿಯಾಗಿ ನಾನರುಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು ಮಿಗೆ ಒಲಿದಾರತಿಯ ||೧||
ಭಕುತಿರತಿಯ ಸಂಭಾಷಣೆಯಿಂದವೆ
ಯುಕುತಿಯ ಮರೆದೆನು, ಕಾಯದ ಜೀವದ
ಪ್ರಕೃತಿಯ ತೊರೆದೆನು, ಸುತ್ತಿದ ಮಾಯಾಪಾಶವ ಹರಿದೆನಲಾ
ಸುಕೃತಿಯಾಯಿತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯೆ ಬಂದೆನು
ಸಕುತಿಯಾದೆ ನಾ ಪ್ರಾಣಲಿಂಗಕೆ ಮನವೊಲಿದಾರತಿಯ ||೨||
ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೊಂದೆನಿಸದೆ, ಪ್ರಾಣವು
ಬೆಚ್ಚಂತಿರ್ದುದು, ಅಚ್ಚೊತ್ತಿದಾ ಮಹಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗು ಪ್ರಕಾಶವು
ನಿಚ್ಚನಿರಂಜನ ಚೆನ್ನಮಲ್ಲಿಕಾರ್ಜುನ
ಗೆತ್ತುವೆನಾರತಿ ಈ ರತಿಯಿಂದವೆ ಮನವೊಲಿದಾರತಿಯ ||೩||
೨೨೪.
ಅಯ್ಯ, ಸರ್ವಮೂಲಾಹಂಕಾರವಿಡಿದು
ಕುಲಭ್ರಮೆ! ಬಲಭ್ರಮೆ! ಜಾತಿಭ್ರಮೆ!
ನಾಮ-ವರ್ಣ-ಆಶ್ರಮ-ಮತ-ಶಾಸ್ತ್ರಭ್ರಮೆ! ರಾಜ್ಯಭ್ರಮೆ!
ಧನ-ಧಾನ್ಯ-ಪುತ್ರ-ಮಿತ್ರ-ಐಶ್ವರ್ಯ-ತ್ಯಾಗ-ಯೋಗಭ್ರಮೆ!
ಕಾಯ-ಕರಣ-ವಿಷಯಭ್ರಮೆ!
ವಾಯು-ಮನ-ಭಾವ-ಜೀವ-ಮೋಹಭ್ರಮೆ!
ನಾಹಂ-ಕೋಹಂ ಭ್ರಮೆ! ಶಿವೋಹಂ ಭ್ರಮೆ ಮಾಯಾಭ್ರಮೆ!
ಮೊದಲಾದ ಮೂವತ್ತೆರಡು ಪಾಶಭ್ರಮಿತರಾಗಿ ತೊಳಲುವ
ವೇಷಧಾರಿಗಳ ಕಂಡು-
ಶಿವಭಕ್ತಿ-ಶಿವಭಕ್ತ-ಶಿವಪ್ರಸಾದಿ-ಶಿವಶರಣ-
ಶಿವೈಕ್ಯ-ಶಿವಜಂಗಮವೆಂದು
ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಳಿಗಭಿಮುಖವಾಯಿತ್ತಯ್ಯ, ಚೆನ್ನಮಲ್ಲಿಕಾರ್ಜುನ
೨೨೫.
ಅಯ್ಯ ಚಿದಂಗ-ಚಿದ್ರನಲಿಂಗ-
ಶಿವ-ಭಕ್ತಿ-ಹಸ್ತ-ಮುಖ-ಪದಾರ್ಥ-ಪ್ರಸಾದ
ಎಂಬಿವಾದಿಯಾದ ಸಮಸ್ತಸಕೀಲಂಗಳ ನೆಲೆಕಲೆಯನರಿಯದೆ
ಜಿಹ್ವಾಲಂಪಟಕ್ಕೆ ಆಹ್ವಾನಿಸಿ
ಗುಹ್ಯಲಂಪಟದಲ್ಲಿ ವಿಸರ್ಜಿಸಿ
ಸಕಲೇಂದ್ರಿಯ ಮುಖದಲ್ಲಿ ಮೋಹಿಯಾಗಿ
ಸದ್ಗುರು ಕರುಣಾಮೃತರಸ ತಾನೆಂದರಿಯದೆ
ಬರಿದೆ, ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ
ಗುರು-ಚರ-ಪರವೆಂದು ಬೊಗಳುವ ಕುನ್ನಿಗಳ ನೋಡಿ
ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ
೨೨೬.
ಹಸಿವಿಂಗೆ ಭಿಕ್ಷವುಂಟು
ತೃಷೆಗೆ ಹಳ್ಳದಲ್ಲಿ ಸುಚಿತ್ತವಾದ ಅಗ್ರವಣಿಯುಂಟು
ಕಟ್ಟಿಕೊಂಬೆಡೆ ತಿಪ್ಪೆಯ ಮೇಲೆ ಅರಿವೆಯುಂಟು
ಶಯನಕ್ಕೆ ಹಾಳುದೇಗುಲವುಂಟು
ನಮ್ಮ ಸಮಸುಖಿಯಾಗಿ ನಿಮ್ಮ ಜ್ಞಾನವುಂಟು
ಚೆನ್ನಮಲ್ಲಿಕಾರ್ಜುನ
೨೨೭.
ಯೋಗಿಗೆ ಯೋಗಿಣಿಯಾಗಿಹಳು ಮಾಯೆ
ಜೋಗಿಗೆ ಜೋಗಿಣಿಯಾಗಿಹಳು ಮಾಯೆ
ಶ್ರವಣಗೆ ಕಂತಿಯಾದಳು ಮಾಯೆ
ಯತಿಗೆ ಪರಾರ್ಥ [=ಪರಾಕಿ]ವಾದಳು ಮಾಯೆ
ಹೆಣ್ಣಿಗೆ ಗಂಡು ಮಾಯೆ
ಗಂಡಿಗೆ ಹೆಣ್ಣು ಮಾಯೆ
ನಿಮ್ಮ ಮಾಯೆಗೆ ನಾನಂಜುವವಳಲ್ಲ ಚೆನ್ನಮಲ್ಲಿಕಾರ್ಜುನ
೨೨೮.
ಕಲ್ಯಾಣ-ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರೈಯ್ಯಾ ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನ
೨೨೯.
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗರುವಂಗೆ ಜಗವೆಲ್ಲ ಹೆಣ್ಣು ನೋಡಾ!
೨೩೦.
ಲೋಕವಿಡಿದು ಲೋಕದ ಸಂಗದಿಂದಿಪ್ಪೆನು
ಆಕಾರವಿಡಿದು ಸಾಕಾರಸಹಿತ ನಡೆವೆನು
ಹೊರಗೆ ಬಳಸಿ ಒಳಗೆ ಮೈಮರೆದಿಪ್ಪೆನು
ಬೆಂದ ನುಲಿಯಂತೆ ಹುರಿಗುಂದದಿಪ್ಪೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ಹತ್ತರೊಳಗೆ ಹನ್ನೊಂದಾಗಿ ನೀರ ತಾವರೆಯಂತಿಪ್ಪೆನು
೨೩೧.
ತನುವ ಮೀರಿತ್ತು, ಮನವ ಮೀರಿತ್ತು
ಮಹವ ಮೀರಿತ್ತು
ಅಲ್ಲಿಂದತ್ತ ಭಾವಿಸುವ ಭಾವಕರಿಲ್ಲಾಗಿ ತಾರ್ಕಣೆಯಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ ಬೆರಸಲಿಲ್ಲದ ನಿಜತತ್ವವು
೨೩೨.
ಆಧಾರ-ಸ್ವಾಧಿಷ್ಠಾನ-ಮಣಿಪೂರಕ-
ಅನಾಹುತ-ವಿಶುದ್ಧಿ-ಆಜ್ಞೇಯವ ನುಡಿದರೇನು?
ಆದಿಯನಾದಿಯ [ಸುದ್ದಿಯ] ಕೇಳಿದಡೇನು, ಹೇಳಿದಡೇನು
ತನ್ನಲ್ಲಿದ್ದುದ ತಾನರಿಯದನ್ನಕ್ಕರ
ಉನ್ಮನಿರಭಸದ ಮನ ಪವನದ ಮೇಲೆ
ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲಯದವರು?
೨೩೩.
ನಿತ್ಯವೆಂಬ ನಿಜಪದವೆನ್ನ ಹತ್ತೆ ಸಾರ್ದುದ ಕಂಡ ಬಳಿಕ
ಚಿತ್ತ ಕರಗಿ ಮನ ಕೊರಗಿ
ಹೃದಯವರಳಿತು ನೋಡಯ್ಯ
ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ
ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ
ಮರೆದೊರಗಿದೆ ನೋಡಯ್ಯ
೨೩೪.
ಆಶೆಯಾಮಿಷವಳಿದು
ಹುಸಿ ವಿಷಯಂಗಳೆಲ್ಲಾ ಹಿಂಗಿ
ಸಂಶಯಸಂಬಂಧ ವಿಸಂಬಂಧವಾಯಿತ್ತು ನೋಡಾ
ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ,
ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯ
೨೩೫.
ಆದಿಅನಾದಿಯ ನಿತ್ಯಾನಿತ್ಯವ ತಿಳಿಯಲರಿಯದೆ
ವಾಯಕ್ಕೆ ಪರಬ್ರಹ್ಮವ ನುಡಿವ
ವಾಯುಪ್ರಾಣಿಗಳವರೆತ್ತ ಬಲ್ಲರೋ ಆ ಪರಬ್ರಹ್ಮದ ನಿಲವ?
ಅದೆಂತೆಂದಡೆ
ಆದಿಯೇ ದೇಹ, ಅನಾದಿಯೇ ನಿರ್ದೇಹ
ಆದಿಯೇ ಸಕಲ, ಅನಾದಿಯೇ ನಿಷ್ಕಲ
ಆದಿಯೇ ಜಡ, ಅನಾದಿಯೇ ಅಜಡ
ಆದಿಯೇ ಕಾಯ, ಅನಾದಿಯೇ ಪ್ರಾಣ
ಈ ಎರಡರ ಯೋಗವ ಭೇದಿಸಿ
ತನ್ನಿಂದ ತಾ ತಿಳಿದು ನೋಡಲು
ಆದಿಸಂಬಂಧಮಪ್ಪ ಭೂತಂಗಳೂ ನಾನಲ್ಲ,
ದಶೇಂದ್ರಿಯಗಳೂ ನಾನಲ್ಲ,
ಅಷ್ಟಮದಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು
ಷಡ್ಭಾವವಿಕಾರಂಗಳು ಷಟ್ಕರ್ಮಂಗಳು, ಷಡ್ಧಾತುಗಳು
ಸಪ್ತವ್ಯಸನಂಗಳು, ತನುತ್ರಯಂಗಳು, ಜೀವತ್ರಯಂಗಳು,
ಮನತ್ರಯಂಗಳು, ಮಲತ್ರಯಂಗಳು, ಗುಣತ್ರಯಂಗಳು,
ಭಾವತ್ರಯಂಗಳು, ತಾಪತ್ರಯಂಗಳು, ಷಟ್ಕರಣಂಗಳು,
ಇಂತಿವು ಆದಿಯಾಗಿ ತೋರುವ ತೋರಿಕೆಯೆ ನಾನಲ್ಲ
ಎನ್ನವೇ ಅಲ್ಲ!
ಎನ್ನ ಅಧೀನವಾಗಿರ್ಪವು, ನಾನಿವರ ಅಧೀನವಲ್ಲ
ಎನ್ನ ತುರ್ಯಾತುರ್ಯತೀತವಪ್ಪ ಸಚ್ಚಿದಾನಂದ,
ನಿತ್ಯಪರಿಪೂರ್ಣವೇ ತನ್ನಿರವೆಂದು ತಿಳಿಯೆ-
ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದಾ ಬೆಸುಗೆ ಬಿಟ್ಟು
ನಿರಾಳದಲ್ಲಿ ನಿರವಯವನೆಯ್ದಲರಿಯದೆ
ಮತ್ತೆಯೂ ಭೌತಿಕಸಂಬಂಧಿಯಾಗಿ ಇರುತಿರಲು
ಈ ತತ್ವದಾದಿ ತಾನೆಂತೆನಲು
ಆ ಪರಬ್ರಹ್ಮವಪ್ಪ-ನಿತ್ಯನಿರಾಳ ನಿಶ್ಶೂನ್ಯಲಿಂಗವೇ
ತನ್ನ ಲೀಲಾವಿಲಾಸದಿಂದ ತಾನೇ ಸುನಾದ-ಬಿಂದು-ಪ್ರಕಾಶ
ತೇಜೋಮೂರ್ತಿಯಾಗಿ ನಿಂದು
ಆ ಮಹಾಲಿಂಗವೆನಿಸಿತ್ತು
ಆ ಪಂಚಸಾದಾಖ್ಯವೇ ಪಂಚಲಿಂಗಪ್ರಕಾಶವೆನಿಸಿತ್ತು
ಆ ಪಂಚಲಿಂಗಪ್ರಕಾಶವೇ ಪಂಚಮುಖವೆನಿಸಿತ್ತು
ಆ ಪಂಚಮುಖದಿಂದವೇ ಪಂಚಾಕ್ಷರಿ ಉತ್ಪತ್ತಿ
ಆ ಪಂಚಾಕ್ಷರಿಯಿಂದವೇ ಪಂಚಕಲೆಗಳುತ್ಪತ್ತಿ
ಆ ಪಂಚಕಲೆಗಳಿಂದಲೇ ಪಂಚಶಕ್ತಿಗಳುತ್ಪತ್ತಿ
ಆ ಪಂಚಶಕ್ತಿಗಳಿಂದವೇ
ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳ ಜನನ
ಆ ಜ್ಞಾನ-ಮನ-ಬುದ್ಧಿ-ಅಹಂಕಾರಗಳಿಂದವೇ
ಪಂಚತನ್ಮಾತ್ರೆಗಳುತ್ಪತ್ತಿ
ಆ ಪಂಚತನ್ಮಾತ್ರೆಗಳಿಂದವೇ ಪಂಚಭೂತಂಗಳುತ್ಪತ್ತಿ
ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು
ಆ ಅಂಗಕ್ಕೆ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳು
ಪ್ರತ್ಯಂಗವೆನಿಸಿತ್ತು
ಇಂತೀ ದೇಹಸಂಬಂಧಮಂ
ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ
ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು
ಎಲ್ಲಿ ಆಯಿತು ಅಲ್ಲೇ ಅಡಗಿಸಿ
ಆ ಕಾಯದ ಪೂರ್ವಾಶ್ರಯವನಳಿದು
ಮಹಾಘನಲಿಂಗವ ವೇಧಿಸಿ [ಕೊಟ್ಟು]
ಶಿವ ತಾನೆ ಗುರುವಾಗಿ ಬಂದು
ಆ ಗುರು ತಾನೆ ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿಯೆಂತೆಂದೆಡೆ
ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ
ಆ ಅಂಗಕ್ಕೆ ಕಲೆಗಳನೆ ಷಡ್ವಿಧಭಕ್ತಿಗಳೆಂದೆನಿಸಿ
ಆ ಶಕ್ತಿಗಳಿಗೆ ಷಡ್ವಿಧಭಕ್ತಿಯನಳವಡಿಸಿ
ಆ ಭಕ್ತಿಗಳಿಗೆ ಭಾವ-ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳನೆ
ಷಡ್ವಿಧ ಹಸ್ತಂಗಳೆನಿಸಿ
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ
ಷಡ್ವಿಧ ಲಿಂಗಗಳೆಂದೆನಿಸಿ
ಆ ಲಿಂಗಂಗಳಿಗೆ ಷಡಕ್ಷರಿಯನೇ ಷಡ್ವಿಧ ಮಂತ್ರವೆಂದೆನಿಸಿ
ಆ ಮಂತ್ರಲಿಂಗಂಗಳಿಗೆ ಹೃದಯವೊಂದುಗೂಡಿ
ಆ ಪಂಚೇಂದ್ರಿಯಂಗಳನೆ ಷಡ್ವಿಧಮುಖಂಗಳೆಂದೆನಿಸಿ
ಆ ಮುಖಂಗಳಿಗೆ ತನ್ಮಾತ್ರೆಗಳನೆ ದ್ರವ್ಯಪದಾರ್ಥಂಗಳೆನಿಸಿ
ಆ ದ್ರವ್ಯಪದಾರ್ಥಂಗಳನು ಆಯಾಯಾ ಮುಖದ ಲಿಂಗಂಗಳಲ್ಲಿ
ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ
ಅಂಗಸ್ಥಲಂಗಳಡಗಿ ತ್ರಿವಿಧಲಿಂಗಸ್ಥಲಂಗಳುಳಿದು
ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ
ಗುರುವಿನಲ್ಲಿ ಶುದ್ಧ ಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ
ಜಂಗಮದಲ್ಲಿ ಪ್ರಸಿದ್ಧಪ್ರಸಾದ
ಇಂತೀ ತ್ರಿವಿಧಪ್ರಸಾದ ಏಕಾರ್ಥವಾಗಿ
ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣನು
ಜ್ಞಾನಿ ಅಲ್ಲ, ಅಜ್ಞಾನಿ ಮುನ್ನವೇ ಅಲ್ಲ
ಶೂನ್ಯನಲ್ಲ, ನಿಶ್ಶೂನ್ಯನಲ್ಲ
ದ್ವೈತಿಯಲ್ಲ, ಅದ್ವೈತಿಯಲ್ಲ
ಇಂತೀ ಉಭಯಾತ್ಮಕ ತಾನೆಯಾಗಿ
ಇದು ಕಾರಣ-
ಅದರ ಆಗು-ಹೋಗು ಸಕೀಲಸಂಬಂಧವ
ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣರೇಬಲ್ಲರು
೨೩೬.
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ
ಏಕೆ?
ಆತನ ಧನಕ್ಕೆ ತಂದೆಯಾದನಲ್ಲದೆ
ಆತನ ಮನಕ್ಕೆ ತಂದೆಯಾದನೆ?
ಏಕೆ?
ಆತನ ಮನವನರಿಯನಾಗಿ
ಆತನ ಧನಕ್ಕೆ ತಂದೆಯಾದನು
ತಮ್ಮಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು
ನಿಮ್ಮ ನಿಜಭಕ್ತರಲ್ಲಯ್ಯ ಚೆನ್ನಮಲ್ಲಿಕಾರ್ಜುನ
೨೩೭.
ಅರ್ಥ ಸಂನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೆಯೂ ಕೊಳ್ಳದಿರಬೇಕು
ರುಚಿ ಸನ್ಯಾಸಿಯಾದಡೇನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ಸ್ತ್ರೀ-ಸನ್ಯಾಸಿಯಾದಡೇನಯ್ಯಾ
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ ತಪ್ಪಿಲ್ಲದಿರಬೇಕು
ದಿಗಂಬರಿಯಾದಡೇನಯ್ಯಾ
ಮನ ಬತ್ತಲೆಯಿರಬೇಕು
ಇಂತೀ ಚತುರ್ವಿಧ ಹೊಲಬನರಿಯದೆ
ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ
೨೩೮.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತಚ್ಛಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದೊಡೆ
ಮುಕ್ತಿರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಳಶದ ಅಭಿಷೇಕವ ಮಾಡಿಸಲು
ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಗಣಂಗಳ ಮಧ್ಯದಲ್ಲಿ
ಮಹಾಲಿಂಗವನು ಕರತಳಾಮಳಕವಾಗಿ
ಶಿಷ್ಯನ ಕರಸ್ಥಲಕ್ಕೆ ಇತ್ತು ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ
ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂತು ಮುಂದ ತೋರಿಸಿ ಹಿಂದೆ ಬಿಡಿಸಿದ
ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೨೩೯.
ಧನದ ಮೇಲೆ ಬಂದವರೆಲ್ಲ ಅನುಸಾರಿಗಳಲ್ಲದೆ
ಅನುವ ಮಾಡಬಂದವರಲ್ಲ
ಮನದ ಮೇಲೆ ಬಂದು ನಿಂದು ಜರಿದು ನುಡಿದು
ಪಥವ ತೋರಬಲ್ಲಡಾತನೇ ಸಂಬಂಧಿ
ಹೀಂಗಲ್ಲದೆ, ಅವರಿಚ್ಛೆಯ ನುಡಿದು ತನ್ನುದರವ ಹೊರೆವನಕ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ
೨೪೦.
ಸೆಜ್ಜೆ ಉಪ್ಪರಿಸಿ, ಶಿವಲಿಂಗ ಕರಸ್ಥಲಕ್ಕೆ ಬರೆ,
ಪ್ರಜ್ವಲಿಸಿ ತೊಳಗಿ ಬೆಳಗುತ್ತಿಹ ಕಾಂತಿಯಲ್ಲಿ
ಜಜ್ಜರಿಸಿ ತನು-ಮನ, ದೃಷ್ಟಿನಟ್ಟು
ನಟ್ಟದೃಷ್ಟಿಯೊಳು ಒಜ್ಜರಿಸಿ ಹರಿವ
ಶಿವಸುಖರಸದೊಳೋಲಾಡುತೆಂದಿಪ್ಪೆನೊ
ನಿಮ್ಮ ಸಜ್ಜನಿಕೆ-ಸದ್ಭಕ್ತಿಯ ತಲೆಯೊತ್ತಿ ಕೂಡಿ ಆಡಿ ಲಜ್ಜೆಗೆಟ್ಟು
ನಿಮ್ಮನೆಂದಿಗೆ ನೆರೆವೆ ಚೆನ್ನಮಲ್ಲಿಕಾರ್ಜುನ
೨೪೧.
ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕಂಡೆನ್ನ
ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನೆದೆನ್ನ
ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿಯೆನ್ನ
ಶ್ರೋತ್ರ ಶುದ್ಧವಾಯಿತ್ತು
ಅವರ ಕೀರ್ತಿಯ ಕೇಳಿಯೆನ್ನ
ಘ್ರಾಣ ಶುದ್ಧವಾಯಿತ್ತು
ನಿಮ್ಮ ಪಾದಾರ್ಪಿತ ಪರಿಮಳವ ವಾಸಿಸಿಯೆನ್ನ
ಜಿಹ್ವೆ ಶುದ್ಧವಾಯಿತ್ತು ನಿಮ್ಮ ಶರಣರೊಕ್ಕುದ ಕೊಂಡೆನಾಗಿ
ಭಾವನೆಯೆನಗಿದು ಜೀವನ ಕೇಳಾ ಲಿಂಗ ತಂದೆ
ನೆಟ್ಟನೆ ನಿಮ್ಮ ಮನ ಮುಟ್ಟಿ ಪೂಜಿಸಿ
ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನ
೨೪೨.
ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ
ಛಲಮದವೆಂಬುದಿಲ್ಲ ಪ್ರತಿದೂರನಾಗಿ
ಧನಮದವೆಂಬುದಿಲ್ಲ ತ್ರಿಕರಣಶುದ್ಧನಾಗಿ
ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದೆನಾಗಿ
ಮತ್ತಾವ ಮದವಿಲ್ಲ ನೀನವಗವಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಅಕಾಯಚರಿತ್ರನಾಗಿ
೨೪೩.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ
ಶಿವನ ನೆನೆಯಿರೇ! ಶಿವನ ನೆನೆಯಿರೇ!
ಈ ಜನ್ಮ ಬಳಿಕಿಲ್ಲ
ಚೆನ್ನಮಲ್ಲಿಕಾರ್ಜುನದೇವರ ದೇವ
ಪಂಚಮಹಾಪಾತಕರೆಲ್ಲ ಮುಕ್ತಿವಡೆದರು
೨೪೪.
ಕರುವಿನ ರೂಹು ಅರಗಿಳಿಯನೋದಿಸುವಂತೆ
ಓದಿಸುವುದಕೆ ಜೀವವಿಲ್ಲ
ಕೇಳುವುದಕ್ಕೆ ಜ್ಞಾನವಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನರಿಯದವನ ಭಕ್ತಿ
ಕರುವಿನ ರೂಹು ಅರಗಿಳಿಯ ನೋದಿಸುವಂತೆ
೨೪೫.
ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯ?
ಹೆರರನೊಲ್ಲದೆ ಬೇಟಕ್ಕೆ ಕಿತವೇಕಯ್ಯ?
ಚೆನ್ನಮಲ್ಲಿಕಾರ್ಜುನದೇವರ ದೇವನೊಂದಿಗೆ
ಬಿಡದ ನೇಹಕ್ಕೆ ಕಿತವೇಕೆ?
೨೪೬.
ಮುತ್ತೂ ನೀರಲಾಯಿತ್ತು
ವಾರಿಕಲ್ಲೂ ನೀರಲಾಯಿತ್ತು
ಉಪ್ಪೂ ನೀರಲಾಯಿತ್ತು
ಉಪ್ಪು ಕರಗಿತ್ತು, ವಾರಿಕಲ್ಲೂ ಕರಗಿತ್ತು
ಮತ್ತು ಕರಗಿದುದನಾರೂ ಕಂಡವರಿಲ್ಲ
ಈ ಸಂಸಾರಿಮಾನವರು ಲಿಂಗವ ಮುಟ್ಟಿ
ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೨೪೭.
ಬೋಳೆಯನೆಂದು ನಂಬಬೇಡ
ಡಾಳಕನವನು, ಜಗದ ಬಿನ್ನಾಣಿ
ಬಾಣ-ಮಯೂರ-ಕಾಳಿದಾಸ-ಓಹಿಲನುದ್ಭಟ
ಮಲುಹಣನವರಿಗಿತ್ತ ಪರಿ ಬೇರೆ
ಮುಕ್ತಿ-ಭುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬನು
ಚೆನ್ನಮಲ್ಲಿಕಾರ್ಜುನನು
೨೪೮.
ಜಾತಿಶೈವ-ಅಜಾತಿಶೈವವೆಂದೆರಡು
ಪ್ರಕಾರವಾಗಿಹುದಯ್ಯ
ಜಾತಿಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯ
ಅಜಾತಿಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯ
ಜಾತಿಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ
ಯದ್ದ್ವಾರೇ ಮತ್ತ ಮಾತಂಗಾಃ ವಾಯುವೇಗಾಸ್ತುರಂಗಮಾಃ
ಪೂರ್ಣೇಂದುವದನಾ ನಾರ್ಯಃ ಶಿವಪೂಜಾವಿಧೇ ಫಲಂ
ಎಂದುದಾಗಿ-ಇದು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯ
ಅಜಾತಿಶೈವರು ಗುರುಲಿಂಗಕ್ಕೆ ತನುಮನಧನವ ನಿವೇದಿಸಿ
ಸರ್ವಸೂತಕರಹಿತವಾಗಿಹರಯ್ಯ
ಅಹಂ ಮಾಹೇಶ್ವರಪ್ರಾಣೋ ಮಾಹೇಶ್ವರೋ ಮಮ ಪ್ರಾಣಃ
ತಥೈವೈಕ್ಯಂ ತು ನಿಷ್ಕ್ರಿಯಂ ಅಚ್ಚಲಿಂಗೈಕ್ಯಮೇವ ಚ
ಇದು ಕಾರಣ ಸರ್ವೇಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿ ಕಾಯವೆಂಬೈಕ್ಯಪದವನು
ಅಜಾತಿಶೈವರಿಗೆ ಕೊಡುವನಯ್ಯ
೨೪೯.
ಸತ್ತ ಹೆಣ ಕೂಗಿದುದುಂಟು
ಬೈಚಿಟ್ಟ ಬಯಕೆ ಕರೆದುದುಂಟು
ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು
ಇದು ನಿಶ್ಚಯಿಸಿ ನೋಡಿ ಚೆನ್ನಮಲ್ಲಿಕಾರ್ಜುನದೇವನಲ್ಲಿ
೨೫೦.
ಮರೆದೊರಗಿ ಕನಸ ಕಂಡೇಳುವಲ್ಲಿ
ಸತ್ತ ಹೆಣ ಎದ್ದಿತ್ತು
ತನ್ನ ಋಣನಿಧಾನ ಎದ್ದು ಕರೆಯಿತ್ತು
ಹೆಪ್ಪಿಟ್ಟ ಹಾಲು ಘಟ್ಟಿ ತುಪ್ಪವಾಗಿ ಸಿಹಿಯಾಯಿತ್ತು
ಇದಕ್ಕೆ ತಪ್ಪ ಸಾಧಿಸಲೇಕೆ?
ಚೆನ್ನಮಲ್ಲಿಕಾರ್ಜುನದೇವನ ಅಣ್ಣಗಳಿರಾ
೨೫೧.
ಎನಗೇಕಯ್ಯ? ಸಾವ ಪ್ರಪಂಚಿನ ಪುತ್ಥಳಿ
ಮಾಯಿಕದ ಮಲಭಾಂಡ ಆತುರದ ಭವನಿಳಯ
ಜಲಕುಂಭದ ಒಡೆಯಲ್ಲಿ ಒಸರುವ ನೆಲೆಮನೆ ಎನಗೇಕಯ್ಯ?
ಬೆರಳು ತಾಳ ಹಣ್ಣ ಹಿಸಿದಡೆ ಮೆಲಲುಂಟೆ
ಎನ್ನ ತಪ್ಪನೊಪ್ಪಗುಳ್ಳಾ ಚೆನ್ನಮಲ್ಲಿಕಾರ್ಜುನದೇವ
೨೫೨.
ಊಡಿದಡುಣ್ಣದು, ನೀಡಿದಡರಿಯದು
ಕಾಣದು ಬೇಡದು, ಒಲಿಯದು ನೋಡಾ
ಊಡಿದರುಂಡು ನೀಡೀದಡೊಲಿದು
ಬೇಡಿದ ವರವ ಕೊಡುವ ಜಂಗಮಲಿಂಗದ ಪಾದವ
ಹಿಡಿದು ಬದುಕಿದೆ ಕಾಣಾ ಚೆನ್ನಮಲ್ಲಿಕಾರ್ಜುನ
೨೫೩.
ಕಾಯ ಪ್ರಸಾದವೆನ್ನ ಮನ ಪ್ರಸಾದವೆನ್ನ
ಪ್ರಾಣ ಪ್ರಸಾದವೆನ್ನ ಭಾವ ಪ್ರಸಾದವೆನ್ನ
ಸೈಧಾನ ಪ್ರಸಾದವೆನ್ನ ಸಮಭೋಗ ಪ್ರಸಾದವೆನ್ನ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆ
೨೫೪.
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ
ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ
ವಿಧಿಯ ಮೀರುವ ಅಮರರಿಲ್ಲ
ಕ್ಷುಧೆ-ವ್ಯಸನ-ವಿಧಿಗಂಜಿ ನಾ ನಿಮ್ಮ ಮರೆವೊಕ್ಕು
ಚೆನ್ನಮಲ್ಲಿಕಾರ್ಜುನ ಬದುಕಿದೆ
೨೫೫.
ಅರಿದೆನೆಂದೆಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೆ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು
೨೫೬.
ಎನ್ನಂತೆ ಪುಣ್ಯಂಗೆಯ್ದವರುಂಟೆ?
ಎನ್ನಂತೆ ಭಾಗ್ಯಂಗೆಯ್ದವರುಂಟೆ?
ಕಿನ್ನರನಂತಪ್ಪ ಸೋದರನೆನಗೆ
ಏಳೇಳು ಜನ್ಮದಲ್ಲಿ ಶಿವಭಕ್ತರೇ ಬಂಧುಗಳೆನಗೆ
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ
೨೫೭.
ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯ
ಅಯ್ಯಾ ನಿಮ್ಮ ಶರಣರು ಇದ್ದ ಪುರವೇ ಕೈಲಾಸಪುರವಯ್ಯ
ಅಯ್ಯಾ ನಿಮ್ಮ ಶರಣರು ನಿಂದುದೇ ನಿಜನಿವಾಸವಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ
ಆನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
೨೫೮.
ಗುರುವೆ ತೆತ್ತಿಗನಾದ
ಲಿಂಗವೆ ಮದವಳಿಗನಾದ
ನಾನು ಮದವಳಿಗೆಯಾದೆನು
ಈ ಭುವನವೆಲ್ಲರಿಯಲು
ಅಸಂಖ್ಯಾತರೆನಗೆ ತಾಯಿತಂದೆಗಳು
ಕೊಟ್ಟರು ಪ್ರಭುವಿನ ಮನೆಗೆ
ಸಾದೃಶ್ಯವಪ್ಪ ವರನ ನೋಡಿ
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನಾದ ಬಳಿಕ
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ
೨೫೯.
ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು
ಪ್ರುಭುವೆ ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನ್ನ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗೆ ಮತ್ತಾವುದಿಲ್ಲವಯ್ಯ ಪ್ರಭುವೆ
೨೬೦.
ಅಂಗಸಂಗದಲ್ಲಿ ಲಿಂಗಸಂಗಿಯಾದೆ
ಲಿಂಗಸಂಗದಲ್ಲಿ ಅಂಗಸಂಗಿಯಾದೆ
ಉಭಯಸಂಗವನರಿಯದೆ ಪರಿಣಾಮಿಯಾದೆನು
ನುಡಿಯ ಗಡಣವ ಮರೆದು ತೆರಹಿಲ್ಲದಿದ್ದರೇನು
ಎನ್ನ ದೇಹ ಚೆನ್ನಮಲ್ಲಿಕಾರ್ಜುನನ ಬೆರೆಸಿದ ಬಳಿಕ
ಇನ್ನು ನಾನು ಏನೆಂದೂ ಅರಿಯೆನಯ್ಯ
೨೬೧.
ಅಂಗದೊಳಗೆ ಅಂಗವಾಗಿ ಅಂಗಲಿಂಗೈಕ್ಯವ ಮಾಡಿದೆ
ಮನದೊಳಗೆ ಮನವಾಗಿ ಮನ ಲಿಂಗೈಕ್ಯವ ಮಾಡಿದೆ
ಭಾವದೊಳಗೆ ಭಾವವಾಗಿ ಭಾವಲಿಂಗೈಕ್ಯವ ಮಾಡಿದೆ
ಅರಿವಿನೊಳಗೆ ಅರಿವಾಗಿ ಜ್ಞಾನಲಿಂಗೈಕ್ಯವ ಮಾಡಿದೆ
ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ
ನಿವೃತ್ತಿಲಿಂಗೈಕ್ಯವ ಮಾಡಿದೆ
ನಾನೆಂಬುದ ನಿಲಿಸಿ ನೀನೆಂಬುದ ಕೆಡಿಸಿ
ಉಭಯಲಿಂಗೈಕ್ಯವ ಮಾಡಿದೆ
ಚೆನ್ನಮಲ್ಲಿಕಾರ್ಜುನನೊಳಗೆ ನಾನಳಿದೆನಾಗಿ
ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು [=ಉಳಿಯಿತ್ತು?]
ಕಾಣಾ ಸಂಗನಬಸವಣ್ಣ
೨೬೨.
ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಈ ಮೂವರೂ ಒಂದೊಂದ ಕೊಟ್ಟರೆನಗೆ-
ಮೂರು ಭಾವವಾಯಿತ್ತು
ಈ ಮೂರನು ನಿನ್ನಲ್ಲಿ ಸಮರ್ಪಿಸಿದ ಬಳಿಕ
ಎನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ
ನಿನ್ನ ಕರುಣದ ಶಿಶು ನಾನು ಕಾಣಾ ಸಂಗನಬಸವಣ್ಣ
೨೬೩.
ಲಿಂಗ ಸುಖಸಂಗದಲ್ಲಿ ಮನ ವೇದ್ಯವಾಯಿತ್ತು
ಇನ್ನೆಲ್ಲಿಯದಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯದಯ್ಯ ನಿಮ್ಮಲ್ಲಿ ಕೂಡುವುದು?
ಪರಮಸುಖಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ
೨೬೪.
ಮೂಲದ್ವಾರದ ಬೇರ ಮೆಟ್ಟಿ ಭೂಮಂಡಲವನೇರಿದೆ
ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ
ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ
ಕೈವಿಡಿದು ತೆಗೆದುಕೊಳ್ಳಾ ಚೆನ್ನಮಲ್ಲಿಕಾರ್ಜುನ
೨೬೫.
ಬಯಲು ಲಿಂಗವೆಂಬೆನೆ? ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ! ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ, ಚೆನ್ನಮಲ್ಲಿಕಾರ್ಜುನ
೨೬೬.
ನೋಡಿಹೆನೆಂದಡೆ ದೃಷ್ಟಿ ಮರೆಯಾಯಿತ್ತು
ಕೂಡಿಹೆನೆಂದೊಡೆ ಭಾವ ಮರೆಯಾಯಿತ್ತು
ಏನೆಂಬೆನೆಂತೆಂಬೆನಯ್ಯ?
ಅರಿದಿ[ದ=?]ಹೆನೆಂದೊಡೆ ಮರಹು ಮರೆಯಾಯಿತ್ತು
ನಿನ್ನ ಮಾಯೆಯನತಿಗಳೆವೊಡೆ ಎನ್ನಳವೇ
ಕಾಯಯ್ಯ ಚೆನ್ನಮಲ್ಲಿಕಾರ್ಜುನ
೨೬೭.
ಭಾವ ಬೀಸರವಾಯಿತ್ತು
ಮನ ಮೃತ್ಯುವನಪ್ಪಿತ್ತು, ಆನೇವೆನಯ್ಯ?
ಅಳಿತನದ ಮನ ತಲೆಕೆಳಗಾಯಿತ್ತು, ಆನೇವೆನಯ್ಯ?
ಬಿಚ್ಚಿ ಬೇರಾಗದ ಭಾವವಾಗಿ ಬೆರೆದೊಪ್ಪಚ್ಚಿ
ನಿನ್ನ ನಿತ್ಯಸುಖದೊಳಗಾನೆಂದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
೨೬೮.
ಹಗಲೆನ್ನೆ, ಇರುಳೆನ್ನೆ!
ಉದಯವೆನ್ನೆ, ಅಸ್ತಮಾನವೆನ್ನೆ! ಹಿಂದೆನ್ನೆ, ಮುಂದೆನ್ನೆ!
ನೀನಲ್ಲದೆ ಪರತೊಂದಹುದೆನ್ನೆ! ಮನ ಘನವಾದುದಿಲ್ಲಯ್ಯ!
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯ!
ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ
ಆನೆನ್ನ [=ಆಂ ನಿನ್ನ?]ನೆಂತು ಕಾಂಬೆನು ಹೇಳಾ
ಚೆನ್ನಮಲ್ಲಿಕಾರ್ಜುನ
೨೬೯.
ಕಾಯದ ಕಾರ್ಪಣ್ಯವರತಿತ್ತು
ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು!
ಇನ್ನೇವೆನಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನ
೨೭೦.
ಅಯ್ಯ ಕತ್ತಲೆಯ ಕಳೆದುಳಿದ
ಸತ್ಯ ಶರಣರ ಪರಿಯನೇನೆಂಬೆನಯ್ಯ!
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕುವೆನಯ್ಯ
ಅಯ್ಯ, ನಿನ್ನಲ್ಲಿ ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ
ದಿನವ ಕಳೆಯಿಸಯ್ಯ, ಚೆನ್ನಮಲ್ಲಿಕಾರ್ಜುನ
೨೭೧.
ತನು ಶುದ್ಧ, ಮನ ಶುದ್ಧ,
ಭಾವಶುದ್ಧವಾದವರನೆನಗೊಮ್ಮೆ ತೋರಾ!
ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ,
ನಿತ್ಯಶುದ್ಧರಾದವರನೆನಗೊಮ್ಮೆ ತೋರಾ!
ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ
ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ
೨೭೨.
ನಡೆ ಶುಚಿ, ನುಡಿ ಶುಚಿ, ತನು ಶುಚಿ,
ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು
ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ
ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ
೨೭೩.
ಪಡೆವುದರಿದು ನರಜನ್ಮವ,
ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ,
ಪಡೆವುದರಿದು ಸತ್ಯಶರಣರನುಭಾವವ!
ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ
ನಲಿನಲಿದಾಡು ಕಂಡೆಯಾ ಎಲೆ ಮನವೇ!
೨೭೪.
ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ!
ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ!
ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ!
ಎಡರುವ ಹರಳೆಲ್ಲ ಚಿಂತಾಮಣಿ!
ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ
ನೋಡುತ ಬಂದು, ಕದಳಿಯ ಬನವ ಕಂಡೆ ನಾನು
೨೭೫.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ
೨೭೬.
ಲಿಂಗಾಂಗಸಂಗ ಸಮರದ ಸುಖದಲ್ಲಿ
ಮನ ವೇದ್ಯವಾಯಿತು
ನಿಮ್ಮ ಶರಣರ ಅನುಭಾವಸಂಗದಿಂದ
ಎನ್ನ ತನು-ಮನ-ಪ್ರಾಣಪದಾರ್ಥವ
ಗುರು-ಲಿಂಗ-ಜಂಗಮಕಿತ್ತು
ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಿಯಾದೆನು
ಆ ಮಹಪ್ರಸಾದದ ರೂಪ-ರುಚಿ-ತೃಪ್ತಿಯ
ಇಷ್ಟ-ಪ್ರಾಣ-ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ
ಮಹಾಘನಪ್ರಸಾದಿಯಾದೆನು
ಇಂತೀ ಸರ್ವಾಚಾರಸಂಪತ್ತು
ಎನ್ನ ತನು-ಮನವೇದ್ಯವಾಯಿತು
ಇನ್ನೆಲ್ಲಿಯಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯಯ್ಯ ನಿಮಗೆ ಕೂಡುವುದು?
ಪರಮಸುಖದ ಪರಿಣಾಮ ಮನಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ ಪ್ರಭುವೆ
೨೭೭.
ಹೋದೆನೂರಿಗೆ ಇದ್ದೆ ನಾನಿಲ್ಲಿ
ಹೋದರೆ ಮರಳಿ ಇತ್ತ ಬಾರೆನವ್ವ
ಐವರು ಭಾವದಿರು, ಐವರು ನಗೆವೆಣ್ಣು
ಐವರು ಕೂಡಿ ಎನ್ನ ಕಾಡುವರು
ಬೈವರು, ಹೊಯ್ವರು, ಮಿಗೆ ಕೆಡೆನುಡಿವರು
ಅವರೈವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ
ಅತ್ತೆ ಮಾವನು ಮೈದುನ ನಗೆವೆಣ್ಣು
ಚಿತ್ತವನೊರೆದು ನೋಡುವ ಗಂಡ
ಕತ್ತಲೆಯಾದರೆ ಕರೆದನ್ನವ ನೀಡಳವ್ವ
ಅತ್ತಿಗೆ ಹತ್ತೆಂಟು ನುಡಿವಳಮ್ಮಯ್ಯ ತಾಯೆ
ಉಪಮಾತೀತರು ರುದ್ರಗಣಂಗಳು
ಅವರೆನ್ನ ಬಂಧುಬಳಗಂಗಳು ಸಯಸಿ (?)
ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದರೆ
ಮರಳಿ ಬಾರೆನಮ್ಮ ತಾಯೆ
೨೭೮.
ಲಿಂಗವೆನ್ನೆ ಲಿಂಗೈಕ್ಯವೆನ್ನೆ!
ಸಂಗವೆನ್ನೆ ನಿಸ್ಸಂಗವೆನ್ನೆ!
ಆಯಿತ್ತೆನ್ನೆ ಆಗದೆನ್ನೆ!
ನಾನೆನ್ನೆ ನೀನೆನ್ನೆ!
ಚೆನ್ನಮಲ್ಲಿಕಾರ್ಜುನಲಿಂಗದಲ್ಲಿ
ಘನಲಿಂಗೈಕ್ಯವಾದ ಬಳಿಕ ಏನೂ ಎನ್ನೆ!
೨೭೯.
ಕಾಯ ಮುಟ್ಟುವೊಡೆ ಕಾಣಬಾರದ ಘನ
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆನಯ್ಯ?
ಕ್ರೀಗಳು ಮುಟ್ಟಲರಿಯವು
ನಿಮ್ಮನೆಂತು ಪೂಜಿಸುವೆನಯ್ಯ?
ನಾದಬಿಂದುಗಳು ಮುಟ್ಟಲರಿಯವು
ನಿಮ್ಮನೆಂತು ಪಾಡುವೆನಯ್ಯ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ನೋಡಿ ನೋಡಿ ಸೈವೆರಗಾಗುತಿಪ್ಪೆನಯ್ಯ
೨೮೦.
ಕ್ರೀಡೆ ತುಂಬಿಯ ಹಂಬಲದಿಂದ ತುಂಬಿಯಾಗಿ
ತನ್ನ ಬಿಡಲುಂಟೇ ಅಯ್ಯ?
ಆನು ನಿಮ್ಮ ನೆನೆದು, ಎನ್ನ ಕರ ತುಂಬಿ,
ಎನ್ನ ಮನ ತುಂಬಿ, ಎನ್ನ ಭಾವ ತುಂಬಿ
ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು ಕಾಣುವೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೨೮೧.
ಕಲ್ಲಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೇ ಅವ್ವ?
ಉಂಡು ಹಸಿವಾಯಿತ್ತೆಂದೊಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ
ಗಂಡ ಮಲ್ಲಿಕಾರ್ಜುನಯ್ಯನೆಂತೊಲಿವೆನಯ್ಯ
೨೮೨.
ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು
ಲಿಂಗಕ್ಕಾಗಿ ಮಾಡಿಯೂ ಮಾಡದಂತಿಪ್ಪೆ ನೋಡಾ!
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
ಹತ್ತರೊಳಗೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವ?
೨೮೩.
ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ
ಇದುಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ
ಈ ಸಾವ ಕೆಡುವ ಗಂಡರನೊಯ್ದು [ಒಲೆಯೊಳಗಿಕ್ಕು ತಾಯೆ]
೨೮೪.
