Monday, November 9, 2009

"ಶಂಕರನಾಗ್ ಗೆ ಹುಟ್ಟುಹಬ್ಬದ ಶುಭಾಶಯಗಳು "

Shankar Nag birthday celebration




ದಿವಂಗತ ಶಂಕರನಾಗ್ ಕೇವಲ ಒಬ್ಬ ಚಿತ್ರನಟನಾಗಿ ಮಾತ್ರ ಉಳಿದಿರಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಕನಸುಗಾರನಾಗಿ, ಸಮಾಜಮುಖಿಯಾಗಿ ಗುರುತಿಸಿಕೊಂಡವರು. ಚಿತ್ರರಂಗದ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅಪೂರ್ವ ಕ್ರೀಯಾಶೀಲ. ಕಲೆಯ ಉತ್ಕರ್ಷದ ಬಗ್ಗೆ ಚಿಂತಿಸುತ್ತಲೇ ಕಲಾವಿದರ ಬದುಕು ಬವಣೆಗಳಿಗೆ ಸ್ಪಂದಿಸಿದ ನಟ ಶಂಕರನಾಗ್ ಇಂದು ಜೀವಂತವಾಗಿದ್ದಿದ್ದರೆ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಮೊದಲ ಚಿತ್ರದಲ್ಲೇ ಗಮನಾರ್ಹ ಅಭಿನಯ ತೋರಿದ ಶಂಕರ್‌, ಮುಂದೆ ಚಿತ್ರರಂಗದ ಮಹಾತಾರೆಯಾಗಿ ಬೆಳೆದು ನಿಂತದ್ದು ಸೋಜಿಗವೇನಲ್ಲ. 'ಆಕ್ಸಿಡೆಂಟ್‌', 'ಮಿಂಚಿನ ಓಟ', 'ಒಂದು ಮುತ್ತಿನ ಕತೆ' ಚಿತ್ರಗಳಿಂದ ಮಿಂಚಿನ ಸಂಚಾರ ಸೃಷ್ಟಿಸಿದ ನಟ. ಡಾ.ರಾಜ್‌ಕುಮಾರ್ ಜೊತೆಯಲ್ಲಿ ಇಷ್ಟಪಟ್ಟು ‘ಅಪೂರ್ವ ಸಂಗಮ’ದಲ್ಲಿ ಕಾಣಿಸಿಕೊಂಡ ಶಂಕರನಾಗ್, 'ಆಟೋರಾಜ' ಚಿತ್ರದಲ್ಲಿ ನಾಯಕನ ವಿಶಿಷ್ಟ ಗುಣ ಮೆರೆದು, ಎಂದೆಂದಿಗೂ ಆಟೋ ಡ್ರೈವರುಗಳ ಆರಾಧ್ಯದೈವವಾದರು.

ಗಿರೀಶ್‌ ಕಾರ್ನಾಡರ 'ಒಂದಾನೊಂದು ಕಾಲ'ದಲ್ಲಿ ಚಿತ್ರದ ಮೂಲಕ ಚಲನಚಿತ್ರದ ರಂಗಪ್ರವೇಶ. ಆದರೆ ಅಭಿನಯವೇನೂ ಆತನಿಗೆ ಹೊಸತಾಗಿರಲಿಲ್ಲ. ಮುಂಬೈಯಲ್ಲಿರುವಾಗಲೇ ರಂಗಭೂಮಿ ಆತನನ್ನು ಕೈಬೀಸಿ ಕರೆದಿತ್ತು. ಆಗ ಅಣ್ಣ ಅನಂತ್‌ನಾಗ್‌ ಬ್ಯಾಂಕ್‌ ಅಧಿಕಾರಿಯಾಗಿದ್ದರು. ಆತನೂ ಸಹ ಹವ್ಯಾಸಿ ರಂಗ ಕಲಾವಿದ ಆಗಿದ್ದವ. ಕಾರವಾರ [^] ಜಿಲ್ಲೆ, ಕುಮಟಾ ತಾಲ್ಲೂಕಿನ ನಾಗರಕಟ್ಟೆಯ ಶಂಕರ, ಅವಕಾಶ ಅರಸಿಕೊಂಡು ಮುಂಬಯಿ ನಗರಿಯತ್ತ ಪಯಣ ಬೆಳೆಸಿದ.

ಅಲ್ಲಿ ಶಂಕರ, ತನ್ನ ಹೆಸರಿನ ಮುಂದೆ ನಾಗರಕಟ್ಟೆ ಎಂದು ಸೇರಿಸಿಕೊಂಡಿದ್ದ. ಅಲ್ಲಿಯ ಜನರಿಗೆ ಶಂಕರ ನಾಗರಕಟ್ಟೆ ಅನ್ನಲು ತಡಕಾಡುತ್ತಿದ್ದರು. ನಾಗರಕಟ್ಟೆ ಅವರ ಬಾಯಲ್ಲಿ ನಗರಕತ್ತೆ ಆಗಿತ್ತಂತೆ! ಈ ಅವಾಂತರಗಳಿಂದ, ಆನಂತರ ತನ್ನ ಹೆಸರಮುಂದೆ ಕೇವಲ ನಾಗ್‌ ಎಂದಷ್ಟೇ ಸೇರಿಸಿಕೊಂಡು, ಶಂಕರನಾಗ್‌ ಆದ. ಕಲಾಪ್ರೇಮ ವಾಪಸು ತಾಯ್ನಾಡಿಗೆ ಬರುವಂತೆ ಶಂಕರನಾಗ್‌ಗೆ ಮಾಡಿತು. ಅಷ್ಟೇ ಅಲ್ಲದೇ ಚಿತ್ರರಸಿಕರ ನೆಚ್ಚಿನ ತಾರೆಯನ್ನಾಗಿ ಮಾಡಿದ್ದು ಇತಿಹಾಸ.

ಶಂಕರನಾಗ್ ಬರೀ ಹುಟ್ಟಿದ ಹಬ್ಬ, ತೀರಿಹೋದ ದಿನಗಳಂದು ಮಾತ್ರ ನೆನಪಾಗುವ ನಟನಲ್ಲ. ವರ್ಷಪೂರ್ತಿ ಆಗಾಗಾ ನೆನಪಾಗುತ್ತಲೇ ಇರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಕೀರ್ತಿ ಶಂಕರನಾಗ್ ಅವರಿಗೆ ಸಲ್ಲುತ್ತದೆ. ಶಂಕರನಾಗ್ ಭೌತಿಕವಾಗಿ ಇಂದು ನಮ್ಮೊಡನಿಲ್ಲದಿದ್ದರೂ ಮಾನಸಿಕವಾಗಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ.

No comments:

Post a Comment