ಈ ಪ್ರಬಂಧ ಓದುವ ಆರಂಭದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರತಿಭಾವಂತ ಹೊಸತನ ತುಡಿತ ಹೊಂದಿದ್ದ ಅಕಾಲದಲ್ಲಿ ಅಗಲಿದ ಕಿರಿಯ ಸಹೋದ್ಯೋಗಿ ಕೆ.ಆರ್. ಪ್ರಹ್ಲಾದ್ ನನ್ನು ನೆನಪು ಮಾಡಿಕೊಂಡು ಮುಂದುವರಿಯುವೆ. ಹೊಸ ಪದಗಳನ್ನು ಟಂಕಿಸುವುದರಲ್ಲಿ ಅವನಿಗೆ ಅಪಾರ ಆಸಕ್ತಿ. ಧಾರವಾಡ ಆಕಾಶವಾಣಿ ಸುದ್ದಿ ವಿಭಾಗ ಆರಂಭವಾದಾಗಲೇ ಇನ್ಸಾಟ್ ಉಪಗ್ರಹ ಉಡಾವಣೆಯ ಗೌಜು. ಆಗ ಮತ್ತೊಬ್ಬ ಮಿತ್ರ ನಾಗೇಶ್ ಶಾನ್ ಬಾಗ್ ಜೊತೆಗೂಡಿ ಹೊಸ ಹೊಸ ಪದಗಳನ್ನು ಜೋಡಿಸುವ ಕೃಷಿ.
ಕನ್ನಡಗದ್ಯಕ್ಕೆ ಸಿದ್ದವನಹಳ್ಳಿ ಕೃಷ್ಣಶರ್ಮ, ತಿರುಮಲೆ ತಾತಾಚಾರ್ಯ ಶರ್ಮ, ಕಡೆಂಗೋಡ್ಲು ಶಂಕರಭಟ್ಟ, ಡಿ.ವಿ.ಜಿ., ಆಮೇಲಿನ ತಲೆಮಾರಿನಲ್ಲಿ ಖಾದ್ರಿ ಶಾಮಣ್ಣ, ಬಾಸು ಕೃಷ್ಣಮೂರ್ತಿ, ಎನ್.ಎಸ್. ರಾಮಪ್ರಸಾದ್ ಅವರ ಪ್ರಯೋಗ ಶೀಲ ಕೊಡುಗೆ ನಮಗೆ ದಾರಿದೀಪ. ಡಿವಿ.ಜಿ.ಯವರ ವ್ಯಾಕರಣ ಸ್ವಲ್ಪ ಅಳ್ಳಕ ಇರಲಿ – ಏಕೆಂದರೆ ಕನ್ನಡ ಬೆಳೆಯುತ್ತಿರುವ ಭಾಷೆ, ಆದರೆ ಗತಿ ಗೆಡದಿರಲಿ ಎಂಬ ಕಿವಿಮಾತು ಹಾಗೂ ಕಡೆಂಗೋಡ್ಲು ಅವರ ಇಂತಿದ್ದರೆ ಅರಿಸಮಾಸವಾದರೂ ಸೈ ಎಂಬ ಸ್ಫೂರ್ತಿ, ಸಿದ್ಧವನಹಳ್ಳಿಯವರ ಪುಟ್ಟಪುಟ್ಟ ವ್ಯಾಕರಣವನ್ನು ಒಡಲಲ್ಲೇ ಹುದುಗಿಸಿಕೊಂಡ ಭಾಷೆ, ತಿ.ತಾ.ಶರ್ಮರ ವೀರೋಚಿತ ಸೊಗಡಿನ ಕನ್ನಡ ವಿದ್ಯುನ್ಮಾನ ಮಾಧ್ಯಮಕ್ಕೆ ವಲಸೆ ಬಂದ ನಮ್ಮ ಪೀಳಿಗೆಯ ಹಲವರಿಗೆ ಬೆನ್ನೆಲುಬು, ಶ್ರೀರಕ್ಷೆ.