ಅಯ್ಯ, ಪರಾತ್ಪರ ಸತ್ಯಸದಾಚಾರ ಗುರುಲಿಂಗ-
ಜಂಗಮದ ಶ್ರೀಚರಣವನ್ನು
ಹಿಂದೆ ಹೇಳದ ಅಚ್ಚಪ್ರಸಾದಿಯೋಪಾದಿಯಲ್ಲಿ
ನಿರ್ವಂಚಕತ್ವದಿಂದ
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ
ಒಪ್ಪೊತ್ತು ಅಷ್ಟವಿಧಾರ್ಚನೆಯ ಷೋಡಶೋಪಚಾರದಿಂದ
ಪಾದಾರ್ಚನೆಯ ಮಾಡಿ
ಪಾದೋದಕ ಪ್ರಸಾದವನ್ನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ
ಇಷ್ಟ ಮಹಾಲಿಂಗದೇವನ ತ್ರಿವಿಧ ಸ್ಥಾನದಲ್ಲಿ
ಬಸವಣ್ಣ-ಚೆನ್ನಬಸವಣ್ಣ-ಅಲ್ಲಮ[+ಹಾ?]ಪ್ರಭು
ಎಂಬ ತ್ರಿವಿಧನಾಮಸ್ವರೂಪವಾದ
ಷೋಡಶಾಕ್ಷರಂಗಳೇ ಷೋಡಶವರ್ಣವಾಗಿ
ನೆಲಸಿರ್ಪರು ನೋಡಾ!
ಇಂತು ಷೋಡಶಕಲಾಸ್ವರೂಪವಾದ ಚಿದ್ರನ ಮಹಾಲಿಂಗದೇವನ
ನಿರಂಜನ ಜಂಗಮದೋಪಾದಿಯಲ್ಲಿ
ಸುಗುಣ-ನಿರ್ಗುಣ ಪೂಜೆಗಳ ಮಾಡಿ
ಜಂಗಮಚರಣ ಸೋಂಕಿನಿಂ ಬಂದ
ಗುರುಪಾದೋದಕವನಾದರೂ ಸರಿಯೆ
ಒಂದು ಭಾಜನದಲ್ಲಿ ಸೂಕ್ಷ್ಮವಾಗಿ ರಚಿಸಿ
ಆ ಉದಕದೊಳಗೆ ಹಸ್ತೋದಕ ಮಂತ್ರೋದಕವ ಮಾಡಿ
ಆಮೇಲೆ ಅನಾದಿಪ್ರಣಮವ ಪ್ರಸಾದ ಪ್ರಣಮದೊಳಗೆ
ಅಖಂಡ ಮಹಾಜ್ಯೋತಿಪ್ರಣಮವ ಲಿಖಿತವ ಮಾಡಿ
ಶ್ರದ್ಧಾದಿಯಾದ ಪೂರ್ಣಭಕ್ತಿಯಿಂದ
ಮಹಾಚಿದ್ರನತೀರ್ಥವೆಂದು ಭಾವಿಸಿ
ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ
ಆನಿಮಿಷ ದೃಷ್ಟಿಯಿಂದ ನಿರೀಕ್ಷಿಸಿ
ಮೂರು ವೇಳೆ ಪ್ರದಕ್ಷಿಣೆಯ ಮಾಡಿ
ಆ ಚಿದ್ರನತೀರ್ಥವನ್ನು
ದ್ವಾದಶದಳಕಮಲದಲ್ಲಿ ನೆಲೆಸಿರುವ ಇಷ್ಟಮಹಾಲಿಂಗಜಂಗಮಕ್ಕೆ
ಅಷ್ಟವಿಧ ಮಂತ್ರ ಸಕೀಲಂಗಳಿಂದ
ಆಚಾರಾದಿ ಶೂನ್ಯಾಂತವಾದ ಅಷ್ಟವಿಧಲಿಂಗಧ್ಯಾನದಿಂದ
ಅಷ್ಟವಿಧ ಬಂಧಂಗಳಂ ಸಮರ್ಪಿಸಿದಲ್ಲಿಗೆ
ಅಷ್ಟವಿಧೋದಕವಾಗುವುದಯ್ಯ
ಆ ಇಷ್ಟ ಮಹಾಲಿಂಗ ಜಂಗಮವೇ
ಅಷ್ಟಾದಶ ಸ್ಮರಣೆಯಿಂದ ಮುಗಿದಲ್ಲಿಗೆ
ನವಮೋದಕವಾಗುವುದಯ್ಯ
ಉಳಿದುದಕವು ತ್ರಿವಿಧೋದಕವೆನಿಸುವುದಯ್ಯ
ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪವಾದ
ತೀರ್ಥವ ಮುಗಿದಮೇಲೆ
ತಟ್ಟೆ-ಬಟ್ಟಲಲ್ಲಿ ಎಡೆಮಾಡಬೇಕಾದರೆ
ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿದ್ದರೆ
ತಾವು ಸಲಿಸಿದ ಪಾದೋದಕಪ್ರಸಾದವ ಕೊಡುವುದಯ್ಯ
ಸಹಜಲಿಂಗಭಕ್ತರಾದರೆ ಮುಖಮಜ್ಜನವ ಮಾಡಿಸಿ
ತಾವು ಧರಿಸುವ ವಿಭೂತಿಧಾರಣವ ಮಾಡಿಸಿ
ಶಿವಶಿವಾ ಹರಹರಾ ಬಸವಲಿಂಗ ಎಂದು ಬೋಧಿಸಿ
ಎಡೆಮಾಡಿಸಿಕೊಂಬುದಯ್ಯ
ಆಮೇಲೆ-ತಾನು ಸ್ಥೂಲ[=ಸ್ವಸ್ಥಲ?]ವಾದೊಡೆ ಸಂಬಂಧವಿಟ್ಟು
ಪರಸ್ಥಲವಾದೊಡೆ ಚಿದ್ರನ ಇಷ್ಟಮಹಾಲಿಂಗ-ಜಂಗಮನ
ಕರಸ್ಥಲದಲ್ಲಿ ಮೂರ್ತವ ಮಾಡಿಸಿಕೊಂಡು
ದಕ್ಷಿಣಹಸ್ತದಲ್ಲಿ ಗುರು-ಲಿಂಗ-ಜಂಗಮಸೂತ್ರವಿಡಿದು
ಬಂದ ಕ್ರಿಯಾಭಸಿತವ ಲೇಪಿಸಿ
ಮೂಲಪ್ರಮಾಣವ ಪ್ರಸಾದಪ್ರಣವದೊಳಗೆ
ಗೋಳಕಪ್ರಣವ-ಅಖಂಡಗೋಳಕಪ್ರಣವ-
ಜ್ಯೋತಿಪ್ರಣವ ಧ್ಯಾನದಿಂದ
ದ್ವಾದಶಮಣಿಯ ಧ್ಯಾನಿಸಿ
ಪ್ರದಕ್ಷಿಣವ ಮಾಡಿ
ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ
ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ
ಪದಾರ್ಥದ ಪೂರ್ವಾಶ್ರಯವ ಕಳೆದು
ಶುದ್ಧಪ್ರಸಾದವೆಂದು ಭಾವಿಸಿ
ಇಷ್ಟಮಹಾಲಿಂಗ-ಜಂಗಮಕ್ಕೆ
ಅಷ್ಟಾದಶಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿ
ಎರಡು ವೇಳೆ ರೂಪವ ತೋರಿ
ಸುರುಚಿ ಪ್ರಾಣಲಿಂಗ ಮಂತ್ರಜಿಹ್ವೆಯಲ್ಲಿಟ್ಟು
ಆರನೆಯ ವೇಳೆ ಭೋಜನವ
ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ
ಷಡ್ವಿಧಲಿಂಗಲೋಲುಪ್ತಿಯಿಂದ ಆಚರಿಸಿದಾತನೇ
ಗುರುಭಕ್ತನಾದ ನಿಚ್ಚಪ್ರಸಾದಿ ಎಂಬೆ
ಚೆನ್ನಮಲ್ಲಿಕಾರ್ಜುನ
೨೮೫.
ಒಲ್ಲೆ ಗಂಡನ ಕೂಟ ಒಗೆತನವ
ಅಕ್ಕಟ ಗಂಡನ ಮನೆಯ ಬಿರಿಸಯ್ಯಯ್ಯೋ! ||ಪಲ್ಲವ||
ಒಡಕು ಗಂಗಳದಲ್ಲಿ ನೀರಂಬಲಿಯ ನೀಡಿ
ಹೊಡೆದಳು ನಮ್ಮತ್ತೆ ಮೊರದಲ್ಲಿ
ಕಡುದುಃಖದಿಂದ ನಾ ಒಲೆಯ ಮುಂದೆ ಕುಳಿತಿರೆ
ಕೊಡಿತನದಿ ಬಂದು ಒದ್ದಳಯ್ಯಯ್ಯೋ! ||೧||
ನೆತ್ತಿಗೆಣ್ಣೆಯಿಲ್ಲದೆ ತಲೆ ಬತ್ತಿಗಟ್ಟಿತು
ವೃತ್ತಜವ್ವನ ಬಾಡಿಹೋದವಲ್ಲ!
ಅತ್ತೆಯಾಸೆಯಿಲ್ಲ ಮಾವನ ಲೇಸಿಲ್ಲ
ಚಿತ್ತವಲ್ಲಭನಲ್ಲಿ ಗಣವಿಲ್ಲವಯ್ಯಯ್ಯೋ! ||೨||
ಹೇಳಿ ಕಳುಹುವೆ ನಾನವ್ವೆಗಳೂರಿಗೆ
ಕೇಳಯ್ಯ ಶ್ರೀಶೈಲ ಮಲ್ಲಿಕಾರ್ಜುನ
ಭಾಳಪಾಪಿಗಳಲ್ಲಿ ಕೊಟ್ಟರಯ್ಯಯ್ಯೋ! ||೩||
೨೮೬.
ಆಪತ್ತಿಗೊಳಗಾದೆನಮ್ಮಯ್ಯ, ನಾ
ನಾಪತ್ತಿಗೊಳಗಾದೆ ||ಪಲ್ಲವ||
ಪಡುವಣ ದೇಶದಿ ಹುಟ್ಟಿದೆನಮ್ಮ
ಬಡಗಣ ದೇಶದಿ ಬೆಳೆದೆ
ಆಗರದ ನಾಡಿಗೆ ಇತ್ತರೆನ್ನನು
ದೂರದ ನೀರ ನಾ ಹೊರಲಾರೆನಮ್ಮ ||೧||
ಕೂಳಿಲ್ಲ ಹೊಟ್ತೆಗೆ, ತಲೆ ಬತ್ತಿಗಟ್ಟಿತು
ಬಲ್ಮೊಲೆಗಳು ಬತ್ತಿ ಬಡವಾದೆ
ಒಲ್ಲದ ಗಂಡನ ಒಲಿಸಿಹೆನೆಂದಡೆ
ಬಲ್ಲವರೊಂದು ಮದ್ದ ಹೇಳಿರಮ್ಮ ||೨||
ಆರೂ ಬಾರದ ತವರೂರ ದಾರಿಯಲಿ
ಬಾರದ ಭವದಲಿ ಬಂದೆನು
ಊರ ಕಡೆಗೆ ನೋಡಿ ಕಣ್ಣೆಲ್ಲ ಕೆಟ್ಟವು
ನೀರ ಹೊಳೆಗೆ ಹೋಗಿ ಅತ್ತೆನಮ್ಮ ||೩||
ಅತ್ತೆಯ ಲೇಸುಂಟೆ? ಮಾವನ ಲೇಸುಂಟೆ?
ಗಂಡನ ಲೇಸುಂಟೆಂಬುದನರಿಯೆ
ಆಸತ್ತು ಬೇಸತ್ತು ಒಲೆಯ ಮುಂದೆ ಕುಳಿತರೆ
ಪಾಪಿ ಗಂಡ ಕಾಲೊಳೊದ್ದನಮ್ಮ ||೪||
ಉನ್ನತ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನಿನ್ನ ನಂಬಿದ ಭಕ್ತೆ ನಾನೆಯಲ್ಲಾ!
ಮುನ್ನಿನ ಶರಣರ ಸಲಹಿದಂದದಿ ಬೇಗ
ಎನ್ನ ಸಲಹೊ ದೇವರ ದೇವ ||೫||
೨೮೭.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||
೨೮೮.
ಕರಕರೆ ಕರಕನೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||
೨೮೯.
ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?
ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟ?
ನಿಮ್ಮರಿವು ತಲೆದೋರಿದ ಕಾರಣ
ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ
೨೯೦.
ಅಯ್ಯ, ನಿಮ್ಮ ಮುಟ್ಟಿ ಮುಟ್ಟದೆನ್ನ ಮನ ನೊಡಾ!
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನ
೨೯೧.
ಹುಟ್ಟು-ಹೊರೆಯ ಕಟ್ಟಳೆಯ ಕಳೆದನವ್ವ
ಹೊನ್ನು-ಮಣ್ಣಿನ ಮಾಯೆಯ ಮಾಣಿಸಿದನವ್ವ
ಎನ್ನ ತನುವಿನ ಲಜ್ಜೆಯನಿಳುಹಿ
ಎನ್ನ ಮನದ ಕತ್ತಲೆಯ ಕಳೆದ
ಚೆನ್ನಮಲ್ಲಿಕಾರ್ಜುನಯ್ಯನ
ಒಳಗಾದವಳನೇನೆಂದು ನುಡಿಯಿಸುವಿರವ್ವ
೨೯೨.
ಕಾಯದ ಕಳವಳವ ಕೆಡಿಸಿ
ಮನದ ಮಾಯೆಯ ಮಾಣಿಸಿ
ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯ
ಶಿವಶಿವಾ ಎನ್ನ ಬಂಧನವ ಬಿಡಿಸಿ
ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯ
ಇರುಳೋಸರಿಸದ ಜಕ್ಕವಕ್ಕಿಯಂತೆ ನಾನಿಂದು
ನಿಮ್ಮ ಶ್ರೀಪಾದವನಿಂಬುಗೊಂಡು
ಸುಖದೊಳಗೋಲಾಡುವೆನಯ್ಯ ಚೆನ್ನಮಲ್ಲಿಕಾರ್ಜುನ
೨೯೩.
ಅಯ್ಯ, ನೀನೆನ್ನ ಮೊರೆಯನಾಲಿಸಿದೊಡಾಲಿಸು
ಆಲಿಸದಿರ್ದೊಡೆ ಮಾಣು
ಅಯ್ಯ, ನೀನೆನ್ನ ದುಃಖವ ನೋಡಿದೊಡೆ ನೋಡು
ನೋಡದಿರ್ದೊಡೆ ಮಾಣು
ಎನಗಿದು ವಿಧಿಯೆ?!
ನೀನೊಲ್ಲದೊಡೆ ನಾನೊಲಿಸುವ ಪರಿಯೆಂತಯ್ಯ?
ಮಾನವಳಿಸಿ ಮಾರುವೋಗಿ ಮರೆವೊಕ್ಕೊಡೆ
ಕೊಂಬ ಪರಿಯೆಂತಯ್ಯ ಚೆನ್ನಮಲ್ಲಿಕಾರ್ಜುನ
೨೯೪.
ಮುಡಿ ಬಿಟ್ಟು ಮೊಗ ಬಾಡಿ ತನು ಕರಗಿದವಳ
ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ?
ಎನ್ನನೇಕೆ ಕಾಡುವಿರಿ ಎಲೆ ತಂದೆಗಳಿರಾ?
ಬಲುಹಳಿದು, ಭವಗೆಟ್ಟು ಛಲವಳಿದು
ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ
೨೯೫.
ಬಟ್ಟಿಹ ಮೊಲೆಯ, ಭರದ ಜವ್ವನವ
ಚೆಲುವ ಕಂಡು ಬಂದಿರಣ್ಣಾ
ಅಣ್ಣಾ, ನಾನು ಹೆಂಗೂಸಲ್ಲ
ಅಣ್ಣ, ನಾನು ಸೂಳೆಯಲ್ಲ
ಅಣ್ಣಾ, ಮತ್ತೆ ನನ್ನ ಕಂಡು ಕಂಡು
ಆರೆಂದು ಬಂದಿರಣ್ಣ?
ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿದ ಪುರುಷನು
ನಮಗಾಗದ ಮೋರೆ ನೋಡಣ್ಣ
೨೯೬.
ಎಲೆ ಅಣ್ಣಾ, ಎಲೆ ಅಣ್ಣಾ, ನೀವು ಮರುಳಲ್ಲ
ಅಣ್ಣಾ, ಎನ್ನ ನಿನ್ನಳವೆ?
ಹದಿನಾಲ್ಕು ಲೋಕವ ನುಂಗಿದ
ಕಾಮನ ಬಾಣದ ಗುಣ ಎನ್ನನಿನ್ನಳವೆ?
ವಾರುವ ಮುಗ್ಗಿದೊಡೆ [ಮಿಣಿ ಹರಿಯ] ಹೊಯ್ವರೆ?
ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು
ನಿನ್ನ ನೀ ಸಂಹರಿಸಿ ಕೈದುವ ಕೊಳ್ಳಿರಣ್ಣ
ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣ
೨೯೭.
ಒಬ್ಬಂಗೆ ಇಹವುಂಟು, ಒಬ್ಬಂಗೆ ಪರವುಂಟು
ಒಬ್ಬಂಗೆ ಇಹಪರವೆರಡೂ ಇಲ್ಲ
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು
೨೯೮. ಆಕಾರವಲ್ಲದ ನಿರಾಕಾರಲಿಂಗವ ಕೈಯಲ್ಲಿ ಹಿಡಿದು
ಕೊರಳಲ್ಲಿ ಕಟ್ಟಿದೆವೆಂಬರು ನರಕಜೀವಿಗಳು
ಹರಿಬ್ರಹ್ಮರು, ವೇದಶಾಸ್ತ್ರಂಗಳು ಅರಸಿ ಕಾಣದ ಲಿಂಗ
ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ
ಕರ್ಮಕ್ಕೆ ನರಕ[ನಾಕ?]ವಲ್ಲದೆ ಲಿಂಗವಿಲ್ಲ
ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ
ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ
ಇದುಕಾರಣ; ಅದ್ವೈತದಿಂದ ತನ್ನ ತಾನರಿದು ತಾನಾದರೆ
ಚೆನ್ನಮಲ್ಲಿಕಾರ್ಜುನಲಿಂಗ ತಾನೆ ಬೇರಿಲ್ಲ
೨೯೯.
ಕಂಗಳ ಕಳೆದು, ಕರುಳುಗಳ ಕಿತ್ತು
ಕಾಮದ ಮೂಗ ಕೊಯ್ದು
ಭಂಗದ ಬಟ್ಟೆಯ ಭವ ಗೆಲಿಯದಳಿಗಂಗವೆಲ್ಲಿಯದು ಹೇಳಾ!
ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದರೇನುಂಟು
ಅಂಗವೆ ಲಿಂಗವಹ ಪರಿಯೆನಗೆ ಹೇಳಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೦.
ಮೊಲೆ-ಮುಡಿಯಿದ್ದರೇನು
ಮೂಗಿಲ್ಲದವಳಿಂಗೆ?
ತಲೆಯ ಮೇಲೆ ಸೆರಗೇತಕ್ಕೆ
ಸಹಜಸಂಕಲ್ಪವಿಲ್ಲದವಳಿಂಗೆ?
ಜಲದೊಳಗೆ ಹುಟ್ಟಿಗುಳೆ[ಗುಳ್ಳೆ?]
ಜಾತಿಸ್ಮರತ್ವವರಿದಿತ್ತು
ಹಲವರ ಹಾದಿಯೊಳು
ಹರಿಸುರರು ನಿಮ್ಮ ನೆಲೆಯಂ ತೋರಿದೆ [ತೋರರೇ?]
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೧.
ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು
ಸೋಮಸೂರ್ಯರ ಹರಿದು ಹುಡಿಮಾಡಿ ತಿಂಬವಳಿಂಗೆ
ನಾಮವನಿಡಬಲ್ಲವರಾರು ಹೇಳಿರೆ!
ನೀ ಮದುವಳಿಗನಾಗಿ
ನಾ ಮದುವಳಿಗಿತಿಯಾಗಿ
ಯವನ(=ಆನಲನ?) ಕೂಡುವ ಮರುತನಂತೆ (?) ನೋಡಾ,
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೨.
ಬಸವನ ಭಕ್ತಿ ಕೊಟ್ಟಣದ ಮನೆ
ಸಿರಿಯಾಳನ ಭಕ್ತಿ ಕಸಬಗೇರಿ
ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ
ಉಳಿದಾದ[+ಟ}ಮಟ ಉದಾಸೀನ ದಾಸೋಹ
ಮಾಡುವವರ ದೈನ್ಯವೆಂಬ ಭೂತ ಸೋಂಕಿತು
ಮಣ್ಣಿನ ಮನೆಯ ಕಟ್ಟಿ
ಮಾಯಾಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ
ಮಾಡುವ ಮಾಟ
ಭಕ್ತನಲ್ಲಿ ಉಂಡು ಉದ್ದಂಡ ವೃತ್ತಿಯಲ್ಲಿ
ನಡೆದವರು ಶಿವನಲ್ಲ
ಇವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ,
ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತಾಗಿ
ನಿರ್ವಯಲಾದೆ ಕಾಣಾ!
೩೦೩.
ಅನ್ನವ ನೀಡುವವರಿಗೆ ಧಾನ್ಯವೆ [ಶಿವ]ಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೆ [ಶಿವ]ಲೋಕ
ಹೆಣ್ಣು-ಹೊನ್ನು-ಮಣ್ಣು ಮೂರನೂ
ಕಣ್ಣಿನಲ್ಲಿ ನೋಡಿ, ಕಿವಿಯಲಿ ಕೇಳಿ
ಕೈ[ಯಲಿ] ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತು
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೪.
ನಿತ್ಯ ತೃಪ್ತಂಗೆ ನೈವೇದ್ಯದ ಮಜ್ಜನದ ಹಂಗೇತಕ್ಕೆ?
ಸುರಾಳ-ನಿರಾಳಂಗೆ ಮಜ್ಜನದ ಹಂಗೇತಕ್ಕೆ?
ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ?
ಸುವಾಸನಸೂಕ್ಷ್ಮಗಂಧಕರ್ಪೂರಗೌರಂಗೆ
ಪುಷ್ಪದ ಹಂಗೇತಕ್ಕೆ?
