Monday, November 9, 2009

"ಚಿಂತನೆಯಿಂದ ಅಳಿಯದ ಕನ್ನಡ ಉಳಿವಿನ ಚಿಂತೆ"

ಕನಾಟಕದಲ್ಲಿ ಕನ್ನಡ ಉಳಿಸುವ ಬಗ್ಗೆ ಬೆಳೆಸುವ ಬಗ್ಗೆ ಚರ್ಚೆ, ಆಂದೋಲನ, ಹೋರಾಟಗಳು ನಡೆಯುತ್ತಲೇ ಇದೆ. ವಿಚಾರವಾದಿಗಳು, ಬುದ್ಧಿಜೀವಿಗಳು ಇದರ ಬಗ್ಗೆ ಭಾಷಣಗಳನ್ನೂ ಬಿಗಿಯುತ್ತಾರೆ. ಈ ಚಿಂತನೆಗಳಿಂದ ಕನ್ನಡ ಉಳಿವಿನ ಚಿಂತೆ ಮಾತ್ರ ಅಳಿಯುತ್ತಿಲ್ಲ. ಯಾವ ಚಿಂತನೆಗಳೂ ಕಾರ್ಯರೂಪಕ್ಕಿಳಿಯದ ಕಾರಣ ಕನ್ನಡದ ಸ್ಥಿತಿ ಇನ್ನೂ ಚಿಂತಾಕ್ರಾಂತವಾಗಿಯೇ ಇದೆ. ಆದರೆ ನಿರಾಸೆಯ ಮೋಡದ ನಡುವೆಯೂ ಆಶಾವಾದದಿಂದ ನಾವು ಮುಂದಡಿಯಿಡಬೇಕಾಗಿದೆ.

ದಿನೇ ದಿನೇ ಕನ್ನಡ ಹೋರಾಟಗಾರರ ಸಂಖ್ಯೆ, ಕನ್ನಡದ ಉಳಿವಿನ ಬಗ್ಗೆ ಮಾತನಾಡುವವರ ಸಂಖ್ಯೆ, ರಾಜಕೀಯ ಪಕ್ಷದವರ ಕನ್ನಡ ಹೇಳಿಕೆಗಳ ಸಂಖ್ಯೆ ಹನುಮಂತನ ಬಾಲದ ಹಾಗೆ ಬೆಳೆಯುತ್ತಾ ಇದೆ. ಆದರೆ ಅದಕ್ಕಿಂತ ವೇಗವಾಗಿ ಇಂಗ್ಲಿಷ್ ಶಾಲೆಗಳ ಸಂಖ್ಯೆ ಅದಕ್ಕೆ ಮಕ್ಕಳನ್ನು ಕಳುಹಿಸುವ ಪಾಲಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿಯ ದ್ವಂದ್ವದಲ್ಲಿಯೇ ಮತ್ತೊಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ನಾವು ಸಜ್ಜಾಗುತ್ತಿದ್ದೇವೆ.

ವಾಹನದ ಪಕ್ಕೆಗೆ ಕನ್ನಡದ ಬಾವುಟವನ್ನು ಹಾಕಿ ಓಡಾಡುವುದರಿಂದ, ತಮಿಳು, ಮರಾಠಿ ಜನರಿಗೆ ಹೊಡೆಯುವುದರಿಂದ, ಇಂಗಿಷ್ ನಾಮಫಲಕ ತೆಗೆಯುವುದರಿಂದ, ಅನ್ಯ ರಾಜ್ಯದವರ ಪ್ರತಿಮೆ ಅನಾವರಣ ಮಾಡುವುದನ್ನು ನಿಲ್ಲಿಸುವುದರಿಂದ, ಬೇರೆ ಭಾಷೆಯ ಚಲನಚಿತ್ರ ಟಿ.ವಿ ಚಾನೆಲ್ ಗಳನ್ನು ನಿರ್ಬಂಧಿಸುವುದರಿಂದ ಕನ್ನಡ ಬೆಳವಣಿಗೆ ಆಗುತ್ತದೆ ಎಂಬುದು ಕೇವಲ ಭ್ರಮೆ ಮಾತ್ರ. ಈ ಎಲ್ಲ ವಿಧಾನಗಳು ಒಂದು ಸಾರಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದು. ಇವೆಲ್ಲವು ದ್ವೇಷವನ್ನು ಬೆಳೆಸುವಂತಹ ವಿಧಾನಗಳೇ ವಿನಃ ಭಾಷೆಯ ಬೆಳವಣಿಗೆಗೆ ಪೂರಕವಾಗಿಲ್ಲ.