ಮೊದಲು ಆಕಾಶವಾಣಿ ಸುದ್ದಿ ಸಂಕಲನದಲ್ಲಿ ಪ್ರಯೋಗ, ಜನರನ್ನು ತಲುಪುವ ಹಂಬಲ, ಚಡಪಡಿಕೆ, ಸಂವಹನ ಸಾಧ್ಯವಾಯಿತೇ ಎಂಬ ತೊಳಲಾಟ. ಆಡುಮಾತು ಮತ್ತು ಮುದ್ರಣ ಮಾಧ್ಯಮದ ಗ್ರಂಥಸ್ಥ ಭಾಷೆಯಲ್ಲಿ ಸರಳಶೈಲಿಯನ್ನು ಹುಡುಕಿ, ಶ್ರೋತೃಗಳಿಗೆ ಅವೆರಡರ ಸುಮಧುರ ಚೊಕ್ಕ ಸಭ್ಯ ನುಡಿಗೆ ತುಸು ಸಮೀಪವಾದ ಸುದ್ದಿ ಭಾಷೆ ಸಾದರಪಡಿಸುವ ಕುಶಲಕಲೆ ದೂರದರ್ಶನ ಸುದ್ದಿಗೆ ಭೂಮಿಕೆ.
ಇನ್ನು ದೂರದರ್ಶನ ವಾರ್ತೆಯಲ್ಲಿ ದೃಶ್ಯಾವಳಿಗಳದೇ ಮೇಜುವಾನಿ. ಅವನ್ನು ಅರ್ಥೈಸುವ ಕುಸುರಿ ಕೆಲಸ ಕನ್ನಡ ಗದ್ಯ ರಚನೆಯಲ್ಲಿ ಅಂಕುರಾರ್ಪಣ ಮಾಡಿದವರು ಹಿರಿಯರಾದ ನಾಗರಾಜರಾಯರು. ವಿ.ಎಚ್. ದೇಸಾಯಿ, ಬಸವರಾಜು, ಎಂ.ಕೆ. ಸುಬ್ಬರಾವ್, ಶೇಷಚಂದ್ರಿಕಾ, ನೆರವಿಗೆ ನಿಂತವರು ಬಿ.ಎನ್. ಗುರುಮೂರ್ತಿ, ಮೈ.ಸಿ.ಪಾಟೀಲ್, ನಂತರದವರು ನಾನು (ಈ ಲೇಖಕ), ಸುಂದರೇಶ್ವರ, ವಿ.ಎಸ್. ಸೂರ್ಯನಾರಾಯಣ, ಜಿ.ಕೆ. ಶ್ರೀನಿವಾಸ್, ರಜನೀಕಾಂತ್, ಡಿ.ವಿ.ಹೆಗಡೆ, ಟಿ.ಸಿ.ಪೂರ್ಣಿಮಾ, ಎಸ್.ಜಿ.ರವೀಂದ್ರ, ಪಲ್ಲವಿಚಿಣ್ಯ, ಬಿ.ಎನ್. ಸತ್ಯನಾರಾಯಣ, ಎನ್.ಡಿ.ಪ್ರಸಾದ್.
ಇಲ್ಲಿ ಪ್ರತಿಯೊಬ್ಬರದೂ ಸೃಜನಶೀಲ ಕೊಡುಗೆ. ಹೊಸಪ್ರಯೋಗಗಳಿಗೆ ಹಿರಿಯರ ಪ್ರೋತ್ಸಾಹ with a pinch of salt!