ಮಾಟದಲಿ ಮನನಂಬುಗೆ ಇಲ್ಲದ
ಅಹಂಕಾರಕೀಡಾದ, ಭಕ್ತಿಯೆಂಬ ಪ್ರಸಾರವನಿಕ್ಕಿ
ಹೊಲೆ ಹದಿನೆಂಟು ಜನ್ಮವ ಹೊರೆವುದರಿಂದ
ಅಂಗೈಯಲೊರಿಸಿ ಮುಕ್ತಿಯ
ಮೂಲ ಶಿಖಿರಂಧ್ರದ (?) ಕಾಮನ ಸುಟ್ಟು
ಶುದ್ಧ ಸ್ಪಟಿಕ ಸ್ವಯಂಜ್ಯೋತಿಯನು
ಸುನ್ನಾಳ[=ಸುಷುಮ್ನಾನಾಳ?]ದಿಂದ
ಹರಿಕ್ಷಾಯ[=ಹಕ್ಷ?]ವೆಂಬೆರಡಕ್ಷರವ
ಸ್ವಯಾನುಭಾವ ಭಕ್ತಿನಿರ್ವಾಣವಾದ[+ವರ]ನೆನಗೊಮ್ಮೆ
ತೋರಿದೆ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೫.
ಮಾಟ ಮದುವೆಯ ಮನೆ
ದಾನ-ಧರ್ಮ ಸಂತೆಯ ಪಸಾರ
ಸಾಜ ಸಾಜೇಶ್ವರಿ ಸೂಳೆಗೇರಿಯ ಸೊಬಗು
ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ
ಭಕ್ತಿಯೆಂ[ಬುದು?] ಬಾಜಗಾರರಾಟ
ಬಸವಣಗೆ ತರ ನಾನರಿಯದೆ ಹುಟ್ಟಿದೆ (?)
ಹುಟ್ಟಿ ಹುಸಿಗೀಡಾದೆ
ಹುಸಿ ವಿಷಯದೊಳಡಗಿತ್ತು
ವಿಷಯ ಮಸಿಮಣ್ಣಾಯಿತ್ತು
ನಿನ್ನ ಗಸಣೆಯನೊಲ್ಲೆ
ಹೋಗಾ ಚೆನ್ನಮಲ್ಲಿಕಾರ್ಜುನ
೩೦೬.
ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ?
ಮುತ್ತಿನ ಬಲೆಯಾದಡೇನು, ತೊಡರಲ್ಲವೆ?
ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?
೩೦೭.
ಕುಲಗಿರಿ ಶಿಖರದ ಮೇಲೆ ಬಾಳೆ [ಬೆಳೆವುದಯ್ಯ] ಎಂದಡೆ
ಬಾಳೆ [ಬೆಳೆವುದಯ್ಯ] ಎನ್ನಬೇಕು
ಓಲೆಕಲ[=ಓಲೆಕಲ್ಲ] ನುಗ್ಗುಕುಟ್ಟಿ ಮೆಲಬಹುದಯ್ಯ ಎಂದಡೆ
ಅದು ಅತ್ಯಂತ ಮೃದು
ಮೆಲಬಹುದಯ್ಯ ಎನಬೇಕು
ಸಿಕ್ಕಿದ ಠಾವಿನಲ್ಲಿ ಉಚಿತವೆ ನುಡಿವುದೆ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ಮರ್ತ್ಯಕ್ಕೆ ಬಂದುದಕ್ಕಿದೇ ಗೆಲುವು
೩೦೮.
ಅಯ್ಯ ವಿರಕ್ತರೆಂದರೇನೋ?
ವಿರಕ್ತಿಯ ಮಾತಾಡುವರಲ್ಲದೆ,
ವಿರಕ್ತಿ ಎಲ್ಲರಿಗೆಲ್ಲಿಯದೋ?
ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ
ಬಾಯೊಳಗಣ ಮಾತು
ಪುಣ್ಯವಿಲ್ಲ; ಪಾಪವಿಲ್ಲ;
ಕರ್ಮವಿಲ್ಲ; ಧರ್ಮವಿಲ್ಲ,
ಸತ್ಯವಿಲ್ಲ, ಅಸತ್ಯವಿಲ್ಲವೆಂದು ಮಾತನಾಡುತ್ತಿಪ್ಪರು
ಅದೆಂತೆಂದಡೆ-
ಕಂಗಳ ನೋಟ ಹಿಂಗದನ್ನಕ
ಕೈಯೊಳಗಣ ಬೆರಟು ನಿಲ್ಲದನ್ನಕ
ಹೃದಯದ ಕಾಮ ಉಡುಗದೆನ್ನಕ
ವಿರಕ್ತಿಕೆ ಎಲ್ಲರಿಗೆಲ್ಲಿಯದೋ?
ಬಲ್ಲ ವಿರಕ್ತನ ಹೃದಯವು ಕಾಡೊಳಗಣ್ಣ
ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೋ
[ಲಿಂಗವ] ಕಂಡಾತಂಗೆ
ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಕರ್ಣದಲ್ಲಿ ಕೇಳಿದಾಗಮಪುರಾಣಂಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ನಾಸಿಕದಲ್ಲಿ ಸೋಂಕಿದ ಪರಿಮಳದ್ರವ್ಯಂಗಳು ಆ ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಜಿಹ್ವೆಯಲ್ಲಿ ರುಚಿಸಿದ ರುಚಿಪದಾರ್ಥಂಗಳು ಆ ಲಿಂಗಕರ್ಪಿತ
ಅದೆಂತೆಂದಡೆ-
ಅಂಗವು-ಲಿಂಗವು ಏಕೀಭವಿಸಿದಡೆ
ಅವಂಗೆ ಪುಣ್ಯವಿಲ್ಲ ಪಾಪವಿಲ್ಲ
ಕರ್ಮವಿಲ್ಲ ಧರ್ಮವಿಲ್ಲ
ಅದೆಂತೆಂದಡೆ-
ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ
ಆಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ
ತಾ ಮಹಾಲಿಂಗವನಪ್ಪುವನಾಗಿ
ಅವಂಗೆ ಮುಖ ಬೇರಲ್ಲದೆ ಆತ್ಮನೆಲ್ಲ ಒಂದೆ
ಅದಕ್ಕೆ ಜಗವು ಪಾಪ-ಪುಣ್ಯವೆಂದು ಮಾತಾಡುತ್ತಿಪ್ಪರು
ಅದೆಂತೆಂದಡೆ;
ಶಿವಂಗೆ ತಾಯಿಲ್ಲ
ಭುವನಕ್ಕೆ ಬೆಲೆ[=ನೆಲೆ?]ಯಿಲ್ಲ
ತರು-ಗಿರಿ-ಗಹ್ವರಕ್ಕೆ ಮನೆಯಿಲ್ಲ
ಲಿಂಗವನೊಡಗೂಡಿದ ವಿರಕ್ತಂಗೆ
ಪುಣ್ಯಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನ
೩೦೯.
ವಿರಕ್ತಿ ವಿರಕ್ತಿಯೆಂಬರು
ವಿರಕ್ತಿ ಪರಿಯೆಂತುಂಟು ಹೇಳಿರಯ್ಯ
ಕಟ್ಟದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ?
ಹುಟ್ಟು ಕೆತ್ತುವ ಡೊಂಬನಂತೆ
ಬಿಟ್ಟ ಮಂಡೆಯ ಕೇಶವ ನುಣ್ಣಿಸಿ
ಎಣ್ಣೆಗಂಟ ಹಾಕಿದಡೆ ವಿರಕ್ತನೆ?
ಕಟ್ಟುಹರಿದಿಹ ಪಂಜಿನಂತೆ
ಬಿಟ್ಟ ಮಂಡೆಯ ಕಟ್ಟದಿದ್ದಡೆ ವಿರಕ್ತನೆ?
ಹರ[+ದ?]ನಂತೆ ಹೇಸಿಯಾಗಿದ್ದರೆ ವಿರಕ್ತನೆ?
ಮೂಗನಂತೆ ಮಾತಾಡದಿದ್ದರೆ ವಿರಕ್ತನೆ?
ಹೊನ್ನು-ಹೆಣ್ಣು-ಮಣ್ಣ ಬಿಟ್ಟು
ಅಡವಿ-ಅರಣ್ಯದಲ್ಲಿದ್ದರೆ ವಿರಕ್ತನೆ?
ಅಲ್ಲ!
ವಿರಕ್ತನಾ ಪರಿಯೆಂತೆಂದಡೆ-
ಒಡಲ ಹುಡಿಗುಟ್ಟಿ
ಮೃಡನೊಳು ಎಡೆದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪ
ಅಲ್ಲದಿರ್ದಡೆ ಮೈಲಾರಿಯ ಮಲ್ಲಿಗೊರವಿತಿಯಲ್ಲವೆ
ಮಲ್ಲಿಕಾರ್ಜುನ?
೩೧೦.
ಎಮ್ಮೆಗೊಂದು ಚಿಂತೆ! ಸಮ್ಮಗಾರನಿಗೊಂದು ಚಿಂತೆ!
ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!
ಒಲ್ಲೆ ಹೋಗು, ಸೆರಗ ಬಿಡು ಮರುಳೆ!
ನನಗೆ ಚೆನ್ನಮಲ್ಲಿಕಾಜುನದೇವರು
ಒಲಿವನೋ ಒಲಿಯನೋ ಎಂಬ ಚಿಂತೆ!
೩೧೧.
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗ ಎನ್ನದಿರು ಚೆನ್ನಮಲ್ಲಿಕಾರ್ಜುನ
೩೧೨.
ಕಿಡಿಕಿಡಿ ಕಾರಿದರೆನಗೆ
ಹಸಿವು ತೃಷೆ ಅಡಗಿತ್ತೆಂಬೆ
ಸಮುದ್ರ ಮೇರೆದಪ್ಪಿದರೆ
ಎನಗೆ ಮಜ್ಜನವ ನೀಡಿದರೆಂಬೆ
ಮುಗಿಲು ಹರಿದುಬಿದ್ದರೆ
ಎನಗೆ ಪುಷ್ಪದ ಅರಳೆಂಬೆ
ಶಿರ ಹೋದರೆ ಚೆನ್ನಮಲ್ಲಿಕಾರ್ಜುನದೇವಂಗೆ
ಅರ್ಪಿತವೆಂಬೆ
೩೧೩.
ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನೆಯ್ಯ !
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನೆಯ್ಯ !
ಕಂದ, ನೀನಿತ್ತ ಬಾ ಎಂದು
ನೀವು ನಿಮ್ಮಂದವ ತೋರಯ್ಯ ಚೆನ್ನಮಲ್ಲಿಕಾರ್ಜುನ
೩೧೪.
ಉದಯದಲೆದ್ದು ನಿಮ್ಮ ನೆನೆವೆನಯ್ಯ
ನಿಮ್ಮ ಬರವ ಹಾರುತಿರ್ಪೆನಯ್ಯ
ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆಡೆಮಾಡಿಕೊಂಡಿಪ್ಪೆನಯ್ಯಾ
ಚೆನ್ನಮಲ್ಲಿಕಾರ್ಜುನ, ನೀನಾವಾಗ ಬಂದಹೆಯೆಂದು
೩೧೫.
ಗಿರಿಯಲಲ್ಲದೆ
ಹುಲುಮೊರಡಿಯಲಾಡುವುದೇ ನವಿಲು?
[ಕೊಳನನಲ್ಲದೆ] ಕಿರುವಳ್ಳಕೆಳಸುವುದೇ ಹಂಸ?
ಮಾಮರ ತಳಿತಲ್ಲದೇ ಸ್ವರಗೈಯುವುದೇ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕೆಳಸುವುದೇ ಭ್ರಮರ?
ಎನ್ನ ಜೀವ ಚೆನ್ನಮಲ್ಲಿಕಾರ್ಜುನಗಲ್ಲದೆ
ಅನ್ಯಕೆಳಸುವುದೇ ಎನ್ನ ಮನ ಕೇಳಿರೆ ಕೇಳದಿಯರಿರಾ!
೩೧೬.
ಪಂಚೇಂದ್ರಿಯದ ಉರುವಣೆಯಹುದು
ಮದಭರದ ಜವ್ವನದೊಡಲು ವೃಥಾ ಹೋಯಿತಲ್ಲ
ತುಂಬಿ ಪರಿಮಳವನೆ ಕೊಂಡು ಲಂಬಿಸುವ ತೆರನಂತೆ
ಎನ್ನೆಂದಿಗೆ ಒಳಗೊಂಬೆಯೋ ಅಯ್ಯ ಚೆನ್ನಮಲ್ಲಿಕಾರ್ಜುನಯ್ಯ?
೩೧೭.
ಇಂದ್ರನೀಲದ ಗಿರಿಯನೇರಿಕೊಂಡು
[ಚಂದ್ರಕಾಂತದ ಶಿಲೆಯ] ಮೆಟ್ಟಿಕೊಂಡು
ಕೊಂಬ ಬಾರಿಸುತ, ಹರನೇ
ಎನ್ನ ಕುಂಭಕುಚದ ಮೇಲೆ ನಿಮ್ಮನೆಂದಪ್ಪಿಕೊಂಬೆನಯ್ಯ?
ಅಂಗಭಂಗ-ಮನಭಂಗವಳಿದು
ನಿಮ್ಮನೆಂದಿಂಗೊಮ್ಮೆ ನೆರೆವೆನೋ ಚೆನ್ನಮಲ್ಲಿಕಾರ್ಜುನ?
೩೧೮.
ತಾನು ದಂಡಮಂಡಲಕ್ಕೆ ಹೋದನೆಂದರೆ
ನಾನು ಸುಮ್ಮನಿಹೆನು
ತಾನೆನ್ನ ಕೈಯೊಳಗಿದ್ದು, ಎನ್ನ ಮನದೊಳಗಿದ್ದು
ನುಡಿಯದಿದ್ದರಾನು ಎಂತು ಸೈರಿಸುವೆನವ್ವ?
ನೇಹವೆಂಬ ಕುಂಟಣಿ
ಚೆನ್ನಮಲ್ಲಿಕಾರ್ಜುನನ ನೆರಹದಿರ್ದಡೆ
ನಾನೇವೆ ಸಖಿಯೆ?
೩೧೯.
ಬಂಜೆ ಬೇನೆಯನರಿವಳೇ?
ಬಲದಾಯಿ ಮುದ್ದ ಬಲ್ಲಳೇ?
ನೊಂದ ನೋವ ನೋಯದವರೆತ್ತ ಬಲ್ಲರು?
[ಚೆನ್ನಮಲ್ಲಿಕಾರ್ಜುನನಿರಿದಲಗು] ಒಡಲಲ್ಲಿ ಮುರಿದು
ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ!
೩೨೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟು ಪುರುಷ ಬಾರಾ, ಪುಣ್ಯರತ್ನವೇ ನೀ ಬಾ
ನಿನ್ನ ಬರವೆನ್ನಸುವಿನ ಬರವು ಬಾರಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಬಂದಾನೆಂದು
ಬಟ್ಟೆಗಳ ನೋಡಿ ಬಾಯಾರುತ್ತಿಹೆನು
೩೨೧.
ಕಳವಳದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತಿದ್ದೆನವ್ವ
ತಿಳುಹೌ ಬುದ್ಧಿಯ ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ
೩೨೨.
ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವ
ನಿಮನಿಮಗೆಲ್ಲ ಶೃಂಗಾರವ ಮಾಡಿಕೊಳ್ಳಿ
ಚೆನ್ನಮಲ್ಲಿಕಾರ್ಜುನನೀಗಳೇ ಬಂದಹನು
ಇದಿರುಗೊಳ್ಳ ಬನ್ನಿರೇ ಅವ್ವಗಳಿರಾ!
೩೨೩.
ಬಂದಹನೆಂದು ಬಟ್ಟೆಯ ನೋಡಿ
ಬಾರದಿದ್ದರೆ ಕರಗಿ ಕೊರಗಿದೆನವ್ವ
ತಡವಾದರೆ ಬಡವಾದೆ ತಾಯೆ
ಚೆನ್ನಮಲ್ಲಿಕಾರ್ಜುನ ಒಂದಿರುಳಗಲಿದರೆ
ತೆಕ್ಕೆ ಸಡಿಲಿದ ಜಕ್ಕವಕ್ಕಿಯಂತಾದೆನವ್ವ
೩೨೪.
ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು ಕೆಳದಿ!
ಒಚ್ಚತ ಅಗಲಿರೆ, ಕಾಣದೆ ಇರಲಾರೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಅಗಲಿ
ಅಗಲದ ಸುಖವೆಂದಪ್ಪುದೋ!
೩೨೫.
ಉರಿಯ [ಪಳಿಯನೆ] ಉಡಿಸಿ, ಊರಿಂದ ಹೊರಗಿರಿಸಿ
ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವ
ತುರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ
ಕರೆ ನೊಂದೆ ನೋಡವ್ವ
ಅವಸ್ಥೆಯಿಂದ ಹಿರಿದು ದುಃಖದಲ್ಲಿ ಬೆಂದೆ
ಕರಿ ಬೆಂದು, ಗಿರಿ ಬೆಂದು
ಹೊನ್ನರಳಿಯ ಮರವನುಳಿದು
ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನ
೩೨೬.
ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು
ಕನಸಿನಲಿ ಕಳವಳಿಸಿ ಆನು ಬೆರಗಾದೆ
ಆವಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರ ನಾನಾರುವನು ಕಾಣೆ
ಅರಸಿ ಕಾಣದ ತನುವ, ಬೆರೆಸಿ ಕೂಡದ ಸುಖವ
ಎನಗೆ ನೀ ಕರುಣಿಸು ಚೆನ್ನಮಲ್ಲಿಕಾರ್ಜುನ
೩೨೭.
ಸಾವಿಲ್ಲದ ಸಹಜಂಗೆ, ರೂಹಿಲ್ಲದ ಚೆಲುವಂಗೆ
ಭವವಿಲ್ಲದ ಅಭವಂಗೆ, ಭಯವಿಲ್ಲದ ನಿರ್ಭಯ ಚೆಲುವಂಗೆ
ನಾನೊಲಿದೆನಯ್ಯ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿದ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ
೩೨೮.
ಅತ್ತೆ ಮಾಯೆ, ಮಾವ ಸಂಸಾರಿ
ಮೂವರು ಮೈದುನರು ಹುಲಿಯಂಥಾ ಅವದಿರು
ನಾಲುವರು ನಗೆವೆಣ್ಣು ಕೇಳು ಕೆಳದಿ
ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ
ಹೇಳುವಡೆ ಏಳು ಪ್ರಜೆ ತೊತ್ತಿರ ಕಾವಲು
ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನ ಕೂಡೆ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರೆ ಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನ
ಸಜ್ಜನದ ಗಂಡನ ಮಾಡಿಕೊಂಬೆನು
೩೨೯.
ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು
ಆನೊಂದರಿಯೆನಯ್ಯ
ಎನ್ನ ಗತಿ ನೀನಾಗಿ ಎನ್ನ ಮತಿ ನೀನಾಗಿ
ಪ್ರಾಣ ನಿಮಗರ್ಪಿತವಾಯಿತ್ತು
ನೀನಲ್ಲದ ಪೆರತೊಂದ ನೆನೆದೊಡೆ
ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ
೩೩೦.
ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನಯ್ಯ,
[ನಿಮ್ಮಿಂದ ನೀವೆಯಾಗಿ ನಿಮ್ಮನೇ ಮರೆದೆ]
೩೩೧.
ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೇ
ಪುರಾತನರ ಮನೆಯ ಅಂಗಳದಲ್ಲಿ
ಅಷ್ಟಾಷಷ್ಟಿತೀರ್ಥಂಗಳು ನೆಲೆಸಿಪ್ಪವಾಗಿ?
ಅದೆಂತೆಂದಡೆ:
ಕೇದಾರಸ್ಯೋದಕೇ ಪೀತೇ
ವಾರಣಸ್ಯಾಂ ಮೃತೇ ಸತಿ
ಶೀಶೈಲ ಶಿಖರೇ ದೃಷ್ಟೇ
ಪುನರ್ಜನ್ಮ ನ ವಿದ್ಯತೇ
ಎಂಬ ಶಬ್ದಕ್ಕಧಿಕವು
ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ
ಅಲ್ಲಿಂದ ಹೊರಗೆ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ
ನಿಮ್ಮ ಭಕ್ತರ ಮನೆಯಂಗಳ ವಾರಣಾಸಿಯಿಂದ
ಗುಂಜಿಯಧಿಕ ನೋಡಾ!
೩೩೨.
ನಿನ್ನ ಅಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯ, ಬಸವಣ್ಣ
ನಿನ್ನ ಮನದ ಸುಜ್ಞಾನವ ಕಂಡು
ಎನಗೆ ಜಂಗಮಸಂಬಂಧವಾಯಿತ್ತಯ್ಯ, ಬಸವಣ್ಣ
ನಿನ್ನ ಸದ್ಭಕ್ತಿಯ ತಿಳಿದು
ಎನಗೆ ನಿಜಸಾಧ್ಯವಾಯಿತ್ತಯ್ಯ, ಬಸವಣ್ಣ
ಚೆನ್ನಮಲ್ಲಿಕಾರ್ಜುನನ ಹೆಸರಿಟ್ಟ
ಗುರು ನೀನಾದ ಕಾರಣ
ನಾನೆಂಬುದಿಲ್ಲವಯ್ಯ ಬಸವಣ್ಣ
೩೩೩.
ಅಯ್ಯ, ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯ, ನಿಮ್ಮ ಅನುಭಾವಿಗಳು
ಎನ್ನನೊರೆದೊರೆದು, ಕಡಿಕಡಿದು, ಅರೆದರೆದು
ಅನುಮಾಡಿದ ಕಾರಣ
ಎನ್ನ ಮನ ಶುದ್ಧವಾಯಿತ್ತು!
ಎನ್ನ ಸರ್ವಭೋಗಾದಿ ಭೋಗಂಗಳೆಲ್ಲ
ನಿಮ್ಮ ಶರಣರಿಗರ್ಪಿತವಾಗಿ
ಎನ್ನ ಪ್ರಾಣ ಶುದ್ಧವಾಯಿತ್ತು!
ಎನ್ನ ಸರ್ವೇಂದ್ರಿಯಗಳೆಲ್ಲವು
ನಿಮ್ಮ ಶರಣರ ಪ್ರಸಾದವ ಕೊಂಡ ಕಾರಣ
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯ!
ನಿಮ್ಮ ಶರಣರಿಂತು ಎನ್ನನಾಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರಿಗೆ ತೊಡಿಗೆಯಾದೆನಯ್ಯ ಪ್ರಭುವೆ!
೩೩೪.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ಮಗಳಾದ ಕಾರಣ
ಜ್ಞಾನಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಾಧಿಸಿ ಕೊಟ್ಟನು
ಮಡಿವಾಳ ಮಾಚಿ ತಂದೆಯ ಮನೆಯ ಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು
ತಲೆದಡಹಿ ರಕ್ಷಿಸಿದ ಕಾರಣ
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು
೩೩೫.