ಕೇವಲ ದೊಡ್ಡ ದೊಡ್ಡ ಸಾಹಿತಿಗಳ ಪುಸ್ತಕವನ್ನು ಪ್ರಕಟಿಸುವುದರಿಂದ, ಅನ್ಯ ಭಾಷೆಯ ಶಾಲೆಗಳಿಗೆ ಅನುಮತಿ ನೀಡದಿರುವುದರಿಂದ, ಅಂತಹ ಶಾಲೆಗಳ ಮೇಲೆ ದಂಡ ಹಾಕುವುದರಿಂದ, ಕನ್ನಡದ ಉಳಿವಿಗಾಗಿ ಎಂದು ಕೋರ್ಟ್‌ನಲ್ಲಿ ದಾವೆ ಹೂಡುವುದರಿಂದ, ರಾಜಕೀಯ ಪಕ್ಷದವರ ಪ್ರಣಾಳಿಕೆಯಿಂದ ಕನ್ನಡ ಬೆಳವಣಿಗೆ ಅಸಾಧ್ಯ ಎಂಬುದು ಕೂಡ ಮನದಟ್ಟಾಗಿರುವ ಸಂಗತಿ. ಈ ಎಲ್ಲವೂ ಯಾರನ್ನೋ ಮೆಚ್ಚಿಸುವುದಕ್ಕಾಗಿ ಅಥವಾ ತಾವು ಕನ್ನಡ ಪರ ತೋರಿಸಿಕೊಳ್ಳುವ ವಿಧಾನವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೆ ಗ್ರಂಥಾಲಯದ ಸೌಲಭ್ಯ ಒದಗಿಸಿದೆ. ಅಲ್ಲಿ ಸಾಕಷ್ಟು ಪುಸ್ತಕಗಳು ಇವೆ. ಆದರೆ ಅವು ಸದ್ಬಳಯಾಗುತ್ತವೆಯೇ ಎಂಬ ಪ್ರಶ್ನಗೆ ಯಾರಲ್ಲೂ ಸಮಂಜಸವಾದ ಉತ್ತರವಿಲ್ಲ. ಇಂದಿನ ಯುವಕರು ಗ್ರಂಥಾಲಯಗಳಿಗೆ ಎಡತಾಕುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿಲ್ಲ. ಅವರಲ್ಲಿ ಆ ಹವ್ಯಾಸವನ್ನು ಬೆಳೆಸುವ ಪ್ರಯತ್ನಗಳು ಕೂಡ ಆಗುತ್ತಿಲ್ಲ. ಇದು ಗ್ರಾಮಗಳಲ್ಲಿನ ಚಿತ್ರಣ ಮಾತ್ರವಲ್ಲ, ನಗರವೂ ಇದಕ್ಕೆ ಹೊರತಲ್ಲ.

ಒಂದು ಭಾಷೆಯ ಬೆಳವಣಿಗೆ ಆಗಬೇಕಾದರೆ ಅದು ಮಕ್ಕಳ ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗಬೇಕು. ಮಾತನಾಡುವ, ಓದುವ, ಬರೆಯುವ ಬಗ್ಗೆ ಆಸಕ್ತಿ ಬರಬೇಕು. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಅಂಕಗಳ ಮೇಲೆ ಅವಲಂಬಿತವಾಗಿದೆ. ಯಾರಿಗೂ ಭಾಷೆಯ ಬಗ್ಗೆ ಗಮನವಿಲ್ಲ ಬದಲಾಗಿ ಹೆಚ್ಚು ಅಂಕ ಪಡೆಯಬೇಕು ಬೇರೆ ಬೇರೆ ಕೋರ್ಸನಲ್ಲಿ ಅವಕಾಶ ಗಿಟ್ಟಿಸಬೇಕು ಎಂಬುದೊಂದೆ ಚಿಂತೆಯಾಗಿದೆ. ಪರೀಕ್ಷೆ ಮೇಲೆ ಸಂಪೂರ್ಣ ಶಿಕ್ಷಣ ಅವಲಂಬಿತವಾಗಿದೆ. ಅದಕ್ಕೆ ಪೂರಕವಾಗಿ ಇಲ್ಲಿಯವರೆಗೂ ಎಲ್ಲರೂ ಅವರವರ ತರಗತಿ ಪುಸ್ತಕ ಓದುವುದಕ್ಕಾಗಿ ಮಾತ್ರ ಶ್ರಮ ಪಡುತ್ತಿರುವರು ಅದೂ ಆಸಕ್ತಿಯಿಂದ ಅಲ್ಲ, ಬದಲಾಗಿ ಒತ್ತಡದಿಂದ ಆಗಿದೆ.