ಆದರೆ, ಹೊಸ ಪ್ರಯೋಗ, ಹೊಸ ಮಾಧ್ಯಮದ ತಗಾದೆಯಾಗಿತ್ತು. ಎರಡು ವಾಕ್ಯ ಬರೆದುಬಿಡಿ, ಅದಕ್ಕೆ ದೃಶ್ಯ ಜೋಡಣೆ ಚೊಕ್ಕಗೊಳಿಸುವೆ ಎಂಬ ಸುದ್ದಿ ನಿರ್ಮಾತೃವಿನ ಸವಿನಯ ಆದೇಶ ಸುದ್ದಿ ಸಂಪಾದಕನಿಗೆ. ಇದು ಒಮ್ಮೊಮ್ಮೆ ವಾಗ್ಯುದ್ಧಗಳಿಗೆ ಎಡೆ ಮಾಡಿದ್ದರೆ ಅದು ಸುದ್ದಿಮನೆ ಸ್ವಾರಸ್ಯ. ವ್ಯಕ್ತಿಗತ ನಂಜಿಲ್ಲ. ಅವ್ಯಕ್ತ ಸ್ವಪ್ರತಿಷ್ಠೆಯ ಸೊಂಕಿಲ್ಲ. ವಾಸ್ತವವಾಗಿ ಟಿ.ವಿ. ವಾರ್ತೆ ಒಂದು ತಂಡ ಪರಿಶ್ರಮ. ಇಲ್ಲಿ ಪರಿಣಾಮ ಸಾಮೂಹಿಕ ಸೃಜನಶೀಲತೆಯಿಂದ ಮಾಡಿದ್ದು. ಉದ್ದನೆಯ ವಾಕ್ಯಗಳನ್ನು ಕಂಡಾಗ ಹೌಹಾರುವ ಸುದ್ದಿ ವಾಚಕ, ಸುದ್ದಿ ನಿರ್ಮಾತೃ. ಎಲ್ಲರೂ ಮುದ್ರಣ ಮಾಧ್ಯಮದಿಂದ ಮೂಲತಃ ವಲಸೆ ಬಂದವರೇ ಆದುದರಿಂದ ಜನಪದದ ಮಾಧ್ಯಮದ ಆವಶ್ಯಕತೆಗಳನ್ನು ಅರಿಯುವುದರಲ್ಲಿ ಸ್ವಲ್ಪ ವಿಳಂಬವಾಯಿತಾದರೂ, ಬೇಗ ಒಗ್ಗಿ ಹೋದೆವು. ಹೊಸತನಕ್ಕೆ ತೆರೆದುಕೊಂಡೆವು. ಫಲಶ್ರುತಿಯೇ ಸಂಕ್ಷಿಪ್ತತೆಗೆ ಪ್ರಾಧಾನ್ಯತೆ, ನೇರ, ಸರಳ, ಝಳ ಝಳ ಹೇಳಿಬಿಡುವ ಗುಣ ಮೈಗೂಡಿತು. ಮೈ.ಸಿ.ಪಾಟೀಲರ ಹಣೆಬರಹ, ಮತ್ತೊಬ್ಬರ ತಲೆಬರಹ, ರಜನಿ ಪದ್ಯ – ಐಶ್ವರ್ಯ ರೈ ಭುವನ ಸುಂದರಿಯಾದಾಗ, ಶೇಷಚಂದ್ರಿಕಾ, ಕನ್ನಡ ಸಾಹಿತ್ಯ ಪರಿಷತ್ತನ್ನು ದೃಶ್ಯಾವಳಿಗಳೊಡನೆ ಕನ್ನಡಿಗರಿಗೆ ಪರಿಚಯಿಸಿದ ಸುದ್ದಿ, ಮಹಾಮಸ್ತಕಾಬಿಷೇಕದ ನೇರ ಪ್ರಸಾರ ನೋಡಿಯೇ ರಮ್ಯ ಸುದ್ದಿಚಿತ್ರ ಬಿಡಿಸಿದ ಜಿ.ಕೆ.ಎಸ್. , ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅಪಹರಣ ಮಾಡಿದ ಸಂದರ್ಭದಲ್ಲಿ – ಕಾಡಿನಲ್ಲಿ ಮಾಯವಾದ ಮಾಯಾವಿ ಉದ್ಗಾರ, ಹಾಗೆಯೇ ವಾಜಪೇಯಿ ಮೊದಲ ಬಾರಿ ಪ್ರಧಾನಿಯಾದಾಗ ಬಿಡಿಸಿದ ನುಡಿಚಿತ್ರ, ಗುಜರಾತ್ ಭೂಕಂಪ, ಸುನಾಮಿ, ಚುನಾವಣೆಗಳ ಸಮಯ, ಬಜೆಟ್ ಮಂಡನೆ – ಹೀಗೆ ಬೆಳವಣಿಗೆಯ ಹಾದಿಯಲ್ಲಿ ಕಂಡ ಪ್ರತಿಯೊಂದು ವಿದ್ಯಮಾನವೂ ದೂರದರ್ಶನ ಕನ್ನಡ ವಾರ್ತೆಗಳಲ್ಲಿ ಮನಮುಟ್ಟುವ ರೀತಿಯಲ್ಲಿ, ಚೊಕ್ಕವಾಗಿ ಕನ್ನಡತನ ಮೆರೆಸಿದೆವು ನಾವು. ಈಗಲ್ಲಿ ಆ ಕನ್ನಡ ಕೆಲಸ ದೀಕ್ಷೆಯಾಗಿದ ದೂರದರ್ಶನ ವಾರ್ತೆಗೆ. ಹೀಗಾಗಿ ಬೇರೆ ವಾಹಿನಿಗಳಲ್ಲಿ ಆಗಾಗ ನುಸುಳುವ ಕನ್ನಡ ಜಾಯಮಾನಕ್ಕೆ ಅಪಚಾರವಾದ ರೀತಿಯ ಪದ ಪ್ರಯೋಗ ಹಾಗೂ ಪರಭಾಷಾ ಆಕ್ರಮಣ ವೀಕ್ಷಕರಿಗೆ ಮಂಡೆ ಬಿಸಿ ಮಾಡುತ್ತದೆ.