ತನು ಮೀಸಲಾಗೆ ಭಾವವಚ್ಚುಗೊಂಡಿಪ್ಪುವುದವ್ವ
ಅಚ್ಚುಗದ ಸ್ನೇಹ, ನಿಚ್ಚಟದ ಮೆಚ್ಚುಗೆ,
ಬೆಚ್ಚು ಬೇರಾಗದ ಭಾವವಾಗೆ
ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡನವ್ವ
೩೩೬. ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚರೆ ಗರಿದೋರದಂತೆ ನಡಬೇಕು
ಅಪ್ಪಿದರೆ ಅಸ್ಠಿಗಳು ನುಗ್ಗುನುರಿಯಾಗಬೇಕು
ಬೆಚ್ಚರೆ ಬೆಸುಗೆಯರಿಯದಂತಿರಬೇಜು
ಮಚ್ಚು ಒಪ್ಪಿತ್ತು ಚೆನ್ನಮಲ್ಲಿಕಾರ್ಜುನಯ್ಯನ ಸ್ನೇಹ
೩೩೭.
ನಡೆಯದ ನುಡಿಗಡಣ, ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದವಗುಣಿಯ ಸಂಗವದೇತಕ್ಕೆ ಪ್ರಯೋಜನ?
ದಯವಿಲ್ಲದ ಧರ್ಮವು, ಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ?
ಎನ್ನ ದೇವ ಚೆನ್ನಮಲ್ಲಿಕಾರ್ಜುನ, ಲಿಂಗೈಕ್ಯವು
ಪ್ರಾಣಗುಣವರಿಯದವರ ಕೂಡೆ ಪ್ರಸಂಗವೇತಕ್ಕೆ?
೩೩೮.
ಪ್ರಾಣ ಹೊಲಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ
ದೇವದಾನವಮಾನವರೆಲ್ಲಾ ಜೋಳವಾಳಿಯಲೈದಾರೆ
ಜಾಣ ಕಲುಕುಟಿಕನನಗಲದೆ ಹೂವನೆ ಕೊಯ್ದು
ಕಲಿಯುಗ ಕರಸ್ಥಲದೇವಪೂಜೆ ಘನ
ಮೇರುವಿನ ಕುದುರೆ ನಲಿದಾಡಲದು
ಭೂತರಾಜ ರಾಜರಂಗಳಿಗಳ[?] ಜಗಳ ಮೇಳಾವ
ಮರುಪತ್ತದ ಮಾತು ನಗೆ ಹಗರಣ
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯ
ನೀ ಹೇಳಬೇಕು ಭಕ್ತರೆಂತಪ್ಪರೋ
ಪಂಚವರ್ಣದ ಬಣ್ಣ ಸಂಧೆವರದಾಟವು[?]
ಚೆನ್ನಮಲ್ಲಿಕಾರ್ಜುನಯ್ಯ,
ತ್ರಿಭುವನದ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು
೩೩೯.
ಹಸಿದ ಹಸುಳೆಗೆರೆದೆಯಾಹ
ವಿಷವ, ರಾಜಹಂಸೆಗುಕ್ಕು
ರಸವನೀಂಟಿಸಿದೆ, ಮಹೇಶ, ನೋಳ್ಪ ಕಣ್ಣೊಳು
ಕಸವ ಕವಿದೆ, ಕರ್ಣಗಳಿಗೆ
ದಸಿಯ ಬಡಿದೆ; ಕರುಣವಿಲ್ಲ-
ದಸಮಪಾತಕವನು ಎನಗೆ ಕೇಳಿಸಿಂದು ನೀ ||೧||
ಹರನೆ, ಕಣ್ಣೊಳುರಿಯನ್ನಿಟ್ಟ
ದುರುಳ, ನಂಜುಗೊರಲ, ಸರ್ಪ
ಧರ ತ್ರಿಶೂಲಿ! ನಿನ್ನ ನಂಬಿದವರನಸಿಯೊಳು
ಅರೆದು ಸಣ್ಣಿಸುವುದೆ ನಿನ್ನ
ಕರುಣವಲ್ಲದದೆಲ್ಲರಂತೆ
ಕರುಣಿಯೆಂಬ ಮರುಳನಾವ ?! ಮಗನ ಕೊಲಿಸಿರೇ? ||೨||
ಯತಿಯ ರಸಿಕನೆನಿಸಿ, ಪತಿ-
ವ್ರತೆಯ ಸಿತಗೆಯೆನಿಸಿ, ದಿವ್ಯ-
ಮತಿಗೆ ಸಟೆಯ ಬಿತ್ತಿ, ದಾನಿ-
ಗತಿದರಿದ್ರದೆಡರನೀವ
ಮತವೆ ನಿನ್ನದುತ್ತಮಿಕೆಯ ನೆರೆವ ತಪ್ಪೆಯ? ||೩||
ಅರಗಿಲೆರೆದ ಬೊಂಬೆಗುರಿಯ
ಭರಣವನ್ನು ತೊಡಿಸಲಹುದೆ?!
ಹರನೆ ನಿನ್ನ ಸ್ತೋತ್ರವಲ್ಲದನ್ಯವರಿಯದ
ತರಳೆಯೆನ್ನ ಕಿವಿಯೊಳೆನ್ನ
ಪುರುಷವಚನವನ್ನು ತುಂಬೆ
ಕರುಣವಿಲ್ಲಲಾ ಕಪರ್ದಿ... ||೪||
ಗಂಡನುಳ್ಳ ಹೆಣ್ಣನಾವ
ಗಂಡು ಬಯಸಿ ಕೇಳ್ದಡವನ
ತುಂಡುಗಡಿಯದಿಹನೆಯವಳ ಗಂಡನೆನ್ನಯ
ಗಂಡ ನೀನಿರಲ್ಕೆ ಕೇಳ್ದೊ
ಡಂಡುಗೊಂಡು ಸುಮ್ಮನಿಹೆ! ಶಿ-
ಖಂಡಿಯೆಂಬ ನಾಮ ಸಾಮ್ಯವಾದುದಿಂದಲಿ ||೫||
೩೪೦.
ಪತಿಯೆ ಗತಿಯೆನಿಪ್ಪ ಸತಿಗೆ
ಪತಿವ್ರತಾಭಿಧಾನ ಸೆಲ್ವು
ದಿತರ ಪತಿಯ ರತಿಯೊಳಿರ್ಪ ಸತಿಯ ಕ್ಷಿತಿಯೊಳು
ಸಿತಗೆಯೆನ್ನದಿಹರೆ? ದಿಟದ
ಪತಿಯದೊರ್ವ, ಸತಿಗೆ ಸಟೆಯ
ಪತಿಯದೊರ್ವನುಂಟೆ ತಳರಿ ತಳುವದೆ?!
೩೪೧.
ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ
ಮದನಗಿತ್ತಿಯಾದೆ! ಮಿಕ್ಕಿ
ನಧಮರೇತಕವ್ವಗಳಿರ?
ಮದುವೆಯಹರೆ ಮಗುಳೆ ಕಂಡ ಕಂಡ ಗಂಡರ? ||೧||
ಸಾವು ಸಂಕಟಳಿವುಪಳಿವು
ನೋವು ದುಃಖ ದುರಿತರಕ್ತ
ಮಾವುಸಸ್ಠಿ ಬಾಲಜಾಡ್ಯ ಜರೆ ರುಜಾನಿಶಂ
ಬೇವಸಂಗಳಿಲ್ಲದುರೆ ಸ-
ದಾ ವಯಸ್ಸಿನಿಂದಲೆಸವ
ಕೋವಿದಂಗೆ ಪೆತ್ತರಿತ್ತರೆನ್ನ ||೨||
ಮಾತೆ ಮುಕುತಿದೆರಹನಾಂತು,
ರೀತಿಗೊಲ್ಲು ತಂದೆ, ಬಂಧು-
ವ್ರಾತವವನ ಕುಲವನೊಪ್ಪಿ ಕೊಟ್ಟರೆನ್ನನು
ಆತಗೊಲ್ಲು ಮದುವೆಯಾದೆ
ನಾ ತಳೋದರಿಯರಿರೆಲೆಲೆ
ಆತನರಸುತನದ ಘನದ ಬಿನದವೆಂತೆನೆ ||೩||
ಆಳುವವನಿಯವನಿಗಿದೀ
ರೇಳು ಲೋಕ, ದುರ್ಗ-ರಜತ
ಶೈಳ, ಹರಿವಿರಿಂಚಿ ಸುರಪ ಮುಖವಜೀರರು,
ಆಳು ದುನುಜ ಮನುಜ ದಿವಿಜ
ವ್ಯಾಳರುಗ್ಘಡಿಸುವ ಭಟ್ಟ
ಜಾಳಿ ಚಂಡಕೀರ್ತಿಗಳ್, ಪ್ರಧಾನಿ ಸುರಗುರು ||೪||
ಮಿತ್ರ ಧನದರಾಪ್ತರೇ
ಮಿತ್ರ ಗಾತ್ರ ಪ್ರಮಥರತಿ ಕ-
ಳತ್ರವೇ ಭವಾನಿ, ರಾಜವಾಜಿ ನಿಗಮವು
ಪತ್ರಿರಥ-ಗಣೇಶರೆಸೆವ
ಪುತ್ರರಧಿಕಶೈವಧರ್ಮ
ಗಾತ್ರ ಲಿಂಗವೀವನಾವ ಪದವನೆಳಸಲು ||೫||
ದಶಭುಜಂಗಳೈದು ವಕ್ತ್ರ
ವಸವವಖಿಳ ಕಕುಭ, ಮುಡಿವ
ಕುಸುಮ ತಾರೆ, ತುಂಬುರಾದಿಗಳ್ ಸುಗಾಯಕರ್,
ಎಸೆವ ಜಗದ ವಾರ್ತೆಗಳನು
ಬೆಸಸುವಾತ ನಾರದ ಶ್ರಿ-
ದಶವಧೂಕದಂಬ ಓಲಯಿಸುವರಾತನ ||೬||
ಹಸನಿಸುವನೆ ಭೃಂಗಿಯೂರು-
ವಸಿ ತಿಲೋತ್ತಮಾದಿ ದಿವಿಜ
ಕುಸುಮಗಂಧಿನಿಯರೆ ನಚ್ಚಣಿಯರು, ಪಿಡಿವಡೆ
ತಿಸುಳ ಸಬಳ, ಚಾಪ ತ್ರಿದಶ
ರೆಸವ ನಿಳಯ, ನಾರಿ ಭುಜಗ,
ವಿಶಿಖ ವಿಷ್ಣುವಿಂದು ಭಾಸ್ಕರಾಗ್ನಿ ನೇತ್ರವೂ ||೭||
ಮಲೆವ ಕಾಲ ಕಾಮದನುಜ
ಕುಲವನಟ್ಟಿ ಕುಟ್ಟಿ ಭಕ್ತ
ರೊಲವನೀವ ಸಕಲದೇವ ಚಕ್ರವರ್ತಿಗೆ
ಒಳಿದೆನೊಲಿವೆನೆಂತು ಪೇಳಿ
ರೆಲೆಲೆಯಕ್ಕಗಳಿರ ಬದ್ಧ
ಮಲಮಯಾಂಗಿಯಾದ ಹೀನಮಾನಸಾತ್ಮಗೆ? ||೮||
ಗಿರಿಯ ತೊರೆದು ಬಱಿ ಪುಲ್ಲ
ಮೊರಡಿಗೆಳಸಿ ಬಹುದೆ? ಅಂಚೆ
ಸರಸಿಯನ್ನು ಸಡಿಲಿ ಪಲ್ವಲಕ್ಕೆ ಪಾಯ್ವುದೇ?
ಎರಪದೇ ಪರಾಗವಿಲ್ಲ-
ದರಳಿಗಲಿ? ಮಹೇಶಗೊಲ್ದು
ನರಕಿಗೊಲಿಯ ಬಲ್ಲುದೇ ಮದೀಯ ಚಿತ್ತವು? ||೯||
ಮೇರುಗಿರಿಯಿರಲ್ಕೆ ರಜವ[=ಜರಗ?]
ತೂರಲೇಕೆ? ಕ್ಷ್ರೀರವಾರ್ಧಿ
ಸಾರಿರಲ್ಕೆ [ಓರೆಪಶುವದೇಕೆ]? ತತ್ತದ
ದಾರಿಗಳಲಲೇಕೆ ಗುರುವ
ಸಾರಿ ಸುಪ್ರಸಿದ್ಧವಿದ್ದು?
ಹಾರಲೇಕೆ ಪದವೆ ಲಿಂಗ ಕರದೊಳಿರುತಿರೆ? ||೧೦||
ಆವ ಚಿಂತೆಯೇಕೆ ಮನದ
ದಾವತಿಯನು ತೀರ್ಚುವೆನ್ನ
ಜೀವದೆರೆಯ ಚೆನ್ನಮಲ್ಲಿಕಾರ್ಜುನಯ್ಯನ
ಭಾವೆಯಾನು! ಬಳಿಕ ನರಕಿ
ಜೀವಿಗೆನ್ನ ಕೇಳ್ದರಿನ್ನು
ನೋವಿರಿ.... ||೧೧||
೩೪೨.
ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ||ಪಲ್ಲವ||
ಆರಿಗಿಟ್ಟ ಬಡಿಣದನ್ನ | ವಾರು ಕೊಂಬರೆನಗೆ ಬಂದ
ಮಾರಿಗಾಗಿ ಶಿವನ ಭಕ್ತರಳಲಲೆನ್ನಸು
ಹಾರುತಿದೆ-ಮದೀಯ ತನುವ | ನೂರುನುಚ್ಚುಮಾಡೆ ನಿಮಗಿ
ದೂರ ಪೇಳ್ದೊಡಾಣೆ ಚೆನ್ನಮಲ್ಲಿಕಾಜುನ ||೧||
ಇಹದೆ ಶರಣರೊಲಿಯದಲ್ಲ | ದಹುದೆ ಮುಕ್ತಿಯವರ ಭಂಗಿ
ಸಹಿತರಿಂದಲಾವ ಗತಿಯ ಪಡೆವೆನಿನಿತಕೆ
ದಹನನೇತ್ರನಿಟ್ಟ ನೆಲೆಯೊಳಿಹೆ[ನೆನ್ನುತ್ತ ಗೀತವನ್ನು
ಸಹಜಭರಿತೆ ಪಾಡಿದಳ್ ಮನೋನುರಾಗದಿ] ||೨||
ವಾತ-ವಹ್ನಿ-ಸಲಿಲ-ಸುರ | ಭೂತಳಾದಿ ತತ್ವವನಿಶ
ರೀತಿದಪ್ಪದಿಪ್ಪವಯ್ಯ ನಿನನುಜ್ಞೆಯ-
ನಾತು; ಮಿಕ್ಕಡೆನ್ನನೊಪ್ಪ | ನಾತ ಮಲ್ಲಿನಾಥ
..................................... ||೩||
೩೪೩.
ಬೇನೆಯಿಂ ಬೇವ ಬೇವದಸದಳ ಬಲ್ಲರೆ
ಬೇನೆಯಿಲ್ಲದರಂತೆ ನೀವೆಂತರಿವಿರೆನ್ನ
ಬೇನೆಯ ಬಗೆಯವನ್ನಗಳಿರಾ ಮಚ್ಚೆನ್ನ ಮಲ್ಲೇಶನಿರಿದಲಗು ಮುರಿದ
ಬೇನೆಯಿಂ ಬೇವಳಾನೇ ಬಲ್ಲೆನೀ ನೋವು
ಬೇನೆ ಮಚ್ಚಿತ್ತದೆರೆಯನ ತಾಗದಿರದು
೩೪೪.
ವಿಷಯಸುಖ ವಿಷವೆಂದು ತಿಳಿಯದಜ್ಞಾನಿ ಬಿಡು
ವಿಷಯಸುಖ ನಿರವಯವೆಂದರಿಯದರಿಮರುಳೆ ಬಿಡು
ವಿಷಯಸುಖ ಭವದ ಬಿತ್ತೆಂದು ಭಾವಿಸದಧಮಜೀವಿ ಬಿಡು ಬಿಡು ಸೆರಗನು
ವಿಷಯದಣು ಮಾತ್ರ ಬಿಂದುಗಳಲ್ ಭೂಧರದೊ
ಲೆಸೆವುದೆಂದೋದುವಾಗಮವ ಕೇಳ್ದೆಚ್ಚರದ
ಪಶುವೆ ಕೇಳ್ದರಿಯ ವಿಷಯದೊಳು ಮುಂಗೆಟ್ಟ ನರಸುರರ ವಿಧಿಗಳ ||೧||
ಪುಲ್ಲಶರನೆಸುಗೆಗಳವಳಿದಳುಪಿದಂಗನೆಯ
ನೊಲ್ಲದೊಲ್ಲದ ಪೆಣ್ಣನೊಲಿಸುವವನತ್ಯಧಮ
ನಲ್ಲವೆ? ಪೆರತೊರ್ವಗೊಲ್ದವಳನಪ್ಪಲಳ್ತಿಯೆ ಮನಕ್ಕಾನು ಚೆನ್ನ
ಮಲ್ಲಿಕಾರ್ಜುನಗೊಲ್ದಳೆನ್ನನಪ್ಪಿದಡೆ ಕ
ಗ್ಗಲ್ಲನಪ್ಪಿದ ಮಾಳ್ಕೆಯಂತಿರದೆ ಹೋಗೆಲವೊ
ಖುಲ್ಲ ||೨||
೩೪೫.
[ತೊಡರಿ ಬಿಡದಂಡೆಲೆವ ಮಾಯೆಯ
ತೊಡಕನಾರೈದಲಿಸಿ ಗೀತವ
ತೊಡಗಿದಳ್] ಅಸಂಖ್ಯಾತಲಕ್ಷಭವಾಂಬುರಾಶಿಯೊಳು
ಕಡೆದು ಮನುಜತ್ವಂಬಡೆಯೆ ಬೆಂ-
ಬಿಡದು ನಿಮ್ಮಯ ಮಾಯೆ, ಮಾಯೆಯ
ಬಿಡುಗಡೆಗೆ ತೆರಪಿಲ್ಲಾ ಗುರುಚೆನ್ನಮಲ್ಲೇಶ ||೧||
ಒಡಲಿನೊಳ್ ಮಲಮಾಸಿನುಬ್ಬಸ
ವಡೆದುದಿಸಲಜ್ಞಾನ ರುಜೆಗಳ
ತೊಡಕು, ಕಾವನ ಕಾಟ ಜವ್ವನದೊಳ್, ಜರೆಗಶಕ್ತಿಯ
ಜಡತೆಯಲ್ಲದೆ ಜಗಕೆ ನಿಮ್ಮಡಿ
ವಿಡಿಯಲೆಲ್ಲಿಯ ಬಿಡೆಯ ಮಾಯೆಯ ಸೆಡಕಿನೊಳು ಸಿಲುಕಿ ||೨||
ಹರಿಯಜೇಂದ್ರಾದ್ಯಖಿಳ ದಿವಿಜರ
ಶಿರವನರಿದಹಿದನುಜಮನುಜರ
ನರೆದು ಸಣ್ಣಿಸಿ ನುಂಗಿ, ನುಸುಳುವ ಮನುಮುನಿಗಳಧಟ
ಪರಿದು ಸಚರಾಚರವ ನೆರೆ ನಿ
ಟ್ಟೊರಸುವುದು ಗಡ ಮಾಯೆ ನಿಮ್ಮಯ
ಶರಣರಡಿವಿಡಿದಾಂ ಬದುಕಿರ್ದೆನೆಂದು ಪಾಡಿದಳು ||೩||
೩೪೬.
ತನುವು ಕಟ್ಟನೆ ಕರಗೆರೆದು ಮ
ಜ್ಜನವ, ನಿಜಮನವಲರ್ದು ಕುಸುಮವ,
ವಿನುತ ಹದುಳಿಗತನದಿ ಗಂಧಾಕ್ಷತೆಯನರು ಹಿಂದೆ
ಮಿನುಗುವಾರ್ತಿಯ, ನೆನಹುಶುದ್ಧದಿ
ಘನಸುಧೂಪವ, ಹರುಷರಸ ಸಂ
ಜನಿತ ನೈವೇದ್ಯವ ಸಮರ್ಪಿಸಿ, ಜ್ಞಾನಸತ್ಕ್ರಿಯದಿ ||೧||
ತಾಂ ಬೆಳೆರ್ವೆತ್ತಲೆಯನಿತ್ತು ಕ-
ರಾಂಜುಜದ ಬೊಮ್ಮವನು ನಿಜ ಹರು
ಷಾಂಬುಕಣ ಸಂಪಾತದೊಡನಿಟ್ಟಿಸುತೆ ಕ್ರಿಯೆಗಳವು
ಬೆಂಬಳಿಯೊಳಿರ್ದರಿಯದರ್ಚಿಪೆ
ನೆಂಬೆನೆಂತಾ ನಾದ ಬಿಂದುಗ
ಳೆಂಬರಿಯವು ನಿಮ್ಮ ನುತಿಸುವೆನೆಂತು ಶಶಿಮೌಳಿ ||೨||
೩೪೭.
ಅನುಭವವೆ ಭವಬಂಧಮೋಚನ
ವನುಭವವೆ ದುರಿತಾಚಲಶನಿ
ಯನುಭವವೆ ತನುಗುಣಾಭ್ರ ಪ್ರಕರಪವಮಾನ
ಅನುಭವವೆ ಭಕ್ತಿಯೆ ಸುಧಾನಿಧಿ
ಅನುಭವವೆ ಮುಕ್ತಿಯ ತವರ್ಮನೆ ಶರಣಸಂತತಿಯ ||೧||
೩೪೮.
ಭಾಷೆಯ ಮೀಸಲ್ಗೆಡಿಸಿ ಬಳಿಯಲಿ-
ನ್ನೇಸೊಂದಾಚರಣೆಯನಾಚರಿಸಲ್
ದೋಷಂ ಪರಿಯದವಂಗವನೊಳ್ ಪುದುವಾಳ್ವರ್ ತದ್ದೋಷಾ
ವಾಸಿಗಳೆನಿಪರ್, ತೊಲತೊಲಗಿನ್ನೆ
ನ್ನಾಸೆಯನುಳಿದು
೩೪೯.
ಪೂತ ಶ್ರೀಗುರುವರ ಪೇಳ್ದೊಲ್ ದು
ರ್ನೀತಿಯ, ಭೀತರ ಕಾಯ್ವಂ ತಾನೆ
ಬೂತಾದೊಲ್, ಪತಿಪತ್ನೀತ್ವವನರಹುವಳಭಿಸಾರಿಕೆಯ
ರೀತಿಯನೊರೆವೊಲ್, ಪೇಳ್ದಿರಿ ನೀವೆ
ನ್ನಾತುಮದಜ್ಞನತೆಯಂ ತೆವರದೆ ದು
ರ್ನೀತಿಯನಾ ಶಿವಭಕ್ತರ್ ಸಹಭವಗುರುತಂದೆಗಳೆನಗೆ ||೧||
ಮದ್ಗುರು ತಂದೆ ಮಹಾವೈಭವದೊಳ್
ಚಿದ್ಘನಲಿಂಗಕ್ಕೊಲಿದೆನ್ನುವನೆಸೆ
ದುದ್ಗಮ ಶರನೆಸೆಯದ ಬಳಿಕುದ್ವಾಹವೆನೆಸಗಿದ ಬಳಿಕ
ತದ್ ಘನಲಿಂಗದ ಸತಿಯಂ ಪಡೆದು ವಿ
ಯದ್ ಗಂಗಾಮೌಲಿಯ ಭಕ್ತಂಗಿ
ತ್ತುದ್ಗಮ ಶರನ ವಿಕಾರದೋಳಿಹುದಂ ನೋಳ್ದಪೆವೆಂಬರಕೆ ||೨||
ಈ ಪಾಪವನೊಂದಿಸಲೆಳಸುವರೇಂ
ಕೂಪರೆ ಪೆರದೊಲಗು
೩೫೦.