ಶಿಕ್ಷಣ ಮಕ್ಕಳ ಮುಂದಿನ ಜೀವನಕ್ಕೆ ಪೂರಕವಾಗಿರಬೇಕು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದಕ್ಕೆ ಪೂರಕವಾದ ವ್ಯವಸ್ಥೆ ಇಲ್ಲವಾಗಿದೆ. ಕನ್ನಡ ಬೆಳವಣಿಗೆ ಕುಂಠಿತವಾಗಲು ನಮ್ಮ ಪ್ರಾಥಮಿಕ ಶಾಲೆಯ ಕಲಿಕಾ ಪದ್ದತಿಯೂ ಒಂದು ಕಾರಣವಾಗಿದೆ. ಓದುವ ಹವ್ಯಾಸವನ್ನು ಬೆಳೆಸಲು, ಬೇರೆ ಬೇರೆ ಮಾಹಿತಿಯನ್ನು ಹುಡುಕುವ, ಹೊಸದಾಗಿ ಏನಾದರೂ ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಬೆಳಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ.

ಕನ್ನಡ ಸಿನೆಮಾಗಳಲ್ಲಿ ಬಳಸುವ ಕನ್ನಡ ಕೂಡ ಅಧೋಗತಿಗಿಳಿಸಿದೆ. ಸಂಭಾಷಣೆ, ಸಾಹಿತ್ಯದಲ್ಲಿ ಕನ್ನಡ ಪದಗಳಿಗಿಂತ ಆಂಗ್ಲ ಪದಗಳದೇ ದರ್ಬಾರು ಹೆಚ್ಚಾಗಿರುವುದು ನಿಜಕ್ಕೂ ವಿಷಾದನೀಯ ವಿಷಯ. ಇಂದಿನ ಪೀಳಿಗೆಯ ನಾಯಕ ನಟ, ನಟಿಯರಾದರೂ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುತ್ತಾರಾ? ಬಾಯಿಬಿಟ್ಟರೆ ಇಂಗ್ಲಿಷಿನಲ್ಲೇ ಸಂಭಾಷಣೆ, ಮಧ್ಯ ಅಲ್ಲಲ್ಲಿ ಕನ್ನಡ ಉಚ್ಛಾರಣೆ. ಕನ್ನಡ ಪರ ಕಳಕಳಿ ಯಾರಿಗೂ ಇದ್ದಂತಿಲ್ಲ. ಶೀರ್ಷಿಕೆಗಳಲ್ಲಿ ಸಹ ಕನ್ನಡ ಹುಡುಕುವಂಥ ಪರಿಸ್ಥಿತಿ ಬಂದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಈ ಬಾರಿಯೇನೋ ನೆರೆ ಹಾವಳಿಯ ಕಾರಣದಿಂದಾಗಿ ಕನ್ನಡ ರಾಜ್ಯೋತ್ಸವದ ಆಚರಣೆ ರದ್ದಾಗಿದೆ. ಇದರಿಂದ ಅನೇಕರಿಗೆ ನಿರಾಸೆಯೂ ಆಗಿರಬಹುದು. ಆದರೆ, ಮುಂದಿನ ಬಾರಿ ಕೂಡ ರಾಜ್ಯೋತ್ಸವವನ್ನು ದುಂದುವೆಚ್ಚ ಮಾಡಿ ಆಚರಿಸುವುದಕ್ಕಿಂತ ಹಳ್ಳಿಯ ಶಾಲೆಗಳಿಗೆ ವಿಭಿನ್ನ ಬಗೆಯ ಕನ್ನಡ ಪುಸ್ತಕಗಳನ್ನು ಒದಗಿಸುವ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಳ್ಳಲಿ. ಮಕ್ಕಳು ಯಾವುದೇ ಒತ್ತಡ, ಪರೀಕ್ಷೆ ಇಲ್ಲದೇ ಸ್ವತಂತ್ರವಾಗಿ ಕಲಿಯುವ ಅವಕಾಶವನ್ನು ಒದಗಿಸುವ ಕಲಿಕಾ ಪದ್ದತಿ ಬಗ್ಗೆ ಚಿಂತಿಸುವ ಕಾರ್ಯ ಪ್ರಾರಂಭವಾಗಲಿ. ಆ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಹೊಸ ರೂಪವನ್ನು ಕೊಡುವ ಪ್ರಯತ್ನ ಆಗಲಿ.

No comments:

Post a Comment