ದೀಕ್ಷೆ ಎಂದಾಗ ನೆನಪಿಗೆ ಬರುತ್ತದೆ ದೀಕ್ಷಾದಳ ಎಬ ಪದಪ್ರಯೋಗ. ಮೊದಲು ಒಮ್ಮೆ ಇದನ್ನು ಕನ್ನಡಪ್ರಭದಲ್ಲಿ ಪ್ರಯೋಗ ಮಾಡಿದವರು ಎನ್.ಎಸ್. ರಾಮಪ್ರಸಾದ್. ಆಮೇಲೆ ಅದು ಚಾಲ್ತಿಗೆ ಬರಲೇ ಇಲ್ಲ. ರಾಜೀವಗಾಂಧೀ ಅನೇಕ ವಿಷಯಗಳ ಬಗ್ಗೆ ತ್ವರಿತ ಕಾರ್ಯಾಚರಣೆಗೆ ಆಯಾಯಾ ಮಿಷನ್ ರಚಿಸಿದರು. ಉದಾಹರಣೆಗೆ oil seeds mission, Tele communication mission. ಆಗ ರಾಮಪ್ರಸಾದ್ ಈ ಯೋಜನೆಗಳ ಹಿಂದಿರುವ ಐತಿಹ್ಯ ಮಹತ್ವ ಅರಿತು ಅವಕ್ಕೆ mission ಬದಲಾಗಿ ದೀಕ್ಷಾದಳ ಎಂದು ಪದ ಟಂಕಿಸಿದರು. ಆಕಾಶವಾಣಿ ಮತ್ತು ದೂರದರ್ಶನ ವಾರ್ತೆಗಳಲ್ಲಿ ನಾವು ಅದಕ್ಕೆ ಚಾಲ್ತಿ ನೀಡಿದೆವು. ಪತ್ರಿಕೆಯವರು ಮರೆತರು. ಕನ್ನಡದಲ್ಲಿ ಆಯೋಗ, ನಿಯೋಗ, ಮಹೋದ್ದೇಶ, ಘನೋದ್ದೇಶ ಎಂದೆಲ್ಲಾ ಈಗಲೂ ಬಳಸುತ್ತಾರೆ. ಹಾಗೆಯೇ ವಾಟರ್ ಶೆಡ್ ಜಲಾನಯನವಾಗಿದೆ. ಆದರೆ ನಮಗೆ ಮಾತ್ರ ಅದು ಜಲಾಶ್ರಯ. ಹೆಮ್ಮೆಯಿಂದ ಬೀಗಲು ಸಂಕೋಚ ಏಕೆ. ಹೀಗೆ ತಲೆಬರಹ ಬರೆಯುವ ಕುಸುರಿ ಕೆಲಸದಲ್ಲಿ ಆರೋಗ್ಯ ಪೂರ್ಣ ಪೈಪೋಟಿ. ಕಲೆ, ಸಾಹಿತ್ಯ, ಸಂಸ್ಕೃತಿ ಸುದ್ದಿಗಳಿಗೆ ಆದ್ಯತೆ ನೀಡಿದ್ದರಿಂದ ಆವಲಯಗಳ ಹಿರಿಯರಿಂದ ಮೆಚ್ಚುಗೆ.