ಕ್ಷಿತಿಯ ಚರಿತ್ರವನತಿಗಳೆದೆನ್ನುವನೆಳಸಿದಿರೆಂತೆನಲು
ಹುತಹವನುಂಡ ಹಿಮಂ ಬೆರೆವುದೆ? ಸ
ನ್ನುತ ಸೌರಭ್ಯಕದಂಬವನಂಬರ
ಗತಿವೇಗದಿನಡರಿದ ಹೊಗೆ ಮನೆಗಳ್ತಪ್ಪುದೆ ಮಡಮುರಿದು?
ಓಡೊಡೆ ಗಾಜುಗಳುಂ ಮೃತ್ತಿಕೆಯೊಳ್
ಮೂಡಿ ಗಡಾ ಮೃತ್ತಿಕೆಯೊಳ್ ಮಗುಳೊಡ
ಗೂಡವೆನಲ್ಕವರಿಂದಿಳಿಕೆಯೆ ಶಿವಶರಣರ ಚಾರಿತ್ರ?
ರೂಢಿಯೊಳೆಗೆದಾ ರೂಢಿಯೆ ಜಡದೊಳ್
ಕೂಡದ ವೃಷಭಾರೂಢನೊಳೊಡನೊಡ
ಗೂಡಿದ ಶರಣರ ಕೂಡಿದಳಾನೆನ್ನಾಸೆಯ ಮಾಣು
೩೫೧.
.....ಲಾಲಿಸೆ
ನ್ನೊಡೆಯ ಬಸವೇಶನರ್ಧಾಂಗಿ ಸನ್ನುತ ಕೃಪಾಂಗಿ ಸರ್ವಾಂಗಲಿಂಗಿ ನೀನು
ಮೃಡಶರಣರಾದವರ ಮನೆಯ ದಾಸಿಯು ಮೆಟ್ಟು
ವಡಿಗೆರ್ಪನಾಂತವಳ್ಗೊರೆಯಲ್ಲವಾನೆನ್ನ
ನಡಿಗಡಿಗೆ ನೀವಿಂತು ಬಣ್ಣಿಸಲ್ ತಕ್ಕಳಲ್ಲದಳ ನುತಿಗೆ ||೧||
ಚಿರಭಕ್ತಿ ಭಿಕ್ಷಮಂ ನಿಮ್ಮಲ್ಲಿ, ಸತತ ಸ
ದ್ಗುರುಭಕ್ತಿ ಭಿಕ್ಷಮಂ ವೀರಮ್ಮನಲಿ, ಲಿಂಗ
ದುರುಭಕ್ತಿ ಭಿಕ್ಷಮಂ ಕಮಳವ್ವೆಯಲಿ, ಶಿವಧ್ಯಾನದಮಂತ್ರದ ಭಿಕ್ಷವ
ಪರಮಗುರುತಾಯಿ ಶಿವನಮ್ಮನಲಿ, ಸುಜ್ಞಾನ
ದರುಹಿನ ಸುಭಿಕ್ಷಮಂ ವಿಮಳವ್ವೆಯಲ್ಲೆಲ್ಲ
ಶರಣ ಸತಿಯರೊಳು ವೈರಾಗ್ಯಭಿಕ್ಷವ ಬೇಡಿ ಬಂದ ಭಿಕ್ಷಾಂದೇಹಿಯಾಂ ||೨||
ಕಾರುಣ್ಯದಿಂದೆನ್ನ ಮನದರಕೆಯನ್ನಿತ್ತು
ಪಾರವೈದಿಸುವುದು.......
೩೫೨.
ಇಕ್ಕದಿರ್ ತಂದೆ ಬ[=ಮ]ನ್ನಣೆಯ ಬಸಿಶೂಲಕ್ಕೆ,
ತಕ್ಕಳಲ್ಲಾ ನುತಿಗೆ; ಗುರುಶಿಷ್ಯರಂ, ಪೆತ್ತ
ಮಕ್ಕಳಂ ಪೆತ್ತರೊರೆದೊರೆದು ನೋಡದೆ ನೋಳ್ಪರಾರ್?
ಕುಂದೆಯವರು ನೋಡೆ? ||೧||
ತೂಕದಿಂದೊರೆಯಿಂದೆ ನೋಟದಿಂ ಚೆಂಬೊನ್ನ
ಜೋಕೆಗೈದರಮನೆಗೆ ಸಲಿಸುವನೊಲೆನ್ನುವಂ
ನೀ ಕರುಣದಿಂ ನೋಡಿ ರುದ್ರಂಗೆ ಸಲ್ವೊಲೆಸಗಿರ್ದು ಸಂದೆಯವದೇಕೆ
ಮೇಕೆಯೊಂದರ ದೆಸೆಯೊಳಳಿದ ಭಟನಸುವ ಧರ
ಣೀಕಾಂತ ಪ್ರಮುಖ ಭೂಭುಜರ ಹರಣವ ಹರನ
ವಾಕಿನಿಂ ಮುನ್ನ ಉಳುಹಿದ ದುಷ್ಟನಿಗ್ರಹ ಶಿಷ್ಟಪ್ರತಿಷ್ಠೆಯೆಂದೆ ||೨||
ಎನ್ನ ಸೋದರವೆ ಎನ್ನ ತಂದೆ ಮದ್ಗುರುವೆ
ಕಿನ್ನರಿಯ ಬ್ರಹ್ಮಯ್ಯ ಬಿಡು ಮನದ
ಖಿನ್ನತೆಯ ಬಿಡದೊಡಾಂ ನಿನ್ನ ಸೋದರಿಯಲ್ಲ ||೩||
೩೫೩.
ಪರಮಗುರು ತಂದೆ ಕಿನ್ನರಿಯ ಬ್ರಹ್ಮಯ್ಯ, ತವ
ಕರುಣಾಂಜನದಿ ಬಗ್ಗನಗ್ಗಳದ ಬಗ್ಗೆನಿಪ
ಶರಣಾಳಿಯಂ ಕಂಡು ಗೆಲುವಾದೆ, ಬಲವಾದೆ,
ಛಲವಂತೆಯಾದೆ ಮದದ
ಕರುವಾದೆ, ಕರುಣಗುಣಕಾರಿಯಾದೆ, ಭವವಲ್ಲರಿ
ಗರಿಗಿತ್ತಿಯಾದೆ, ಸನ್ಮೂರ್ತಿ ಸಾಮ್ರಾಜ್ಯಕ್ಕೆ
ಸಿರಿದೇವಿಯಾದೆ, ನನ್ನೊಲು ಧನ್ಯರಾರ್
೩೫೪.
ಹಂಬುಹರಿದುರುಳ್ವ ನರಗಿರದೆ ತಿಂಥಿಣಿಯ ಪೆ
ರ್ಗೊಂಬು ಕೈಬಸಮಾದೊಲಂಬುಧಿಯೊಳಾಳ್ವಗೊದ
ಗಿಂ ಬೈತುರಂ ಬಂದೊಲರಿಗಳರೆಯುಟ್ಟಿ ಬಪ್ಪಡೆಗಭಯಕರದೊಳೆಸೆವ
ಬೆಂಬಲಂಗೂಡಿದೊಲ್, ದಿಕ್ಕಿಲ್ಲದಳುವೆಳಕ
ಗಂ ಬೆಸಲೆಯಾದಳಳ್ತಂದೆತ್ತಿದಂದಾದು
ದಂಬಕತ್ರಯ ನಿಮ್ಮ ಶರಣರಡಿಗಾಣುತೆನಗೆ ||೧||
ಇನ್ನು ನೋಡೆದೆನ್ನಧಟ ಕಾಮಾದಿವರ್ಗಗಳ
ಬೆನ್ನ ಬಾರಂಗಳೆವೆನೆಂಟು ಮದಗಳ ಗಂಟ
ಲಂ ನಿಟಿಲೆನಲ್ ಮುರಿವೆಕರಣೇಂದ್ರಿಯಗಳ ಕಲಕುವೆನುಳಿದ ದುಃಖಕರ್ಮವ
ಛಿನ್ನ ಭಿನ್ನಂಗಡಿವೆ ||೨||
೩೫೫.
ತಂದೆತಾಯೆನಗೆ ಶ್ರೀಗುರುನಾಥ, ತೆತ್ತಿಗರ್
ಕಂದುಗೊರಲನ ಶರಣಸಂದೋಹ, ಗಂಡನಾ
ನಂಡಿವಾಹನ ಚೆನ್ನಮಲ್ಲಿಕಾರ್ಜುನನಿದಕ್ಕಿಲ್ಲ ಸಂದೆಯ ತಿಲಾಂಶ
ಎಂದೆಂದು ಪ್ರಭುವೆ ನಿಮ್ಮಯ ಮನೆಯೊಳೆನ್ನ ನಡೆ
ವಂದಮಂ ನೆಗಳಿದನುಮತದಿಂದ ಮುಳಿಯಲೇಕೆ? ||೧||
೩೫೬.
....ಅಯ್ಯ ತನು-ಜೀವ-ಭಾವಂಗೆಳೆನಗಿರ್ದೊಡೇಂ
ತತ್ತ್ರಿವಿಧವು |
ಇಲ್ಲದಾ ಘನವೆ ಮನವಾದ ದೂಸರ್ನೀವೆ
ಬಲ್ಲಿರಲ್ಲದೆಯಿತರಾರ್ ಬಲ್ಲರಹುದು ಮರ
ಹಿಲ್ಲದಿರ್ಪೆನ್ನನುವನು....
೩೫೭.
....ಬಸವಬ್ಬ ನಿಮ್ಮೊಲ್ಮೆಯಿಂ ಕಾಮಾರಿಯ |
ಅಪ್ಪಿ ಪೆರತರಿಯೆ | ನೋಟಕ್ಕೆ ನಾಮದಲ್ಲಿ ಪೆ
ಣ್ಣಪ್ಪೆನಲ್ಲದೆ ಭಾವಿಸಲ್ಗಂಡುರೂಪು ಬಿಡ
ದರ್ಪಿರ್ಪುನ್ನನೆಂಬುದ ನಿಮ್ಮ ಲಿಂಗವೆ ಬಲ್ಲುದು
೩೫೮.
ಎನ್ನ ಭಕ್ತಿಯು ನಿಮ್ಮ ಧರ್ಮ ಪ್ರಭುವಿನ ಧರ್ಮ
ವೆನ್ನ ಸುಜ್ಞಾನವೆನ್ನ ಪರಿಣಾಮವೇ
ಚೆನ್ನಬಸವೇಶ್ವರನ ಧರ್ಮವೆಲ್ಲಾ ಪುರಾತನರ ಧರ್ಮವೆನ್ನ ವಿರತಿ |
ಎನ್ನಳವದೇಂ ದೇವ ನಿಮ್ಮ ಸೊಮ್ಮ ನಿಮ್ಮ
ಪನ್ನಳಿನಕಪ್ಪೈಸಿ ಪರಿಶುದ್ಧಳಪ್ಪವ
ಳ್ಗಿಂನ್ನುಂಟೆ ಪರಮಸ್ವತಂತ್ರತ್ವ
೩೫೯.
ನಂಬಿದೆ ಗುರುವೇ ನಂಬಿದೆ, ನಂಬಿದೆ ಸ್ವಾಮಿ
ನಂಬಿದೆ ಅಂಬಿಕಾರಮಣ ನೀನಂಬಿಗ ||೧||
ಹೊಳೆಯ ಬರವ ನೋಡಂಬಿಗ
ಸೆಳಹು ಬಹಳ ಕಾಣಂಬಿಗ
ಸುಳುಹಿನೊಳಗೆ ಬಿದ್ದೆನಂಬಿಗ
ಸೆಳೆದುಕೊಳ್ಳೋ ನೀನಂಬಿಗ ||೧||
ಆರು ತೆರೆಯ ನೋಡಂಬಿಗ! ಬಲು
ಮೀರಿ ಬರುತಲಿವೆ ಅಂಬಿಗ!
ಹಾರಲೊದೆದು, ಎನ್ನ ತಡಿಗೆ ಶೆರಿಸು, ನೀ
ದೂರ ಮಾಡದಿರು ಅಂಬಿಗ ||೨||
ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಛಿದ್ರ ನೋಡಂಬಿಗ
ಸಂಭ್ರಮವನು ನೋಡಂಬಿಗ ಇದ
ರಿಂಬನರಿದು ತೆಗೆಯಂಬಿಗ ||೩||
ಹತ್ತು ಹತ್ತು ನೋಡಂಬಿಗ
ಹತ್ತಿದರೈವರು ಅಂಬಿಗ
ಮುತ್ತಿಗೆಗೊಳಗಾದೆನಂಬಿಗ, ಎನ್ನ
ನೆತ್ತಿಕೊಳ್ಳೋ ನೀನಂಬಿಗ ||೪||
ಸತ್ಯವೆಂಬ ಹುಟ್ಟಂಬಿಗ ಸದ್
ಭಕ್ತಿಯೆಂಬ ಪಥವಂಬಿಗ
ನಿತ್ಯಮುಕ್ತ ನಮ್ಮ ಚೆನ್ನಮಲ್ಲಿಕಾರ್ಜುನನ
ಮುಕ್ತಿಮಂಟಪಕೊಯ್ಯೋ ಅಂಬಿಗ ||೫||
೫೬೦.
ಕರಕರೆ ಕರಕರೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||
೫೬೧.
ಒಲ್ಲೆನೊಕತನವ ಒಲ್ಲೆ, ನಾನಾರೆ
ಕೊಲ್ಲ ಬಂದಾನೆನೆ ಕೋಪದಲಿ ನಲ್ಲ ||ಪಲ್ಲವ||
ಮಾವನೆಂಬುವ ನನ ಮನವ ನೋಯಿಸಿದನೆ
ಆವಾಗ ನಮ್ಮತ್ತೆ ಅಣಕವಾಡುವಳು
ಭಾವನೆಂಬವ ಕೆಂಡ, ಬಲು ಬಾಧಿಸುತಿಹ
ಬೇವುತಲಿರ್ದೆನು ಮತ್ತಿನ್ನಾರಿಗೆ ಹೇಳುವೆ ||೧||
ಮನೆಯಾತನ ಕೊಂದು, ಮಾವನ ಹಳ್ಳವ ಕೂಡಿ
ಬಿನುಗು ಭಾವದಿರನು ಬೀದಿಪಾಲು ಮಾಡಿ
ನನಗೆ ವೈರಿಯಾದ ಅತ್ತೆನೆ ಕೊಂದು
ಮನಸು ಬಂದಲ್ಲಿ ನಾನಿಪ್ಪೆನೆಲೆ ತಾಯಿ ||೨||
ಮುನ್ನಿನ ಪ್ರಮಥಗಣಂಗಳೆನ್ನ ಬಂಧುಬಳಗ
ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲಿಪ್ಪ
ಚೆನ್ನಮಲ್ಲಿಕಾರ್ಜುನನೆನ್ನನೊಲಿದಡೆ
ಇನ್ನಿತ್ತ ಬಾರೆ ನಾನೆಲೆ ತಾಯೆ ||೩||
೩೬೨.
ನಿಬ್ಬಣಕ್ಕೆ ಹೋಗುತೈದೇನೆ, ನೋಡಕ್ಕಯ್ಯ!
ನಿಬ್ಬಣಕೆ ಹೋದಡೆ, ಮರಳಿ ಬಾರನಕ್ಕಯ್ಯ! ||ಪಲ್ಲವ||
ಧನವು ಧಾನ್ಯ ಮನೆಯೊಳುಂಟು;
ಘನವು ಎನ್ನ ಮನೆಯೊಳಿಲ್ಲ
ಮನೆಯ ಗಂಡ ಮುನಿಯಲೆನ್ನ ಮಂಡೆ ಬೋಳಾಗದು ||೧||
ಮಂಡೆದುರುಬ-ಮಿಂಡತನದಿ
ದಿಬ್ಬಣಕ್ಕೆ ನಾ ಹೋದಡೆ
ಮಂಡೆ ಬೋಳಾಗದನಕವಪ್ಪುದೆನಗೆ ನಿಬ್ಬಣ? ||೨||
ಗಂಡನುಳ್ಳ ಗರತಿ ನಾನು
ರಂಡೆಯಾದನಯ್ಯೊ; ಇನ್ನು
ಕೊಂಡೊಯ್ಯೊ, ಶಿವನೆ, ಎನ್ನ ಹುಟ್ಟಿದೈವರು ಮಕ್ಕಳ ||೩||
ಕಾಮವೆಂಬ ಹೊಲನ ದಾಂಟಿ
ಸೀಮೆಯೆಂಬ ಹೊಲಬನರಿದು
ಹೇಮಗಿರಿಯ ಹೊಕ್ಕ ಬಳಿಕ ಮರಳಿ ಬಾರೆನಕ್ಕಯ್ಯ ||೪||
ಸಾಗಿ ಬೇಗದಿಂದ
ಹೋಗಿ ನೆರೆಯದಿದ್ದರೆ,
ಚೆನ್ನಮಲ್ಲಿಕಾರ್ಜುನಯ್ಯ ಮುನಿವ ಕಾಣಕ್ಕಯ್ಯ ||೫||
೩೬೩.
ಮುಕುತಿ ಹೋಯಿತು ಮುರುಕಿಸುವನಕ
ಮೂಕುತಿ ಹೋಯಿತು ||ಪಲ್ಲವ||
ಅಣಕವನಾಡುತ್ತ ಐವರ ಕೂಡೆ
ಸೆಣಸುತ ನಾಲ್ವರ ಕೈವಿಡಿದು,
ಮಣಕದಿಂದಲಿ ಆರು ಮಂದಿಯ ಕೂಡೆ,
ಉಣ ಕುಳಿತಲ್ಲಿ ಮೈಮರೆದೆನಕ್ಕ ||೧||
ಅಕ್ಕರಿಂದಲಿ ಹತ್ತು ಮಂದಿಯ ಕೂಡಿ
ನಕ್ಕರು, ಕೆಲೆದರು ತಮತಮಗೆ
ಮಕ್ಕಳಾಟಿಕೆಯ ನಾನಾಡುವ ಹೊತ್ತಿಗೆ
ಇಕ್ಕುತಲಿ ಮೈಮರೆದೆನಕ್ಕ ||೨||
ಅತ್ತ ಮಾರುದ್ದರುವೆಯ ಕೂಡಲಾಗಿ
ಸುತ್ತೇಳು ಕೇರಿಯರು ಸೆಣಸುವರು
ಚಿತ್ತವಲ್ಲಭ ಚೆನ್ನಮಲ್ಲೇಶ ಕೂಡಿ
ಮುತ್ತೈದೆಯಾಗೆನ್ನನಿರಗೊಡಕ್ಕ ||೩||
೩೬೪.
ಕಣ್ಣಾರೆ ನಾ ಕಂಡೆ ಕನಸಿನ ಸುಖವ
ಉಣ್ಣದೂಟವನುಂಡು ಊರ ಸುಡುವುದ ||ಪಲ್ಲವ||
ಮಾಣದಚ್ಚ ಜಲದೊಳೆಂದು ಆಣಿಯಾದ ಮುತ್ತು ಹುಟ್ಟಿ
ಕೋಣೆಯೆಂಟರೊಳಗೆ ತಾನೆ ತಿರುಗುವುದು
ಆಣಿಕಾರರು ಹಂಡು, ಆ ಮುತ್ತ ಬೆಲೆ ಮಾಡಿ,
ಜಾಣತನದಲ್ಲಿ ಕೊಂಡೊಯ್ದರದನು ||೧||
ಇಂಬಪ್ಪ ಗಿರಿಯಲಿ ಕೊಂಭೆರಡನೆ ಕಂಡು
ಶಂಭುನಾರಿಯ ನೋಡಿ ಮಾತಾಡೆ
ಮುಂಬರಿದಾಡುವ ಮಾವತಿಗನ ಕೊಂದು
ಸಂಭ್ರಮಿಸಿ ಉಂಬ ಶಿವಶರಣರೆಲ್ಲರನು ||೨||
ಮುಪ್ಪಿಲ್ಲದ ಸರ್ಪನೊಪ್ಪವಿಲ್ಲದೆ ಕೊಂದು
ಒಪ್ಪುವ ಆತ್ಮಕನ ನೋಟಕರ
ಉಪ್ಪರಿಗೆಯ ಮೇಲೆ ಉರಿವ ಲಿಂಗವನು ಕಂಡು
ಒಪ್ಪದ ಚೀಟಿ ಸುಟ್ಟುಹಿದ ಮಹಿಮರ ||೩||
ಜಗಕೆ ಎಚ್ಚರುವಾಗಿ ಅಘಹರರೂಪಾಗಿ
ಅಗಣಿತವಹ ಘನಮಹಿಮರನು
ಬೆಗೆಗೊಳ್ಳದೆ ಭಾವೆನ್ನರ ಸಂಗವ
ನೊಗೆದು ಈಡಾಡುವ ಓಜೆವಂತರನು ||೪||
ಮನಕ್ಕೆ ಗೋಚರವಾಗಿ ತನುಮನ ರೂಪಾಗಿ
ಅನುವಿನ ವಿವರವ ಬಲ್ಲವರ
ನೆನೆವರಿಗೆ ಸಿಲ್ಕಿ ನೇಮವ ಕೋರುವ
ಘನ ಚೆನ್ನಮಲ್ಲನೆಂಬಿನಿಯನನು ||೫||
೩೬೫.
ಕೈಯ ತೋರೆಯಮ್ಮ, ಕೈಯ ನೋಡುವೆನು
ಬಯ್ಯಾಪುರದಿಂದಲಿಳಿದು ಬಂದೆ ನಾನು
ಮೈಯೊಳಗಿರ್ದ ವಸ್ತುವ ಹೇಳುವೆನು ||ಪಲ್ಲವ||
ವಚನ:
ಚೆಲುವೆತ್ತ ಭಾವದ ಲಕ್ಷಣವ ಹೇಳುವೆ ತೋರೆಯಮ್ಮ
ಅರಿವಿನ ಬಗೆ ಯಾವುದೆ ಕೊರವಿ? ನಿನ್ನ ನಾಮ ಸೀಮೆ ಯಾವುದು! ಎಲ್ಲಿಂದ ಬಂದೆಯಮ್ಮ?
ಉತ್ತರೋತ್ತರ ಬಯ್ಯಾಪುರದ ಮಾಹಾದೇವಿಯ ವರವೆ; ಮಹಾದೇವನ ಒಲವೆ;
ಅಲ್ಲಿಂದ ಇಳಿದು ಬಂದೆನಮ್ಮ! ನಿನ್ನ ತನುವಿನೊಳಗಿರ್ದ ನಿತ್ಯಾನಿತ್ಯವ ವಿವರಿಸಿ
ಹೇಳುವೆ ನಂಬು ನಂಬೆಯಮ್ಮ
ಪದ:
ಎಂಟು ಮಂದಿ ನಂಟರು ನಿಮಗಮ್ಮ
ಉಂಟಾದ ಹತ್ತು ದಿಕ್ಕಿನಲ್ಲಿ ಬಳಗವಮ್ಮ
ಗಂಟಲ ಮೆಟ್ಟಿಕೊಂಡೈದರೆ ನಿಮ್ಮ,
ಸುಂಟರಗಾಳಿಯಂತೆ ತಿರುಗುವೆಯಮ್ಮ
ಕಂಟಕ ಬಿಡಿಸುವೆ ಕರುಣದಿ ನಿಮ್ಮ, ನೀಲ
ಕಂಠನಂಘ್ರಿಯ ಬಿಡದೆ ಪಿಡಿಯಮ್ಮ ||೧||
ವಚನ:
ನಂಬುವುದಕೊಂದು ಕುರುಹುಂಟೆ ತಾಯಿ?
ಭೂದೇವಿ ಮೊದಲಾದ ಅಷ್ಟತತ್ವಾಧಿಕರು ನಿನ್ನ ಸಾಕ್ಷಿಬಂಧುಗಳಮ್ಮ, ದಶಮುಖ
ಪವನಸಂಕುಳವೆ ನಿನ್ನ ಇಷ್ಟರುಗಳಮ್ಮ! ಅನ್ಯರು ಸೇರರು; ನಿನ್ನವರು ನಿನಗೆ ವೈರಿಗಳಮ್ಮ
ಕಂಟಕವಾಗಿ ಕಾಡುವುದಮ್ಮ
ಅಹುದಹುದು ಅದೆಂಥ ಕಂಟಕವೆ ತಾಯಿ!
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಲ್ಲಿ ಸತ್ತು ಸತ್ತು ಹುಟ್ಟಿದೆಯಮ್ಮ. ಬಾರದ
ಭವದಲ್ಲಿ ಬಂದೆಯಮ್ಮ. ತೊಡದ ಚೋಹವ ತೊಟ್ಟೆಯಮ್ಮ. ಕಾಣದ ಕರ್ಮವ
ಕಂಡೆಯಮ್ಮ. ಉಣ್ಣದಾಹಾರವನುಂಡೆಯಮ್ಮ. ಇಲ್ಲಿಗೆ ಈ ಮನೆಗೆ ಬಂದೆಯಮ್ಮ.
ಇದು ನಿನ್ನ ಪುಣ್ಯದ ಫಲವಮ್ಮ. ಈ ಕಂಟಕಕ್ಕಂಜಿ ಕಳವಳಿಸದಿರಮ್ಮ. ನಿರಂಜನನ
ಪಾದವ ಭಕ್ತಿಯಿಂ ಧೃಡವಿಡಿಯಮ್ಮ
ಪದ:
ಒಡನೆ ಹುಟ್ಟಿದೈವರು ನಿನಗಮ್ಮ;
ಕೆಡಹಿಯಾರು ಮಂದಿ ಕೊಲುತಿಹರಮ್ಮ;
ಪಿಡಿದರೆ ತಾಯಿ-ಮಕ್ಕಳು ಬಯ್ವರಮ್ಮ;
ತೊಡರಿಕೆ ನಾಲ್ವರು ಹೆದರಿದಿರಮ್ಮ
ಪೊಡವೀಶನಡಿಯ ಬಿಡದೆ ಪಿಡಿಯಮ್ಮ;
ಒಡಲ ಕಿಚ್ಚಿನ ಕೊರವಿಯು ನಾನಲ್ಲಮ್ಮ ||೨||
ವಚನ:
ಚಿಂತೆಯ ಬಿಡಿಸುವ ನಿಶ್ಚಿಂತ ಪದವಾವುದೆ ತಾಯಿ?
ನಿನ್ನೊಡನೆ ಜನಿಸಿದ ಪಂಚಭೂತಂಗಳು ನಿನಗೆ ಸಂಗವಾಗಿ ಹಿತಶತ್ರುತನದಿ ಭವ
ದತ್ತ ಕೆಡಹುವರಮ್ಮ, ಅವರೊಡೆಯರು ನಿನ್ನನಾಳಿಗೊಂಡು ಕಾಡುವರಮ್ಮ
ಇದ ವಿವರಿಸಿ ಪೇಳೆ ತಾಯಿ!
ಚತುರ್ಮುಖಬ್ರಹ್ಮ ಹೊಡೆದಾಳುತೈದಾನೆಯಮ್ಮ ವಿಷ್ಣು ವಿಧಿಪಾಶದಿಂ ಬಿಗಿಯೆ
ರುದ್ರನ ಹೊಡೆ ನಿಚ್ಚ ಹೊಯ್ಯುತಿದೆಯಮ್ಮ. ಈಶ್ವರನಂತುರದಲ್ಲಿ ಸದಾಶಿವ ಸೈಗೆಡೆದನಮ್ಮ.
ಒಳಹೊರಗೆ ನಿನಗೈವರ ಕಟ್ಟು-ಕಾವಲು ಘನವಮ್ಮ. ಮತ್ತೊಮ್ಮೆ ಕಾಮ
ಕಾತರಿಸಿ, ಕ್ರೋಧವಿರೋಧಿಸಿ, ಮದವಹಂಕರಿಸಿ ಮಚ್ಚರ ಕೆಚ್ಚು ಬಲಿದು, ಹೊಯ್ದು-
ಬಯ್ದು-ಕೊಯ್ದು-ಕೊರೆದು, ಚಿತ್ರಿಸಿ, ಚಿರಣಿಸುವರಮ್ಮ. ಮತ್ತೊಮ್ಮೆ ಏಳು ಮಕ್ಕಳ
ತಾಯಿ ಹಿಡಿದು ಹೀರಿಹಿಪ್ಪೆಯ ಮಾಡುವಳಮ್ಮ. ಆ ಮಕ್ಕಳ ಜನನ ಏಳಕೇಳು ದಿನವಮ್ಮ.
ಅಳುಕಿಸಿ-ನಡುಕಿಸಿ ಕಳವಳಿಸಿ-ಹೆದರಿಸಿ, ಎತ್ತರತತ್ತರ ಮರುಳು ಮಾಡಿ ಕನಸು-
ಕಳವಳ-ಒತ್ತರಮಂ ಒತ್ತರಿಸಿ ನಡೆದು ಬುದ್ಧಿಯರಿದಂತೆ ಕಂಪಿಸಿ ಕಳವಳಿಸಿ ನುಡಿವ
ರಮ್ಮ. ಮತ್ತೊಮ್ಮೆ ಮನಬಂದಂತೆ ನಡೆದು ಬುದ್ಧಿಯರಿಯದಂತೆ ಸ್ಥಿರಕರಿಸಿ ಚಿತ್ತಬಂದಂತೆ
ಅವಧರಿಸಿ, ಅಹಂಕಾರ ತೋರಿದಂತೆ ಬಿರಿಪಿಡಿದಲೆವುತ್ತಿಪುದಮ್ಮ. ಒಮ್ಮೆ ಮರನಾಗುವೆಯಮ್ಮ,
ಒಮ್ಮೆ ಮನುಷ್ಯಳಾಗುವೆಯಮ್ಮ. ಇದರೊಳು ಸಿಲ್ಕಿದೆನೆಂದು ಚಿಂತಿಸದಿರಮ್ಮ.
ಈ ಚಿಂತನೆಯ ಮಂತ್ರದಿಂ ಕಳೆದು ನಿಶ್ಚಿಂತದೋರಿಸುವೆ. ಎನ್ನೊಡೆಯ
ಜಗದೀಶ ಆದಿಲಿಂಗನ ಪಾದವನನುದಿನ ಅಗಲದೆ ನಂಬಿ ನಚ್ಚಿ ಭಜಿಸಮ್ಮ.
ಅದು ಎಂಥ ಉಪದೇಶದ ನೋಂಪಿಯಮ್ಮ?
ಮಂಗಳವಾರದ ದಿನ ಮನೆಯ ಸಾರಿಸೆಯಮ್ಮ, ಕಟ್ಟುಮುಟ್ಟು ಹೊರಯಿಕೆ ಬಿಸಾಡೆಯಮ್ಮ.
ರಂಗಮಂಟಪವ ರಚಿಸಿ ಚೌಕವಲಂಕರಿಸೆಯಮ್ಮ. ರಂಗದಕ್ಕಿಯಮೇಲೆ ಕಳಶವನ್ನಿಟ್ಟು
ಐವರು ಅಚ್ಚ ಮುತ್ತೈದೆಯರ ಕುಳ್ಳಿರಿಸೆಯಮ್ಮ. ತೂ[=ತಾ]ಳಮೇಳದವರ ಕರೆ
ತಂದು ಶುಭವಾದ್ಯವ ಮೊಳಗಿಸೆಯಮ್ಮ. ಮನೆಯ ದೇವರ ಜ್ಯೋತಿಯ ತುಂಬಿ, ಕಪ್ಪುರದ
ಮಂಗಳಾರತಿಯ ತಂದಿಸಿಸೆಯಮ್ಮ, ಸುಚಿತ್ತೆಯಾಗಿ ಸಮ್ಮುಖದಲ್ಲಿ ಕುಳ್ಳಿರೆಯಮ್ಮ.
ತಲೆಗೈಯನಿಕ್ಕಿ, ವಿಭೂತಿಯ ಹಣೆಗಿಟ್ಟು, ಕಿವಿಯೊಳು ಮಂತ್ರವನುಸುರಿದನಮ್ಮ;
ನೆತ್ತಿಯ ಲಿಂಗವ ಹಸ್ತಕೆ ಕೊಟ್ಟು, ಕರ್ತೃ ಅಲ್ಲಯ್ಯ ಸಾಕ್ಷಿಯಾಗಿ! ಉಪಾಯದಿಂ
ಉದರವ ಹೊರೆವ ಉಪಾಧಿ ಕೊರವಿಯಲ್ಲ. ಪರವ ತೋರುವ ಪರಮದೀಕ್ಷಾ ಕೊರವಿ ನಾನಮ್ಮ.
ಪದ:
ಈಶಮಹೇಶನೆ ಮನೆದೈವವಮ್ಮ
ಬೇಸರು ಮಾಡಿ, ರಾಶಿದೈವವ ಹಿಡಿಯೆ
ಕಾಸಿಂಗೆ ಬಾರದ ಕಸನಪ್ಪೆಯಮ್ಮ,
ಹೇಸಿ ದೈವವ ಬಿಡು, ಪಿಡಿಯೀಶನಡಿಯ,
ಮೀಸಲ ಹಿಡಿಯಮ್ಮ ಸೂಸದ ಮನವ
ನಾಸಿಕಾಗ್ರದೊಳು ಗಮಿಸಿ ನಿಲ್ಲಮ್ಮ! ||೩||
ವಚನ:
ಇಂತೀ ದೇವರಿಗೆ ನಿಷ್ಠೆಯಿಂದ ನೇಮವ ಮಾಡಬೇಕಮ್ಮ!
ಅದೆಂಥಾ ನೇಮವೇ ತಾಯಿ?
ಪೊಡವಿಗೊಡೆಯ ಮೃಡನೊಬ್ಬನೆ ನಿಮ್ಮ ಮನದ ದೈವವಮ್ಮ. ಈ ದೇವರ ನೋತು
ಫಲವೇನೂ ಕಾಣೆಂದಲಸದಿರಮ್ಮ. ನಾಡ ಹಿಡಿದಾಡುವ ಕೇಡಿಗ ದೈವವ ಬಗೆಯದಿರಮ್ಮ.
ಅವು ನಿಮ್ಮ ಕಾಡುವವಮ್ಮ. ಕರಕಷ್ಟಬದ್ಧಭವಿಯಾಗುವೆಯಮ್ಮ. ಲಜ್ಜೆಗೆಟ್ಟು
ಕಿರುಕುಳ ನೀಚದೈವಂಗಳ ಸಂಗ ಬೇಡಮ್ಮ. ಎಲ್ಲ ದೇವರೊಡೆಯ ಲಿಂಗದೇವನೆ
ನಿನ್ನ ಮನದೈವ ಕುಲದೈವವಮ್ಮ. ಮನದಲ್ಲಿ ನಂಬಿ ನಚ್ಚಿ ಗುಡಿಗಟ್ಟೆಯಮ್ಮ. ಏಳು ಮಂದಿ
ಅಚ್ಚಮುತ್ತೈದೆಯರನೊಂದು ಹೊತ್ತನಿರಿಸೆಯಮ್ಮ. ಶುದ್ಧಪದ್ಮಾಸನವನಿಕ್ಕೆಯಮ್ಮ.
ನಾಭಿ ಪವನವನೆತ್ತೆಯಮ್ಮ. ನಾಸಿಕಾಗ್ರದಿ ನಿಲ್ಲೆಯಮ್ಮ. ರವಿಶಶಿಗಳಾಟವ
ನೋಡೆಯಮ್ಮ. ತಾಳಮದ್ದಲೆಯ ಬಾರಿಸೆಯಮ್ಮ. ಓಂ ನಮಶ್ಶಿವಾಯವೆಂದು ಓಲಗವ ಮಾಡೆಯಮ್ಮ
ಪದ:
ಕುಂಭಿನಿದೈವವ ಹಿಡಿಯೆ ನೀ ಕೆಟ್ಟೆ!
ಶಂಭುಲಿಂಗನ ಕೈಯ ಬಿಡಲು ನೀ ಭ್ರಷ್ಟೆ!
ಇಂಬುಗೊಡಲು ಬೇಡ, ಇದಿರಿಟ್ಟವೆಲ್ಲ!
ಹಂಬಲು ಬಿಡು ಭ್ರಷ್ಟದೈವವನೆಲ್ಲ
ನಂಬಿ ಶುದ್ಧವಾಗೆ ನಿಜಲಿಂಗದಲಿ
ಮುಂಬಾಗಿಲೊಳು ಪೊಕ್ಕು ಲಾಲಿಸು ಸೊಲ್ಲ! ||೪||
ವಚನ:
ಇಂತೀ ನಿಷ್ಠೆ ನಿರ್ಧರವಾಗಬೇಕೆಯಮ್ಮ!
ಅದೆಂಥಾ ಧೃಢಭಾವವೆ ತಾಯಿ?
ನಾಡಾಡಿ ದೈವವ ನೋತಡೆ ಕೇಡಲ್ಲದೆ ಸುಖವಿಲ್ಲವಮ್ಮ. ಏಕಲಿಂಗನಿಷ್ಠೆ ಇಲ್ಲದಡೆ
ಕಾಕಪ್ಪೆಯಮ್ಮ. ಕಂಡಕಂಡ ದೈವಂಗಳ ಕೊಂಡೆಸಗಲು ಮುಡುಹಂ ಸುಟ್ಟು ನೀರು
ಮುಳುಗಿ, ಸುತ್ತಿ, ತಲೆಯಂ ತರಿದು, ಬತ್ತಲೆ ಬಳಸಿ, ಕುರುಳು ಬೆರಳು ಮುಂಬಲ್ಲು
ಹೋಗಿ, ಕೆಟ್ಟು, ಡೊಣೆಯಲಿ ತಿಂದು, ನಾಯಾಗಿ ಬೊಗುಳಿ, ಲಜ್ಜೆಗೆಟ್ಟು ಚೀಮಾರಿಯಪ್ಪೆಯಮ್ಮ.
ನೆನೆದು-ಬಿರಿದು-ಉಲಿದು, ಕರಗಿ ಕರಿಮುರುಯಪ್ಪೆ. ಬಿನುಗುಭಿಕಾರ
ದೈವಂಗಳ ನೆನೆಯದಿರಮ್ಮ. ಪ್ತತಿಪೂಜೆ ಮಾಡದೆ ಆಚಾರದಲ್ಲಿ ನಿಂದುದೆ ನಿಷ್ಠೆಯಮ್ಮ.
ನಿಷ್ಠೆಯಿಲ್ಲದ ಪೂಜೆ ಎಷ್ಟು ಕಾಲ ಮಾಡಿದರೂ ನಷ್ಟವಲ್ಲದೆ ದೃಷ್ಟವುಂಟೆ? ಆದಿಲಿಂಗನ
ಭಜಿಸೆಯಮ್ಮ. ಆತ್ಮಲಿಂಗವ ಧ್ಯಾನಿಸಮ್ಮ. ಚಿತ್ತ ಶುದ್ಧವಾಗಿರಲಮ್ಮ.
ಅದೆಂಥಾ ಸುಯಿಧಾನವೆ ತಾಯಿ?
ಒಂಬತ್ತು ಬಾಗಿಲ ಕದವನಿಕ್ಕಿ ಒಳಯಿಕೆ ಒಬ್ಬ್ರನು ಬಿಡದಿರೆ, ಸುಮ್ಮನೆ ಕಳುಹೆ.
ಒಮ್ಮನವ ಮಾಡೆ, ಗಮ್ಮನೆ ನಡೆಯೆ, ಘಳಿಲೆಂದು ಪೋಗೆ, ದಿಗಿಲೆಂದು ಹತ್ತೆ, ಎಡ
ಬಲನಂ ಮುರಿಯೆ, ಬೀಗವಂ ಕೊಳ್ಳೆ, ಕುಂಭಿನಿಯ ಬಾಗಿಲ ಕದವ ತಳ್ಳೆ, ಒಳಪೊಕ್ಕು
ಒಂದಾಗಿ ನೋಡೆ, ಸೋಹವೆಂಬ ಬ್ರಹ್ಮನಾದವನಾಲಿಸಮ್ಮ. ಪರತತ್ವದೊಳು ಉರಿ
ಕರ್ಪೂರದಂತಾಗಮ್ಮ. ಇಂತೀ ನಿಷ್ಠೆಗೆ ನಮೋ ನಮೋ ಎಂಬೆನಮ್ಮ ಬೋಸರಿಗತನದ
ಲೇಸಿನವಳು ನಾನಲ್ಲಮ್ಮ.
ಪದ:
ಆದಿಯನರಿಯೆನಮ್ಮ ಭೇದಿಸಿ ಮುನ್ನ!
ಮೇದಿನಿಯೊಳು ಬಂದು ಮರೆದೆಯಲ್ಲಮ್ಮ!
ತಂದೆ ಹಬ್ಬೆಯನೆತ್ತಿ ಹೇಳುವೆ ನಿಮ್ಮ
ಬಂದ ಮಾರ್ಗದಲ್ಲಿ ಗಮಿಸಿ ನಿಲ್ಲಮ್ಮ
ಭ್ರೂಮಧ್ಯದ ಮನೆಯೊಳಗಿರ್ದು ಕಾಣಮ್ಮ
ಮುಂದಣ ಕೋಣೆಯೊಳೆ ಜೀವಿಸು ನೀನಮ್ಮ ||೫||
ವಚನ:
ಮುನ್ನೊಮ್ಮೆ ಆದಿಯ ಲೀಲೆಯಿಂದ ಮೇದಿನಿಗಿಳಿದು ಆಗುಚೇಗೆಗೊಳಗಾಗಿ ನಿನ್ನ
ನಿಜವನರಿಯದ ಪರಿಯ ತಿಳಿದು ನೋಡಮ್ಮ.
ಅದೆಂಥ ದೇವರ ಲೀಲೆಯೆ ತಾಯಿ?
ನಾದ-ಬಿಂದು-ಕಳೆ-ಆದಿಯನಾಗಿ ತತ್ವಂಗಳಾವುವುವಿಲ್ಲದಂದು, ತಂದೆ ತಾನೆ
ತಾನಾಗಿರ್ದನಮ್ಮ. ಆತನ ಸತಿಯಾನೆಯಮ್ಮ. ತನಗೆ ಮಖ್ಖಳು ಬೇಕಾಗಿ ನೆನೆದಡೆ
ನಾದ-ಬಿಂದು-ಕಳಾಯುಕ್ತವಾದ ಓಂಕಾರವಾಯಿತಮ್ಮ. ಆ ಓಂಕಾರವೆ ಆದಿಯ ಶರಣನಮ್ಮ.
ಆ ಶರಣನ ಶಕ್ತಿಯ ಹೆಸರು ನೀನೆಯಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಪರಸತಿಯೆಂದು ಸದಾಶಿವಂಗೆ ಕೈಗೂಡಿಸಿದನಮ್ಮಾ. ನಿನ್ನೊಡನೊಬ್ಬಳು ಹುಟ್ಟಿದಳು.
ಆದಿಶಕ್ತಿಯೆಂದು ಈಶ್ವರಂಗೆ ಸಂಬಂಧಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಇಚ್ಛಾಶಕ್ತಿಯೆಂದು ರುದ್ರಂಗೆ ಪಟ್ಟವ ಕಟ್ಟಿದೆನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಜ್ಞಾನಶಕ್ತಿಯೆಂದು ವಿಷ್ಣುವಿಂಗೆ ಕೈಗೂಡಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಕ್ರಿಯಾಶಕ್ತಿಯೆಂದು ಬ್ರಹ್ಮಂಗೆ ಧಾರೆಯನೆರೆದನಮ್ಮ. ಇವರು ನಿನ್ನಿಂದ ಹುಟ್ಟಿದ ಪಂಚ
ಕೃತ್ಯಂಗಳಿಗೊಳಗಾದರು. ಇದರೊಳು ಪೊಕ್ಕು ಬಳಸಿದೆಯಾಗಿ ನನ್ನ ನೀ ಮರೆದೆಯಮ್ಮ;
ಇನ್ನಾದರೂ ಎಚ್ಚೆತ್ತು ನಡೆಯೆ.
ನಡೆವ ಗತಿ ಪಥವಾವುದೆ ತಾಯಿ?
ಇವರು ನಿನ್ನೊಳಗಿರ್ಪರಮ್ಮ. ಪಂಚಭೂತಂಗಳಿಗೊಡೆಯರಮ್ಮ. ಪಂಚ ಚಕ್ರಗಳಧಿಕಾರಿಗಳಮ್ಮ.
ಮೊದಲಿವರ ನಿನ್ನ ವಶವ ಮಾಡಿಕೊಳ್ಳಮ್ಮ. ಇವರ ಸಂಗವನಗಲಿ,
ಹುಟ್ಟಿದ ಮಾರ್ಗವೆರಸಿ ಹುಬ್ಬಳ್ಳಿಗೆ ನಡೆಯಮ್ಮ. ಅಲ್ಲಿ ನಿರ್ಮಲ ಲಿಂಗ ಉಂಟಮ್ಮ.