ಭಾಷೆ ಬಳಕೆಯಲ್ಲಿ ದುಡಿಸಿಕೊಳ್ಳುವುದರಲ್ಲಿ ತೋರಿದ ಪರಿಶ್ರಮ, ಆಸಕ್ತಿ – ಒಂದು ಸವಿಬುತ್ತಿ. ಕಿಂಚಿತ್ ಕನ್ನಡದ ಕಾಯಕ ಮಾಡಿದ ತೃಪ್ತಿ. ಕನ್ನಡ ಜನಮಾನಸದಲ್ಲಿ ಟಿ.ವಿ.ವಾರ್ತೆಗಳೆಂದರೆ ದೂರದರ್ಶನ ವಾರ್ತೆ ಎಂಬ ಅಭಿಮಾನ.
ಆರಂಭದ ದಿನಗಳಲ್ಲಿ ಆಕಾಶವಾಣಿ ಸುದ್ದಿ ದೂರದರ್ಶನ ಪರದೆಯ ಮೇಲೆ ಚಂದಗಾಣಿಸಿದರವರು ಚಂದದ ಸುದ್ದಿ ವಾಚಕರು. ಅಷ್ಟಾಗಿ ದೃಶ್ಯಾವಳಿ ಇಲ್ಲ. ಆ ಮೇಲೆ ಗರಿಗಟ್ಟಿಕೊಂಡಿತು. ಎಲ್ಲ ಸುದ್ದಿ ತುಣುಕಿಗೂ ದೃಶ್ಯ ಸಂಯೋಜನೆ. ಟಿವಿ ವಾರ್ತೆ ನೈಜಾರ್ಥದಲ್ಲಿ ಜಿಲ್ಲೆಗಳಿಂದ ಘಟನೆಗಳ ಸಚಿತ್ರ ವರದಿ ರವಾನೆಗೆ ಪ್ರತಿನಿಧಿಗಳ ಜಾಲ ಹರಡಿಕೊಂಡಿತು. ತಂತ್ರಜ್ಞರ ಕಲ್ಪನೆ, ಶ್ರಮದಿಂದ ಬೀದರಿನ ಘಟನೆ ಕೆಲವೇ ತಾಸುಗಳಲ್ಲಿ ದೂರದರ್ಶನ ಕೇಂದ್ರ ತಲುಪುವಷ್ಟರ ಮಟ್ಟಿಗೆ ಪ್ರಗತಿ.
ಉತ್ತಮ ಚಿತ್ರಗಳೇ ಉತ್ತಮ ವರದಿ. ಅವಕ್ಕೆ ಪೂರಕವಾಗಿ, ಪೋಷಕವಾಗಿ ಪದಗಳು, ವಾಕ್ಯಗಳು. ಪುಟ್ಟಪುಟ್ಟ ಪದ, ವಾಕ್ಯಗಾಳಾದರಂತೂ ಇನ್ನೂ ಸೊಗಸು. ತಂತೀ ಭಾಷೆಯ ಕೌಶಲ್ಯ ಬೇಕು. ಮಾತು ಚಿತ್ರಗಳಿಗೆ ಅರ್ಥ ತುಂಬಿದರೆ, ಚಿತ್ರಗಳು ಮಾತಿಗೆ ಅರ್ಥ ತುಂಬುತ್ತವೆ. ಚಿತ್ರದಲ್ಲಿ ಇಲ್ಲದ್ದನ್ನು ಹೇಳದೇ ಇರುವುದೇ ಲೇಸು.
ಇನ್ನು ಆಡು ಮಾತಿಗೆ ಸಮೀಪವಾದ ಸಾಧ್ಯವಾದಷ್ಟೂ ಶುದ್ಧ ಭಾಷೆ ಕರಗತ ನಮಗಾಯಿತು ಎಂದೇ ನನ್ನ ನಂಬಿಕೆ. ಸರ್ದಾರ್ ಪಟೇಲರು ದೇಶದ ಮೊದಲ ಸಮಾಚಾರ ಮತ್ತು ಪ್ರಸಾರ ಸಚಿವರು. ಅವರು ತಮ್ಮ ರಾಜ್ಯ ಸಚಿವ ಸಹೋದ್ಯೋಗಿ ರಂ.ರಾ. ದಿವಾಕರ್ ಗೆ ಬಾನುಲಿ ಭಾಷೆ ಎಂತಿರಬೇಕು ಎಂದು ಪತ್ರ ಬರೆದಿದ್ದರು. ಅದರ ಕೆಲ ಸಾಲುಗಳನ್ನು ಉದ್ಧರಿಸಿ ನನ್ನ ಮಾತು ಮುಗಿಸುವೆ.