ಪತಿಭಕ್ತಿಯ ಮಾಡಮ್ಮ ನಿನ್ನ ಗಂಡನೊಲಿವನಮ್ಮ. ಮೂಮ್ದಣ ಬಾಗಿಲ ತೆಗೆಯಮ್ಮ.
ಮೇಲಣ ಕೋಣೆಯ ಪೌಳಿಯ ಬಳಸಿ ನೋಡೆಯಮ್ಮ. ಥಳಥಳಿಸುವ ಪರುಷದ ಪೀಠದಲ್ಲಿ
ಪರಂಜ್ಯೋತಿ ಲಿಂಗವಿಪ್ಪುದಮ್ಮ. ನಿನ್ನ ಹೆಯ್ಯತ್ತನೆಂದು, ಹತ್ತಿರ ಬಂದು ನಮಿಸಮ್ಮ.
ಅಮೃತಕೂಪವ ಮೊಗೆಯಮ್ಮ. ತುಂಬಿದ ಕೊಡನ ಘೃತವಂ ಶಂಭುಲಿಂಗನ
ಮಂಡೆಗೆರೆಯಮ್ಮ. ಕೂಪದೊಳಗಣ ಕಮಲವ ಪಿಡಿಯಮ್ಮ. ಮಸ್ತಕದೊಳು ಮಡಗಮ್ಮ.
ಧೂಪಾರತಿಯ ಬೆಳಗಮ್ಮ. ಅಮೃತಾರೋಗಣೆಯ ಮಾಡಿಸಮ್ಮ. ಕರ್ಪೂರ
ವೀಳ್ಯವ ಸಲಿಸಮ್ಮ. ಗೀತವಾದ್ಯ ನೃತ್ಯಂಗಳಿಂ ಮೆಚ್ಚಿಸಮ್ಮ. ಸಂಭ್ರಮದ ಪೂಜೆಯೊಳು
ಸೈವೆರಗಾಗಮ್ಮ. ಇಂತೀ ಅವಿರಳ ಭಾವಪೂಜೆ ನಮೋ ನಮೋ ಎಂಬೆಯಮ್ಮ.
ಪದ:
ನಾಗರ ಕಾಟಕ್ಕೆ ನವೆದೆಯಲ್ಲಮ್ಮ
ನಾಗಲೋಕದಿಂ ಹಿಡಿಯಿತು ನಿಮ್ಮ.
ಜಗವನೆಲ್ಲವ ನುಂಗಿ ಜಾಳಿಸುತೈತೆ.
ಗಂಗಾಧರನ ಕಾಟದ ಸರ್ಪವಮ್ಮ.
ಬೇಗದಿಂದ ತ್ರಿಗಗನಕೊಗೆಯಮ್ಮ
ಈಗಲೆ ಪರಶಿವನೊಲವಿದೆಯಮ್ಮ ||೬||
ವಚನ:
ಆಧಾರಕುಂಡಲಿಯ ಸರ್ಪನ ವೇದನೆಯಿಂ ಭವರುಜೆಯಕ್ಕೀಡಾಗಿ ಬಳಲುತಿರ್ದೆಯಮ್ಮ.
ಅದು ಎಂಥ ಶೇಷನೆ ತಾಯಿ?
ಒಂಬತ್ತು ಹೋರಿನ ಹುತ್ತದಲ್ಲಿ ಸ್ಥಾನವಾಗಿರ್ಪುದಮ್ಮ, ಐದು ಮುಖದ ಅಜ್ಞಾನ ಸರ್ಪ!
ಪೂರ್ವಕ್ಕೊಂದು ಮುಖ, ಪಶ್ಚಿಮಕ್ಕೊಂದು ಮುಖ; ಉತ್ತರಕ್ಕೊಂದು ಮುಖ;
ದಕ್ಷಿಣಕ್ಕೊಂದು ಮುಖ; ಅಧೋದ್ವಾರಕ್ಕೊಂದು ಮುಖ; ಪಂಚವರ್ಣದ ಪ್ರಳಯ
ಕಾಳೋರಗನೆಯಮ್ಮ. ಅಲ್ಲಿಂದ ಬಂದು ನಿನ್ನನಲೆವುತ್ತಿದೆಯಮ್ಮ. ಅದರ ವಿಷದ ಹೊಗೆ
ತಾಗಿ ಅಜನ ಸೃಷ್ಟಿಯಲಿ ಅಲಿಪರಿದೆಯಮ್ಮ ನಿನ್ನ ಮಾತೇನು, ಈರೇಳು ಲೋಕವನೆಲ್ಲವ
ಕಚ್ಚಿ ಕೆಡವುತ್ತಿದೆಯಮ್ಮ. ಅದು ಪರಮೇಶ್ವರನ ಆಜ್ಞಾಶಕ್ತಿ ತಾನೆಯಮ್ಮ.
ಇಂಥಾ ಶೇಷನ ಹಿಡಿದುಕೊಂಡು ಪ್ರಸಾದವ ಕೊಂಬ ಪರಿಯಾವುದೆ ತಾಯಿ?
ಅಡಿಯ ಮಡದಿಂದೊತ್ತೆಯಮ್ಮ. ಹುತ್ತದ ಒಂಭತ್ತು ಹೋರನೆ ಮುಚ್ಚೆಯಮ್ಮ.
ಅಧೋಪವನವನೂರ್ಧ್ವಕೆತ್ತೆಯಮ್ಮ. ಮೂಲಾಗ್ನಿಯ ಪಟುವ ಮಾಡೆಯಮ್ಮ. ಆಧಾರ
ಕುಂಡಲಿಯನಂಡಲೆದಭಿಮುಖವ ಮಾಡೆಯಮ್ಮ. ನಾಗಸ್ವರದ ಶೃತಿಯ ನಖದ ಕೊನೆಯಲ್ಲಿ
ಹೆಚ್ಚಿಸೆಯಮ್ಮ. ಕಂಠಝೇಂಕಾರ ಸಪ್ತಸ್ವರದಂತಿರುಹೆಯಮ್ಮ. ಅದು ನಾದದ
ನಾದವ ಕೇಳುತ್ತ ನಾಭಿಮಂಡಲದಿಂದೆದ್ದು ಉಸುರ ಉನ್ಮನಿಯಲ್ಲಿ ಬಿಡುತ್ತ ಒಂದೆ ನಾಳದಲ್ಲಿ
ಗಮನಿಸುವುದಮ್ಮ ಮೇಲಣ ಕೋಣೆಯೊಳಗಿರ್ಪ ಕಪ್ಪೆ ಒತ್ತೆಯ ನುಂಗುವುದಮ್ಮ.
ಅಲ್ಲಿ ಸತ್ತ ಸರ್ಪನ ನೆತ್ತಿಯಲ್ಲಿ ಮಾಣಿಕವಿಪ್ಪುದಮ್ಮ, ಅದ ಸೆಳೆದುಕೊಳ್ಳಮ್ಮ.
ಅಪ್ರಶಿಖಾಮಂಡಲದ ಅಮೃತಾಹಾರವ ಸವಿಯಮ್ಮ. ಗಗನಾಂಬರ ಆತ್ಮನಿರತೆಯಾಗಿರಮ್ಮ,
ಪರಮೇಶ್ವರನಲ್ಲಿ ಪ್ರಸನ್ನಮುಖ ತಪ್ಪದಮ್ಮ. ಇಂಥ ಶೇಷನ ಪ್ರಸಾದಕ್ಕೆ ನಮೋ
ನಮೋ ಎಂಬೆನಮ್ಮ.
ಪದ:
ಎಲ್ಲವ ಹೇಳುವೆ ಎಲ್ಲಿಪ್ಪೆ ಕೊರವಿ?
ಕಲ್ಯಾಣದ ಚೆಲುವೈಕುಂಠವಮ್ಮ.
ಅಲ್ಲಿಂದನೆಲ್ಲವ ಪೇಳಿದೆ ನಿಮ್ಮ
ವೇಳೆಯನರಿತು ಹೋಗೆ ಎಡೆಮಾಡಿ ತಾರೆ
ಮೊದಲಾದ ಪಂಚಭಿಕ್ಷವ ಕೊಂಡುಬಾರೆ
ಚೆನ್ನಮಲ್ಲಿಕಾರ್ಜುನನ ವರವೆನಗುಂಟೆ ||೭||
ವಚನ:
ಮನಸಿನ ಕನಸಿನ ಕೋರಿಕೆಯೆಲ್ಲವ ಕಂಡಂತೆ ಪೇಳಿದೆ ನಿನ್ನ ಸ್ಥಲ-ನೆಲೆ ಯಾವುದೆ ತಾಯಿ?
ಕಲ್ಯಾಣವೆನ್ನ ತವರೂರಮ್ಮ. ವೈಕುಂಠವೆನ್ನ ಗಂಡನೂರೆಯಮ್ಮ. ಅಲ್ಲಿಂದ
ಬಂದು ನಿನ್ನ ಮನಕ್ಕೆ ಮಂಗಳವಪ್ಪಂತೆ ಪೇಳಿದೆನಮ್ಮ. ಅರಿವಿನ ಅಚ್ಚಕೊರವಿತಿ
ನಾನಮ್ಮ. ಎನಗೆ ದೇವರ ಒಲವರವುಂಟಮ್ಮ.
ಅದೆಂಥ ದೇವರುಗಳ ವರದಿಂದ ಪೇಳಿದೆಯಮ್ಮ?
ನೆಲದುರ್ಗದ ಭ್ರಾಂತದೇವಿ, ಸೊನ್ನಲಪುರದ ಲಕ್ಷ್ಮಿದೇವಿ, ಅನಲಾಪುರದ ಕ್ರಿಯ
ಮಹಂಕಾಳಿ, ಅಮೃತಾಪುರದ ಈಶಮಹೇಶ್ವರಿ, ಗಗನಾಪುರದ ನಾನಾ ಮಹಂತಿ, ಅಂಬಾಪುರದ
ಕ್ರಿಯಾಮಹೇಶ್ವರಿಯ ವರವೆಯಮ್ಮ ಮತ್ತು ಭೂಮಿಯೊಳಗಿರ್ಪ ಬ್ರಹ್ಮ
ದೇವರು, ಸಲಿಲದೊಳಗಿರ್ಪ ವಿಷ್ಣುದೇವರು, ಅಗ್ನಿಯೊಳಗಿರ್ಪ ರುದ್ರದೇವರು, ಪವನದೊಳಗಿರ್ಪ
ಈಶ್ವರದೇವರು, ಗಗನದೊಳಗಿರ್ಪ ಸದಾಶಿವರು, ಅಂಬರದೊಳಗಿರ್ಪ ಪರಶಿವದೇವರ
ವರವೆಯಮ್ಮ. ಮತ್ತಂ ಸದ್ಯೋಜಾತಮುಖದ ಆಚಾರಲಿಂಗ ದೇವರು ವಾಮದೇವಮುಖದ ಶಿವಲಿಂಗದೇವರು,
ತತ್ಪುರುಷಮುಖದ ಚರಲಿಂಗದೇವರು, ಈಶಾನಮುಖದ ಪ್ರಸಾದಲಿಂಗದೇವರು,
ಗಂಭೀರಮುಖದ ಘನಲಿಂಗದೇವರ ವರವೆಯಮ್ಮ. ಇಂತಿ ಒಂದೆ, ಎರಡೆ, ಮೂರೆ, ನಾಲ್ಕೆ,
ಐದೆ, ಆರೆ! ಮೀರೆ ಏಕನಾದವೆಂಬ ಎಕ್ಕೆಯ ಬೆನವನ ವರದಿಂ ಎಡೆದೆರಹಿಲ್ಲದೆ ಪರಿಪೂರ್ಣವಾದ
ಸಂದ ಶಂಕೆಯಳಿದು ಪೇಳಿದೆಯಮ್ಮ. ಇನ್ನೀತತ್ವ-ಸ್ಥಳ-ಕುಳಭೇದವನರಿದು ಅರ್ಪಿತಾವಧಾನ
ಮುಖಂಗಳ ವಿವರಿಸಿ ಸಕಲಪದಾರ್ಥಂಗಳ ನನಗೆಯು ದೇವರಿಗೆಯುಣಬಡಿಸಬೇಕಮ್ಮ.
ಅರ್ಪಿಸುವ ಸಾವಧಾನವಾವುದಮ್ಮ?
ಸದ್ಭಕ್ತಿಯಿಂದ ಭಕ್ತನನರಿದು, ಸುಚಿತ್ತಹಸ್ತದಿಂ ಸುಗಂಧವ ಆಚಾರಲಿಂಗದೇವರಿ
ಗರ್ಪಿಸಬೇಕಮ್ಮ. ನೈಷ್ಠಿಕ ಭಕ್ತಿಯಿಂ ಮಾಹೇಶ್ವರನನರಿದು ಸುಬುದ್ಧಿ ಹಸ್ತದಿಂ ಸುರಸವ
ಗುರುಲಿಂಗದೇವರಿಗರ್ಪಿಸಬೇಕಮ್ಮ. ಅವಧಾನ ಭಕ್ತಿಯಿಂ ಪ್ರಸಾದವನರಿದು ನಿರಹಂಕಾರ
ಹಸ್ತದಿಂ ಸ್ವರೂಪವ ಶಿವಲಿಂಗದೇವರಿಗರ್ಪಿಸಬೇಕಮ್ಮ. ಅನುಭಾವ ಭಕ್ತಿಯಿಂ
ಪ್ರಾಣಲಿಂಗಿಯನರಿದು ಸುಮನ ಹಸ್ತದಿಂ ಸುಸ್ಪರ್ಶನವ ಚರಲಿಂಗದೇವರಿಗರ್ಪಿಸಬೇಕಮ್ಮ.
ಆನಂದಭಕ್ತಿಯಿಂ ಶರಣರನರಿದು ಸುಜ್ಞಾನದಿಂದ ಸುಶಬ್ದವ ಪ್ರಸಾದ
ಲಿಂಗದೇವರಿಗರ್ಪಿಸಬೇಕಮ್ಮ. ಸಮರಸ ಭಕ್ತಿಯಿಂ ಐಕ್ಯನನರಿದು ಸದ್ಭಾವ ಹಸ್ತದಿಂ
ಸಂತೃಪ್ತಿಯ ಮಹಾಲಿಂಗದೇವರಿಗರ್ಪಿಸಬೇಕಮ್ಮ. ಮೀರಿದ ಸುಖವ ಪರತತ್ವದೊಳೊಡಗೂಡಿ
ಪ್ರಸಾದವ ಪಡೆದು ಪರಿಣಾಮಿಯಾಗಿರಮ್ಮ. ಇದು ನಿನಗೆ ಪರಾಪರಮುಕ್ತಿ
ಪರಶಿವಲಿಂಗದೊಲವಮ್ಮ.
೩೬೬.
ತೂಗಿದೆನು ನಿಜದುಯ್ಯಾಲೆ ನಾ
ಬೀಗಿದೆನು ನೆನವು ನಿಶ್ಚಲದಲ್ಲಿಗೆ ||ಪಲ್ಲವ||
ನಿಲ್ಲದೆ ಧರೆಯ ಮೇಲೆ ನೆಟ್ಟವರ
ಡಾಲಿಕಲ್ಲಿನ ಕಂಭವು
ಮೇಲೆ ಮಾಣಿಕದ ತೊಲೆ
ಕೀಲಿಟ್ಟು ಜಾಣನಾಡಿದೆನುಯ್ಯಲ ||೧||
ಸರವು ನಾಲ್ವರ ಹತಿಯೊಳು ಭರದಿಂದ
ಅರಿತ ಮಣೆಯಾರ ನಿಲಿಸಿ
ಅರಿದ ತೊಲೆಯ ಕಟ್ಟಲು ಆ ಉಯ್ಯಾಲೆ
ಹರಿಯುತೊದೆಯಿತು ಮುಂದಕ್ಕೆ ||೨||
ನಾದದ ಕಲ್ಲ ಕಟ್ಟಿಯದರೊಳಗೆ
ಭೇದಿಸುವ ಬಿಂದುಜಲವು
ಆಧಾರದ ಕಳೆಮೊಳೆಯೊಳು ಕೊಳವನದ
ಆದಿಲಿಂಗನ ಪಾಡುತ ||೩||
ಮುತ್ತುಮಾಣಿಕ್ಯದ ರತ್ನದ ತೊಡಿಗೆಯನು
ಸತ್ಯಮುಖಿಯರು ತೊಟ್ಟರು
ಅರ್ತಿಯಿಂ ರಾಗ ಮಾಡಿ ಪಾಡಿದರು
ಸತ್ಯಜ್ಞಾನದ ಶೃತಿಯೊಳು ||೪||
ಕೊಳಲು ಕಹಳೆಯ ಡೋಲಿನ ರವಸಕ್ಕೆ
ನಲಿದು ಒಡೆಯಿತು ಮುಂದಕ್ಕೆ
ಹೊಳೆವ ವಜ್ರದ ಕಂಭದ ಬೆಳಗಿನ
ಒಳಗೆ ಆಡಿದೆನುಯ್ಯಲ ||೫||
ಈಡಾಪಿಂಗಳನಾಳದ ಬೆಳಗಿನೊಳ
ಗಾಡಲೊದೆಯಿತು ಮುಂದಕ್ಕೆ
ನಾಡು-ದೇಶವು ನೋಡಲಾ ಉಯ್ಯಾಲೆ
ಗಾಡಿ ಸುಷುಮ್ನೆಯ ಕೂಡಿತು ||೬||
ಆರು ಚಕ್ರವನು ದಾಂಟಿ ಆರು ಉಯ್ಯಾಲೆ
ಹೋರ ಒದೆಯಿತು ಮುಂದಕ್ಕೆ
ಮೀರಿದ ಸ್ಥಲದಿ ನಿಂದು ಚೆನ್ನಮಲ್ಲನೊಳು
ಬೆರೆದು ಆಡಿದೆನುಯ್ಯಾಲೆ ||೭||
೩೬೭.
ಅರುಹಿಂದ ಆಚರಿಸಬೇಕು
ಮರಹಿಲ್ಲದೆ ತಾನಿರಬೇಕು
ರೆತೆಯ ಮರೆಯ ಕುರುಹರಿಯಬೇಕು
ಪರಬ್ರಹ್ಮದೊಳಗೆ ತಾ ನೆರೆಯಬೇಕು ||ಪಲ್ಲವ||
ಪಟ್ಟಣವನೆಲ್ಲ ಸುಟ್ಟು ಮಡಿಯಬೇಕು | ದೊಡ್ಡ
ಸೆಟ್ಟಿಕಾತಿಯ ಪಟ್ಟವಳಿಯಬೇಕು
ಪಟ್ಟದ ರಾಣೀಯೊಳು ನುಡಿಯಬೇಕು | ಅಲ್ಲಿ
ಬಿಟ್ಟ ಮಂಡೆಯೊಳು ತಾ ನಡೆಯಬೇಕು ||೧||
ಚಿಕ್ಕತಂಗಿಯೊಳೊಪ್ಪಿಯಾಡಬೇಕು | ತ
ಮ್ಮಕ್ಕನ ಬಿಗಿಬಿಗಿದಪ್ಪಬೇಕು
ಕುಕ್ಕುಟ ದನಿದೋರಿ ಕೂಗಬೇಕು | ನೆರೆ
ಸೊಕ್ಕಿದವರು ಮುರಿದೋಡಬೇಕು ||೨||
ಚಿಕ್ಕುಟು ಕಣ್ಣೆರೆದುಕ್ಕಬೇಕು |
ಬೆಕ್ಕಿನ ದೃಕ್ಕನು ಕುಕ್ಕಬೇಕು
ಹಕ್ಕಿಯ ಪಕ್ಕವ ಹಿಕ್ಕಬೇಕು | ಬಹು
ರಕ್ಕಸರುಗಳೊಕ್ಕಲಿಕ್ಕಬೇಕು ||೩||
ತಂದೆಯಂಗನೆಯೊಳಗಾಡಬೇಕು | ತನ್ನ
ಕಂದನ ತಾ ಬಂದು ಕೂಡಬೇಕು
ಹಿಂದುಮುಂದಾಗಿ ಮತ್ತೆ ನಡೆಯಬೇಕು | ನಿಜ
ಮಂದಿರದಿಂದುವ ಸುಡಬೇಕು ||೪||
ಹರಿಯ ಮನೆಯ ಮೆಟ್ಟಿ ಮರೆಯಬೇಕು
ಕರಿಗಳೆಲ್ಲವ ಕೊಂದುರಿಯಬೇಕು
ಕರಿಯ ಬೇದನ ಶಿರವನರಿಯಬೇಕು | ತನ್ನ
ಬರಿಯ ಮನೆಯ ಹೊಕ್ಕು ನೆರೆಯಬೇಕು ||೫||
ಮಂಜಿನ ಕೊಡನೊಡೆರೆದರಿಯಬೇಕು | ಅದ
ರಂಜಿಪ ಬಂಜೆಯು ಪರಿಯಬೇಕು
ಮುಂಜೂರಲಮೃತ ಕರೆಯಬೇಕು | ಬೇಗ
ನಂಜದೆ ಸುರಿದು ಮೈಮರೆಯಬೇಕು ||೬||
ಹುಲ್ಲೆಯ ತಲ್ಲಣವಡಗಬೇಕು | ಅಲ್ಲಿ
ಮೆಲ್ಲನೆ ಬಿಲ್ಲುಗಾರ ಸೋಲಬೇಕು
ಸೊ(ಬಿ?)ಲ್ಲುಗಾರನ ಬಿಲ್ಲು ಮೆಲ್ಲಬೇಕು | ಚೆನ್ನ
ಮಲ್ಲಿಕಾರ್ಜುನನಲ್ಲಿ ನಿಲ್ಲಬೇಕು ||೭||
೩೬೮.
ಏನೋ ನಮ್ಮ ನಲ್ಲ ನೀ ಮನೆಗೇಕೆ ಬಾರೆ
ನಾನೇನು ತಪ್ಪನು ಮಾಡಿದುದಿಲ್ಲ ||ಪಲ್ಲವ||
ಕೂಸಿನ ತಾಯಿಗೆ ಹೇಸದೊತ್ತೆಯ ಕೊಟ್ಟು
ಕೂಸತ್ತೆನ್ನಯ ನಲ್ಲ ಬೇಸತ್ತು ಹೋದೆ ||ಅನುಪಲ್ಲವ||
ಮನವುಳ್ಳ ಭಾವಕಿಗನುವಾಗಿ ನಮ್ಮ ನಲ್ಲ
ಮನ ಸಂಚಲವಾಗಲನುವಾದುದಿಲ್ಲ ||೧||
ಒತ್ತೆಯ ನಲ್ಲನ ತೋಳ ಮೇಲೊರಗಿದೆ
ಚಿತ್ತದ ನಲ್ಲನ ಕನಸಿನಲಿ ಕಂಡೆ ||೨||
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನೀನು ಮಾತಾಡಿದುದುಂಟು ಕೂಡಿದುದಿಲ್ಲ ||೩||