ಬಹುಸಂಖ್ಯೆ ಜನರು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಆಕಾಶವಾಣಿ ಅಭಿವ್ಯಕ್ತಗೊಳಿಸದಿದ್ದರೆ, ಜನಾಭಿಪ್ರಾಯ ರೂಪಿಸುವ ಅಥವಾ ಜನಾಭಿರುಚಿ ರೂಪಿಸಲು ಆಕಾಶವಾಣಿ ಮಾಡುವ ಯಾವ ಪ್ರಯತ್ನವಾಗಲೀ ವಿಫಲವಾಗುವುದು ನಿಶ್ಚಿತ. ಶುದ್ಧ, ನಿಖರ ಹಾಗೂ ಘನತೆಯ ಭಾಷೆಯಲ್ಲಿ ಆಕಾಶವಾಣಿ ಅಭಿವ್ಯಕ್ತ ಪಡಿಸಬೇಕೆಂಬ ಗುರಿ ಅರ್ಥವಾಗುವಂಥಹುದು. ಈ ಗುಣಗಳು ಸರಳತೆಯಲ್ಲಿ ಅಡಕವಾಗಿರಲು ಸಾಧ್ಯ. ಆಕಾಶವಾಣಿ ನೇತೃತ್ವ ವಹಿಸುವ ಯಾರಿಗೇ ಆಗಲಿ ಸಾಹಿತ್ಯದಲ್ಲಿ ಹಾಗೂ ಭಾಷೆಗಳಲ್ಲಿ ಉಗ್ರತೆ ಮೀರಿದ ನೋಟ ಮತ್ತು ಕಲ್ಪನೆ ಅವರಿಗೆ ಮಾರ್ಗದರ್ಶಕವಾಗಿರಬೇಕು. ಅಭಿವ್ಯಕ್ತಿಯಲ್ಲಿ ಪದಗಳ ನುಡಿಗಟ್ಟು ಮತ್ತು ಪ್ರಕಾರಗಳ ಬಳಕೆಯಲ್ಲೂ ಇದಿರಬೇಕು. ವಿಶಾಲ ದೃಷ್ಟಿ ಮೂಲಭೂತವಾಗಿರ ಬೇಕು ಮತ್ತು ಸರಳವಾಗಿರುವುದರ ಜೊತೆಗೆ ಅರ್ಥವಾಗುವ ಉತ್ತಮ ಮಟ್ಟದ ಅಭಿವ್ಯಕ್ತಿ ಮತ್ತು ಶೈಲಿಯ ಪದಗಳ ಆಯ್ಕೆ ನಮ್ಮ ಗುರಿಯಾಗಿರಬೇಕು. ಬಾಪೂ ಅವರ ಭಾಷಣಗಳನ್ನು ಎಚ್ಚರವಹಿಸಿ ಅಧ್ಯಯನ ಮಾಡಿದರೆ, ಭಾಷೆಯ ಗುಣಮಟ್ಟಕ್ಕೆ ಹಿಂಸೆ ಮಾಡದೆ ಈ ಉದ್ದೇಶ ಸಾಕಾರಗೊಳಿಸುವುದು ಸಾಧ್ಯ ಎಂಬುದು ಯಾರಿಗಾದರೂ ಮನವರಿಕೆಯಾದೀತು.
ದೂರದರ್ಶನ ಕನ್ನಡ ವಾರ್ತೆಗಳ ಭಾಷಾ ಪ್ರಯೋಗ ಈ ಆಶಯಗಳನ್ನು ಬಹಳಷ್ಟು ಈಡೇರಿಸಿ, ಸರಳ ಕನ್ನಡ ಗದ್ಯ ವಿಕಾಸದಲ್ಲಿ ಅಳಿಲು ಸೇವೆ ಸಲ್ಲಿಸಿದೆ ಎಂಬುದು ನನ್ನ ಅನುಭವ ಜನ್ಯ ಅನಿಸಿಕೆ. ವಂದನೆಗಳು.